ಬ್ಯಾಂಕ್‌ಗಳ ಕಾರ್ಯವೈಖರಿಗೆ ಡಿಸಿ, ಸಿಇಒ ಅಸಮಾಧಾನ
Team Udayavani, Dec 21, 2018, 10:44 AM IST
ಉಡುಪಿ: ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಮನ್ನಾಕ್ಕಾಗಿ ರೈತರ ಮಾಹಿತಿ ಸಂಗ್ರಹಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬ್ಯಾಂಕ್‌ಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ. ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿ.ಪಂ. ಸಿಇಒ ಸಿಂಧು ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದೆ ಸೂಚಿಸಿದಂತೆ ಬ್ಯಾಂಕ್‌ಗಳ ವೆಬ್‌ಸೈಟ್‌ನಲ್ಲಿ ರೈತರ ಕೃಷಿ ಸಾಲದ ಬಗ್ಗೆ ಪ್ರತ್ಯೇಕ ವಿಭಾಗದಲ್ಲಿ ಮಾಹಿತಿ ಇರಬೇಕಿತ್ತು. ಆದರೆ ಇದುವರೆಗೂ ಹಾಗಾಗಿಲ್ಲ ಎಂದು ಕಿಡಿಕಾರಿದರು.
ಜಿಲ್ಲೆಯ ಬಹುತೇಕ ಗ್ರಾಮೀಣ ಬ್ಯಾಂಕ್‌ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ, ಸಂಪರ್ಕ ದೊರಕಿದರೂ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ರೈತರ ಕೃಷಿ ಸಾಲಕ್ಕೆ ಸಂಬಂಧಿಸಿ 235 ಶಾಖೆಗಳಲ್ಲಿ 4,725 ಖಾತೆಗಳಿದ್ದು, ಇದರಲ್ಲಿ 1,246 ಮಂದಿಯ ಮಾಹಿತಿ, 436 ಮಂದಿಯ ದಾಖಲೆ ಮಾತ್ರ ನೋಂದಣಿ ಮಾಡಲಾಗಿದೆ. ಇನ್ನುಳಿದವರ ಮಾಹಿತಿ ನೋಂದಾಯಿಸಲು ಡಿ. 28 ಕೊನೆಯ ದಿನವಾಗಿದ್ದು, ಅದರ ನಡುವೆ ಸರಣಿ ರಜೆ ಎದುರಾಗಿದೆ. ಇಂತಹ ಪರಿಸ್ಥಿತಿ ಎದುರಾದರೆ ಕೆಲಸ ಪೂರ್ಣವಾಗುವುದು ಹೇಗೆ ಎಂದು ಪ್ರಶ್ನಿಸಿದರು.
ಜಿಲ್ಲಾ ಲೀಡ್ ಬ್ಯಾಂಕಿನ ಮಹಾಪ್ರಬಂಧಕ ರುದ್ರೇಶ್ ಡಿ.ಸಿ. ಮಾತನಾಡಿ, ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರು ಕೇಳಿ ಬಂದಿದೆ. 10 ಅಧಿಕೃತ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕಿ ಸುಜಾತಾ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ 1,302 ಕೋ.ರೂ., ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ 951 ಕೋ.ರೂ., ಶಿಕ್ಷಣ ವಲಯಕ್ಕೆ 41 ಕೋ.ರೂ., ವಸತಿ ಕ್ಷೇತ್ರಕ್ಕೆ 181 ಕೋ.ರೂ., ಆದ್ಯತಾ ವಲಯಕ್ಕೆ 415 ಕೋ.ರೂ. ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಆರ್‌ಬಿಐ ಬೆಂಗಳೂರು ಎಜಿಎಂ ಪಿ.ಕೆ. ಪಟ್ಟನಾಯ್ಕ, ನಬಾರ್ಡ್ ಎಜಿಎಂ ಎಸ್. ರಮೇಶ್, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಲಕ್ಕೂ ಹಿಂದೇಟು
ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕೇವಲ 41 ಕೋ.ರೂ. ಶೈಕ್ಷಣಿಕ ಸಾಲ ವಿತರಣೆಯಾಗಿದೆ ಎಂದು ಸಿಇಒ ಸಿಂಧು ಬಿ. ರೂಪೇಶ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬ್ಯಾಂಕ್‌ಗಳಿಗೆ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಅರ್ಜಿ ಗಳು ತಿರಸ್ಕೃತಗೊಂಡಿವೆ ಎಂಬುವುದರ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದರು.
ಮಂಗಳೂರು: ಕೃಷಿ, ಮಧ್ಯಮ, ಸಣ್ಣ ಮತ್ತು ಅತಿಸಣ್ಣ ರಂಗದ ಕೈಗಾರಿಕೋದ್ಯಮಗಳು ಜಿಲ್ಲೆಯಲ್ಲಿ ಆದ್ಯತಾ ವಲಯಗಳಾಗಿ ಗುರುತಿಸಿಕೊಂಡಿವೆ. ಆದರೆ ಈ ವಲಯಗಳ ಜನರಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ ಎಂದು ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್. ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದ.ಕ. ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕಿಂಗ್ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರೀಕರಣ ಮತ್ತು ವಾಣಿಜ್ಯೋದ್ಯಮದಲ್ಲಿ ಮಂಗಳೂರು ಕೂಡ ಮುಂಚೂಣಿಯಲ್ಲಿದೆ. ಉದ್ಯಮಾಭಿವೃದ್ಧಿಗೂ ಇಲ್ಲಿ ಅವಕಾಶಗಳಿವೆ. ಆದರೆ ಬ್ಯಾಂಕ್‌ಗಳು ಈ ರಂಗಗಳಿಗೆ ಸಾಲ ನೀಡಲು ಅನಾಸಕ್ತಿ ತಾಳಿದರೆ ಅಭಿವೃದ್ಧಿ ಅಸಾಧ್ಯವಾಗುತ್ತದೆ ಎಂದರು. ಬ್ಯಾಂಕ್‌ಗಳ ಸಾಲ-ಠೇವಣಿ ಅನುಪಾತ ಶೇ. 60 ಇರಬೇಕು. ಆದರೆ ಜಿಲ್ಲೆಯ ಕೆಲ ಬ್ಯಾಂಕ್‌ಗಳ ಸಾಲ-ಠೇವಣಿ ಅನುಪಾತವು ಶೇ. 60ಕ್ಕಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್‌ಗಳ ಸಾಲ-ಠೇವಣಿ ಸರಾಸರಿ ಅನುಪಾತವು ಶೇ. 56.17ರಿಂದ ಶೇ. 61.85 ತಲಪಿದೆ. ಇದನ್ನು ಗಮನಿಸಿದರೆ ಹಿಂದಿನದಕ್ಕಿಂತ ಸ್ವಲ್ಪ ಏರಿಕೆಯಾಗಿದೆ. ಆದರೆ ಕೆಲವು ಪ್ರಮುಖ ಬ್ಯಾಂಕ್‌ಗಳ ಅನುಪಾತ ಶೇ. 40ಕ್ಕೂ ಕಡಿಮೆ ಇದೆ. ಮುಂದೆ ಈ ರೀತಿಯಬದಲಾವಣೆ ಆಗದಂತೆ ನೋಡಿಕೊಳ್ಳಬೇಕೆಂದು ಲೀಡ್ ಬ್ಯಾಂಕ್ ಅಧಿಕಾರಿಗಳು ಸೂಚಿಸಿದರು.
ನಬಾರ್ಡ್‌ನವರು ಸಿದ್ಧಪಡಿಸಿದ ಜಿಲ್ಲೆಯ 2019-20ನೇ ಸಾಲಿನ ಸಂಭಾವ್ಯ ಸಂಯೋಜಿತ ಸಾಲ ಯೋಜನೆಯನ್ನು ಡಾ| ಸೆಲ್ವಮಣಿ ಬಿಡುಗಡೆಗೊಳಿಸಿದರು. ಒಟ್ಟಾರೆ ಆದ್ಯತಾ ವಲಯದ 8 ಪ್ರಮುಖ ಕ್ಷೇತ್ರಗಳಡಿ 12,659.04 ಕೋಟಿ ರೂ. ಸಾಲ ಯೋಜನೆ ಇದಾಗಿದೆ ಎಂದು ನಬಾರ್ಡ್ ಎಜಿಎಂ ಎಸ್. ರಮೇಶ್ ಮಾಹಿತಿ ನೀಡಿದರು. ಸಿಂಡಿಕೇಟ್ ಬ್ಯಾಂಕ್ ವಲಯ ವ್ಯವಸ್ಥಾಪಕ ಸುಧಾಕರ ಕೊಥಾರಿ, ಆರ್‌ಬಿಐ ಎಜಿಎಂ ಪಿ. ಕೆ. ಪಟ್ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ಬೊರ್ಜಿಯಾ ಉಪಸ್ಥಿತರಿದ್ದರು.
ಕೃಷಿ ಸಾಲ: ಪ್ರಗತಿ ಕುಂಠಿತ
ಕೃಷಿ ವಲಯಕ್ಕೆ ಸೆಪ್ಟಂಬರ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳು ನೀಡಿರುವ ಒಟ್ಟು ಸಾಲ 2,074 ಕೋಟಿ ರೂ.ಗಳಾಗಿದ್ದು, ಕೇವಲ ಶೇ. 42ರಷ್ಟು ಪ್ರಗತಿಯಾಗಿದೆ. ಎಂಎಸ್‌ಎಂಇ ಕ್ಷೇತ್ರಕ್ಕೆ 1,325 ಕೋಟಿ ರೂ. ಮುಂಗಡ ನೀಡಲಾಗಿದ್ದು, ಶೇ. 41ರಷ್ಟು ಪ್ರಗತಿ ಸಾಧಿಸಿದೆ. ಆದರೆ ಆದ್ಯತೇತರ ಕ್ಷೇತ್ರಗಳಿಗೆ 5,078.81 ಕೋಟಿ ರೂ. ಸಾಲ ನೀಡಲಾಗಿದೆ. ಇದರಿಂದ ಕೃಷಿ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ಅನಾಸಕ್ತಿ ತಾಳಿರುವುದು ಸ್ಪಷ್ಟವಾಗುತ್ತದೆ ಎಂದು ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್. ಅಸಮಾಧಾನಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.