Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ
ಕಾಪು ಲೈಟ್‌ಹೌಸ್ ಬಳಿ 1.40 ಕೋ.ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
Team Udayavani, Feb 28, 2024, 11:36 PM IST
ಕಾಪು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ 75 ಲೈಟ್‌ಹೌಸ್ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಜೋಡಣೆಗೆ ಒತ್ತು ನೀಡಲಾಗಿದ್ದು ಕರಾವಳಿ ಕರ್ನಾಟಕದ ಕಾಪು, ಸುರತ್ಕಲ್, ಕುಂದಾಪುರ, ಭಟ್ಕಳ, ಗೋಕರ್ಣ, ಕಾರವಾರ ಸಹಿತ 6 ಲೈಟ್‌ಹೌಸ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮೀನುಗಾರಿಕೆಗೆ ವಿಶೇಷ ಒತ್ತು ನೀಡುವ ಕೆಲಸ ಕೇಂದ್ರ ಸರಕಾರದಿಂದ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕೇಂದ್ರ ಸರಕಾರದ ಬಂದರು, ನೌಕಾ ಸಾರಿಗೆ ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ದೀಪಸ್ತಂಭಗಳು ಮತ್ತು ದೀಪನೌಕೆಗಳ ನಿರ್ದೇಶನಾಲಯವು ದೇಶದ 75 ಲೈಟ್‌ಹೌಸ್‌ಗಳಲ್ಲಿ ನಡೆಸಿದ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ತಮಿಳುನಾಡಿನ ತೂತುಕುಡಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವೀಡಿಯೋ ಕಾನ್ಫರೆನ್ಸ್ ಪ್ರಯುಕ್ತ ಬುಧವಾರ ಕಾಪು ಲೈಟ್‌ಹೌಸ್ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾಪು ಲೈಟ್‌ಹೌಸ್ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಥಮ ಹಂತದಲ್ಲಿ 1.40 ಕೋ.ರೂ. ಅನುದಾನದೊಂದಿಗೆ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು 2ನೇ ಹಂತದಲ್ಲಿ ಮತ್ತೆ 1 ಕೋ.ರೂ. ಮಂಜೂರಾಗಲಿದೆ. ಇದರೊಂದಿಗೆ ಸುರತ್ಕಲ್, ಭಟ್ಕಳ, ಕಾರವಾರ ಲೈಟ್‌ಹೌಸ್ ಅಭಿವೃದ್ಧಿಗೆ ತಲಾ 75 ಲಕ್ಷ ರೂ. ಮತ್ತು ಕುಂದಾಪುರ ಲೈಟ್‌ಹೌಸ್ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.
ಬಂದರು ಅಭಿವೃದ್ಧಿಗೆ ಒತ್ತು
ಮೀನುಗಾರರಿಗೆ ಅನುಕೂಲವಾಗು ವಂತೆ ಮಲ್ಪೆ ಬಂದರು ಅಭಿವೃದ್ಧಿಗೆ ಸರಕಾರ ಹೆಚ್ಚಿನ ಒತ್ತು ನೀಡಿದ್ದು ದೋಣಿಗಳ ದಟ್ಟಣೆ ತಪ್ಪಿಸಲು ಬಂದರು ವಿಸ್ತರಣೆಗೆ ಆದ್ಯತೆ ನೀಡಲಾಗಿದೆ. ಹೆಜಮಾಡಿಯಲ್ಲಿ ನೂತನ ಬಂದರು, ಕುಂದಾಪುರ, ಹಂಗಾರಕಟ್ಟೆ ಬಂದರು ಅಭಿವೃದ್ಧಿ ಯೋಜನೆ ಅನುಷ್ಠಾನ ಹಂತದಲ್ಲಿದೆ. ಕಾಪು ಲೈಟ್‌ಹೌಸ್ ಅಭಿವೃದ್ಧಿ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಡುಬಿದ್ರಿಯಲ್ಲಿ ಬ್ಲೂಫ್ಲ್ಯಾಗ್ ಬೀಚ್‌ಗಳ ನಿರ್ಮಾಣವಾಗಿದೆ. ಪಡುಕೆರೆಯಲ್ಲಿ ಜೆಟ್ಟಿ ನಿರ್ಮಾಣ ಯೋಜನೆ ಅನುಷ್ಠಾನ ಹಂತದಲ್ಲಿದೆ. ಕೇಂದ್ರ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತವೂ ಪೂರಕವಾಗಿ ಸ್ಪಂದಿಸಿ ಕೆಲಸ ಮಾಡಬೇಕಿದೆ ಎಂದು ಶೋಭಾ ತಿಳಿಸಿದರು.
ದೇಶದ ಗೌರವ ವೃದ್ಧಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯಾಂತ್ರಿಕತೆ ಮತ್ತು ತಾಂತ್ರಿಕತೆ ವೇಗವಾಗಿ ಬೆಳೆಯುತ್ತಿರುವ ಸಮಯದಲ್ಲಿ ಸಮುದ್ರದಲ್ಲಿ ಪಯಣಿಸುವ ನಾವಿಕರು ಮತ್ತು ಮೀನುಗಾರರಿಗೆ ಪಥದರ್ಶನ ಮಾಡುತ್ತಿದ್ದ ಲೈಟ್‌ಹೌಸ್‌ಗಳನ್ನು ಉಳಿಸಿ ಪ್ರವಾಸಿಗರ ಆಕರ್ಷಣೀಯ ಸ್ಥಳವನ್ನಾಗಿ ಪರಿವರ್ತಿಸುವ ಚಿಂತನೆಯೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜೋಡಿಸಲಾಗಿದೆ. ಪ್ರಧಾನಿ ಮೋದಿ ಅವರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಗೌರವ ಹೆಚ್ಚಿಸಿದೆ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಎಡಿಸಿ ಮಮತಾ ದೇವಿ, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಕಾಪು ತಹಶೀಲ್ದಾರ್ ಪ್ರತಿಭಾ ಆರ್., ಪುರಸಭೆ ಸದಸ್ಯ ನಿತಿನ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಮೊದಲಾದವರಿದ್ದರು.ದೀಪಸ್ತಂಭಗಳು ಮತ್ತು ದೀಪನೌಕೆಗಳ ನಿರ್ದೇಶನಾಲಯದ ನಿರ್ದೇಶಕ ರಾಜೇಶ್ ದಾಸ್ ಸ್ವಾಗತಿಸಿದರು. ಉಪ ನಿರ್ದೇಶಕ ಮಹೇಶ್ ಪ್ರಸಾದ್ ನಿಮ್ಹಾರೆ ವಂದಿಸಿದರು. ಅನಿರುದ್ಧ್ ಉಡುಪಿ ನಿರ್ವಹಿಸಿದರು.
ಉಡುಪಿ ರೈಲು ನಿಲ್ದಾಣ ಶೀಘ್ರ ಮೇಲ್ದರ್ಜೆಗೆ
10 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ 40 ಸಾವಿರ ಕಿ.ಮೀ. ಉದ್ದದ ಕೊಂಕಣ ರೈಲ್ವೇ ವಿದ್ಯುದೀಕರಣ ನಡೆಸಲಾಗಿದೆ. ಪ್ರಧಾನ ಮಂತ್ರಿ ಅಮೃತ ರೈಲು ನಿಲ್ದಾಣ ಯೋಜನೆಯಡಿ ಚಿಕ್ಕಮಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಡುಪಿ ರೈಲು ನಿಲ್ದಾಣವು ಎರಡನೇ ಹಂತದದ ಅಮೃತ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಗಾಗಿ ಆಯ್ಕೆಯಾಗಿದೆ. ಈ ಮೂಲಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರಕಿಸಿಕೊಡಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.