ಭರದ ಕಾಮಗಾರಿ: ಫೆಬ್ರವರಿ 15ರೊಳಗೆ ಪೂರ್ಣ ಸಾಧ್ಯತೆ
ಇಡೂರು ಕುಂಜ್ಞಾಡಿಯ ಯಮಗುಂಡಿ ಹೊಳೆಗೆ ಸೇತುವೆ
Team Udayavani, Jan 12, 2021, 2:20 AM IST
ಕುಂದಾಪುರ: ಇಡೂರು ಕುಂಜ್ಞಾಡಿ ಗ್ರಾಮದ ಯಮಗುಂಡಿ ಹೊಳೆಗೆ ಸೇತುವೆ ಮಂಜೂರಾಗಿ, ಅನುದಾನ ಮೀಸಲಿಟ್ಟಿದ್ದರೂ ಕೋವಿಡ್ ದಿಂದಾಗಿ ಕಾಮಗಾರಿ ಆರಂಭ ವಿಳಂಬವಾಗಿತ್ತು. ಕೊನೆಗೂ ಈ ಯಮಗುಂಡಿ ಹೊಳೆಗೆ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಫೆಬ್ರವರಿ 15ರೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಕಳೆದ ವರ್ಷವೇ ಕಾಮಗಾರಿ ಆರಂಭಕ್ಕೆ ಎಲ್ಲ ತಯಾರಿ ನಡೆದಿದ್ದರೂ, ಇನ್ನೇನು ಕಾಮಗಾರಿಗೆ ಚಾಲನೆ ನೀಡಬೇಕು ಅನ್ನುವಷ್ಟರಲ್ಲಿ ಕೊರೊನಾ ಬಂದು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಆ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ಆರಂಭಗೊಂಡಿದ್ದು ಈ ಭಾಗದ ಜನರ ದಶಕಕ್ಕೂ ಹೆಚ್ಚು ಕಾಲದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಇಡೂರು- ಕುಂಜ್ಞಾಡಿಯ ಮುಖ್ಯರಸ್ತೆಯಿಂದ ಕುಂಜ್ಞಾಡಿಗೆ ಹೋಗಲು ಯಮಗುಂಡಿ ಹೊಳೆ ದಾಟಿ ಹೋಗಬೇಕು. ಕುಂಜ್ಞಾಡಿ ಜನ ಮಳೆಗಾಲದಲ್ಲಿ ಸಂಪರ್ಕ ಕಡಿತದಿಂದ ಉದುರುಬೈಲು- ಮರಬೇರು ಸೇತುವೆ ಮೂಲಕ ಇಡೂರು ಸೇರಿ ಅಲ್ಲಿಂದ ಬೇರೆಡೆಗೆ ಸಂಚರಿಸಬೇಕಾಗಿದೆ. ಇದಲ್ಲದೆ ಇಡೂರು – ಕುಂಜ್ಞಾಡಿ ಸುತ್ತಮುತ್ತಲಿನ ಜನ ನಾಗೂರು, ಕಿರಿಮಂಜೇಶ್ವರ, ಕಾಲ್ತೋಡಿಗೆ ಸಂಚರಿಸಲು ಈ ಸೇತುವೆಯಾದರೆ ಬಹಳಷ್ಟು ಹತ್ತಿರವಾಗಲಿದೆ.
7-8 ವರ್ಷಗಳಿಂದ ಮನವಿ :
ಕಳೆದ 7-8 ವರ್ಷಗಳಿಂದ ಈ ಭಾಗದ ಜನರು ಸೇತುವೆಗಾಗಿ ಬೇಡಿಕೆ ಸಲ್ಲಿಸುತ್ತಲೇ ಇದ್ದರು. 2019ರ ನವೆಂಬರ್‌ನಲ್ಲಿ ಇಲ್ಲಿಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ 1 ಕೋ.ರೂ. ವೆಚ್ಚದಲ್ಲಿ ವಾರಾಹಿ ಯೋಜನೆಯಡಿ ಸೇತುವೆ ಹಾಗೂ ರಸ್ತೆ ಮಂಜೂರಾಗಿತ್ತು.
ಕುಂಜ್ಞಾಡಿ ನಿವಾಸಿ, ಉದ್ಯಮಿಯಾಗಿರುವ ಆನಂದ ಶೆಟ್ಟಿ 8 ವರ್ಷದಿಂದ ಪ್ರತಿ ಸಲ ಇಲ್ಲಿ ಮಳೆಗಾಲದಲ್ಲಿ ಹೊಳೆ ದಾಟಲು 12ರಿಂದ 18 ಸಾವಿರ ರೂ. ಖರ್ಚು ಮಾಡಿ ಮೋರಿಯನ್ನು ಹಾಕುತ್ತಿದ್ದರು. ಆದರೆ ಕಳೆದ ಸಲ ಹಾಕಿರುವ ಮೋರಿ ಈ ಬಾರಿ ಕೊಚ್ಚಿಕೊಂಡು ಹೋಗಿದ್ದು, ಇದರಿಂದ ಮಳೆಗಾಲದಲ್ಲಿ ಇಲ್ಲಿನ ಜನರು ಕೇವಲ ಒಂದೂವರೆ ಕಿ.ಮೀ. ಸಂಚಾರಕ್ಕೆ 4 ಕಿ.ಮೀ. ದೂರ ಸುತ್ತು ಬಳಸಿ ಸಂಚರಿಸುವಂತಾಗಿತ್ತು.
ಸುದಿನ ವರದಿ :
ಯಮಗುಂಡಿ ಹೊಳೆಗೆ ಸೇತುವೆ ಮಂಜೂರಾಗಿದ್ದರೂ ಕಾಮಗಾರಿ ಆರಂಭಗೊಳ್ಳುವುದು ವಿಳಂಬವಾದ ಬಗ್ಗೆ “ಉದಯವಾಣಿ ಸುದಿನ’ವು ಕಳೆದ ವರ್ಷದ ಜು. 14ರಂದು “ಯಮಗುಂಡಿ ಹೊಳೆಗೆ ಇನ್ನೂ ದೊರಕದ ಸೇತುವೆ ಭಾಗ್ಯ’ ಎನ್ನುವ ವಿಶೇಷ ವರದಿಯನ್ನು ಪ್ರಕಟಿಸಿತ್ತು.
ಡಿಸೆಂಬರ್ 20ರ ಅನಂತರ ಕಾಮಗಾರಿ ಆರಂಭಗೊಂಡಿದ್ದು, ಜನವರಿ ಕೊನೆ ಅಥವಾ ಫೆಬ್ರವರಿ 15 ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 5 ಮೀ. ಅಗಲ ಹಾಗೂ 9 ಮೀ. ಉದ್ದದ ಸೇತುವೆಯೊಂದಿಗೆ 600 ಮೀ. ಉದ್ದದ ಕಾಂಕ್ರೀಟ್ ರಸ್ತೆ ಕೂಡ ನಿರ್ಮಾಣವಾಗಲಿದೆ. – ಕಿರಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಾರಾಹಿ ನೀರಾವರಿ ನಿಗಮ
ಇಡೂರು – ಕುಂಜ್ಞಾಡಿ ಭಾಗದ ಬಹು ವರ್ಷಗಳ ಬೇಡಿಕೆ ಇದಾಗಿದ್ದು, ಕಳೆದ ಚುನಾವಣೆ ಸಂದರ್ಭ ಇಲ್ಲಿಗೆ ಭೇಟಿ ಕೊಟ್ಟಾಗ ಸೇತುವೆಯ ಭರವಸೆ ನೀಡಿದ್ದೆ. ಅದೀಗ ಸಾಕಾರಗೊಳ್ಳುತ್ತಿದೆ. ಈ ವರ್ಷದಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ. – ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.