“ದೇಶದೆಲ್ಲೆಡೆ ಸರ್ವಾಧಿಕಾರ ಧೋರಣೆ’
ಗಾಂಧಿ 150 ವರ್ಷಾಚರಣೆಯ ಸಮಾರೋಪ, ಕಾಂಗ್ರೆಸ್ ಸಮಾವೇಶ
Team Udayavani, Nov 7, 2019, 5:01 AM IST
ಉಡುಪಿ: ಬಿಜೆಪಿ ಸರಕಾರದಿಂದ ಇಂದು ದೇಶದೆಲ್ಲೆಡೆ ಸರ್ವಾಧಿಕಾರ ಧೋರಣೆ ನಡೆಯುತ್ತಿದೆ. ಪ್ರಶ್ನಿಸುವವರ ವಿರುದ್ಧ ಆದಾಯ ತೆರಿಗೆ ಇಲಾಖೆ, ಐಟಿ ಇಲಾಖೆಯನ್ನು ಬಳಸಿ ದಾಳಿ ನಡೆಸಲಾಗುತ್ತಿದೆ. ಈ ಮೂಲಕ ಬಿಜೆಪಿ ಪಕ್ಷದಲ್ಲಿರುವ ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಗಾಂಧಿ 150 ವರ್ಷಾಚರಣೆಯ ಸಮಾರೋಪದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಜನರ ದಾರಿ ತಪ್ಪಿಸುವ ಕೆಲಸ
ಅದಾನಿ, ಅಂಬಾನಿಯವರಿಗೆ ಸಾಲ ನೀಡಿರುವುದೇ ಬಿಜೆಪಿ 5ವರ್ಷದ ಸಾಧನೆ ಎಂದು ಬಣ್ಣಿಸಿದ ಅವರು ದೇಶದ ಆರ್ಥಿಕ ವ್ಯವಸ್ಥೆ ಕುಸಿಯಲು ಮೋದಿಯೇ ಕಾರಣರಾಗಿದ್ದಾರೆ. ಯುಪಿಎ ಸರಕಾರವಿದ್ದಾಗ ಜಿಎಸ್‌ಟಿ ಜಾರಿ ಮಾಡುವುದನ್ನು ವಿರೋಧಿಸಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಈಗ ಅದನ್ನು ಬೆಂಬಲಿಸುತ್ತಿದ್ದಾರೆ. ಜನರನ್ನು ದಾರಿತಪ್ಪಿಸುವ ಸಲುವಾಗಿ ಟಿಪ್ಪುಸುಲ್ತಾನ್, ಸಾವರ್ಕರ್, ಕಾಶ್ಮೀರ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮೂಲಕ ದೇಶದ ಅಭಿವೃದ್ಧಿ ಕೆಲಸಗಳನ್ನು ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದರು.
ವೋಟ್ ಬ್ಯಾಂಕ್ ರಾಜಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಪಕ್ಷವು ಪರೇಶ್ ಮೇಸ್ತಾ, ಡಿಎಸ್‌ಪಿ ಗಣಪತಿ ಪ್ರಕರಣ, ಡಿ.ಕೆ.ರವಿ ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡಿತ್ತು. ಅದಕ್ಕಾಗಿ ಆ ಪ್ರಕರಣವನ್ನು ಸಿಬಿಐಗೂ ವಹಿಸಲಾಯಿತು. ಆದರೆ ಈಗ ಬಿಜೆಪಿ ಪಕ್ಷ ಇದರ ಬಗ್ಗೆ ಯಾವುದೇ ಚಕಾರವೆತ್ತುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಪಡೆಯುವ ಉದ್ದೇಶಕ್ಕೆ ಮಾತ್ರ ಈ ರೀತಿಯ ಹೋರಾಟಗಳನ್ನು ಬಿಜೆಪಿ ಮಾಡುತ್ತಿದೆ ಎಂದರು.
ಕಾಂಗ್ರೆಸ್‌ನಿಂದ ಜನಪರ ಯೋಜನೆ
ದೇಶ ಭದ್ರವಾಗಿದೆ ಎಂದರೆ ಅದಕ್ಕೆ ಜವಾಹರಲಾಲ್ ನೆಹರೂ, ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಸಾಮಾಜಿಕ ನ್ಯಾಯದ ಮೂಲಕ ಹಾಕಿದ ಭದ್ರ ಅಡಿಪಾಯವೇ ಕಾರಣವಾಗಿದೆ. ಆದರೆ ಇಂದು ದ್ವೇಷ ಮೂಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಲವಾರು ಜನಪರ ಯೋಜನೆಗಳನ್ನು ಮಾಡಲಾಗಿತ್ತು. ಆದರೆ ಬಿಜೆಪಿ ಸರಕಾರದಿಂದ ಯಾವುದೇ ಜನಪರ ಕೆಲಸಗಳು ನಡೆಯಲಿಲ್ಲ. ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದ್ದರೆ ಮಾತ್ರ ದೇಶ ಭದ್ರವಾಗಿರಲು ಸಾಧ್ಯ ಎಂದು ಅವರು ಹೇಳಿದರು.
ಈ ಸಂದರ್ಭ ಮಾಜಿ ಸಿಎಂ ಸಿದ್ದರಾಮಯ್ಯ, ಸಾಧಕ ಜನಪ್ರತಿನಿಧಿಗಳನ್ನು ಸಮ್ಮಾನಿಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರೋಶ್ನಿ ಓಲಿವೆರಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣುನಾಧನ್, ಬಿ.ಎಂ. ಸಂದೀಪ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ಪ್ರಮುಖರಾದ ರಂಗಸ್ವಾಮಿ, ನಾರಾಯಣ ಸ್ವಾಮಿ, ಎಂ.ಎ.ಗಫೂರ್ ಸಹಿತ ಹಲವಾರು ಮಂದಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಡಾ| ಸುನೀತಾ ಶೆಟ್ಟಿ, ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.