ಶ್ರೀಕೃಷ್ಣಮಠದಲ್ಲಿ ಇನ್ನು ನಾಲ್ಕು ತಿಂಗಳು ಭಿನ್ನ ಆಹಾರ
Team Udayavani, Jul 24, 2018, 10:05 AM IST
ಉಡುಪಿ: ಚಾತುರ್ಮಾಸ್ಯ ವ್ರತದ ಆಹಾರ ಪದ್ಧತಿ ಉಡುಪಿ ಸಂಪ್ರದಾಯದ ಮಠಗಳಲ್ಲಿ ಆಷಾಢ ಮಾಸದ ದ್ವಾದಶಿಯಿಂದ ನಾಲ್ಕು ತಿಂಗಳು ಪರ್ಯಂತ ನಡೆಯಲಿದೆ. ಪ್ರಥಮನ ಏಕಾದಶಿಯಂದು ಉಪವಾಸವಿದ್ದು ತಪ್ತಮುದ್ರಾಧಾರಣೆ ಮಾಡಿದ ಅನಂತರ ನಾಲ್ಕು ತಿಂಗಳಲ್ಲಿ ನಾಲ್ಕು ತರಹದ ಆಹಾರ ಕ್ರಮ ಸಂಪ್ರದಾಯದಂತೆ ನಡೆಯಲಿದೆ. ಇದು ಸಹಜವಾದ ಆಹಾರಕ್ರಮಕ್ಕಿಂತ ಸಂಪೂರ್ಣ ಭಿನ್ನ.
ಶಾಕ ವ್ರತ
ಮೊದಲ ತಿಂಗಳ ಆಹಾರ ಕ್ರಮವನ್ನು ಶಾಕವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ತರಕಾರಿ ಬಳಸುವುದಿಲ್ಲ. ಮಾವು ಹೊರತಾಗಿ ಇತರ ಹಣ್ಣುಗಳನ್ನು ಬಳಸುವುದಿಲ್ಲ. ಪೊನ್ನಂಗೈ ಸೊಪ್ಪು, ತಿಮರೆ ಸೊಪ್ಪು, ಮಾವಿನಕಾಯಿ, ಪಾಪಡ್ಕ ಕಾಯಿಯನ್ನು ಬಳಸುತ್ತಾರೆ. ಹುಣಿಸೆಹುಳಿ ಬದಲು ಮಾವಿನಕಾಯಿಯನ್ನು, ಹಸಿ ಮೆಣಸು- ಒಣ ಮೆಣಸಿನ ಬದಲು ಕಾಳು ಮೆಣಸು ಬಳಸುತ್ತಾರೆ. ಇದಕ್ಕಾಗಿ ಮಾವಿನಕಾಯಿಯನ್ನು ಬೇಸಗೆಯಲ್ಲಿ ಒಣಗಿಸಿ ಇಟ್ಟು ಈಗ ಬಳಸುತ್ತಾರೆ. ಉದ್ದು, ಹೆಸರು ಬೇಳೆ ಹೊರತುಪಡಿಸಿ ಇನ್ನಾವುದೇ ಬೇಳೆಯನ್ನು ಬಳಸುವುದಿಲ್ಲ. ಒಟ್ಟಿನಲ್ಲಿ ಬೇರು (ಭೂಮಿಯಡಿ ಬೆಳೆಯುವಂಥದ್ದು), ಕಾಂಡ (ತರಕಾರಿಗಳು), ಪತ್ರ (ಪತ್ರೊಡೆಯಂತಹ ಖಾದ್ಯ ತಯಾರಿ ಎಲೆಗಳು), ಪುಷ್ಪ (ಗುಂಬಳ, ದಾಸವಾಳದಂತಹ ಹೂವು), ಹಣ್ಣುಗಳನ್ನು ಬಳಸುವುದಿಲ್ಲ. ಸಾರು, ಸಾಂಬಾರು, ಪಲ್ಯ, ಪಾಯಸಕ್ಕೆ ಹೆಸರು ಬೇಳೆ ಮುಖ್ಯ. ಪಂಚ ಕಜ್ಜಾಯವನ್ನು ಹೆಸರುಬೇಳೆಯಿಂದ ಮಾಡಲಾಗು ತ್ತದೆ. ಹೀಗಾಗಿ ಕೃಷ್ಣಮಠದ ಪಂಚಕಜ್ಜಾಯ ಹೆಸರು ಬೇಳೆಯಿಂದ ಮಾಡಲಾಗುತ್ತದೆ. ಕಡಲೆ ಬೇಳೆ ಮಡ್ಡಿಯ ಬದಲು ಹೆಸರು ಬೇಳೆ ಮಡ್ಡಿ ಮಾಡುತ್ತಾರೆ.
ಕ್ಷೀರ- ದಧಿವ್ರತ
ಎರಡನೇ ತಿಂಗಳ ವ್ರತವನ್ನು ಕ್ಷೀರ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಹಾಲಿನ ಬಳಕೆ ಇಲ್ಲ. ಮೂರನೇ ತಿಂಗಳಿನ ವ್ರತವನ್ನು ದಧಿವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಮೊಸರನ್ನು ಬಳಸುವುದಿಲ್ಲ.
ದ್ವಿದಳ ವ್ರತ
ನಾಲ್ಕನೆಯ ತಿಂಗಳ ಆಹಾರಕ್ರಮವನ್ನು ದ್ವಿದಳ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಯಾವುದೇ ಬೇಳೆ, ಹಸಿ ಮೆಣಸು, ಒಣಮೆಣಸನ್ನು ಬಳಸುವುದಿಲ್ಲ. ಭೂಮಿಯಡಿ ಬೆಳೆಯುವ ಗೆಡ್ಡೆ ಗೆಣಸು, ಬಾಳೆ ದಿಂಡು, ಬಾಳೆಕಾಯಿ, ಬಾಳೆಕೂಂಬೆ ಬಳಸುತ್ತಾರೆ. ಹಣ್ಣುಗಳಲ್ಲಿ ಬಾಳೆ ಹಣ್ಣನ್ನು ಬಳಸಲಾಗುತ್ತದೆ. ಕಾಳು ಮೆಣಸು ಖಾರಕ್ಕಾಗಿ, ಮಾವಿನಕಾಯಿ ಹುಳಿಗಾಗಿ ಬಳಸುತ್ತಾರೆ. ಈ ತಿಂಗಳಲ್ಲಿ ಅರಳಿನ ಚಿತ್ರಾನ್ನ, ಪಲ್ಯ, ಅವಲಕ್ಕಿಯ ಪಾಯಸ ಮಾಡುತ್ತಾರೆ. ಯಾವುದೇ ಬೇಳೆ ಬಳಸದ ಕಾರಣ ರವೆಯಿಂದ ಮಡ್ಡಿ ತಯಾರಿಸುತ್ತಾರೆ. ಮೊದಲ ಮತ್ತು ಕೊನೆಯ ತಿಂಗಳಲ್ಲಿ ಗೋಡಂಬಿ, ದ್ರಾಕ್ಷಿ, ಲಾವಂಚ, ಏಲಕ್ಕಿಯಂತಹ ಪರಿಮಳ ದ್ರವ್ಯಗಳನ್ನು ಬಳಸುವುದಿಲ್ಲ.
ಅಭ್ಯಾಸವಿಲ್ಲದವರಿಗೆ ಈ ವ್ರತಗಳ ಆಹಾರ ರುಚಿಸುವುದಿಲ್ಲ. ಹೀಗಾಗಿ ಶ್ರೀಕೃಷ್ಣಮಠದಲ್ಲಿ ಯಾತ್ರಾರ್ಥಿಗಳಿಗೆ ಮಾಮೂಲಿ ಸಾರು, ಸಾಂಬಾರಿನ ಖಾದ್ಯಗಳನ್ನು ತಯಾರಿಸುತ್ತಾರೆ. ನೈವೇದ್ಯಕ್ಕಾಗಿ ವ್ರತದ ಆಹಾರವನ್ನು ತಯಾರಿಸುತ್ತಾರೆ ಮತ್ತು ಈ ಆಚಾರವನ್ನು ಪಾಲಿಸುವ ವ್ರತಧಾರಿಗಳು ಮಾತ್ರ ಚಾತುರ್ಮಾಸ್ಯವ್ರತದ ಆಹಾರವನ್ನು ಬಳಸುತ್ತಾರೆ. ವಿಶೇಷವಾಗಿ ಸ್ವಾಮೀಜಿಯವರು, ಆಚಾರನಿಷ್ಠ ವಿದ್ವಾಂಸರು ವ್ರತದ ಆಹಾರಕ್ರಮವನ್ನು ಅನುಸರಿಸುತ್ತಾರೆ. ನಾಲ್ಕೂ ತಿಂಗಳು ಒಂದು ಸ್ವಲ್ಪವೂ ತಪ್ಪದೆ ಈ ಆಹಾರಕ್ರಮ ಪಾಲಿಸುವ ಆಚಾರನಿಷ್ಠರೂ ಇದ್ದಾರೆ. ಆದರೆ ಸಂಖ್ಯೆಯಲ್ಲಿ ಇವರು ಕಡಿಮೆ.
ಜು. 24ರಿಂದ ಚಾತುರ್ಮಾಸ್ಯ ವ್ರತ ಆಹಾರ ಕ್ರಮ ಉಡುಪಿ ಸಂಪ್ರದಾಯದ ಎಲ್ಲ ಮಠಗಳಲ್ಲಿ ಆರಂಭಗೊಳ್ಳುತ್ತದೆ. ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ (ಒಂದೆಡೆ ಕುಳಿತುಕೊಂಡು ಸಾಧನೆ ಮಾಡುವ) ಎರಡು ತಿಂಗಳಲ್ಲಿ ಮುಗಿದರೂ ಆಹಾರ ಕ್ರಮ ನಾಲ್ಕೂ ತಿಂಗಳು ಮುಂದುವರಿಯುತ್ತದೆ. ಉತ್ಥಾನ ದ್ವಾದಶಿಯಂದು ನಾಲ್ಕು ತಿಂಗಳ ವ್ರತ ಮುಗಿದು ಮಾಮೂಲಿ ಆಹಾರ ಕ್ರಮ ಆರಂಭಗೊಳ್ಳುತ್ತದೆ.
ಚಾತುರ್ಮಾಸ್ಯದ ಆಹಾರಕ್ರಮಕ್ಕೂ ಆಯುರ್ವೇದ ಶಾಸ್ತ್ರೀಯ ಆಹಾರಕ್ರಮಕ್ಕೂ ಕೆಲವು ಸಾಮ್ಯಗಳಿವೆ. ಚಾತುರ್ಮಾಸ್ಯವ್ರತದ ನೆಪದಲ್ಲಿ ಮಳೆಗಾಲದಿಂದ ಆರಂಭಗೊಂಡು ಮಳೆಗಾಲ ಕೊನೆಯವರೆಗೆ ಭಿನ್ನ ಭಿನ್ನ ಆಹಾರಪದಾರ್ಥಗಳನ್ನು ಸೇವಿಸಲು ಧಾರ್ಮಿಕವಾಗಿಯೇ ಚೌಕಟ್ಟು ವಿಧಿಸಲಾಗಿದೆ. ಆಯುರ್ವೇದದಲ್ಲಿ ಆಯಾ ಋತುಗಳಲ್ಲಿ ಎಂತೆಂಥ ಆಹಾರಗಳನ್ನು ಸ್ವೀಕರಿಸಬೇಕೆಂಬ ನಿಯಮವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.