ಪೋಷಕತ್ವ ಯೋಜನೆಗೆ ಜಿಲ್ಲೆಯಲ್ಲಿ ನಿರಾಸಕ್ತಿ
Team Udayavani, Aug 4, 2021, 3:40 AM IST
ಉಡುಪಿ: ಬಾಲ ನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಪೋಷಕತ್ವ ಯೋಜನೆಯಡಿ ಮಕ್ಕಳನ್ನು ನೋಡಿಕೊಳ್ಳಲು ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ.
ಹೆತ್ತ ವರ ಪ್ರೀತಿಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ನೆಲೆ ಕಲ್ಪಿ ಸುವ ಸರಕಾರದ ಪೋಷಕತ್ವ ಯೋಜನೆಯಡಿ ಮಕ್ಕಳನ್ನು ದತ್ತು ಪಡೆಯಲು ಉಡುಪಿಯ ಯಾರೂ ಮುಂದೆ ಬಂದಿಲ್ಲ. 4 ವರ್ಷಗಳಲ್ಲಿ ಉಡುಪಿಯಲ್ಲಿ ಶೂನ್ಯ ದತ್ತು ದಾಖಲಾಗಿದೆ. ಈ ಯೋಜನೆಯಡಿ ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳನ್ನು ದತ್ತು ಪಡೆಯುವ ಸಂಖ್ಯೆ ತೀರಾ ಕಡಿಮೆ ಇದೆ.
ಕಳೆದ ವರ್ಷ 4 ಅರ್ಜಿ ಸಲ್ಲಿಕೆಯಾಗಿದ್ದರೂ ಇಲಾಖೆ ನಿಯಮಕ್ಕೆ ಹೊಂದಾಣಿಕೆಯಾಗದ ಕಾರಣ ಅರ್ಜಿ ಸ್ವೀಕೃತಗೊಂಡಿಲ್ಲ. ಮಗು ಹಾಗೂ ಕುಟುಂಬದ ಹೊಂದಾಣಿಕೆಯ ಆಧಾರದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಮಗುವನ್ನು 18 ವರ್ಷದ ವಯಸ್ಸಿನವರೆಗೂ ಪೋಷಕತ್ವ ಮುಂದುವರಿಸಲು ಯೋಜನೆಯಲ್ಲಿ ಅವಕಾಶವಿದೆ. 6ರಿಂದ 18 ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅರ್ಹ 7 ಮಕ್ಕಳಿದ್ದರೂ ಆಸಕ್ತ ಪೋಷಕರ ಕೊರತೆ ಕಾಡುತ್ತಿದೆ.
ಯಾಕೆ ಹಿನ್ನಡೆ? :
6ರಿಂದ 18 ವರ್ಷದೊಳಗಿನ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಹ ಪೋಷಕರಿಗೆ ಪೋಷಕತ್ವದ ಆಧಾರದ ಮೇಲೆ ದತ್ತು ನೀಡಲಾಗುತ್ತದೆ. ಮಗುವನ್ನು ಪಡೆದುಕೊಂಡವರು ಪ್ರತೀ
ವರ್ಷ ದತ್ತು ಪ್ರಕ್ರಿಯೆ ನವೀಕರಣ ಮಾಡಬೇಕು. 18 ವರ್ಷದ ವರೆಗೂ ಮಗುವಿನ ಪೋಷಕರ ಹೆಸರು ತಂದೆ-ತಾಯಿ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ. ಜತೆಗೆ ಹೊರ ಜಿಲ್ಲೆ, ರಾಜ್ಯ, ವಿದೇಶಗಳಲ್ಲಿ ವಾಸಿಸುವವರಿಗೆ ಪೋಷಕತ್ವದಡಿಯಲ್ಲಿ ದತ್ತು ನೀಡಲು ಅವ ಕಾಶವಿಲ್ಲದ ಕಾರಣದಿಂದ ಅಂತಹವರಿಗೆ ಮಕ್ಕಳ ಅಗತ್ಯವಿದ್ದರೂ ಪೋಷಕತ್ವದಡಿಯಲ್ಲಿ ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಏನಿದು ಪೋಷಕತ್ವ? :
ಯೋಜನೆ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಜಿ ಸಲ್ಲಿಸಿದವರ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ಮಗುವಿನ ಬೆಳವಣಿಗೆಗೆ ಅಲ್ಲಿ ಪೂರಕ ವಾತಾವರಣವಿದ್ದರೆ ಮಾತ್ರ ಮಗುವನ್ನು ವಶಕ್ಕೆ ನೀಡಲಾಗುತ್ತದೆ. ಒಂದು ವರ್ಷದ ಬಳಿಕ ಮಕ್ಕಳ ರಕ್ಷಣಾಧಿಕಾರಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಮಗು ಕುಟುಂಬದ ಜತೆಗೆ ಬಾಳಲು ಇಷ್ಟ ಪಟ್ಟರೆ ಪೋಷಕತ್ವ ಅವಧಿಯನ್ನು ವರ್ಷದಿಂದ 18 ವರ್ಷಕ್ಕೆ ವಿಸ್ತರಿಸಲಾಗುತ್ತದೆ. ಈ ಮಧ್ಯೆ ಮಗು ಇಲಾಖೆಗೆ ವಾಪಾಸು ಬರಲು ಇಚ್ಛೆ ವ್ಯಕ್ತಪಡಿಸಿದರೆ ಅದಕ್ಕೂ ಅವಕಾಶವಿದೆ. ಈ ಬಾರಿ 5 ಅರ್ಜಿ ಸಲ್ಲಿಕೆಯಾಗಿದ್ದು, ಅಧಿಕಾರಿಗಳು ಪೋಷಕರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
5 ಮಕ್ಕಳ ದತ್ತು : 2018ರಲ್ಲಿ ಮಣ್ಣಪಳ್ಳದಲ್ಲಿ ಪತ್ತೆಯಾದ ನವಜಾತ ಶಿಶು ಹಾಗೂ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಮೀಪ 5 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಟ್ಟು ಅರ್ಹ ದಂಪತಿಗಳಿಗೆ ನೀಡಲಾಗಿದೆ.
ಇಲಾಖೆಯ ಹೆಚ್ಚಿನ ಪ್ರಚಾರದ ಹೊರತಾಗಿಯೂ ಪೋಷಕತ್ವ ಯೋಜನೆಯಲ್ಲಿ ಮಕ್ಕಳನ್ನು ಪೋಷಿಸಲು ದಂಪತಿ ಮುಂದೆ ಬರುತ್ತಿಲ್ಲ. ಇಲಾಖೆ ವಶದಲ್ಲಿರುವ ಮಕ್ಕಳನ್ನು ಇನ್ನೊಬ್ಬರಿಗೆ ಕೊಡುವ ಸಂದರ್ಭದಲ್ಲಿ ಬಾಲ ನ್ಯಾಯ ಕಾಯ್ದೆಯ ನಿಯಮಗಳನ್ನು ಪಾಲಿಸಲಾಗುತ್ತದೆ. ಹೀಗಾಗಿ ಅರ್ಜಿಗಳು ಸುಲಭದಲ್ಲಿ ಸ್ವೀಕೃತ ವಾಗುತ್ತಿಲ್ಲ. ಮಕ್ಕಳಿಲ್ಲದ ಅರ್ಹ ಕುಟುಂಬ ಪೋಷಕತ್ವ ಯೋಜನೆಯಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಅರ್ಜಿ ಸಲ್ಲಿಸಬಹುದು. –ಪ್ರಭಾಕರ ಆಚಾರ್ ಕಾನೂನು ಪರಿವೀಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ
-ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.