Udupi; ರಾಜ್ಯ ಮಟ್ಟದ ಉದ್ಯೋಗ ಮೇಳದ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಕರೆ
Team Udayavani, Feb 14, 2024, 11:10 PM IST
ಉಡುಪಿ: ಯುವಜನರಿಗೆ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ. 26, 27ರಂದು ಆಯೋಜಿಸಲಾಗಿದೆ.
ಯುವಜನರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳದ ಅಭ್ಯರ್ಥಿಗಳ ನೋಂದಣಿ ಕುರಿತು ಹಾಗೂ ಪಿ.ಎಂ. ವಿಶ್ವಕರ್ಮ ಯೋಜನೆಯ ಅನುಷ್ಠಾನದ ಕುರಿತ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದವಿ, ವೃತ್ತಿ ಶಿಕ್ಷಣ ಪಡೆದ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸರಕಾರ ರಾಜ್ಯಮಟ್ಟದ ಉದ್ಯೋಗ ಮೇಳವನ್ನು 500ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಸಂಯೋಗದೊಂದಿಗೆ ಆಯೋಜಿಸಲಿದೆ.
ಸ್ಥಳದಲ್ಲೇ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು https://skillconnect.kaushalkar.com/ಮೂಲಕ ನೋಂದಣಿ ಮಾಡಿ ಭಾಗವಹಿಸಬಹುದು. ಜಿಲ್ಲೆಯಲ್ಲಿ ಈವರೆಗೆ 105 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ಯೋಜನೆ ತಲುಪಿಸಲು ಸೂಚನೆ
ಸಾಂಪ್ರದಾಯಿಕ ಕರಕುಶಲ ಕಲೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಆಯ್ಕೆಯಾದ ಫಲಾನುಭವಿಗಳಿಗೆ ಡಿಜಿಟಲ್ ಐಡಿ ಕಾರ್ಡ್ ಹಾಗೂ ಪಿ.ಎಂ ವಿಶ್ವಕರ್ಮ ಪ್ರಮಾಣ ಪತ್ರ, ತರಬೇತಿ, ಉಪಕರಣ ನೀಡುವ ಜತೆಗೆ 1 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿಯನ್ನು ಐಟಿಐ, ಡಿಪ್ಲೊಮಾ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ., ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ವಿ.ನಾಯಕ್, ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಗೋವರ್ಧನ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸರಕಾರಿ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ, ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.