ಐತಿಹಾಸಿಕವಾಗಿ ಗುರುತಿಸಲ್ಪಟ್ಟಿರುವ ಕಾಪುವಿಗೆ ತಾಲೂಕು ಭಾಗ್ಯ
Team Udayavani, Mar 16, 2017, 4:50 PM IST
ಕಾಪು: ಪ್ರವಾಸೋದ್ಯಮ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ಕೈಗಾರಿಕೆ ಸಹಿತವಾಗಿ ಹತ್ತಾರು ವಿಚಾರಗಳಿಂದಾಗಿ ಗುರುತಿಸಲ್ಪಟ್ಟಿರುವ ಹಾಗೂ ಕಾಪು ಲೈಟ್‌ಹೌಸ್, ಶಂಕರಪುರ ಮಲ್ಲಿಗೆ ಮತ್ತು ಮಟ್ಟುಗುಳ್ಳದ ಕಾರಣದಿಂದಾಗಿ ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಕಾಪುವಿಗೆ ತಾಲೂಕು ಕೇಂದ್ರವಾಗಿ ಗುರುತಿಲ್ಪಡುವ ಭಾಗ್ಯ ಲಭಿಸಿದೆ.
ಕಾಪು ಹೋಬಳಿಯ 19 ಗ್ರಾಮ ಪಂಚಾಯತ್ ವ್ಯಾಪ್ತಿಯ 36 ಕಂದಾಯ ಗ್ರಾಮಗಳನ್ನು ಸೇರಿಸಿಕೊಂಡು ಕಾಪು ತಾಲೂಕು ರಚನೆ ಮಾಡಬೇಕೆಂಬ ಬೇಡಿಕೆಗೆ ರಾಜ್ಯ ಸರಕಾರ ಮನ್ನಣೆ ನೀಡಿದೆ. ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕಾಪು ತಾಲೂಕು ಘೋಷಣೆಯಾಗಿದ್ದು, ಆ ಮೂಲಕ ಈ ಬಾರಿಯ ಬಜೆಟ್‌ನಲ್ಲಿ ಕಾಪು ಕ್ಷೇತ್ರಕ್ಕೆ ಬಂಪರ್ ಬೆಳೆ ಲಭಿಸಿದೆ.
ಕಾಪು ಹಳೆ ವಿಧಾನಸಭಾ ಕ್ಷೇತ್ರದ ಕಟಪಾಡಿ, ಕೋಟೆ, ಕುರ್ಕಾಲು, ಬೆಳ್ಳೆ, ಶಿರ್ವ, ಮಜೂರು, ಇನ್ನಂಜೆ, ಬೆಳಪು, ಎಲ್ಲೂರು, ಕುತ್ಯಾರು, ಪಡುಬಿದ್ರಿ, ಹೆಜಮಾಡಿ, ಮುದರಂಗಡಿ, ಪಲಿಮಾರು, ತೆಂಕ, ಬಡಾ ಗ್ರಾಮ ಪಂಚಾಯತ್‌ಗಳು ಮತ್ತು ಕಾಪು, ಉಳಿಯಾರಗೋಳಿ ಮತ್ತು ಮಲ್ಲಾರು ಗ್ರಾಮಗಳನ್ನು ಸೇರಿಸಿಕೊಂಡು ರಚಿಸಲಾದ ಕಾಪು ಪುರಸಭೆ ವ್ಯಾಪ್ತಿಯ 30 ಕಂದಾಯ ಗ್ರಾಮಗಳು ನೂತನವಾಗಿ ಘೋಷಿಸಲ್ಪಟ್ಟ ಕಾಪು ತಾಲೂಕಿನ ವ್ಯಾಪ್ತಿಗೆ ಸೇರಲಿವೆ.
ಕಾಪು ತಾಲೂಕಿಗೆ 30
ಕಂದಾಯ ಗ್ರಾಮಗಳು
ಕೋಟೆ-ಮಟ್ಟು, ಏಣಗುಡ್ಡೆ- ಮೂಡಬೆಟ್ಟು, ಇನ್ನಂಜೆ-ಪಾಂಗಾಳ, ಉಳಿಯಾರಗೋಳಿ, ಕಾಪು ಪಡು, ಮೂಳೂರು, ಮಲ್ಲಾರು, ಮಜೂರು- ಹೇರೂರು-ಪಾದೂರು, ಬಡಾ ಉಚ್ಚಿಲ, ತೆಂಕ ಎರ್ಮಾಳು, ನಡಾÕಲು-ಪಾದೆಬೆಟ್ಟು, ಎಲ್ಲೂರು, ಕಳತ್ತೂರು-ಕುತ್ಯಾರು, ಬೆಳಪು, ಶಿರ್ವ, ಸಾಂತೂರು-ಪಿಲಾರು, ನಂದಿಕೂರು- ಪಲಿಮಾರು, ಬೆಳ್ಳೆ-ಕಟ್ಟಿಂಗೇರಿ, ಕುರ್ಕಾಲು, ಶಿರ್ವ ಕಂದಾಯ ಗ್ರಾಮಗಳು ಪ್ರಸ್ತಾವಿತ ಕಾಪು ತಾಲೂಕಿನ ವ್ಯಾಪ್ತಿಗೆ ಸೇರಲಿವೆ.
ಕಾಪು ತಾಲೂಕು ಕೇಂದ್ರದ
ಇಂಗಿತ ವ್ಯಕ್ತ ಪಡಿಸಿದ್ದ ಸೊರಕೆ
2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಪು ಶಾಸಕರಾಗಿ ಆಯ್ಕೆಯಾದ ವಿನಯ ಕುಮಾರ್ ಸೊರಕೆ ಅವರು ತಮ್ಮ ಪ್ರಥಮ ಭಾಷಣದಲ್ಲೇ ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವುದೇ ನನ್ನ ಮುಖ್ಯ ಗುರಿ ಎಂದು ಹೇಳಿಕೆ ನೀಡಿದ್ದರು. ಮುಂದೆ ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸೀÌಕರಿಸಿದ ಬಳಿಕ ಕಾಪು, ಮಲ್ಲಾರು, ಉಳಿಯಾರಗೋಳಿ ಗ್ರಾಮಗಳನ್ನು ಸೇರಿಸಿಕೊಂಡು ಕಾಪು ಪುರಸಭೆಯನ್ನಾಗಿ ರಚಿಸುವ ಮೂಲಕ ಕಾಪುವಿನ ಅಭಿವೃದ್ಧಿಗೆ ಮತ್ತಷ್ಟು ವೇಗವನ್ನು ತಂದೊದಗಿಸಿದ್ದರು.
ಕೈ ತಪ್ಪಿದ ಸಚಿವ ಗಿರಿಯಿಂದಾಗಿ ತಾ| ಹೋರಾಟಕ್ಕೆ ವೇದಿಕೆ ಸೃಷ್ಠಿ : ತನ್ನ ಕೈಯ್ಯಲ್ಲಿದ್ದ ನಗರಾಭಿವೃದ್ಧಿ ಸಚಿವ ಗಿರಿ ಕೈ ತಪ್ಪಿ ಹೋದ ಬಳಿಕ ಕ್ಷೇತ್ರದ ಜನರ ಸೇವೆಯಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡು ಬಂದ ಸೊರಕೆ ಅವರು ಬಳಿಕ ಕಾಪು ತಾಲೂಕು ಬೇಡಿಕೆಯ ಹೋರಾಟಕ್ಕೆ ಚಾಲನೆ ನೀಡಿದ್ದರು. ಸಚಿವ ಗಿರಿಯನ್ನು ಪಡೆದುಕೊಂಡದ್ದಕ್ಕೆ ಪ್ರತಿಯಾಗಿ ಕಾಪುವಿಗೆ ತಾಲೂಕು ಕೇಂದ್ರದ ಪಟ್ಟ ಒದಗಿಸಲೇಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುಂದಿರಿಸಿದ್ದರು.
ಕಾಪು ಹೋಬಳಿಯ ಸುತ್ತಳತೆ
ಮತ್ತು ಜನಸಂಖ್ಯೆ
ಕಾಪು ಹೋಬಳಿಯ ಸರಹದ್ದಿನ ವ್ಯಾಪ್ತಿ 54,435.34 ಎಕ್ರೆ ವಿಸೀ¤ರ್ಣ ಸುತ್ತಳತೆಯದ್ದಾಗಿದ್ದು, 16 ಗ್ರಾಮ ಪಂಚಾಯತ್ ಮತ್ತು ಕಾಪು ಪುರಸಭೆಯ ವ್ಯಾಪ್ತಿಯೊಳಗಿನ 1,36,074ರಷ್ಟು ಜನರು ನೂತನ ಕಾಪು ತಾಲೂಕಿನ ವ್ಯಾಪ್ತಿಯಲ್ಲಿದ್ದಾರೆ.
ಅಪಸ್ವರವೂ ಎದ್ದಿತ್ತು
ಕಾಪು ತಾಲೂಕು ರಚನೆಗೆ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿರುವಂತೆಯೇ ಒಂದೆರಡು ಕಡೆಗಳಿಂದ ಅಪಸ್ವರವೂ ಎದ್ದಿತ್ತು. ನಮಗೆ ಉಡುಪಿ ಹತ್ತಿರ, ಕಾಪುವಿನಲ್ಲಿ ಸೊರಕೆ ರಾಜಕೀಯ ಕಾರಣಕ್ಕಾಗಿ ತಾಲೂಕು ಹೋರಾಟ ನಡೆಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈ ನಡುವೆ ಉಡುಪಿಯಲ್ಲೇ ಉಳಿಯಲು ಪ್ರಯತ್ನಿಸಿದ ಗ್ರಾ.ಪಂ. ಗಳನ್ನು ಹಾಗೆ ಉಳಿಸಿಯೇ ಕಾಪು ತಾಲೂಕು ರಚನೆಗೆ ಸೊರಕೆ ಮುಂದಡಿಯನ್ನೂ ಇಟ್ಟಿದ್ದರು.
ಉಡುಪಿ ತಾಲೂಕು ಪಂಚಾಯತ್‌ನ ಕ್ಷೇತ್ರಗಳು ಮತ್ತು ವ್ಯಾಪ್ತಿಯೂ ಪುನರ್ ಪರಿಶೀಲನೆಗೆ ಒಳಗಾಗಲಿದ್ದು, ಕಾಪುವಿಗೆ ಪ್ರತ್ಯೇಕ ತಾಲೂಕು ಪಂಚಾಯತ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ ಪ್ರತೀ ಕಾರ್ಯ ಕಲಾಪಗಳೂ ಕಾಪುವಿನಲ್ಲೆ ನಡೆಯ ಬೇಕೆಂಬ ಇರಾದೆಯನ್ನು ಹೊಂದಲಾಗಿದ್ದು, ಕಾಪು ಕ್ಷೇತ್ರದ ಜನರಿಗೆ ಇದು ಕೂಡಾ ವರದಾನವಾಗಲಿದೆ ಎಂದು ಸೊರಕೆ ತಿಳಿಸಿದ್ದಾರೆ. ನೂತನ ಕಾಪು ತಾಲೂಕು ವ್ಯಾಪ್ತಿಯಿಂದ ಉದ್ಯಾವರ, ಕೊರಂಗ್ರಪಾಡಿ, ಮಣಿಪುರ ಗ್ರಾಮದವರನ್ನು ಹೊರಗಿರಿಸಲಾಗಿದ್ದು, ಅವರನ್ನು ಉಡುಪಿ ತಾ|ನ ವ್ಯಾಪ್ತಿಯೊಳಗೆ ಸೇರಿಸಲು ಪ್ರಸ್ತಾವನೆಯಲ್ಲಿ ಸೂಚಿಸ ಲಾಗಿದೆ. ಒಂದು ವೇಳೆ ಈ ಗ್ರಾಮಗಳ ಜನರು ಒಮ್ಮತದ ನಿರ್ಧಾರಕ್ಕೆ ಬಂದು ತಾವು ಕಾಪು ತಾಲೂಕಿಗೇ ಸೇರ್ಪಡೆಗೊಳ್ಳಲು ಇಚ್ಛಿಸಿದಲ್ಲಿ ಅವರ ನಿರ್ಧಾರವನ್ನು ಸ್ವಾಗತಿಸುವುದಾಗಿ ಶಾಸಕ ಸೊರಕೆ ಉದಯವಾಣಿಗೆ ತಿಳಿಸಿದ್ದಾರೆ.
ಹಿರಿಯಡಕ ಹೋಬಳಿ
ಕೇಂದ್ರಕ್ಕೆ ಪ್ರಸ್ತಾವನೆ
ಹಿಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ / ನೂತನ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 4 ಗ್ರಾಮಗಳಾದ ಬೆಳ್ಳಂಪಳ್ಳಿ, ಕುಕ್ಕೆಹಳ್ಳಿ, ಪೆರ್ಡೂರು, ಬೈರಂಪಳ್ಳಿ ಗ್ರಾಮಗಳನ್ನು ಉಡುಪಿ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಮತ್ತು ಪ್ರತ್ಯೇಕವಾಗಿ ಹಿರಿಯಡಕ ನಾಡ ಕಚೆರಿಯನ್ನು ಪ್ರಾರಂಭಿಸಬೇಕೆಂಬ ಬೇಡಿಕೆಯನ್ನೂ ಸರಕಾರದ ಮುಂದೆ ಇರಿಸಿದ್ದು, ಬಹುತೇಕ ಈ ಬೇಡಿಕೆಯೂ ಇದೇ ಬಜೆಟ್‌ನಲ್ಲಿ ಈಡೇರುತ್ತದೆ ಎಂಬ ವಿಶ್ವಾಸವನ್ನು ಕೂಡಾ ಶಾಸಕ ವಿನಯ ಕುಮಾರ್ ಸೊರಕೆ ವ್ಯಕ್ತಪಡಿಸಿದ್ದಾರೆ.
ಸ್ವಾಗತಾರ್ಹ : ಹೋರಾಟ ಸಮಿತಿ
ಪ್ರಥಮ ಪ್ರಯತ್ನದಲ್ಲೇ ಕಾಪು ತಾಲೂಕು ಘೋಷಣೆಯಾಗಿರುವುದು ಸ್ವಾಗತಾರ್ಹವಾಗಿದೆ. ಕಾಪು ತಾಲೂಕು ರಚನೆಗೆ ಸೊರಕೆ ಅವರು ನಿರಂತರವಾಗಿ ಪ್ರಯತ್ನಿಸಿದ್ದು, ಮುಖ್ಯಮಂತ್ರಿ ಸಹಿತವಾಗಿ ವಿವಿಧ ಇಲಾಖೆಗಳ ಸಚಿವರಿಗೆ ಒತ್ತಡವನ್ನೂ ಹೇರಿದ್ದರು. ಕಾಪು ತಾ| ಘೋಷಣೆಯನ್ನು ಕಾಪು ಕ್ಷೇತ್ರದ ಜನತೆಯ ಪರವಾಗಿ ಸ್ವಾಗತಿಸುತ್ತೇವೆ ಎಂದು ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಕೆ. ಲೀಲಾಧರ ಶೆಟ್ಟಿ ತಿಳಿಸಿದ್ದಾರೆ.
ಕಾಪು ತಾಲೂಕು ಘೋಷಣೆಗೆ ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆಯವರ ಪೂರ್ಣ ಸಾಮರ್ಥಯದ ಪ್ರಯತ್ನವೇ ಕಾರಣವಾಗಿದೆ. ಕಾಪುವನ್ನು ತಾಲೂಕು ಕೇಂದ್ರವನ್ನಾಗಿಸುವುದಾಗಿ ಶಾಸಕತ್ವದ ಪ್ರಥಮ ಸಭೆಯಲ್ಲೇ ಹೇಳಿದ್ದು, ಅದನ್ನು ನೆರವೇರಿಸಿ ಕೊಡುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಗ್ರಾ. ಪಂ. ಒಕ್ಕೂಟದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬಣ್ಣಿಸಿದ್ದಾರೆ.
ತಾಲೂಕು ಘೋಷಣೆ ಅತ್ಯಂತ ಸಂಭ್ರಮದ ಕ್ಷಣ : ವಿನಯ ಕುಮಾರ್ ಸೊರಕೆ
ಉಡುಪಿ ಜಿಲ್ಲೆಯಲ್ಲಿ ನೂತನವಾಗಿ 3 ತಾಲೂಕುಗಳನ್ನು ಘೋಷಿಸಲಾಗಿದ್ದು, ಅದರಲ್ಲಿ ಕಾಪು ತಾಲೂಕು ಕೂಡಾ ಒಂದಾಗಿದೆ. ಕಾಪು ತಾಲೂಕು ಘೋಷಣೆ ಯಾಗಿರುವುದರಿಂದ ತಾಲೂಕು ಮಟ್ಟದ ಎಲ್ಲ ಕಚೇಗಳೂ ಕಾಪುವಿಗೆ ಬರಲಿದ್ದು, 28 ಸರಕಾರಿ ಇಲಾಖೆಗಳು ಕಾಪುವಿನಲ್ಲಿ ಕಚೇರಿಯನ್ನು ಪ್ರಾರಂಭಿಸಲಿವೆ. ತಾಲೂಕು ಮಟ್ಟದ ಆಸ್ಪತ್ರೆ, ಮಿನಿ ವಿಧಾನ ಸೌಧ, ಕಾಪುವಿಗೇ ಪ್ರತ್ಯೇಕ ರಿಜಿಸ್ಟ್ರೇಷನ್ ಕಚೇರಿ (ಮೂಲ್ಕಿಗೆ ತೆರಳುವ ಗೋಳು ತಪ್ಪಿದೆ) ಕಾಪು ತಾಲೂಕಿನ ಮಿನಿ ವಿಧಾನ ಸೌಧದಲ್ಲೇ ಕಾರ್ಯಾಚರಿಸಲಿವೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
10 ಗ್ರಾ. ಪಂ.ಗಳನ್ನು ಹೊರಗಿಟ್ಟೆ ಬೇಡಿಕೆ ಸಲ್ಲಿಕೆ
ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ, ಮಣಿಪುರ, ಅಲೆವೂರು, 80 ಬಡಗಬೆಟ್ಟು, ಪೆರ್ಡೂರು, ಆತ್ರಾಡಿ, ಹಿರಿಯಡಕ, ಬೆಳ್ಳಂಪಳ್ಳಿ, ಬೈರಂಪಳ್ಳಿಯೂ ಸೇರಿದಂತೆ ಹತ್ತು ಗ್ರಾಮ ಪಂಚಾಯತ್‌ಗಳನ್ನು ನೂತನ ಕಾಪು ತಾಲೂಕು ವ್ಯಾಪ್ತಿಯಿಂದ ಹೊರಗಿಟ್ಟು ತಾಲೂಕು ಬೇಡಿಕೆಯನ್ನು ಸರಕಾರದ ಮುಂದಿರಿಸಲಾಗಿತ್ತು.
ಪುನಃಪರಿಶೀಲನೆ ಸಾಧ್ಯತೆ
ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳ ಘೋಷಣೆಯಿಂದ ಪ್ರಸ್ತುತ ಇರುವ ಕಾರ್ಕಳ, ಉಡುಪಿ, ಕುಂದಾಪುರ ತಾಲೂಕು ಮತ್ತು ಅವುಗಳ ವ್ಯಾಪ್ತಿಯ ಗ್ರಾ.ಪಂ.ಗಳು ಪುನರ್‌ಪರಿಶೀಲನೆಗೊಳಗಾಗುವ ಸಾಧ್ಯತೆಯಿದ್ದು, ಕಾರ್ಕಳ ತಾಲೂಕಿನ ಅಂದರೆ ಹಳೆ ಕಾಪು ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳು ಕಾಪು ತಾಲೂಕಿನ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳೂ ಇಲ್ಲಿವೆ.
ಶಾಸಕರ ಪ್ರಯತ್ನಕ್ಕೆ ತಾಲೂಕು ಹೋರಾಟ ಸಮಿತಿಯಿಂದ ಬೆಂಬಲ
ಮಾತ್ರವಲ್ಲದೇ ತಾಲೂಕು ರಚನೆಗಾಗಿ ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರ ಮುಂದಾಳುತ್ವದಲ್ಲಿ ತಾಲೂಕು ಹೋರಾಟ ಸಮಿತಿಯನ್ನು ರಚಿಸಿ, ಅದರ ಮೂಲಕವಾಗಿ ಶಾಸಕ ವಿನಯ ಕುಮಾರ್ ಸೊರಕೆಯವರ ನಾಯಕತ್ವದಡಿ ವಿವಿಧ ಹೋರಾಟಗಳು ನಡೆದಿದ್ದವು. ಕಾಪು ತಾಲೂಕಿಗಾಗಿ ಆಗ್ರಹಿಸಿ ಕಾಪು ಹೋಬಳಿಯಲ್ಲಿ ವಾಹನ ಜಾಥಾ, ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆ, ಹೆಜಮಾಡಿಯಿಂದ ಉದ್ಯಾವರ-ಬಲಾಯಿಪಾದೆಯವರೆಗೆ ಬೃಹತ್ ಕಾಲ್ನಡಿಗೆ ಜಾಥಾವನ್ನೂ ನಡೆಸಲಾಗಿತ್ತು.
ತಾಲೂಕು ಘೋಷಣೆ ಸ್ವಾಗತ ; ಘೋಷಣೆಯಾದಷ್ಟೇ ವೇಗವಾಗಿ ಅನುಷ್ಠಾನವೂ ಆಗಲಿ : ಬಿಜೆಪಿ
ಕಾಪು ತಾಲೂಕು ಘೋಷಣೆಯನ್ನು ಕಾಪು ಕ್ಷೇತ್ರ ಬಿಜೆಪಿ ಸ್ವಾಗತಿಸುತ್ತದೆ. ಶಾಸಕ ವಿನಯ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ನಾವು ಭಾಗವಹಿಸಿರಲಿಲ್ಲ. ಆದರೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್‌ಗಳಿಂದ ಅವಶ್ಯಕ ಬೆಂಬಲ ಪತ್ರಗಳನ್ನು ಒದಗಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ತಾಲೂಕು ಘೋಷಣೆಯ ಹಿಂದೆ ನಡೆಸಿರುವ ಪ್ರಯತ್ನವನ್ನು ಘೋಷಣೆ ಯನ್ನು ಅನುಷ್ಠಾನಗೊಳಿಸುವವರೆಗೂ ಮುಂದುವರಿಸಬೇಕು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ.
ಕಾಪು ತಾಲೂಕು ಘೋಷಣೆ : ಕಾಪು ಬ್ಲಾಕ್ ಕಾಂಗ್ರೆಸ್ ಹರ್ಷ
ಕಾಪು ತಾಲೂಕು ಘೋಷಣೆಯಾಗಿರುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವುದಾಗಿ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿಯೇ ಶಾಸಕ ವಿನಯ ಕುಮಾರ್ ಅವರು ಘೋಷಣೆ ಮಾಡಿದ್ದು, ಅದರಂತೆ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿ ತಾಲೂಕು ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಘೋಷಣೆ ಜತೆಗೆ ಅನುಷ್ಠಾನವೂ ಆಗಲಿ : ಜೆಡಿಎಸ್
ಇಂದಿನ ಬಜೆಟ್‌ನಲ್ಲಿ ಕಾಪು, ಬ್ರಹ್ಮಾವರ ಮತ್ತು ಬೈಂದೂರು ತಾಲೂಕು ಘೋಷಣೆಯಾಗಿರುವುದು ಸ್ವಾಗತಾರ್ಹವಾಗಿದೆ. ಇದರ ಹಿಂದಿನ ರೂವಾರಿಗಳಾದ ಶಾಸಕ ವಿನಯ ಕುಮಾರ್ ಸೊರಕೆ ಮತ್ತು ತಾಲೂಕು ಹೋರಾಟ ಸಮಿತಿ ಹಾಗೂ ರಾಜ್ಯ ಸರಕಾರಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಈ ಘೋಷಣೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿರದೇ ಅತೀ ಶೀಘ್ರದಲ್ಲಿ ಅನುಷ್ಠಾನಕ್ಕೆ ಬರುವಂತಾಗಲಿ ಎಂದು ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಪ್ರತಿಕ್ರಿಯಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಹೆಸರುವಾಸಿ ಕಾಪು
ಕಾಪು ಹೆಸರು ಎತ್ತಿದಾಕ್ಷಣ ಇಲ್ಲಿನ ಪ್ರವಾಸೋದ್ಯಮ, ಧಾರ್ಮಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರದೇಶಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಕಾಪು ಲೈಟ್ ಹೌಸ್, ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ ಕ್ಷೇತ್ರಗಳು, ಕೈಗಾರಿಕಾ ಸ್ಥಾವರಗಳು, ಶೈಕ್ಷಣಿಕ ಕ್ಷೇತ್ರಗಳು, ಕ್ಷೇತ್ರದುದ್ದಕ್ಕೂ ಹರಡಿರುವ ಕರಾವಳಿ ಮತ್ತು ಬೆಟ್ಟದ ಪ್ರದೇಶಗಳು, ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಶಂಕರಪುರ ಮಲ್ಲಿಗೆ, ಮಟ್ಟು ಗುಳ್ಳ, ಜನಪದೀಯ ಆಚರಣೆಗಳು ಇವೆಲ್ಲವೂ ಕಾಪುವಿಗೆ ಸ್ಥಳನಾಮಕ್ಕೆ ಮುಕುಟ ಪ್ರಾಯವಾಗಿವೆ.
ಅಷ್ಠಮಠಗಳೊಂದಿಗೆ ಸಂಬಂಧ ಹೊಂದಿದ ಕಾಪು : ಉಡುಪಿ ಶ್ರೀ ಕೃಷ್ಣ ಮಠದ ಅಷ್ಟ ಮಠಗಳ ಪೈಕಿ ಪುತ್ತಿಗೆ, ಅದಮಾರು, ಫಲಿಮಾರು ಮತ್ತು ಶೀರೂರು ಮಠಗಳು ಕಾಪು ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇವೆ ಎನ್ನುವುದು ಕಾಪುವಿಗೆ ಹೆಮ್ಮೆ. ಕೃಷ್ಣ ಮಠದ ದ್ವೈ ವಾರ್ಷಿಕ ಪರ್ಯಾಯ ಪೀಠಾರೋಹಣಗೈಯ್ಯುವ ಯತಿಗಳು ಕಾಪುವಿನ ದಂಡತೀರ್ಥ ಮಠಕ್ಕೆ ಬಂದು ಕಾಪು ದಂಡತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಬಳಿಕ ಸರ್ವಜ್ಞ ಪೀಠಾರೋಹಣಗೈಯುವುದು ಸಂಪ್ರದಾಯವಾಗಿದೆ.
ಸರ್ವ ಧರ್ಮಗಳ ಸಂಗಮ ಕ್ಷೇತ್ರಕಾಪು ಕ್ಷೇತ್ರವು ಸರ್ವ ಧರ್ಮಗಳ ಕ್ಷೇತ್ರವೆಂದೇ ಕರೆಯಲ್ಪಡುತ್ತಿದೆ. ಇಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಸಮಾನ ಮನಸ್ಕರಾಗಿ ಬಾಳುತ್ತಿದ್ದು, ಹಿಂದೂಗಳ ಶ್ರದ್ಧಾ ಕೇಂದ್ರಗಳ ಮಾದರಿಯಲ್ಲಿಯೇ ಕ್ರೈಸ್ತರ ಹಲವು ಪ್ರಮುಖ ಶ್ರದ್ಧಾ ಕೇಂದ್ರಗಳು, ಮುಸ್ಲಿಂ ಸಮುದಾಯದ ಶ್ರದ್ಧಾಕೇಂದ್ರಗಳು ಕೂಡಾ ಕಾಪುವಿನ ಹೆಸರಿಗೆ ಮುಕುಟ ಪ್ರಾಯವಾಗಿವೆ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.