ದೀಪಾವಳಿ ಸಡಗರ: ಸಾಂಪ್ರದಾಯಿಕ ಗೂಡುದೀಪಗಳ ಮೆರುಗು
Team Udayavani, Nov 3, 2021, 6:15 AM IST
ಸಾಂಪ್ರದಾಯಿಕ ಗೂಡುದೀಪವೆಂದ ಮೇಲೆ ಅದರಲ್ಲಿ ಇರಬೇಕಾದ ದೀಪವೂ ಸಾಂಪ್ರದಾಯಿಕ ಆಗಿರಬೇಕಲ್ಲವೆ? ಈಗಂತೂ ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದೆ. ಹೀಗಾಗಿ ಗೂಡುದೀಪಗಳಲ್ಲಿ ಹಣತೆಯಲ್ಲಿ ದೀಪವನ್ನು ಉರಿಸಿದರೆ ಸಾಂಪ್ರದಾಯಿಕ ಗೂಡುದೀಪವೆಂಬ ಹೆಸರು ಅನ್ವರ್ಥವಾಗುತ್ತದೆ.
ಉಡುಪಿ: ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ಬುಧವಾರದಿಂದ ಸಡಗರ ಎಲ್ಲರ ಮನೆಗಳಲ್ಲಿ ಮನೆಮಾಡಲಿದೆ.
ಬೆಳಕಿನ ಹಬ್ಬಕ್ಕೆ ಮಾರುಕಟ್ಟೆ ತುಂಬಾ ಗೂಡುದೀಪಗಳು ಕಾಣಸಿಗುತ್ತಿದೆ. ಈ ಬಾರಿಯೂ ಗೂಡುದೀಪಗಳು ಮೈಕೊಡವಿಕೊಂಡು ಹೊಸತನಕ್ಕೆ ಅಣಿಯಾಗಿವೆ. ಅದನ್ನು ನೋಡುವುದೇ ಚೆಂದ. ಅಲ್ಲೊಂದು ಬಣ್ಣ, ಇಲ್ಲೊಂದುಬಣ್ಣ ಸೇರಿಸಿ, ಮೇಲಿಂದ ಮುತ್ತುಗಳನ್ನೂ ಪೋಣಿಸಿ ಚೆಂದಾಗುವ ಅವುಗಳಿಗೆ ದೀಪದ ಮೆರುಗು ಸಿಕ್ಕರಂತೂ ಕಣ್ಣುಗಳಿಗೆ ಹಬ್ಬ ನೀಡುತ್ತವೆ.
ಚೀನ ಗೂಡುದೀಪಕ್ಕೆ ಬೇಡಿಕೆ ಕುಸಿತ!
ಸಿಂಥೆಟಿಕ್ ಬಟ್ಟೆಯಿಂದ ತಯಾರಿಸಿದ ಚೀನದ ಬಣ್ಣ -ಬಣ್ಣದ ವಿವಿಧ ವಿನ್ಯಾಸಗಳಲ್ಲಿ ಸಿಗುವ ಗೂಡುದೀಪಗಳ ಸಂಖ್ಯೆ ಈ ಬಾರಿ ಕಡಿಮೆ ಇದೆ. ಸ್ಥಳೀಯವಾಗಿ ಮಾಡಲ್ಪಟ್ಟ ಗೂಡು ದೀಪಗಳು ಹೆಚ್ಚಿನ ಅಂಗಡಿಯಲ್ಲಿ ಕಾಣ ಸಿಗುತ್ತಿದೆ. ನಗರದ ಮೂಲೆ ಮೂಲೆಗಳಲ್ಲಿ ಸ್ಥಳೀಯರು ಗೂಡುದೀಪಗಳನ್ನು ನಿರ್ಮಿಸಿ, ಅಂಗಡಿಗಳಿಗೆ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.
200ರಿಂದ 650 ರೂ.
ದೀಪಾವಳಿ ಹಬ್ಬಕ್ಕೆ ಈ ಬಾರಿಯ ಗೂಡುದೀಪಗಳು ತುಸು ದುಬಾರಿ ಎನ್ನಿಸಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಲ್ಪಟ್ಟ ಗೂಡದೀಪಗಳು 250 ರೂ.ನಿಂದ 1,000 ರೂ. ಬೆಲೆ ನಿಗದಿಪಡಿಸಲಾಗಿದೆ. ಇವುಗಳು ಒಂದೊಂದೂ ವಿಭಿನ್ನ ವಿನ್ಯಾಸದಿಂದ ಮನ ಸೆಳೆಯುತ್ತವೆ. ಕಸೂತಿ, ಸ್ಟೋನ್ ವರ್ಕ್, ಕುಂದನ್ ವಿಶಿಷ್ಟ ಕುಸುರಿಗಳು ಗೂಡುದೀಪಗಳಿಗೆ ಮತ್ತಷ್ಟು ಮೆರುಗು ನೀಡುವಂತಿವೆ.
ಗೂಡುದೀಪ ತಯಾರಿಕೆ
ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿ, ಕೆಎಂ ಮಾರ್ಗ, ನಗರದ ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳ ಹಾಗೂ ಅಂಗಡಿ ಮಾಲ್‌ಗಳಲ್ಲಿ ಗೂಡು ದೀಪಗಳ ಖರೀದಿ ಜೋರಾಗಿದೆ. ಇನ್ನೊಂದು ಕಡೆಯಲ್ಲಿ ಮನೆಯಲ್ಲಿ ಗೂಡುದೀಪಗಳ ತಯಾರಿಗೆ ಅಗತ್ಯವಿರುವ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಮಕ್ಕಳು ಹಾಗೂ ಯುವ ಜನರಲ್ಲಿ ಗೂಡುದೀಪ ನಿರ್ಮಿಸಲು ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಗೂಡುದೀಪದೊಳಗೆ ಬಲ್ಬ್ ತೂಗುಹಾಕುವ ಮುನ್ನ…
– ಬಲ್ಬ್ ಸ್ಥಿರವಾಗಿರಬೇಕು.
– ವಿದ್ಯುತ್ ಸಂಪರ್ಕ ಕಲ್ಪಿಸುವ ವೈರ್ ನೇತಾಡಬಾರದು.
– ಹೆಚ್ಚು ಗಾಳಿ ಬೀಸುವ ಕಡೆ ಆಕಾಶಬುಟ್ಟಿ ತೂಗಿಹಾಕಬೇಡಿ.
– ಬ ಲ್ಬ್ ಬಣ್ಣದ ಕಾಗದಕ್ಕೆ ತಾಗದಂತೆ ಎಚ್ಚರ ವಹಿಸಿ.
– ಮಕ್ಕಳಿಗೆ ಮೊದಲೇಸುರಕ್ಷಾ ನಿಯಮ ತಿಳಿಸಿರಿ.
ಬೆಲೆ ಏರಿಕೆ
ಹಿಂದೆ 100 ರೂ.ಗೆ ಸಿಗುತ್ತಿದ್ದ ಗೂಡುದೀಪಗಳ ಬೆಲೆ ಈಗ 200 ರೂ.ಗೆ ಏರಿಕೆಯಾಗಿದೆ. ಮಕ್ಕಳು ಅಂಗಡಿ ಗೂಡುದೀಪಗಳ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೂಡುದೀಪ ನಿರ್ಮಾಣಕ್ಕೆ ಅಗತ್ಯವಿರುವ ವಸ್ತು ಖರೀದಿಸಲಾಗಿದೆ. ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಗೂಡುದೀಪಗಳನ್ನು ನಿರ್ಮಿಸುತ್ತೇವೆ.
-ಶೈಲಜಾ ಆರ್.ಎಸ್., ಹಿರಿಯಡಕ
ಖರೀದಿ ತುಸು ಜೋರು
ಈ ಬಾರಿ ಗೂಡುದೀಪಗಳ ಖರೀದಿ ತುಸು ಜೋರಾಗಿದೆ. ಜನರು ಹೆಚ್ಚು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳನ್ನು ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗೂಡುದೀಪಗಳ ಬೆಲೆ ಏರಿಕೆಯಾಗಿದೆ. ಗ್ರಾಹಕರು ಮಾರುಕಟ್ಟೆಯ ಬೆಲೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
–ವೆಂಕಟೇಶ್, ಗೂಡುದೀಪದ ವ್ಯಾಪಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.