ಈಡೇರದ ಸೇತುವೆ ಕನಸು: ಮುಂದುವರಿದ ಗ್ರಾಮಸ್ಥರ ಪರದಾಟ
Team Udayavani, Jul 8, 2017, 3:50 AM IST
ಕೋಟ: ಪಾರಂಪಳ್ಳಿ-ಪಡುಕರೆ ನಿವಾಸಿಗಳ ಸಂಚಾರದ ಪ್ರಮುಖ ಕೊಂಡಿಯಾಗಿರುವ ತೋಡ್ಕಟ್ಟು ಸಮೀಪ ನಾಯ್ಕನಬೈಲು ಮರದ ಸೇತುವೆಯ ಜಾಗದಲ್ಲಿ ಶಾಶ್ವತ ಸೇತುವೆ ನಿರ್ಮಿಸಿ ಈ ಭಾಗದ ಜನರಿಗೆ ಸಾಲಿಗ್ರಾಮ, ಕೋಟವನ್ನು ಹತ್ತಿರದಲ್ಲಿ ಸಂಪರ್ಕಿಸಲು ಅನುಕೂಲ ಮಾಡಿಕೊಡುವಂತೆ ಹಲವು ದಶಕಗಳಿಂದ ಬೇಡಿಕೆ ಕೇಳಿಬರುತ್ತಿದೆ. ಆದರೆ ಇವರ ಕನಸು ಇದುವರೆಗೆ ನನಸಾಗಿಲ್ಲ. ದೈನಂದಿನ ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇದೀಗ ಪ್ರತಿನಿತ್ಯ ಶಿಥಿಲಗೊಂಡ ಮರದ ಸೇತುವೆಯ ಮೇಲೆ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ.
ಸಂಪರ್ಕದ ಕೊಂಡಿ
ಪಾರಂಪಳ್ಳಿ-ಪಡುಕೆರೆಯ ನಿವಾಸಿಗಳು ದೆ„ನಂದಿನ ಕೆಲಸಕಾರ್ಯಗಳಿಗೆ ಸಾಲಿಗ್ರಾಮ, ಕೋಟಕ್ಕೆ ವಾಹನದ ಮೂಲಕ ತೆರಳಬೇಕಾದರೆ 8 ಕಿ.ಮೀ. ಸುತ್ತಿ ಬಳಸಿ ಸಂಚರಿಸಬೇಕು. ಆದರೆ ಈ ಮರದ ಸೇತುವೆ ಮೂಲಕ ಕೇವಲ 2 ಕಿ.ಮೀ.ಗಳಲ್ಲಿ ತಲುಪಬಹುದು. ಹೀಗಾಗಿ ಸಮಯ, ಹಣ ಉಳಿತಾಯವಾಗುತ್ತದೆ. ಆದರೆ ಇದೀಗ ಕಾಲ್ನಡಿಗೆ ಹೊರತುಪಡಿಸಿ ವಾಹನಗಳ ಸಂಚಾರಕ್ಕೆ ಇಲ್ಲಿ ಅವಕಾಶವಿಲ್ಲ.ಮರದ ಸೇತುವೆ ಇರುವ ಎರಡು ಕಡೆಗಳಲ್ಲಿ ರಸ್ತೆ ನಿರ್ಮಾಣವಾಗಿದೆ. ಹೀಗಾಗಿ ಸೇತುವೆ ನಿರ್ಮಾಣವಾದರೆ ಸಂಪರ್ಕ ಸಾಧ್ಯವಿದೆ.
ಬೇಸತ್ತ ಸ್ಥಳೀಯರು
ಪ್ರತಿ ಚುನಾವಣೆ ಸಂದರ್ಭ ಸೇತುವೆ ನಿರ್ಮಿಸುವ ಆಶ್ವಾಸನೆ ಕೇಳಿ ಬರುತ್ತದೆ. ಆದರೆ ಚುನಾವಣೆ ಮುಗಿದ ಮೇಲೆ ಭರವಸೆ ಭರವಸೆಯಾಗಿಯೇ ಉಳಿಯುತ್ತದೆ ಎನ್ನುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ. ಹಿಂದೊಮ್ಮೆ ಸೇತುವೆ ನಿರ್ಮಿಸಲು 25 ಲಕ್ಷ ಅನುದಾನವನ್ನು ಸಾಲಿಗ್ರಾಮ ಪ.ಪಂ. ಕಾಯ್ದಿರಿಸಿತು. ಆದರೆ ಸೇತುವೆಗೆ ಕೋಟ್ಯಾಂತರ ಹಣ ಅಗತ್ಯವಿದ್ದ ಕಾರಣ ಪ.ಪಂ.ಅನುದಾನದಿಂದ ಸಾಧ್ಯವಾಗಲಿಲ್ಲ. ಅನಂತರ ಗ್ರಾಮಸ್ಥರು ಸ್ಥಳೀಯ ವಾರ್ಡ್ ಸದಸ್ಯರಿಂದ ಹಿಡಿದು ಶಾಸಕರು, ಸಚಿವರ ತನಕ ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು. ಆದರೆ ಇದುವರೆಗೆ ಇವರ ಬೇಡಿಕೆ ಈಡೇರಿಲ್ಲ. ಇದರಿಂದ ಆಕ್ರೋಶಗೊಂಡ ಇಲ್ಲಿನ ನಿವಾಸಿಗಳು ಮರದ ಸೇತುವೆಯ ದುರಸ್ತಿ ನೆಪದಲ್ಲಿ ಪ್ರತಿ ವರ್ಷ ಲಕ್ಷಾಂತರ ರೂ ಪೋಲು ಮಾಡಬೇಡಿ ಎಂದು ದುರಸ್ತಿಗೆ ಅಡ್ಡಿಪಡಿಸಿ, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಆದರೆ ಇದೀಗ ಸೇತುವೆ ಸಂಪೂರ್ಣ ಶಿಥಿಲಗೊಂಡಿರುವುದರಿಂದ ತಾತ್ಕಾಲಿಕ ದುರಸ್ತಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಸಚಿವರಿಗೆ ಮನವಿ
ಹಲವು ಬಾರಿ ಮನವಿ ಸಲ್ಲಿಸಿ ಸುಸ್ತಾದ ಇಲ್ಲಿನ ನಿವಾಸಿಗಳು ಇದೀಗ ಮೊಗವೀರ ಯುವಸಂಘಟನೆ ಸಾಲಿಗ್ರಾಮ ಘಟಕದ ಸಹಕಾರದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ.ಶಂಕರ್ ಅವರ ಮೂಲಕವಾಗಿ ಲೋಕೋಪಯೋಗಿ ಸಚಿವರಿಗೆ ಸಮಸ್ಯೆಯ ಕುರಿತು ಮನವಿ ಮಾಡಿದ್ದಾರೆ ಹಾಗೂ ಸಚಿವರು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಏಳು ದಶಕದ ಹಿಂದಿನ ಸೇತುವೆ!
ಸೀತಾನದಿಯ ಉಪನದಿಯಾದ ನಾಯ್ಕನ್‌ಬೈಲು ಹೊಳೆಗೆ ಮರದ ಸೇತುವೆ ನಿರ್ಮಾಣಕ್ಕಾಗಿ 1952ರಲ್ಲಿ ಶಂಕು ಸ್ಥಾಪನೆ ಮಾಡಲಾಗಿತ್ತು. ಆ ಬಳಿಕ 70ಮೀ.ಉದ್ದ, 1ಮೀ. ಅಗಲದ ಮರದ ಸೇತುವೆ ನಿರ್ಮಾಣಗೊಂಡಿತು. ಪ್ರಾಕೃತಿಕ ಹೊಡೆತಕ್ಕೆ ಸಿಲುಕಿ ಸೇತುವೆ ಹಲವು ಬಾರಿ ಶಿಥಿಲಗೊಂಡು ದುರಸ್ತಿ ಕಂಡಿದೆ.
ಇನ್ನೆಷ್ಟು ದಿನ ಬೇಕು?
ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಇಚ್ಛಾಶಕ್ತಿ ನಮ್ಮ ಜನನಾಯಕರಿಗೆ ಇಲ್ಲವೇ ? ಅಥವಾ ಸೇತುವೆ ನಿಮ್ಮಿಸಿದರೆ ರಾಜಕೀಯ ಲಾಭ ಯಾರಿಗೆ ಸಿಗಬಹುದು ಎನ್ನುವ ಲೆಕ್ಕಾಚಾರವೇನಾದರು ಇದೆಯೆ? ಅಥವಾ ಜನಪ್ರತಿನಿಧಿಗಳಿಗೆ ಇದೊಂದು ದೊಡ್ಡ ಸಮಸ್ಯೆಯಾಗಿಯೇ ಕಾಣ್ತುತಿಲ್ಲವೇ. ಹಾಗಾದರೆ ನಮ್ಮ ಬೇಡಿಕೆ ಈಡೇರಲು ಇನ್ನೆಷ್ಟು ದಿನ ಬೇಕು ಎನ್ನುವುದು ಸ್ಥಳೀಯ ನಿವಾಸಿಗಳು ಆಕ್ರೋಶದ ಪ್ರಶ್ನೆಯಾಗಿದೆ.
ಬಹುದಿನದ ಬೇಡಿಕೆ
ಒಟ್ಟಾರೆ ಪಾರಂಪಳ್ಳಿ-ಪಡುಕರೆ ನಿವಾಸಿಗಳ ಬಹುದಿನದ ಬೇಡಿಕೆಯಾಗಿರುವ ಸೇತುವೆ ಆದಷ್ಟು ಶೀಘ್ರ ನಿರ್ಮಾಣಗೊಳ್ಳುವ ಮೂಲಕ ಇಲ್ಲಿನ ನಾಗರಿಕರು ಕನಸು ನನಸಾಗಬೇಕಿದೆ.
ಸೇತುವೆ ನಿರ್ಮಾಣದ ಕುರಿತು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಪ.ಪಂ.ನಿಂದ ಈ ಹಿಂದೆ 25ಲಕ್ಷ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಕಾಮಗಾರಿಗೆ ಕೋಟ್ಯಾಂತರ ರೂ ಅಗತ್ಯವಿದೆ. ಮರದ ಸೇತುವೆ ಇದೀಗ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಸೇತುವೆಯ ಎಲ್ಲಾ ಆಧಾರಸ್ತಂಭವನ್ನು ಬದಲಾಯಿಸಿ ದುರಸ್ತಿಗೊಳಿಸುವ ಕಾಮಗಾರಿ ಚಾಲನೆಯಲ್ಲಿದೆ. ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಲ್ಲಿ ಸೇತುವೆ ಕುರಿತು ಬಲವಾದ ಬೇಡಿಕೆ ಸಲ್ಲಿಸಿದ್ದು, ಈ ಬಾರಿ ಖಂಡಿತ ಯಾವುದಾದರು ಅನುದಾನದ ನೀಡುವುದಾಗಿ ಭರವಸೆ ನೀಡಿದ್ದಾರೆ. ಪಕ್ಷಭೇದ ಮರೆತು ಆಸ್ಕರ್ ಫೆರ್ನಾಂಡಿಸ್ ಮೂಲಕವು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ್ದು, ಅವರು ಕೂಡ ಪೂರಕವಾಗಿ ಸ್ಪಂಧಿಸಿದ್ದಾರೆ.
– ರಾಘವೇಂದ್ರ ಗಾಣಿಗ ಪಡುಕರೆ,
ವಾರ್ಡ್ ಸದಸ್ಯರು, ಸಾಲಿಗ್ರಾಮ ಪ.ಪಂ.
ನಾೖಕನ್‌ಬೈಲಿನಲ್ಲಿ ಶಾಶ್ವತ ಸೇತುವೆ ನಿರ್ಮಿಸುವಂತೆ ಹಲವ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ವೃದ್ಧರು, ಮಕ್ಕಳು ಜೀವ ಕೈಯಲ್ಲಿ ಹಿಡಿದು ಮರದ ಸೇತುವೆ ಮೇಲೆ ಸಂಚರಿಸಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರು ಅನಾಹುತ ಗ್ಯಾರಂಟಿ. ಇನ್ನಾದರು ಸಂಬಂಧಪಟ್ಟ ಜನಪ್ರತಿನಿಧಿಗಳು ನಮ್ಮ ಬೇಡಿಕೆಗೆ ಪೂರಕವಾಗಿ ಸ್ಪಂಧಿಸಿ ಶಾಶ್ವತ ವ್ಯವಸ್ಥೆ ಮಾಡಬೇಕು ಎನ್ನುವುದು ನಮ್ಮೆಲ್ಲರ ಕೋರಿಕೆಯಾಗಿದೆ.
– ಶ್ರೀನಿವಾಸ ಪಡುಕರೆ,
ಸ್ಥಳೀಯ ನಿವಾಸಿ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.