ವಾರಾಹಿ ತಟದಲ್ಲಿದ್ದರೂ ಕುಡಿಯುವ ನೀರಿಗೆ ತತ್ವಾರ
Team Udayavani, Mar 28, 2018, 10:53 AM IST
ಸಿದ್ದಾಪುರ: ಸುಡುಬಿಸಿಲು, ಅಂತರ್ಜಲ ಬರಿದಾಗಿ ಕುಡಿವ ನೀರಿಗೆ ಹಾಹಾಕಾರ. ಕಳೆದ ವರ್ಷ ನೀರಿನ ತೀವ್ರ ಕೊರತೆ ಎದುರಿಸಿದ್ದ ಸಿದ್ದಾಪುರ ಗ್ರಾ.ಪಂ.ಗೆ ಈ ವರ್ಷವೂ ನೀರಿನ ಅಭಾವದ ಬಿಸಿ ತಟ್ಟಿದೆ. ಸಿದ್ದಾಪುರ ಪಂಚಾಯತ್ ಒಂದು ಭಾಗದಲ್ಲಿ ವಾರಾಹಿ ನದಿ, ಇನ್ನೊಂದು ಭಾಗದಲ್ಲಿ ಕುಬ್ಜ ನದಿ ಹರಿಯುತ್ತಿದೆ. ಗ್ರಾಮದಲ್ಲಿ ವಾರಾಹಿ ಕಾಲುವೆ ಹಾದು ಹೋಗಿದೆ. ಆದರೂ ಜನರ ದಾಹ ಇಂಗಿಸುವ ಕೆಲಸ ಆಗಿಲ್ಲ.
ಶಾಶ್ವತ ಯೋಜನೆಗಳು
ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡು ಒಂದು ಮತ್ತು ಆರರಲ್ಲಿ ಶಾಶ್ವತ ಯೋಜನೆ ರೂಪಿಸಲಾಗಿದೆ. ವಾರ್ಡು ಒಂದರ ಹಣೆಮಕ್ಕಿ ಮತ್ತು ವಾರ್ಡು 6ರ ಸೋಣು ಪ್ರದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸ್ವಂತ ಬಾವಿಗಳಿವೆ. ಅಲ್ಲದೆ ಗ್ರಾ. ಪಂ. ಒಂದು ಬೋರ್‌ವೆಲ್ ಕೊರೆದು ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ನೀಡುತ್ತಿದೆ. ಸೋಣು ಪ್ರದೇಶದಲ್ಲಿ ಸುಮಾರು ಒಂದು ಎಕರೆಗೂ ಮಿಕ್ಕಿದ ವಿಸ್ತೀಣದ ನೈಸರ್ಗಿಕ ಕೆರೆ ಇದೆ. ಅಲ್ಲಲ್ಲಿ ಮದಗಗಳು ಇವೆ. ಇವುಗಳ ಹೂಳು ತೆಗೆದರೆ, ಕುಡಿವ ನೀರಿಗೆ, ಕೃಷಿಗೆ ನೀರು ಪೂರೈಸಬಹುದಾಗಿದೆ.
ಸಿದ್ದಾಪುರ ಗ್ರಾ. ಪಂ. ವ್ಯಾಪ್ತಿ
ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ 6 ವಾರ್ಡುಗಳು ಇದ್ದು, 19ಜನ ಸದಸ್ಯರು ಇದ್ದಾರೆ. 2,200 ಕುಟುಂಬಗಳು ಇದ್ದು, 7,401 ಜನರಿದ್ದಾರೆ. ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 8 ಬೋರ್‌ವೆಲ್‌ಗಳು, 15 ತೆರೆದ ಬಾವಿಗಳು ಹಾಗೂ ವಾರಾಹಿ ನದಿಗೆ 20 ಅಶ್ವಶಕ್ತಿಯ ಒಂದು ಪಂಪ್‌ಸೆಟ್ ಆಳವಡಿಸಲಾಗಿದೆ.
ಜನ್ಸಾಲೆ ವಾರ್ಡ್‌ಗೆ ನೀರಿಲ್ಲ
ವರ್ಷಂಪ್ರತಿ ಜನ್ಸಾಲೆ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಈ ಬಾರಿಯೂ ಪರಿಸ್ಥಿತಿ ಹಾಗೇ ಇದೆ. ಇಲ್ಲಿ ನೀರಿನ ಸಮಸ್ಯೆ ನೀಗಿಸಲು ಕುಬ್ಜ ನದಿಗೆ ಕಿಂಡಿ ಅಣೆಕಟ್ಟಿನ ಅವಶ್ಯ ಇದೆ. ಅಲ್ಲದೆ ವಾರಾಹಿ ಕಾಲುವೆಯ ನೀರು ಸಿದ್ದಾಪುರ ಗ್ರಾಮದ ಐರಬೈಲು ಬಳಿ ಏತ ನೀರಾವರಿಯ ಮೂಲಕ ಸಿದ್ದಾಪುರ ಕೆಳಪೇಟೆಯ ಕಾಸಿಕೆರೆಗೆ ಹಾಯಿಸಿ, ಅಲ್ಲಿನಿಂದ ನೈಸರ್ಗಿಕ ತೋಡುಗಳ ಮೂಲಕ ನೀರು ಹರಿಸಿದಲ್ಲಿ ಜನ್ಸಾಲೆ ವಾರ್ಡ್ ನ ನೀರಿನ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ.
ಮುಂಜಾಗ್ರತೆ ಕ್ರಮ
ಬೇಸಗೆಯಲ್ಲಿ ಆಗಬಹುದಾದ ಸಮಸ್ಯೆಗಳಿಗೆ ಸ್ಥಳೀಯಾಡಳಿತ ಜಾಗರೂಕತೆ ವಹಿಸಿದೆ. ಪಂಚಾಯ್ತಿನ ವ್ಯಾಪ್ತಿಯಲ್ಲಿ ವಾರಾಹಿ ನದಿ ನೀರನ್ನು ಪಂಪ್ ಮೂಲಕ ಓವರ್‌ಹೆಡ್ ಟ್ಯಾಂಕ್‌ಗೆ ಶೇಖರಣೆ, ಪ್ರತಿ ವಾರ್ಡುಗಳಲ್ಲಿ ಬೋರ್‌ವೆಲ್ ಹಾಗೂ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿಗಳನ್ನು ನಿರ್ಮಿಸಿ, ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗಿದ್ದೂ ಬೇಸಗೆಯನ್ನು ನೀರಿನ ಬರ ತೀವ್ರವಾದರೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ.
ಬೇಡಿಕೆ ಅನುಗುಣ ನೀರು ಪೂರೈಕೆ
ಎಪ್ರಿಲ್- ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಬೇಡಿಕೆ ಅನುಗುಣವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆ, ಮದಗಗಳ ಹೂಳು ಎತ್ತಬೇಕಾಗಿದೆ. ವಾರಾಹಿ ಕಾಲುವೆ ನೀರು ಬಳಕೆಯಾಗುವಂತೆ ಯೋಜನೆ ರೂಪಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ.
– ಸತೀಶ್ ನಾಯ್ಕ, ಪಿಡಿಒ ಗ್ರಾ.ಪಂ. ಸಿದ್ದಾಪುರ
ಶಾಶ್ವತ ಯೋಜನೆ ರೂಪಿಸಲು ಚಿಂತನೆ
ಕುಡಿಯುವ ನೀರಿನ ಶಾಶ್ವತ ಯೋಜನೆ ರೂಪಿಸುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಐರಬೈಲು ಬಳಿ ವಾರಾಹಿ ಕಾಲುವೆಯ ಪಕ್ಕ ಬಾವಿ ನಿರ್ಮಿಸಿ ಅಲ್ಲಿನಿಂದ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆ ಇದೆ. ಮೇಲ್‌ಜಡ್ಡುನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದಲ್ಲಿ ಅಲ್ಲಿಂದ ಸಿದ್ದಾಪುರ ಜನ್ಸಾಲೆ ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದಾಗಿದೆ.
– ಡಿ. ಭರತ್ ಕಾಮತ್, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸಿದ್ದಾಪುರ
ಏತ ನೀರಾವರಿ ಯೋಜನೆ ರೂಪಿಸಿ
ವಾರಾಹಿ ಕಾಲುವೆಯ ನೀರು ಏತ ನೀರಾವರಿಯ ಮೂಲಕ ಸಿದ್ದಾಪುರ ಕೆಳಾಪೇಟೆಯ ಕಾಸಿಕೆರೆಗೆ ಹಾಯಿಸಿ, ಅಲ್ಲಿನಿಂದ ನೈಸರ್ಗಿಕ ತೋಡುಗಳ ಮೂಲಕ ನೀರು ಹರಿಸಿದಲ್ಲಿ ಅನುಕೂಲವಾಗುತ್ತದೆ. ಈ ಒಂದು ಯೋಜನೆಯಿಂದ ಸಿದ್ದಾಪುರ ಗ್ರಾಮ ಪಂಚಾಯತ್ ಅಲ್ಲದೆ ಪಕ್ಕದ ಅಂಪಾರು, ಆಜ್ರಿ ಗ್ರಾ. ಪಂ.ಗಳಿಗೂ ಉಪಯೋಗವಾಗುತ್ತವೆ.
– ಎಸ್. ರಾಜೀವ ಶೆಟ್ಟಿ ಶಾನ್ಕಟ್ಟು, ಕಾರ್ಯದರ್ಶಿ, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ
— ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.