ಹಾಲಾಡಿ ರಾಜ್ಯ ಹೆದ್ದಾರಿಯೀಗ ಧೂಳಾಡಿ!
Team Udayavani, Sep 21, 2018, 1:05 AM IST
ಹಾಲಾಡಿ : ಕೋಟೇಶ್ವರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಕಕ್ಕುಂಜೆ ಕ್ರಾಸ್ ಬಳಿಯಿಂದ ಹಾಲಾಡಿ ಪೇಟೆಯವರೆಗಿನ ರಸ್ತೆಯುದ್ದಕ್ಕೂ ಹೊಂಡಗಳಿಗೆ ಹಾಕಿದ ಜಲ್ಲಿಯ ಹುಡಿಯಿಂದಾಗಿ ಹಾಲಾಡಿಯ ರಸ್ತೆ ಧೂಳುಮಯ ಪ್ರದೇಶವಾಗಿದೆ. ಈ ರಾಜ್ಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ಮತ್ತಷ್ಟು ಹೆಚ್ಚಾಗಿತ್ತು. ಇದನ್ನು ಮುಚ್ಚಲು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಜಲ್ಲಿ ಹುಡಿಯ ತೇಪೆ ಹಾಕಿದ್ದರು. ಈಗ ಮಳೆ ಇಲ್ಲದೇ ಇರುವುದರಿಂದ ಈ ಪ್ರದೇಶವಿಡೀ ಧೂಳು ವ್ಯಾಪಿಸಿದೆ. ಇದರಿಂದ ರಸ್ತೆ ಬದಿಯ ಮನೆಗಳ, ಅಕ್ಕಪಕ್ಕದ ಅಂಗಡಿಯವರಿಗೆ ನಿತ್ಯ ಧೂಳಿನ ಸಿಂಚನವಾಗುತ್ತಿದೆ. ಶಿವಮೊಗ್ಗ, ಹೆಬ್ರಿ ಕಡೆಗೆ ಸಂಚರಿಸುವ ರಾಜ್ಯ ಹೆದ್ದಾರಿಯೂ ಆಗಿರುವುದರಿಂದ ನಿತ್ಯ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಇದರಿಂದ ಇಲ್ಲಿ ನಡೆದಾಡುವುದೂ ಅಸಹನೀಯವಾಗಿದೆ.
ಬದಲಾದ ಬಣ್ಣ
ಇನ್ನು ಈ ಧೂಳಿನಿಂದಾಗಿ ಇಲ್ಲಿನ ಮನೆಗಳ ಹೆಂಚಿನ ಬಣ್ಣ, ಮನೆಗಳ ಗೋಡೆಗೆ ಕೊಟ್ಟ ಬಣ್ಣ, ಹಸಿರು ಗಿಡಗಳ ಬಣ್ಣವೆಲ್ಲ ಬದಲಾಗಿ ಬರೀ ಜಲ್ಲಿ ಹುಡಿಯ ಬಣ್ಣವಾಗಿ ಬದಲಾಗಿದೆ.
ದುರಸ್ತಿಯಾಗದೇ 2 ವರ್ಷ
ಈ ಕೋಟೇಶ್ವರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ತೇಪೆ ಹಾಕಿದ್ದು ಬಿಟ್ಟರೆ, ಕಳೆದ 2 ವರ್ಷಗಳಿಂದ ಮರುಡಾಮರೀಕರಣ ಆಗಿಲ್ಲ. ಇನ್ನೂ ಕೋಟೇಶ್ವರದಿಂದ ಶಿವಮೊಗ್ಗದವರೆಗೆ ಪೂರ್ತಿಯಾಗಿ ಮರುಡಾಮರೀಕರಣವಾಗದೇ ಹಲವು ವರ್ಷಗಳೇ ಕಳೆದಿವೆ ಎನ್ನುತ್ತಾರೆ ಇಲ್ಲಿನವರು. ಈ ಸಂಬಂಧ ಹಾಲಾಡಿ ಗ್ರಾ.ಪಂ.ಗೆ ಧೂಳಿನಿಂದ ಮುಕ್ತಿ ನೀಡಲು ಕನಿಷ್ಠ ಪಂಚಾಯತ್ ವತಿಯಿಂದ ನೀರು ಹಾಕುವ ವ್ಯವಸ್ಥೆ ಮಾಡಲಿ ಎಂದು ಸ್ಥಳೀಯರೆಲ್ಲ ಸೇರಿ ಮನವಿಯೊಂದನ್ನು ಕೊಟ್ಟಿದ್ದು, ಅದನ್ನು ಗ್ರಾ.ಪಂ. ಆಡಳಿತವು ಪಿಡಬ್ಲ್ಯೂಡಿ ಇಲಾಖೆಗೆ ಕಳುಹಿಸಿದೆ. ಆದರೆ ಇದಕ್ಕೆ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ.
ಆರೋಗ್ಯಕ್ಕೂ ಹಾನಿ
ವಾಹನಗಳು ಆಚೆ-ಈಚೆ ಸಂಚರಿಸುವಾಗೆಲ್ಲ ಧೂಳು ಹಾರಾಡುತ್ತಿದ್ದು, ಇದರಿಂದ ರಸ್ತೆ ಬದಿಯ ಮನೆಗಳಲ್ಲಿರುವ ಜನ, ಅಂಗಡಿಗಳ ವ್ಯಾಪಾರಸ್ಥರಿಗೆ ಆರೋಗ್ಯ ಸಂಬಂಧಿ ಕಾಯಿಲೆ ಬರುವ ಭೀತಿ ಎದುರಾಗಿದೆ.
ಧೂಳು ತಿನ್ನುವ ದುಸ್ಥಿತಿ
ಮಳೆಗಾಲಕ್ಕೆ ಮುನ್ನವೇ ಕಕ್ಕುಂಜೆ ಕ್ರಾಸ್‌ನಿಂದ ಹಾಲಾಡಿಯವರೆಗೆ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಹಾಳಾಗಿತ್ತು. ಆ ಬಳಿಕ ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟು ಹೋಗಿದೆ. ಹೊಂಡ- ಗುಂಡಿಗಳಿದ್ದ ಕಡೆಗೆ ಜಲ್ಲಿ ಹುಡಿ ಹಾಕಿದ್ದು, ಈಗ ಮಳೆಯೇ ಇಲ್ಲ. ಇದರಿಂದ ನಮಗೆ ನಿತ್ಯ ಧೂಳು ತಿನ್ನುವ ದುಸ್ಥಿತಿ ಬಂದಿದೆ. ಮೊದಲು ಸರಿಯಾದ ಚರಂಡಿ ವ್ಯವಸ್ಥೆ ಮಾಡಿ, ಅನಂತರ ರಸ್ತೆ ಮರು ಡಾಮರೀಕರಣಗೊಳಿಸಲಿ.
– ನೊಂದ ಸ್ಥಳೀಯ, ಅಂಗಡಿ ವ್ಯಾಪಾರಸ್ಥರು
ಪ್ರಸ್ತಾವನೆ ಕಳುಹಿಸಲಾಗಿದೆ
ಈಗ ಹಾಲಾಡಿ ಪೇಟೆಯ ಕಾಮಗಾರಿ ನಡೆಯುತ್ತಿದೆ. ಇನ್ನು ಹಾಲಾಡಿಯಿಂದ ಶಂಕರನಾರಾಯಣ ರಾಜ್ಯ ಹೆದ್ದಾರಿ ಅಗಲೀಕರಣ, ಅಭಿವೃದ್ಧಿ ಕುರಿತಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕಿದ ಅನಂತರ ಅನುದಾನ ಬಿಡುಗಡೆಯಾಗಬಹುದು. ಈ ಬಾರಿ ಹಾಲಾಡಿ ರಸ್ತೆ ದುರಸ್ತಿಗೆ ಎಲ್ಲ ಪ್ರಯತ್ನ ಮಾಡಲಾಗುವುದು.
– ರಾಘವೇಂದ್ರ ನಾಯ್ಕ, ಸ.ಕಾ.ಇ.(ಪ್ರಭಾರ), ಲೋಕೋಪಯೋಗಿ ಇಲಾಖೆ, ಕುಂದಾಪುರ ಉಪ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.