ಪಿಯು ಮಕ್ಕಳಿಗೆ “ಇ ಗುರು’ ತರಬೇತಿ: 25 ಸರಕಾರಿ ಕಾಲೇಜುಗಳಲ್ಲಿ ಜಾರಿ
ಉಡುಪಿ ಜಿ.ಪಂ.ನಿಂದ ಸ್ಪರ್ಧಾತ್ಮಕ ಪರೀಕ್ಷೆಗಾಗಿ ವಿನೂತನ ಪ್ರಯೋಗ
Team Udayavani, Feb 23, 2023, 6:32 AM IST
ಕುಂದಾಪುರ: ಗ್ರಾಮಾಂತರ ಪ್ರದೇಶ ಹಾಗೂ ಆರ್ಥಿಕವಾಗಿ ಹಿಂದುಳಿದ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ “ಪಿಸಿಎಂ ಇ ಗುರು’ ಎಂಬ ವಿನೂತನ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಅನುಷ್ಠಾನ ಮಾಡಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಯೋಜನೆ ಆರಂಭಿಸಲಾಗಿದೆ.
ಮೆಡಿಕಲ್, ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಉನ್ನತ ಶಿಕ್ಷಣಕ್ಕೆ ಹೋಗುವವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿ 40 ಸಾವಿರ ರೂ.ಗಳಿಂದ ಆರಂಭವಾಗಿ ಕೆಲವು ಲಕ್ಷ ರೂ. ವರೆಗೆ ಶುಲ್ಕ, ಪ್ರತ್ಯೇಕ ತರಬೇತಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಹಣವಂತರಿಗೆ, ಸಾಲ ಮಾಡಿಯಾದರೂ ಹಣ ಹೊಂದಿಸುವವರಿಗೆ ಇಂತಹ ತರಬೇತಿ ಪಡೆದು ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿ ಸರಕಾರಿ ಕೋಟಾದಡಿ ಸೀಟು ಲಭ್ಯವಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಪರೀಕ್ಷೆ ಹೇಗೆ ಎದುರಿಸಬೇಕು ಎನ್ನುವ ಮಾಹಿತಿಯ ಕೊರತೆ ಇರುವ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಉನ್ನತ ಶಿಕ್ಷಣದ ಕನಸು ನನಸಾಗುವುದಿಲ್ಲ. ಅಂಥವರಿಗೆ “ಇ ಗುರು’ ಅನುಕೂಲ ಮಾಡಬಲ್ಲದು.
ಸ್ಫೂರ್ತಿ
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್. ಪ್ರಸನ್ನ ಇದರ ರೂವಾರಿ. ಸರಕಾರಿನ ಕಾಲೇಜುಗಳಲ್ಲಿ ಇರುವ ಪ್ರಶ್ನೆಪತ್ರಿಕೆ ತಯಾರಿ ತಂಡದಿಂದ ಹಿಡಿದು ವೈವಿಧ್ಯಮಯ ಶೈಕ್ಷಣಿಕ ಪ್ರತಿಭೆ ಹೊಂದಿದ ಉಪನ್ಯಾಸಕರನ್ನು ಬಳಸಿ ಕೊಳ್ಳಲು ನಿರ್ಧರಿಸಿದರು. ಅವರು ಖಾಸಗಿ ಕೋಚಿಂಗ್ ನೀಡುವಂತಿಲ್ಲ, ಖಾಸಗಿ ಶಾಲೆಗಳಲ್ಲೂ ಬೋಧಿಸುವಂತಿಲ್ಲ. ಅಂತಹ ಉತ್ತಮ ಶಿಕ್ಷಕರನ್ನು ಗುರುತಿಸಿ ಬೋಧಿಸಲು ನಿಶ್ಚಯಿಸಲಾಯಿತು. ಮುದ್ರಿತ ವೀಡಿಯೊ ಕಳುಹಿಸಿದರೆ ಯೂಟ್ಯೂಬ್ ಮಾದರಿಯೇ ಆಗುವುದರಿಂದ ಆನ್‌ಲೈನ್ ಕ್ಲಾಸ್ ಮೂಲಕ ಪಾಠ ಎಂದಾಯಿತು. ಪ್ರಸನ್ನ ಅವರು ದಿಲ್ಲಿ ಯಲ್ಲಿ ಅಧಿಕಾರಿಯಾಗಿದ್ದಾಗ, ಕೊರೊನಾ ನಿರ್ಬಂಧ ಮುಗಿಸಿದ ಯುಪಿಎಸ್‌ಸಿ ಪರೀಕ್ಷಾರ್ಥಿಗಳು ಆನ್‌ಲೈನ್ ಉತ್ತಮ ಎಂದು ಆಯ್ಕೆ ಮಾಡಿದ್ದನ್ನು ಗಮನಿಸಿದ್ದರು. ಹಾಗಾಗಿ ಇಲ್ಲೂ ಅದೇ ಮಾದರಿ ಅನುಕೂಲ ಎಂದು ಮನಗಂಡರು.
ಕಾರ್ಯನಿರ್ವಹಣೆ
ಜಿಲ್ಲೆಯ ಆಯ್ದ 25 ಸರಕಾರಿ ಪ.ಪೂ. ಕಾಲೇಜು ಗಳಿಗೆ ತಲಾ 1.8 ಲಕ್ಷ ರೂ. ಮೌಲ್ಯದ ಇಂಟ ರ್ಯಾಕ್ಟಿವ್ ಟಿವಿ, ಯುಪಿಎಸ್, ಸ್ಪೀಕರ್, ವೆಬ್ ಕ್ಯಾಮ್, ಲ್ಯಾಪ್‌ಟಾಪ್ ನೀಡಲಾಗಿದ್ದು, ಮಣಿಪಾಲದಲ್ಲಿ ಜಿ.ಪಂ.ನ ಸಂಪನ್ಮೂಲ ಕೇಂದ್ರದಲ್ಲಿ ಇರುವ ಸ್ಟುಡಿಯೋದಲ್ಲಿ ಉಪನ್ಯಾಸಕರು ಬೋಧಿಸುತ್ತಾರೆ.
ಪ್ರತೀ ದಿನ ಅಪರಾಹ್ನ 3ರಿಂದ 4.30, ಶನಿವಾರ ಮಧ್ಯಾಹ್ನ 1.30ರಿಂದ 3 ಗಂಟೆ ವರೆಗೆ ಎರಡೂವರೆ ತಿಂಗಳಿಂದ ತರಗತಿಗಳು ನಡೆಯುತ್ತಿವೆ. ಮಧ್ಯಾವಧಿ ಪರೀಕ್ಷೆ ವರೆಗಿನ ಪಾಠಗಳು ಸಿಇಟಿ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಮಾಡಿ ಬೋಧನೆ ಮುಗಿದಿವೆ. ವಿದ್ಯಾರ್ಥಿಗಳು ಸಂವಾದದಲ್ಲಿ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಈಗ ಪರೀಕ್ಷೆಗಾಗಿ ಬಿಡುವು ನೀಡಲಾಗಿದ್ದು ಪಿಯು ಪರೀಕ್ಷೆ ಬಳಿಕ ಪೂರ್ಣಾವಧಿ ತರಗತಿಗಳು ಸಿಇಟಿವರೆಗೆ ನಡೆಯಲಿವೆ.
ಯಾವೆಲ್ಲ ಕಾಲೇಜುಗಳಲ್ಲಿ
ಹಿರಿಯಡ್ಕ, ಕಾರ್ಕಳ, ಕುಂದಾಪುರ, ಶಂಕರ ನಾರಾಯಣ, ಬೈಂದೂರು, ಬೆಳ್ಮಣ್ಣು, ಹೆಬ್ರಿ, ಉಡುಪಿ, ನಾವುಂದ, ಬೈಲೂರು, ಮಲ್ಪೆ, ಕೋಟೇಶ್ವರ, ಪಡುಬಿದ್ರಿ, ಉಪ್ಪುಂದ,
ಗರ್ಲ್ಸ್- ಉಡುಪಿ, ಮುನಿಯಾಲು, ಬಜಗೋಳಿ, ಬಿದ್ಕಲ್‌ಕಟ್ಟೆ, ಕಂಬದ ಕೋಣೆ, ಹೊಸಂಗಡಿ, ಸಾಣೂರು, ಹಾಲಾಡಿ, ಮೀಯಾರು, ಬ್ರಹ್ಮಾವರ, ಮಣೂರು ಸರಕಾರಿ ಪಿ.ಯು. ಕಾಲೇಜುಗಳು.
ನಾನು ಸರಕಾರಿ ಶಾಲೆ, ಕಾಲೇಜಿನಲ್ಲಿ ಕಲಿತವನಾಗಿದ್ದು ಗ್ರಾಮಾಂತರದ, ಸರಕಾರಿ ಶಾಲಾ ಮಕ್ಕಳ ಕಷ್ಟವನ್ನು ತಿಳಿದಿದ್ದೇನೆ. ರೈತಾಪಿ ಮಕ್ಕಳಿಗೆ ಸ್ವಲ್ಪವೇ ಪ್ರೋತ್ಸಾಹ ದೊರೆತರೂ ಕಠಿನ ಪರಿಶ್ರಮದಿಂದ ಯಶಸ್ಸು ಪಡೆಯುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವ ಆರ್ಥಿಕ ದುರ್ಬಲ ವರ್ಗದವರ ಕನಸಿಗೆ ನೀರೆರೆದು ಪೋಷಿಸುವ ಕೆಲಸ “ಇ ಗುರು’ ಯೋಜನೆ.
– ಎಚ್. ಪ್ರಸನ್ನ, ಸಿಇಒ, ಉಡುಪಿ ಜಿ.ಪಂ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.