ಆಶಾ ಕಾರ್ಯಕರ್ತೆಯರಿಂದ ಇ ಸರ್ವೇ
Team Udayavani, Mar 27, 2023, 7:45 AM IST
ಉಡುಪಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಆಶಾ ಕಾರ್ಯಕರ್ತೆಯರ ಮೂಲಕ ಮೊಬೈಲ್ ಆ್ಯಪ್ ಇ-ಸರ್ವೇ ನಡೆಸುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರನ್ನು ಇದಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಅವರು ನಿರಾಕರಿಸಿದ್ದರಿಂದ ಆಶಾ ಕಾರ್ಯಕರ್ತೆಯರೇ ಮನೆ ಮನೆಗೆ ಭೇಟಿ ನೀಡಿ ಸರ್ವೇ ಮಾಡುತ್ತಿದ್ದಾರೆ.
ಸರ್ವೇ ಆರಂಭವಾಗಿ ವಾರ ಕಳೆದಿದೆ. ಆದರೆ ಇದರ ಉದ್ದೇಶ ಏನು ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟತೆಯಿಲ್ಲ. ಅಧಿಕಾರಿಗಳನ್ನು ವಿಚಾರಿಸಿದಾಗಲೂ ಸಕಾರಣ ಸಿಗುತ್ತಿಲ್ಲ.
ಸರ್ವೇ ಹೇಗೆ?
ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮನೆಗಳಿಗೆ ನಿತ್ಯ ಭೇಟಿ ನೀಡಿ, ರೇಷನ್ ಕಾರ್ಡ್ ಆಧಾರದಲ್ಲಿ ಮನೆಯವರ ಎಲ್ಲ ವಿವರ ಪಡೆದು, ಅದನ್ನು ಇಲಾಖೆಯಿಂದ ರೂಪಿಸಿ ನೀಡಿರುವ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಒಂದು ಮನೆಗೆ ಹೋದಾಗ 15 ನಿಮಿಷ ಬೇಕಾಗುತ್ತದೆ. ಮನೆಯವರ ಎಲ್ಲರ ವಿವರಗಳ ಜತೆಗೆ ಅವರ ಉದ್ಯೋಗ, ವಯಸ್ಸು ಮತ್ತು ವಾಸ್ತವ್ಯ ವಿವರ ಪಡೆದುಕೊಳ್ಳುತ್ತಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿಲ್ಲ
ಇತ್ತೀಚೆಗೆ ವೈರಲ್ ಜ್ವರ ಹೆಚ್ಚಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವೈರಲ್ ಜ್ವರಕ್ಕೆ ಸಂಬಂಧಿಸಿ ಆಶಾ ಕಾರ್ಯಕರ್ತೆಯರ ಮೂಲಕ ಸರ್ವೇ ಮಾಡಿಸಿ, ಅಗತ್ಯ ಔಷಧೋಪಚಾರದ ಜತೆಗೆ ರೋಗಬಾಧೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಇ-ಸರ್ವೇ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಮನೆ ಮಂದಿಯ ಪೂರ್ಣ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇಲಾಖೆಯ ಸೂಚನೆ
ಮನೆ ಮನೆಗೆ ಹೋಗಿ ಸರ್ವೇ ಮಾಡುವಂತೆ ಇಲಾಖೆಯ ಮೇಲಧಿಕಾರಿಗಳು ಸೂಚಿಸಿದ್ದಾರೆ. ಅವರೇ ಸೂಚಿಸಿರುವ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಸರ್ವೇಯ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದೇವೆ. ಸರ್ವೇಯ ಉದ್ದೇಶ ನಮಗೂ ತಿಳಿದಿಲ್ಲ. ಆದರೆ ಅಂಗನವಾಡಿ ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿಲ್ಲ. ಕೆಲವರು ಸಮೀಕ್ಷೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂಬ ಅಧಿಕೃತ ಪತ್ರವನ್ನು ನೀಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸರ್ವೇಗೆ ಸಂಬಂಧಿಸಿದ ಯಾವ ಸೂಚನೆಯೂ ಬಂದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದ್ದಾರೆ.
ಸರಕಾರದ ಸೂಚನೆಯಂತೆ ಇ-ಸರ್ವೇ ನಡೆಯುತ್ತಿದೆ. ಮನೆಯಲ್ಲಿರುವ ಎಲ್ಲರ ವಿವರನ್ನು ಪಡೆದು, ಮೊಬೈಲ್ ಆ್ಯಪ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಇದನ್ನು ನಡೆಸುತ್ತಿದ್ದಾರೆ.
– ಡಾ| ನಾಗಭೂಷಣ ಉಡುಪ, ಡಿಎಚ್‌ಒ ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.