ಚುನಾವಣೆ ವೆಬ್ ಕಾಸ್ಟಿಂಗ್: ಉಡುಪಿ ಶೇ. 100 ಸಾಧನೆ
Team Udayavani, Apr 27, 2019, 10:18 AM IST
(ಅಂತರ್ಜಾಲ ಚಿತ್ರ )
ಉಡುಪಿ, ಎ. 26: ರಾಜ್ಯದಲ್ಲಿ ಗುರುವಾರ ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಿದ್ದು ಇದರಲ್ಲಿ ಉಡುಪಿ ಜಿಲ್ಲೆಯ ಒಟ್ಟು 54 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿತ್ತು. ಇತರೆ ಜಿಲ್ಲೆಗಳಲ್ಲಿ ಅಳವಡಿಸಿದ್ದ ಕೆಲವು ವೆಬ್ ಕ್ಯಾಮೆರಗಳು ವಿವಿಧ ಕಾರಣಗಳಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ. ಆದರೆ ಉಡುಪಿಯಲ್ಲಿ ಅಳವಡಿಸಿದ್ದ ಎಲ್ಲ ಕೆಮರಾಗಳು ಯಾವುದೇ ಅಡೆತಡೆಗಳಿಲ್ಲದೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂಲಕ 14 ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ ಶೇ. 100 ಸಾಧನೆ ಮಾಡಿದ ಜಿಲ್ಲೆಯಾಗಿ ಮೂಡಿಬಂದಿದೆ.
ಜಿಲ್ಲೆಯ 54 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನವನ್ನು ಪರಿಶೀಲಿಸಲು, ಈ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡದರೆ ಕೂಡಲೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಿದ್ದ ನಿಯಂತ್ರಣ ಕೊಠಡಿಯಲ್ಲಿ ಈ ಎಲ್ಲ ಮತಗಟ್ಟೆಗಳ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಎ. 18ರಂದು ರಾಜ್ಯದ ವಿವಿಧ ಜಿಲ್ಲೆಗಳ ಮತಗಟ್ಟೆಗಳಲ್ಲಿ ಅಳವಡಿಸಿದ್ದ ವೆಬ್ ಕ್ಯಾಮೆರಾಗಳು ಮತ್ತು ಅವುಗಳ ಕಾರ್ಯ ನಿರ್ವಹಣೆ ಮಾಹಿತಿ ಇಂತಿದೆ: ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಳವಡಿಸಿದ್ದ 110 ವೆಬ್ ಕ್ಯಾಮೆರಾಗಳಲ್ಲಿ ಗರಿಷ್ಠ 104 ಕೆಮರಾಗಳು ಕಾರ್ಯ ನಿರ್ವಹಿಸಿವೆ. ಮೈಸೂರಿನ 179ರಲ್ಲಿ 163, ಚಿತ್ರದುರ್ಗದ 80ರಲ್ಲಿ 66, ತುಮಕೂರಿನ 140ರಲ್ಲಿ 131, ಮಂಡ್ಯದ 101ರಲ್ಲಿ 89, ಬೆಂಗಳೂರು ಸೆಂಟ್ರಲ್ನ 87 ರಲ್ಲಿ 69, ಬೆಂಗಳೂರು ಉತ್ತರದ 101ರಲ್ಲಿ 95, ಕೋಲಾರದ 100ರಲ್ಲಿ 86, ರಾಮನಗರದ 60ರಲ್ಲಿ 59, ಬೆಂಗಳೂರು ದಕ್ಷಿಣದ 100ರಲ್ಲಿ 91, ಬೆಂಗಳೂರು ನಗರದ 100ರಲ್ಲಿ 95, ಹಾಸನದ 134 ರಲ್ಲಿ 129, ಚಿಕ್ಕಬಳ್ಳಾಪುರದ 70ರಲ್ಲಿ 69 ಕಾರ್ಯ ನಿರ್ವಹಿಸಿದ್ದು ಉಡುಪಿಯಲ್ಲಿ 54ರಲ್ಲಿ 54 ಕಾರ್ಯ ನಿರ್ವಹಿಸಿವೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರ ನಿರ್ದೇಶನದಂತೆ ಎ. 7ರಿಂದಲೆ ವೆಬ್ ಕೆಮರಾ ಅಳಡಿಸಲು ಗುರುತಿಸಲಾಗಿದ್ದ 54 ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ವಿದ್ಯುತ್ ವ್ಯವಸ್ಥೆ, ಸಿಗ್ನಲ್ ದೊರೆಯುವ ಸ್ಥಳ ಇವುಗಳನ್ನು ಗುರುತಿಸಿದ್ದರು. ಸಂಬಂಧಪಟ್ಟ ಶಾಲೆ ಮುಖ್ಯಸ್ಥರು ಮತ್ತು ಗ್ರಾ.ಪಂ. ಅಭಿವೃಧ್ದಿ ಅಧಿಕಾರಿಗಳಿಗೆ ಅಗತ್ಯವಿದ್ದ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿ, ಎಲ್ಲ ಮತಗಟ್ಟೆಗಳನ್ನು ವ್ಯವಸ್ಥಿತಗೊಳಿಸಲಾಗಿತ್ತು. ಮತದಾನ ಹಿಂದಿನ ದಿನವೂ ಭೇಟಿ ನೀಡಿ, ಮತಗಟ್ಟೆ ಅಧಿಕಾರಿಗಳಿಗೆ ವೆಬ್ ಕೆಮರಾ ಅಳವಡಿಸಿದ ಪ್ಲಗ್‌ನ್ನು ಯಾವುದೇ ಕಾರಣಕ್ಕೆ ಬದಲಾಯಿಸದಂತೆ ಸೂಚಿಸಲಾಗಿತ್ತು ಎನ್ನುತ್ತಾರೆ ಜಿಲ್ಲಾ ವೆಬ್ ಕಾಸ್ಟಿಂಗ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಸರ ಅಧಿಕಾರಿ ಡಾ| ಲಕ್ಷ್ಮೀಕಾಂತ್. ಎ. 23ರಂದು ನಡೆಯುವ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಸಹ 16 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕೆಮರಾಗಳನ್ನು ಅಳವಡಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.