ದೇವಸ್ಥಾನ ಸಿಬಂದಿ ವೇತನ, ಖಾಯಂ ಗೋಳು!
6ನೇ ವೇತನ ಶ್ರೇಣಿಗೆ ನ್ಯಾಯಾಲಯದ ಮೆಟ್ಟಿಲೇರಲು ನೌಕರರ ನಿರ್ಧಾರ
Team Udayavani, Jan 31, 2020, 7:02 AM IST
ಸಾಂದರ್ಭಿಕ ಚಿತ್ರ
ಉಡುಪಿ: ರಾಜ್ಯದ ಮುಜರಾಯಿ ಇಲಾಖೆಯ ಅಧಿಸೂಚಿತ ದೇವಸ್ಥಾನಗಳಲ್ಲಿ ಪಿಂಚಣಿ ರಹಿತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ 6ನೇ ವೇತನ ಶ್ರೇಣಿ ಇನ್ನೂ ದೊರಕಿಲ್ಲ. ಆರನೇ ವೇತನ ಆಯೋಗದ ವೇತನ ಪರಿಷ್ಕಾರ ಜಾರಿಯಾಗಿ 10 ತಿಂಗಳು ಕಳೆದಿದೆ. ವಿಳಂಬಕ್ಕೆ ನೊಂದ ನೌಕರರು ನೊಂದಿದ್ದಾರೆ. ಅನ್ಯ ದಾರಿಯಿಲ್ಲದೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸುತ್ತಿದ್ದಾರೆ. ಜತೆಗೆ ಸಂಚಿತ, ಕಾರ್ಯಾರ್ಥ ನೌಕರರ ಸೇವೆ ಕೂಡ ಖಾಯಂಗೊಂಡಿಲ್ಲ ಎಂದು ಆ ವರ್ಗದ ನೌಕರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ 34,458 ದೇವಸ್ಥಾನಗಳಿರುವ ಕುರಿತು ಇಲಾಖೆ ಸರಕಾರಕ್ಕೆ ಈ ಹಿಂದೆ ವರದಿ ಒಪ್ಪಿಸಿದೆ. ನೌಕರರಿಗೆ 6ನೇ ಶ್ರೇಣಿ ವೇತನ ಜಾರಿಗೊಳಿಸಿದಲ್ಲಿ ಮತ್ತು ಸಂಚಿತ ನೌಕರರನ್ನು ಖಾಯಂಗೊಳಿಸಿದರೆ ಸರಕಾರಕ್ಕೆ ಹೊರೆಯಾಗುತ್ತದೆ ಎನ್ನುವುದು ಒಂದು ವಾದ. ಆದರೆ ಇಷ್ಟು ದೇವಸ್ಥಾನಗಳಿಲ್ಲ. ಸರಿಯಾಗಿ ಸರ್ವೆ ನಡೆಸಿಲ್ಲ. ನಾವು ಮೂಲ ನೌಕರರು ಎಲ್ಲ ಸೌಕರ್ಯ ಪಡೆಯಲು ನಾವು ಆರ್ಹರು ಎನ್ನುವುದು ನೌಕರರ ಪ್ರತಿವಾದ.
ಪ್ರಸ್ತುತ ನೌಕರರ ಪೈಕಿ 6ನೇ ವೇತನ ಪಡೆಯಲು ಕೆಲವರು ಅರ್ಹರು ಎಂಬ ಮಾಹಿತಿ ಇಲಾಖೆ ಪತ್ರದಲ್ಲಿದೆ. ಎ ಗ್ರೇಡ್ ಸಂಚಿತ 2,568 ಮಂದಿಗೆ ವೇತನ ನಿಗದಿಗೆ ಸಿದ್ಧ ಎನ್ನುವ ಭರವಸೆಯೂ ದೊರಕಿದೆ. ಇದರಲ್ಲಿ ಯಾರೆಲ್ಲ ಸೇರುತ್ತಾರೆ ಎನ್ನುವ ಸ್ಪಷ್ಟತೆಯಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ಸರಕಾರಿ ವೇತನ ಶ್ರೇಣಿ ಪಡೆಯುವ ಖಾಯಂ ನೌಕರರು, ಸಂಚಿತ ಸಂಭಾವನೆ ಹಾಗೂ ಕಾರ್ಯಾರ್ಥ ನೌಕರರಿದ್ದಾರೆ. ಇವರು 2,3, 4 ಮತ್ತು 5ನೇ ವೇತನ ಶ್ರೇಣಿಗಳನ್ನು ಪಡೆಯುತ್ತಿದ್ದಾರೆ.
ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಆದಾಯದ ಶೇ.35 ಅನ್ನು ಸಿಬಂದಿ ವೇತನಕ್ಕೆ ಮೀಸಲಿಡಲಾಗುತ್ತದೆ. 6ನೇ ವೇತನ ಆಯೋಗದ ಜಾರಿ ಅನಂತರವೂ ಶೇ.35 ವೆಚ್ಚ ಮೀರದ ಹಲವು ದೇವಸ್ಥಾನಗಳ ನೌಕರರಿಗೆ ವೇತನ ಶ್ರೇಣಿ ನೀಡಿಲ್ಲ. ಕಾರಣವಿಲ್ಲದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಮಧ್ಯಾಂತರ ಪರಿಹಾರವನ್ನಾದರೂ ನೀಡಿ ಎನ್ನುವುದು 6ನೇ ಶ್ರೇಣಿ ವೇತನ ವಂಚಿತ ನೌಕರರ ಆಗ್ರಹ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು 2002ರ 36ರಲ್ಲಿನ 2ಮತ್ತು 1ರ ಪ್ರಕರಣದ ಪ್ರಕಾರ ಅರ್ಚಕರ ಮತ್ತು ನೌಕರರ ವೇತನಗಳು ದೇಗುಲದ ಒಟ್ಟು ವಾರ್ಷಿಕ ವರಮಾನದ ಶೇ.35 ಮೀರಬಾರದು. ಈ ನಿಯಮ ಪಾಲನೆಯಾಗುವ ದೇವಸ್ಥಾನಗಳ ಸಿಬಂದಿಗೆ ವೇತನವನ್ನು ಕನಿಷ್ಠ ವೇತನಕ್ಕಿಂತ ಕಡಿಮೆಯಾಗದಂತೆ ವೇತನ ಶ್ರೇಣಿ, ಅವಧಿಬದ್ಧ ವೇತನ ಭಡ್ತಿ ಹಾಗೂ ಇನ್ನಿತರ ಸೌಲಭ್ಯಗಳ ಜತೆಗೆ ನಿಯಮಾನುಸಾರ ನೀಡಲು ಆದೇಶವಿದೆ. 6ನೇ ವೇತನ ಶ್ರೇಣಿಯನ್ನು ಆರ್ಥಿಕ ಸದೃಢ ಮತ್ತು ಸಿಬಂದಿ ವೇತನ ವೆಚ್ಚ ಶೇ.35 ಮೀರದ ದೇವಸ್ಥಾನಗಳಿಗೆ ಅನ್ವಯಿಸುವಂತೆ ಜಾರಿಗೊಳಿಸಬೇಕು. ಇದು ಶೇ.10ರ ಆದಾಯದ ಮಿತಿಯೊಳಗೆ ಬರುವ ಕಾರಣ ಜಾರಿಗೆ ಅಡ್ಡಿಯಾಗುವುದಿಲ್ಲ ಎನ್ನುವ ವಾದ ನೌಕರದ್ದಾಗಿದೆ.
ವಿಳಂಬಕ್ಕೆ ಕಾರಣ
ಸರಕಾರ ಹೊರಡಿಸಿರುವ ಆದೇಶವೇ ಪಾಲನೆಯಾಗುತ್ತಿಲ್ಲ. ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಪ್ರಕ್ರಿಯೆಗಳಿಗೆ ಜೀವ ಸಿಗುತ್ತಿಲ್ಲ. ಉನ್ನತ ಅಧಿಕಾರಿಗಳು ಪ್ರಕ್ರಿಯೆ ಚುರುಕುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ನೇಮಕಾತಿ ಅಸಮರ್ಪಕ ಸಹಿತ ಅನೇಕ ತಪ್ಪುಗಳಿವೆ ಎಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ.
ಎಲ್ಲೆಲ್ಲಿ 6ನೇ ಶ್ರೇಣಿ ಜಾರಿ?
ಕೊಲ್ಲೂರು, ತಿರುಮಲ ತಿರುಪತಿ ರಾಜ್ಯ ಛತ್ರ, ಪುತ್ತೂರು ಮಹಾಲಿಂಗೇಶ್ವರ ಹಾಗೂ ಮಲೆ ಮಹದೇಶ್ವರ ಸ್ವಾಮಿ ದೇಗುಲಗಳ ನೌಕರರು ಹೋರಾಟ ನಡೆಸಿ 6ಶ್ರೇಣಿ ವೇತನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೌಕರರ ಬೇಡಿಕೆಗಳೇನು?
ಈ ಹಿಂದೆ ಸರಕಾರ ಮಂಜೂರು ಮಾಡಿದ ಸರಕಾರಿ ವೇತನ ಶ್ರೇಣಿಯನ್ನು ಯಥಾವತ್ತಾಗಿ ಮುಂದುವರೆಸಬೇಕು. ವೇತನ ಶ್ರೇಣಿ ವಂಚಿತರಿಗೆ ಸರಕಾರಿ ವೇತನ ಶ್ರೇಣಿ ನೀಡಲು ವೇತನ ಶ್ರೇಣಿ ನಿಧಿ ಸ್ಥಾಪಿಸಬೇಕು. 5ನೇ ವೇತನ ಶ್ರೇಣಿ ಹಾಗೂ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಮಧ್ಯಂತರ ಪರಿಹಾರವನ್ನು ಕೂಡ ಮಂಜೂರು ಮಾಡಲಾಗಿದೆ. ಸರಕಾರದ ಪರಿಸ್ಕೃತ ಆದೇಶದಂತೆ ಷರತ್ತುಗಳನ್ವಯ ಹಾಲಿ ವೇತನ ಪಡೆಯುತ್ತಿರುವ ದೇಗುಲಗಳ ನೌಕರರಿಗೆ ಹೊಸ ವೇತನ ಶ್ರೇಣಿಯನ್ನು ನಿಯಮನುಸಾರ ಪರಿಶೀಲಿಸಿ ಸ್ಥಳಿಯ ಹಂತದಲ್ಲೆ ಮಂಜೂರು ಮಾಡಲು ಇಲಾಖೆ ಅನುಮತಿ ನೀಡಿದೆ. ಅದು ಸ್ಥಳಿಯ ಮಟ್ಟದಲ್ಲೆ ಜಾರಿಯಾಗಬೇಕು.
ಅಂಕಿ ಅಂಶ
ಇಲಾಖೆ ವರದಿಯಂತೆ ರಾಜ್ಯದಲ್ಲಿರುವ ದೇವಸ್ಥಾನಗಳು-34,458
ಅವಿಭಜಿತ ಜಿಲ್ಲೆಯಲ್ಲಿ ನೌಕರರು -2,500 ಮಂದಿ.
ದ.ಕ ಜಿಲ್ಲೆಯ 41 ದೇವಸ್ಥಾನಗಳಲ್ಲಿರುವ ನೌಕರರು-1,600 ಮಂದಿ.
ಉಡುಪಿಯ 51 ಜಿಲ್ಲೆಯಲ್ಲಿರುವ ನೌಕರರು-900 ಮಂದಿ.
ಹೊಸ ವೇತನ ಶ್ರೇಣಿ ಪಡೆಯಲು ಆರ್ಹರು-1.111 ಮಂದಿ.
ದಾಖಲೆ ಸಲ್ಲಿಸದೆ ಅಡ್ಡಿ
ನೌಕರರ ಆರನೇ ವೇತನ ಪರಿಷ್ಕರಣೆಗೆ ಸಂಬಂಧಿಸಿ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ನಡೆದಿದೆ. ಕೆಲವು ದೇವಸ್ಥಾನಗಳು ಸೂಕ್ತ ದಾಖಲೆ ಇನ್ನು ನೀಡಿಲ್ಲ. ಇದರಿಂದ ಅಡ್ಡಿಯಾಗಿದೆ. ದಾಖಲೆ ನೀಡಿದ ದೇವಸ್ಥಾನಗಳ ಅರ್ಹ ನೌಕರರಿಗೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವೆ.
-ಕೋಟ ಶ್ರೀನಿವಾಸ ಪೂಜಾರಿ. ಮುಜರಾಯಿ ಸಚಿವರು.
ಸರಕಾರ ಮಾನ್ಯತೆ ನೀಡುತಿಲ್ಲ
ಸರಕಾರ ನಮ್ಮ ಬೇಡಿಕೆಗಳಿಗೆ ಮಾನ್ಯತೆ ನೀಡುತ್ತಿಲ್ಲ. ದೇವಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಸಮಸ್ಯೆಗಳಿಗೆ ಸಂಬಂಧಿಸಿ ಸಮ್ಮೇಳನ ಹಾಗೂ ಮನವಿಗಳ ಮೂಲಕ ಸರಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದೇವೆ. ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆಯೇ ಸಿಗುತ್ತಿಲ್ಲ. ಮುಂದೆ ಮತ್ತೂಮ್ಮೆ ಸರಕಾರದ ಗಮನ ಸೆಳೆಯುತ್ತೇವೆ. ಬಳಿಕ ಕಾನೂನು ಹೋರಾಟದ ಕುರಿತು ನಿರ್ಧರಿಸುತ್ತೇವೆ.
-ಬಸವರಾಜಪ್ಪ ಆವಂಟಿ, ಅಧ್ಯಕ್ಷ. ರಾಜ್ಯ ಮುಜರಾಯಿ ದೇಗುಲಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು.
ನಮ್ಮ ಬೇಡಿಕೆಗೆ ಸ್ಪಂದಿಸಿ
ಸರಕಾರ ದಿನಕ್ಕೊಂದು ಸುತ್ತೋಲೆ ಹೊರಡಿಸುವ ಮೂಲಕ 1993ಕ್ಕೂ ಹಿಂದಿನಿಂದ ಕೆಲಸ ಮಾಡಿಕೊಂಡಿರುವ ನಮಗೆ ಮೋಸ ಮಾಡುತ್ತಿದೆ. ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದರೂ ಸರಕಾರ ಸ್ಪಂದಿಸುತಿಲ್ಲ, ಸರಕಾರ ಮತ್ತು ಇಲಾಖೆಯನ್ನು ಎದುರು ಹಾಕಿಕೊಳ್ಳುವುದಕ್ಕೆ ನಾವು ಸಿದ್ಧರಿಲ್ಲ. ಕೋರ್ಟ್‌ಗೆ ಹೋಗಲು ಅವಕಾಶ ಮಾಡಿಕೊಡದ ರೀತಿಯಲ್ಲಿ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು.
-ಶ್ರೀಕಾಂತ ಹಡಗಲಿ, ನೊಂದ ನೌಕರ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.