ಎಳ್ಳಾರೆ ಅನುದಾನಿತ ಶಾಲೆ: ಎರಡು ವರ್ಷಗಳಿಂದ ಖಾಯಂ ಶಿಕ್ಷಕರೇ ಇಲ್ಲ
Team Udayavani, Feb 2, 2019, 12:30 AM IST
ವಿಶೇಷ ವರದಿ- ಅಜೆಕಾರು: ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ಸರಕಾರ ಹೇಳುತ್ತಿದ್ದರೂ ಅದರ ಧೋರಣೆ ಮಾತ್ರ ಹಾಗಿಲ್ಲ. ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಲಕ್ಷ್ಮೀ ಜನಾರ್ದನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಸುಪರ್ದಿಗೆ ತೆಗೆದುಕೊಳ್ಳಲು ಆಡಳಿತ ಮಂಡಳಿ ಮನವಿ ಮಾಡಿ 2 ವರ್ಷ ಕಳೆಯಿತು. ಆದರೆ ಇದಕ್ಕೆ ಸ್ಪಂದಿಸದೇ ಇರುವುದರಿಂದ ಶಾಲೆ ಭವಿಷ್ಯವೇ ಮಸುಕಾಗಿದೆ.
ಸರಕಾರದ ಸುಪರ್ದಿಗೆ ಮನವಿ
2017ರ ಮೇ 31ರಂದು ಶಾಲೆಯಲ್ಲಿದ್ದ ಓರ್ವ ಖಾಯಂ ಶಿಕ್ಷಕರು ನಿವೃತ್ತಿ ಹೊಂದಿದ್ದರು. ಬಳಿಕ ಗೌರವ ಶಿಕ್ಷಕಿಯರ ನೆರವಿನಲ್ಲೇ ಶಾಲೆ ನಡೆಯುತ್ತಿದೆ. ಅನುದಾನಿತ ಶಾಲೆಗಳಿಗೆ ಕೆಲವು ವರ್ಷಗಳಿಂದ ಶಿಕ್ಷಕರನ್ನು ಸರಕಾರ ನೇಮಕ ಮಾಡದ ಹಿನ್ನೆಲೆ ಯಲ್ಲಿ ಸುಪರ್ದಿಗೆ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿತ್ತು.
ಏಕೈಕ ಪಾಠ ಶಾಲೆ
ಅತ್ಯಂತ ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 38 ವಿದ್ಯಾರ್ಥಿಗಳಿದ್ದಾರೆ. ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದ ಪರಿಣಾಮ ಓರ್ವ ಶಿಕ್ಷಕರನ್ನು ನಿಯೋಜನೆಯ ಮೇಲೆ ಶಿಕ್ಷಣ ಇಲಾಖೆ ನೇಮಕ ಮಾಡಿದೆ. ಆದರೆ ಖಾಯಂ ಸ್ಥಾನಕ್ಕೆ ತುಂಬಲು ಮುಂದಾಗಿಲ್ಲ. ಈ ಪರಿಸರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಶಾಲೆಗಳಿಲ್ಲ. ವಾಹನ ಸೌಕರ್ಯದ ವ್ಯವಸ್ಥೆಯೂ ಇಲ್ಲ.
ಸರಕಾರದ ನಿರಾಸಕ್ತಿಗೆ ಆಕ್ರೋಶ
ಶಾಲೆ ಸುಮಾರು 2.16 ಎಕ್ರೆ ಜಮೀನು ಹೊಂದಿದ್ದು, 1.02 ಎಕ್ರೆಯಷ್ಟು ವಿಶಾಲವಾದ ಆಟದ ಮೈದಾನ ಹೊಂದಿದೆ. ಶಾಲೆ ಕಟ್ಟಡ, ಜಾಗವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರಕಾರಕ್ಕೆ ನೀಡಲು ಆಡಳಿತ ಮಂಡಳಿ ಮನಸ್ಸು ಮಾಡಿದ್ದರೂ ಸರಕಾರ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪಂದನೆ ಇಲ್ಲ
ವಿದ್ಯಾರ್ಥಿಗಳಿದ್ದರೂ ಸರಕಾರದ ನಿರುತ್ಸಾಹದಿಂದಾಗಿ ಸ್ಪಂದನೆ ಸಿಕ್ಕಿಲ್ಲ. ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡು ಸ್ಥಳೀಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಕಾರ್ಯೋನ್ಮುಖವಾಗಬೇಕು.
– ದೇವೇಂದ್ರ ಕಾಮತ್,
ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.