Udupi ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿರಬೇಕು : ಡಾ| ವಿದ್ಯಾಕುಮಾರಿ
Team Udayavani, Aug 30, 2024, 1:52 AM IST
ಉಡುಪಿ: ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಆಧಾರ್ ಕಾರ್ಡ್ ಮಹತ್ವದ್ದಾಗಿದ್ದು, ವ್ಯಕ್ತಿಯನ್ನು ಗುರುತಿಸುವುದು ಸಹಿತ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಹೀಗಾಗಿ ಚಾಲ್ತಿಯಲ್ಲಿರುವ ಆಧಾರ್ ಗುರುತಿನ ಚೀಟಿ(ಅಪ್‌ಡೇಟ್ ಆಗಿರುವ) ಎಲ್ಲರೂ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ವಯೋಮಾನದವರಿಗೂ ಹೊಸ ಕಾರ್ಡ್, ಕಾರ್ಡ್‌ಗಳ ಸ್ಯಾಚುರೇಶನ್ ಹಾಗೂ ಕಡ್ಡಾಯ ಬಯೋ ಮೆಟ್ರಿಕ್ ನವೀಕರಣಗೊಳಿಸುವುದರೊಂದಿಗೆ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಹೊಂದಬೇಕು. 5 ವರ್ಷದೊಳಗಿನ ಮಕ್ಕಳು ಹೊಸದಾಗಿ ಆಧಾರ್ ಕಾರ್ಡ್ ನೋಂದಣಿಯನ್ನು ಸಮೀಪದ ಅಂಚೆ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 14,12,357 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 37,700 ಮತ್ತು 5ರಿಂದ 18 ವರ್ಷದವರು 2,06,567 ಹಾಗೂ 18 ವರ್ಷ ಮೇಲ್ಪಟ್ಟ 11,73,090 ಜನರಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರು ಗುರುತಿನ ಹಾಗೂ ವಿಳಾಸ ದಾಖಲೆಯನ್ನು ಸಮೀಪದ ಆಧಾರ್ ಕೇಂದ್ರದಲ್ಲಿ ಮರು ಅಪ್ಲೋಡ್ ಮಾಡಿ ನೊಂದಣಿ ಮಾಡಿಕೊಳ್ಳಬೇಕು. ಇದನ್ನು http://myAadhaar.uidai.gov.in ಮೂಲಕ ನೇರವಾಗಿ ನವೀಕರಿಸಲು ಅವಕಾಶವಿದೆ. ನವೀಕರಿಸದೆ ಇದ್ದಲ್ಲಿ ಆಧಾರ್ ಕಾರ್ಡ್ ನಿಷ್ಟ್ರಿಯಗೊಳ್ಳುತ್ತದೆ. ಇದರಿಂದ ಸೌಲಭ್ಯ ಅಥವಾ ಸೇವೆ ಪಡೆಯಲು ಅನನುಕೂಲವಾಗುತ್ತದೆ. 15 ವರ್ಷಗಳ ಅನಂತರ ಕಡ್ಡಾಯವಾಗಿ ಆಧಾರ್ ಬಯೋ ಮೆಟ್ರಿಕ್ ನವೀಕರಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟವರು 43,437 ಜನರು, 15 ವರ್ಷ ಮೇಲ್ಪಟ್ಟ 44,481 ಜನ ಸಹಿತ 87,918 ಜನರು ನವೀಕರಿಸಿಕೊಳ್ಳಬೇಕಿದೆ ಎಂದರು.
ರಾಜ್ಯ ಆಧಾರ್ ನೋಂದಣಿ ಪ್ರಾಧಿಕಾರವು ಜಿಲ್ಲೆಯ ಆಯ್ದ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲು ಅದೇಶಿಸಿದ್ದು, ಅದರಂತೆ ಪ್ರತಿಯೊಂದು ಆಧಾರ್ ನೋಂದಣಿ ಕೇಂದ್ರವನ್ನು ಸೂಚಿಸಿದ ಕಚೇರಿ ಸಮಯದಲ್ಲಿ ತೆರೆದು ಸಾರ್ವಜನಿಕರಿಗೆ ಆಧಾರ್ ಸೇವೆ ಪಡೆಯಲು ಅನುವು ಮಾಡಿಕೊಡಬೇಕು. ಆಧಾರ್ ಕಾರ್ಡ್ ಹೊಂದಿದವರು ಮರಣ ಹೊಂದಿದ್ದಲ್ಲಿ ಅವರ ಕಾನೂನು ಬದ್ಧ ವಾರಸುದಾರರು ಅವರ ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್ ಕಾರ್ಡ್ ಅನ್ನು ತಪ್ಪದೇ ರದ್ದುಪಡಿಸಬೇಕು. ರದ್ದುಪಡಿಸದೇ ಇದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಇದರ ಉಪಯೋಗ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಈ ರೀತಿ ಆದಲ್ಲಿ ಕಾನೂನುಬದ್ಧ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಧಾರ್ ಕಾರ್ಡ್ ನವೀಕರಣ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಲು ಅನುಕೂಲವಾಗುವಂತೆ ವಿಶೇಷ ಶಿಬಿರಗಳನ್ನು ಶಾಲಾ-ಕಾಲೇಜು, ಅಂಗನವಾಡಿಗಳಲ್ಲಿ ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯುಐಡಿಎಐ ಡೈರೆಕ್ಟರ್ ಮನೋಜ್ ಕುಮಾರ್, ಅಸಿಸ್ಟೆಂಟ್ ಮ್ಯಾನೆಜರ್ ಮೊಹಮ್ಮದ್ ಮೂಸಾಬ್, ರಿಕೇಶ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಸಿದ್ದಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಡಿಡಿಪಿಐ ಗಣಪತಿ, ಡಿಡಿಪಿಯು ಮಾರುತಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.