ಈ ಮಾದರಿ ಭೂಕುಸಿತ ಎಂದೂ ಕಂಡಿಲ್ಲ !
Team Udayavani, Jun 15, 2018, 4:25 AM IST
ಮಂಗಳೂರು: ಕಳೆದ 25 ವರ್ಷಗಳಿಂದ ಚಾರ್ಮಾಡಿ ಘಾಟಿಯ ಮಧ್ಯಭಾಗದಲ್ಲಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಕಳೆದ ಎರಡೂವರೆ ದಶಕದಲ್ಲಿ ಈ ರೀತಿ ಗುಡ್ಡ ಕುಸಿದು ಜನರಿಗೆ ತೊಂದರೆಯಾಗಿರುವುದನ್ನು ನೋಡಿಲ್ಲ! ‘ಉದಯವಾಣಿ’ ಮಾತನಾಡಿಸಿದಾಗ ಅರ್ಚಕ ಸುಬ್ರಹ್ಮಣ್ಯ ಭಟ್ ಅವರು ಹೇಳಿದ ಮಾತಿದು. ನಾನು ಇಲ್ಲಿ ಅರ್ಚಕನಾಗಿ ಪೂಜೆ ಆರಂಭಿಸಿದಾಗಿಂನಿಂದಲೂ ಘಾಟಿಯಲ್ಲಿ ಮಳೆಗಾಲದಲ್ಲಿ ಚಿಕ್ಕಪುಟ್ಟ ಭೂ ಕುಸಿತ ಉಂಟಾಗುವುದು ಸರ್ವೇ ಸಾಮಾನ್ಯ. ಅದು ನಮಗೂ ಮಾಮೂಲಿಯಾಗಿತ್ತು. ಆದರೆ ಈಗ ಸುರಿಯುತ್ತಿರುವ ಮಳೆ ಪ್ರಮಾಣ ಹಾಗೂ ಗುಡ್ಡ ಕುಸಿತದ ತೀವ್ರತೆ ಹಾಗೂ ಕಾಡಿನ ಮಧ್ಯೆ ಸಾಲುಗಟ್ಟಿ ನಿಂತ ಪ್ರಯಾಣಿಕರ ಪರಿಸ್ಥಿತಿ ನೋಡಿದ ಮೇಲೆ ನನ್ನಲ್ಲೂ ಭಯ ಉಂಟಾಗಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು.
ಸೋಮವಾರ ಹಾಗೂ ಮಂಗಳವಾರ ಗುಡ್ಡ ಕುಸಿತದಿಂದಾಗಿ ಅನೇಕ ಪ್ರಯಾಣಿಕರು ಕಷ್ಟ ಅನುಭವಿಸಿದರು. ಸ್ಥಳೀಯ ನಿವಾಸಿಗಳು, ಸಂಸ್ಥೆಗಳು, ಪೊಲೀಸರು ಸಹಾಯಕ್ಕಾಗಿ ಧಾವಿಸಿದರು. ದೇವಸ್ಥಾನದ ಆಸುಪಾಸಿನಲ್ಲಿ ಗುಡ್ಡ ಕುಸಿತ ಉಂಟಾಗದ ಕಾರಣ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಕಳೆದ 25 ವರ್ಷಗಳಲ್ಲಿ ಇಂತಹ ಘಟನೆಗೆ ಸಂಭವಿಸಿದ ನೆನಪು ನನಗಿಲ್ಲ ಎಂದರು. ಕೊಟ್ಟಿಗೆ ಹಾರದಲ್ಲಿ ನನ್ನ ಮನೆ. ನಾನು ವಾಹನದಲ್ಲಿ ದಿನನಿತ್ಯ ಹೋಗಿ ಬರುತ್ತೇನೆ. ಆ ಭಾಗದಲ್ಲಿ ಅಷ್ಟಾಗಿ ಗುಡ್ಡ ಕುಸಿತ ಇಲ್ಲದಿರುವುದರಿಂದ ನನ್ನ ಪ್ರಯಾಣಕ್ಕೆ ತೊಂದರೆಯಾಗಿಲ್ಲ. ಆದರೆ ನಾನು ದೇವಸ್ಥಾನಕ್ಕೆ ಪೂಜೆಗೆ ಬಂದರೆ ಮನೆಯವರಿಗೆ ಗಾಬರಿಯಾಗುತ್ತಿತ್ತು. ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ನಾನು ಪೂಜೆ ಮಾಡುವಾಗ ಈ ರಸ್ತೆಯಲ್ಲಿ ಹೋಗುವ ಯಾರಿಗೂ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಧರ್ಮಸ್ಥಳ ಕ್ಷೇತ್ರದ ನಂಟಿನ ದೇವಸ್ಥಾನ
ಚಾರ್ಮಾಡಿಯ ಶ್ರೀ ಅಣ್ಣಪ್ಪ ಸ್ವಾಮಿ ದೇವಸ್ಥಾನ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದೊಂದಿಗೆ ನಂಟು ಹೊಂದಿರುವ ಐತಿಹ್ಯವಿದೆ. ಧರ್ಮಸ್ಥಳದ ಅಣ್ಣಪ್ಪ ದೇವರು ತಿರುಗಾಟ ಮಾಡುತ್ತಿದ್ದಾಗ ಚಾರ್ಮಾಡಿಯಲ್ಲಿ ವಿಶ್ರಾಂತಿ ಪಡೆದಿದ್ದರು ಎಂಬ ನಂಬಿಕೆಯಿದ್ದು, ಈ ಹಿನ್ನಲೆಯಲ್ಲಿ ಆ ಜಾಗದಲ್ಲಿ ದೇವರ ಪಾದುಕೆಗೆ ದಿನನಿತ್ಯ ಪೂಜೆ ಮಾಡಲಾಗುತ್ತದೆ. ಭಟ್ ಅವರು ಇಲ್ಲಿ ಮುಂಜಾನೆ ದೇವರಿಗೆ ಪೂಜೆ ಮಾಡಿ ತೆರಳುತ್ತಾರೆ. ಬಳಿಕ ದಿನದ 24 ಗಂಟೆಯೂ ಈ ದೇಗುಲ ತೆರೆದಿರುತ್ತದೆ. ಘಾಟಿಯಲ್ಲಿ ಸಂಚರಿಸುವ ಪ್ರಯಾಣಿಕರು ಇಲ್ಲಿ ವಾಹನ ನಿಲ್ಲಿಸಿ ಕೈ ಮುಗಿದು ಹೋಗುತ್ತಾರೆ. ಸದ್ಯ ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತದಿಂದ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ.
ಮುಂಗಾರು ಪೂರ್ವ ಮಳೆ, ಘನ ವಾಹನ ಕಾರಣ
ನನ್ನ ಪ್ರಕಾರ ಮೊನ್ನೆ ನಡೆದ ಅವಘಡಗಳಿಗೆ ಮುಂಗಾರು ಪೂರ್ವ ಮಳೆ ಹಾಗೂ ಘಾಟಿಯಲ್ಲಿ ಘನವಾಹನಗಳ ಅತಿಯಾದ ಓಡಾಟ ಕಾರಣ ಎಂದು ಅನ್ನಿಸುತ್ತಿದೆ. ಹಿಂದೆ ಮಳೆ ಜಾಸ್ತಿ ಇತ್ತು, ಆದರೆ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ವಾಹನಗಳ ಸಂಖ್ಯೆ ಮಿತಿಮೀರಿದೆ. ಹಲವು ಘನ ವಾಹನಗಳು ದಿನನಿತ್ಯ ಸಂಚರಿಸುತ್ತವೆ.ಈ ಬಾರಿ ಮೇಯಲ್ಲೇ ಭಾರಿ ಮಳೆಯಾಗಿದೆ. ಇದರಿಂದ ಮಣ್ಣು ಮೆದುವಾಗಿತ್ತು. ಹಾಗಾಗಿ ಮಳೆಗೆ ಗುಡ್ಡಕುಸಿತ ಉಂಟಾಗಿದೆ. ಕಿರಿದಾಗಿದ್ದ ರಸ್ತೆಯನ್ನು ಅಗಲ ಮಾಡಲಾಯಿತು. ಇವೆಲ್ಲ ಕಾರಣದಿಂದ ಗುಡ್ಡಕುಸಿತ ಉಂಟಾಗಿರಬಹುದು ಎನ್ನುವುದು ಅವರ ಅಭಿಪ್ರಾಯ.
ಪರ್ಯಾಯ ರಸ್ತೆ ಬಳಸಿ
ಒಂದುವೇಳೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದಿರುವುದನ್ನು ಸರಿಪಡಿಸಿದರೂ ಈ ಬಾರಿಯ ಮಳೆಗಾಲ ಮುಗಿಯುವವರೆಗೆ ಸಂಚಾರ ಅಷ್ಟೊಂದು ಸುರಕ್ಷಿತವಲ್ಲ. ಮಳೆ ಈ ಬಾರಿ ಜಾಸ್ತಿ ಇರುವ ಕಾರಣ ಮುಂದಿನ ದಿನಗಳಲ್ಲಿ ಕೂಡ ಮಣ್ಣು ಮೃದುವಾಗಿ ಮತ್ತಷ್ಟು ಭೂಕುಸಿತವಾಗುವ ಅಪಾಯವಿದೆ. ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನು ಬಳಸುವುದು ಉತ್ತಮ. ಮಳೆಗಾಲ ಮುಗಿಯುವವರೆಗೆ ಚಾರ್ಮಾಡಿ ಘಾಟಿಯಲ್ಲಿ ಘನ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವುದು ಉತ್ತಮ ಎನ್ನುವುದು ಸುಬ್ರಹ್ಮಣ್ಯ ಅವರ ಸಲಹೆ.
— ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.