ಮಳೆ ಕೊರತೆ ಇದ್ದರೂ ಯಂತ್ರಧಾರೆ ನೆಚ್ಚಿದ ಕೃಷಿಕರು
ಭತ್ತ ನಾಟಿ ಯಂತ್ರಕ್ಕೂ ಬೇಡಿಕೆ ; ರಿಯಾಯಿತಿ ದರದಲ್ಲಿ ಕೃಷಿ ಯಂತ್ರ ಬೇಡಿಕೆ
Team Udayavani, Jul 6, 2019, 5:56 AM IST
ಅಜೆಕಾರು: ಮುಂಗಾರು ಮುನಿಸಿನಿಂದ ರೈತ ಕಂಗಾಲಾಗಿದ್ದರೂ ವಿರಳ ಮಳೆಯಲ್ಲೇ ಕೃಷಿಗಿಳಿದ ರೈತರು ತಮ್ಮ ಕೆಲಸ ಪೂರೈಸಲು ಯಂತ್ರಧಾರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕೃಷಿ ಇಲಾಖೆ ಮತ್ತು ಧ.ಗ್ರಾ. ಯೋ.ಸಹಯೋಗದಲ್ಲಿ ಅಜೆಕಾರಿನಲ್ಲಿ ಯಂತ್ರ ಧಾರೆ ಕೃಷಿ ಉಪಕರಣಗಳ ಮಳಿಗೆಯಿದ್ದು ರೈತರು ರಿಯಾಯಿತಿ ದರದಲ್ಲಿ ಕೃಷಿ ಯಂತ್ರಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ.
ಈಗಾಗಲೇ ಅಜೆಕಾರು ಸುತ್ತಮುತ್ತ ಲಿನ 172 ರೈತರು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ್ದರೆ, 31 ರೈತರು ಯಂತ್ರಧಾರೆಯ ಟಿಲ್ಲರ್ ಮೂಲಕ ಉಳುಮೆ ಮಾಡಿದ್ದಾರೆ.ಜೂ.17 ರಿಂದ ಭತ್ತ ನಾಟಿ ಯಂತ್ರಕ್ಕೂ ಬೇಡಿಕೆ ಹೆಚ್ಚಾಗುತ್ತಿದ್ದು ಜೂ. 30ರ ವೇಳೆಗೆ 11 ರೈತರು ತಮ್ಮ ಕೃಷಿ ಭೂಮಿಯಲ್ಲಿ ಭತ್ತ ನಾಟಿ ಮಾಡಿದ್ದಾರೆ.
ಅಜೆಕಾರಿನ ಕೃಷಿ ಯಂತ್ರಧಾರೆಯಲ್ಲಿ 3 ಟ್ರ್ಯಾಕ್ಟರ್, 1 ಟಿಲ್ಲರ್ ಹಾಗೂ 1 ಭತ್ತ ನಾಟಿ ಯಂತ್ರವಿದ್ದು ಈಗಾಗಲೇ ಜು.20ರ ವರೆಗೆ ರೈತರು ಕಾಯ್ದಿರಿಸಿದ್ದಾರೆ.
ಭತ್ತ ನಾಟಿ ಯಂತ್ರದ ಮೂಲಕ ಮರ್ಣೆ ಗ್ರಾಮ ಹಾಗೂ ಶೀರೂರು ಗ್ರಾಮಗಳಲ್ಲಿ ನಾಟಿ ಮಾಡಲಾಗಿದ್ದು ರೈತರು ಚಾಪೆ ಮಡಿ ಹಾಗೂ ಟ್ರೇ ಸಸಿಯನ್ನು ತಯಾರಿಸಿ ಯಂತ್ರದ ಮೂಲಕ ನಾಟಿ ಕಾರ್ಯ ಮಾಡಿದ್ದಾರೆ. ಒಂದು ಭತ್ತ ಕಟಾವು ಮತ್ತು ಒಕ್ಕಣೆ ಯಂತ್ರ, ಮೂರು ಟ್ರ್ಯಾಕ್ಟರ್, ಒಂದು ಟಿಲ್ಲರ್, ಒಂದು ಕೃಷಿ ನಾಟಿ ಯಂತ್ರ, ಕೀಟ ನಾಶಕ ಸಿಂಪಡಣೆ ಯಂತ್ರ, ಭತ್ತದ ಹುಲ್ಲಿನ ಕಟ್ಟು ಕಟ್ಟುವ ಯಂತ್ರ ಸೇರಿದಂತೆ ರೈತರಿಗೆ ಬೇಕಾದ ಎಲ್ಲ ಯಂತ್ರೋಪಕರಣಗಳು ಯಂತ್ರಧಾರೆಯಲ್ಲಿ ಲಭ್ಯವಿವೆ.
ರಿಯಾಯಿತಿ ದರ
47 ಎಚ್‌ಪಿಯ ಟ್ರ್ಯಾಕ್ಟರ್ ಒಂದು ಗಂಟೆ ಉಳುಮೆಗೆ ಸುಮಾರು 800 ರೂ. ಬಾಡಿಗೆಯಾದರೆ, 35 ಎಚ್‌ಪಿಯ ಟ್ರ್ಯಾಕ್ಟರಿಗೆ 750 ರೂ. ಬಾಡಿಗೆ ಇದೆ. ಟಿಲ್ಲರ್ ಗಂಟೆಗೆ 375 ರೂ., ನಾಟಿ ಯಂತ್ರಕ್ಕೆ 750 ರೂ., ಕಟಾವು ಮತ್ತು ಒಕ್ಕಣೆ ಯಂತ್ರಕ್ಕೆ 1,800 ರೂ. ಬಾಡಿಗೆ ಇದ್ದು ಇದು ಸ್ಥಳೀಯ ಖಾಸಗಿ ವ್ಯಕ್ತಿಗಳ ಯಂತ್ರೋ ಪಕರಣಗಳ ಬಾಡಿಗೆಗಿಂತ ಬಹಳಷ್ಟು ಕಡಿಮೆ ಇದೆ.
ಬೇಡಿಕೆ ಹೆಚ್ಚಳ
ಮುಂಗಾರು ವಿಳಂಬದಿಂದಾಗಿ ಜೂನ್ ಅಂತ್ಯದಿಂದ ಯಂತ್ರಧಾರೆಯ ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮಳೆ ಇನ್ನಷ್ಟು ಚುರುಕುಗೊಂಡಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ರಿಯಾಯಿತಿ ದರದಲ್ಲಿ ಎಲ್ಲ ಕೃಷಿ ಉಪಕರಣಗಳು ದೊರೆಯುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.
-ಶೋಭಾ ನೆಕ್ಕರೆ, ಪ್ರಬಂಧಕರು ಕೃಷಿ ಯಂತ್ರಧಾರೆ ಅಜೆಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.