ಜಿಲ್ಲೆಯ ಮೊದಲ ಮಲೆಕುಡಿಯ ಭವನ ಸಿದ್ದ
ಕಾರ್ಕಳದ ಮಾಳದಲ್ಲಿ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣ
Team Udayavani, Apr 8, 2022, 11:01 AM IST
ಕಾರ್ಕಳ: ಮಲೆಕುಡಿಯ ಸಮುದಾಯದ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಕಾರ್ಕಳ ತಾಲೂಕಿನ ಪೇರಡ್ಕ ಗ್ರಾಮದ ಮಾಳದಲ್ಲಿ 2. ಕೋ.ರೂ. ವೆಚ್ಚದಲ್ಲಿ ಉಡುಪಿ ಶೈಲಿಯಲ್ಲಿ ಸುಸಜ್ಜಿತ ಜಿಲ್ಲಾ ಮಲೆಕುಡಿಯ ಸಂಘದ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಕಾಮಗಾರಿಗಳು ಪೂರ್ಣ ವಾಗುವ ಹಂತದಲ್ಲಿದೆ.
ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಅತೀ ಮಲೆಕುಡಿಯ ಸಮುದಾಯದ ಮಂದಿ ವಾಸವಿರುವುದು ಕಾರ್ಕಳ, ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲಿ. ಜಿಲ್ಲೆಯಲ್ಲಿ 4,500 ಮಲೆಕುಡಿಯ ಸಮುದಾಯದ ಜನರಿದ್ದಾರೆ. ಹೆಬ್ರಿ ತಾ|ನ ಕಬ್ಬಿನಾಲೆ, ಕಾರ್ಕಳ ತಾ|ನ ಮಾಳ, ಈದು ಪರಿಸರದಲ್ಲಿ ಹೆಚ್ಚು ಮಂದಿ ವಾಸವಿದ್ದಾರೆ.
ಸಮುದಾಯದ ವಿವಿಧ ಚಟುವಟಿಕೆಗೆ ಸೂಕ್ತ ಸಮುದಾಯ ಭವನ ಜಿಲ್ಲಾ ಮಟ್ಟದಲ್ಲಿ ಇರಲಿಲ್ಲ. ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗಿರುವ ಸಣ್ಣ ಸಮುದಾಯ ಭವನಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಮಲೆಕುಡಿಯ ಸಮುದಾಯಕ್ಕೆ ಮೀಸಲಾಗಿ ಇದುವರೆಗೆ ಸಮುದಾಯ ಭವನ ಇರಲಿಲ್ಲ. ಈಗ ಕಾರ್ಕಳದಲ್ಲಿ ಜಿಲ್ಲೆಯ ಮೊದಲ ಮಲೆಕುಡಿಯ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಅನುದಾನಕ್ಕೆ ಸಚಿವರ ಪ್ರಯತ್ನ
ಮಾಳದಲ್ಲಿ ಈ ಹಿಂದೆ ಹಳೆಯ ಕಟ್ಟಡವಿದ್ದ ಸ್ಥಳದಲ್ಲಿ ಸಣ್ಣದಾದ ಭವನ ನಿರ್ಮಾಣವಾಗಿತ್ತಾದರೂ ಅದು ಶಿಥಿಲಗೊಂಡಿತ್ತು. ಚಟುವಟಿಕೆ ನಡೆಸಲು ಪೂರಕವೂ, ಯೋಗ್ಯವೂ ಆಗಿರಲಿಲ್ಲ. ಹೀಗಾಗಿ ನೂತನ ಸಮುದಾಯ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಸಮುದಾಯದ ಮುಖಂಡರೆಲ್ಲರೂ ಸೇರಿ ಕ್ಷೇತ್ರದ ಶಾಸಕ, ಸಚಿವ ವಿ.ಸುನಿಲ್‌ಕುಮಾರ್ ಅವರ ಮೇಲೆ ನಿರಂತರ ಒತ್ತಡ ತರುವ ಪ್ರಯತ್ನ ನಡೆಸಿದ್ದರು. ಪರಿಣಾಮ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ 2 ಕೋ.ರೂ. ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಿಸಲಾಗಿತ್ತು.
ಮಲೆಕುಡಿಯರ ಜಿಲ್ಲಾ ಸಮುದಾಯ ಭವನವನ್ನು ಉಡುಪಿ ಶೈಲಿಯಲ್ಲಿ ಅಕರ್ಷಕವಾಗಿ ನಿರ್ಮಿಸಲಾಗುತ್ತಿದೆ. ಭವನದ ಕಟ್ಟಡದ ಅಡಿಪಾಯ, ಗೋಡೆ, ಛಾವಣಿ, ಗಾರೆ ಕೆಲಸಗಳೆಲ್ಲವೂ ಮುಗಿದಿದೆ. ಕಿಟಕಿ ಬಾಗಿಲು, ಜೋಡಣೆ, ಪೈಂಟಿಂಗ್ ಇನ್ನಿತರ ಕೆಲಸಗಳಷ್ಟೇ ಬಾಕಿ ಉಳಿದಿವೆ. ಮೇಲಂತಸ್ತಿನಲ್ಲಿ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಅತ್ಯಾಕರ್ಷಕವಾಗಿ ಮೇಲ್ಛಾವಣಿ ನಿರ್ಮಿಸಲಾಗಿದೆ. ಕೆಳ ಅಂತಸ್ತಿನಲ್ಲಿ ಭೋಜನಶಾಲೆ ಇರಲಿದೆ.
ಮಲೆಕುಡಿಯ ಜನಾಂಗವು ಪ್ರಾಚೀನ ಜನಾಂಗ ಗಳಲ್ಲಿ ಒಂದಾಗಿದ್ದು, ತುಳುನಾಡಿನ ಮೂಲ ನಿವಾಸಿಗರಾಗಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹೆಚ್ಚಾಗಿ ವಾಸವಿರುವರು. ದ.ಕ. ಜಿಲ್ಲೆಯ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಈ ಭಾಗದಲ್ಲಿ ಈ ಸಮುದಾಯದ ಮಂದಿ ಹೆಚ್ಚಿದ್ದಾರೆ.
ಪ್ರಕೃತಿ ರಮಣೀಯ ಸ್ಥಳದಲ್ಲಿದೆ ಭವನ
ಕಾರ್ಕಳ-ಬಜಗೋಳಿ-ಕುದುರೆಮುಖ ಹೆದ್ದಾರಿ ಬದಿಯಲ್ಲಿ ಸಮುದಾಯ ಭವನ ಸುಸಜ್ಜಿತ, ಆಕರ್ಷಣೀಯವಾಗಿ ನಿರ್ಮಾಣವಾಗುತ್ತಿದೆ. ಪಕ್ಕದಲ್ಲೇ ಕಡಾರಿ ನದಿಯೂ ಹರಿಯುತ್ತಿದೆ. ಪ್ರಕೃತಿ ರಮಣೀಯ ಪರಿಸರ ವೀಕ್ಷಿಸುವ ತಾಣವೂ ಇದಾಗಿದ್ದು ಇಲ್ಲೇ ಭವನ ನಿರ್ಮಾಣವಾಗುತ್ತಿರುವುದು ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಿದೆ.
ಉತ್ತಮ ವ್ಯವಸ್ಥೆ ಭವನಕ್ಕೆ ಸಂಬಂಧಿಸಿ ಸಮುದಾಯದ ಮಂದಿ ತನ್ನಲ್ಲಿ ಅನುದಾನಕ್ಕೆ ಮನವಿ ಮಾಡಿಕೊಂಡಿದ್ದರು. ಭವನಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಉತ್ತಮ ವ್ಯವಸ್ಥೆಗಳು ಭವನದಲ್ಲಿ ಇರಲಿದೆ. ಸಮಾಜದ ಮಂದಿಗೆ ಇದರಿಂದ ಬಹಳ ಅನುಕೂಲವಾಗಲಿದೆ. –ವಿ.ಸುನಿಲ್‌ಕುಮಾರ್, ಸಚಿವ
ಶೀಘ್ರ ಪೂರ್ಣ ಭವನವನ್ನು 2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 1.5 ಕೋ.ರೂ. ಈಗಾಗಲೇ ನೀಡಲಾಗಿದೆ. ಇನ್ನುಳಿದಂತೆ 50 ಲಕ್ಷ ರೂ. ನೀಡುವುದಕ್ಕೆ ಬಾಕಿಯಿದೆ. ಶೀಘ್ರ ಬಾಕಿ ಉಳಿದ ಕೆಲಸಗಳು ನಡೆದು ಉದ್ಘಾಟನೆಗೆ ಸಿದ್ಧಗೊಳಿಸಲಾಗುತ್ತಿದೆ. –ದೂದ್‌ಪೀರ್, ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ ಇಲಾಖೆ ಉಡುಪಿ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.