ಹೊಟೇಲ್‌ಗಳಲ್ಲಿ ತಿಂಡಿ ದರ ಏರಿಕೆ ಬಿಸಿ
ಅಡುಗೆ ಎಣ್ಣೆ, ಗ್ಯಾಸ್ ತುಟ್ಟಿ
Team Udayavani, Apr 6, 2022, 11:52 AM IST
ಉಡುಪಿ: ಅಡುಗೆ ಎಣ್ಣೆ, ಗ್ಯಾಸ್ ದರ ಏರಿಕೆ ಪರಿಣಾಮ ಹೊಟೇಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಒಂದೆಡೆ ಊಟ, ಉಪಾಹಾರ ದರವನ್ನು ಹೆಚ್ಚಿಸಬೇಕೋ ಬೇಡವೋ ಎಂಬ ಚಿಂತೆ, ಇನ್ನೊಂದೆಡೆ ಸಣ್ಣ ವರ್ಗದ ಕ್ಯಾಂಟೀನ್‌ಗಳು ದರ ಏರಿಸಿದಲ್ಲಿ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕವೂ ಇದೆ.
ಮೊದಲೇ ಕೋವಿಡ್ ಲಾಕ್‌ಡೌನ್ ಹೊಡೆತಗಳಿಂದ ಕಂಗೆಟ್ಟಿದ್ದ ಉದ್ಯಮ ಮತ್ತೆ ದರ ಏರಿಕೆಯಿಂದಾಗಿ ಕಂಗೆಟ್ಟಿದೆ. ಹೊಟೇಲ್, ಉಪಾಹಾರ ಮಂದಿರ, ಚಾಟ್ಸ್ ಅಂಗಡಿಗಳ ಮಾಲಕರು ತಿಂಡಿ, ಊಟ, ಟೀ, ಕಾಫಿ ಬೆಲೆಗಳ ಏರಿಕೆ ಮಾಡುವ ಬಗ್ಗೆ ಚಿಂತನೆಯಲ್ಲಿದ್ದಾರೆ. ಬಹುತೇಕ ಸಸ್ಯಾಹಾರಿ-ಮಾಂಸಾಹಾರಿ ಹೊಟೇಲ್‌ಗಳಲ್ಲಿ ಈಗಾಗಲೇ ಊಟ, ತಿಂಡಿಗೆ ಬೆಲೆ ಏರಿಕೆ ಮಾಡಿದ್ದಾರೆ. ನಗರದಲ್ಲಿ ಸಣ್ಣ ಕ್ಯಾಂಟೀನ್, ಗೂಡಂಗಡಿಗಳಿಂದ ಹಿಡಿದು 600ರಿಂದ 700ರ ವರೆಗೆ ಸಣ್ಣ, ಮಧ್ಯಮ, ಮೇಲ್‌ಸ್ತರದ ಹೊಟೇಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 1,500ಕ್ಕೂ ಅಧಿಕ ಹೊಟೇಲ್‌ಗಳು ಇವೆ.
ಕೆಲವು ಮೇಲ್‌ಸ್ತರದ ಮತ್ತು ಮಲ್ಟಿಕ್ಯುಸಿನ್ ರೆಸ್ಟೋರೆಂಟ್, ಮಧ್ಯಮ ವರ್ಗದ ಕೆಲವು ಹೊಟೇಲ್ ಗಳು ಇನ್ನೂ ದರ ಏರಿಕೆ ಬಗ್ಗೆ ಗೊಂದಲದಲ್ಲಿದ್ದಾರೆ. ಸಸ್ಯಾಹಾರಿ ಕೆಲವು ಹೊಟೇಲ್‌ಗಳಲ್ಲಿ ಗೋಳಿಬಜೆ, ಬನ್ಸ್, ವಡೆ, ಅಂಬಡೆ, ಚಟ್ಟಂಬಡೆಯಂಥ ಎಣ್ಣೆ ತಿಂಡಿಗಳಿಗೆ 2 ರಿಂದ 5 ರೂ. ವರೆಗೆ ದರ ಏರಿಸಿವೆ. ಚಹಾ, ಕಾಫಿಗೆ 2 ರೂ. ಏರಿಸಿದ್ದಾರೆ. ಸಾಮಾನ್ಯ ಮಾಂಸಾಹಾರಿ ಹೊಟೇಲ್ -ಚಲಿಸುವ ಕ್ಯಾಂಟೀನ್‌ಗಳಲ್ಲಿ ಚಿಕನ್ ಕಬಾಬ್ ಒಂದಕ್ಕೆ 5ರಿಂದ 10 ರೂ. ಏರಿಕೆ ಮಾಡಲಾಗಿದೆ. ಕೆಲವು ಮೀನು ಊಟದ ಹೊಟೇಲ್‌ಗಳು ಮೀನು ಸಹಿತ ಇರುವ ಊಟದ ದರವನ್ನು 10 ರೂ. ಹೆಚ್ಚಿಸಿದ್ದಾರೆ.
ಸಮೋಸ, ಪಪ್ಸ್‌ಗೂ ದರ ಏರಿಕೆ
ಕಡಿಮೆ ಖರ್ಚಿನಲ್ಲಿ ಲಘು ಉಪಹಾರಗಳೆಂದು ಖ್ಯಾತಿ ಪಡೆದಿರುವ ಸಮೋಸ, ಪಪ್ಸ್‌ಗಳಿಗೂ 2ರಿಂದ 5 ರೂ. ವರೆಗೆ ದರ ಏರಿಕೆಯಾಗಿದೆ. ವಾಣಿಜ್ಯ ಗ್ಯಾಸ್ ಬೆಲೆ ಪ್ರತೀ ಸಿಲಿಂಡರ್‌ಗೆ 250 ರೂ. ಏರಿಕೆಯಾಗಿರುವುದು ಹೊಟೇಲ್, ಕ್ಯಾಂಟೀನ್ ಮಾಲಕರಿಗೆ ನುಂಗಲಾರದ ತುತ್ತಾಗಿದೆ. ರಷ್ಯಾ-ಉಕ್ರೇನ್ ಯುದ್ದದ ಬಳಿಕ ಅಡುಗೆ ಎಣ್ಣೆ ದರವು ಹೆಚ್ಚಳವಾಗಿದ್ದು, ಪಾಮಾಯಿಲ್ 100, 120 ರೂ. ಇದ್ದ ದರ 200ರ ಗಡಿಗೆ ತಲುಪಿತ್ತು. ಇದೀಗ ಮತ್ತೆ ದರ ಇಳಿಕೆಯಾಗಿದ್ದು 140 ರೂ.ಗೆ ಬಂದಿದೆ ಎನ್ನುತ್ತಾರೆ ಹೊಟೇಲ್ ಮಾಲಕರು.
ಇನ್ನೆರಡು ದಿನಗಳಲ್ಲಿ ನಿರ್ಧಾರ
ಅಡುಗೆ, ಗ್ಯಾಸ್ ಇತರ ವಸ್ತುಗಳ ದರ ಏರಿಕೆಯಿಂದಾಗಿ ಹೊಟೇಲ್ ಉದ್ಯಮ ನಡೆಸುವುದು ಸವಾಲಿನ ವಿಷಯವಾಗಿದೆ. ಇಷ್ಟು ದಿನ ಅಡುಗೆ ಎಣ್ಣೆ ದರ ಏರಿಕೆಯಾಗಿತ್ತು. ಈಗ ಒಮ್ಮೆಲೆ ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದೇವೆ. ದರ ಏರಿಕೆ ಮಾಡುವುದು ಅನಿವಾರ್ಯವಾಗಿದ್ದು, ಇಲ್ಲದಿದ್ದರೆ ಉದ್ಯಮ ಸಂಕಷ್ಟಕ್ಕೆ ಸಿಲುಕಲಿದೆ. ಗ್ರಾಹಕರಿಗೂ ಹೊರೆಯಾಗಬಾರದು, ಉದ್ಯಮಕ್ಕೂ ನಷ್ಟವಾಗಬಾರದು ಎಂದು ಎಲ್ಲ ಹೊಟೇಲ್ ಮಾಲಕರ ಆಶಯವಾಗಿದೆ. ಈ ಬಗ್ಗೆ ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಬೆಂಗಳೂರಿನಲ್ಲಿ ಇಂದು (ಎ.6) ರಾಜ್ಯ ಹೊಟೇಲ್ ಮಾಲಕರ ಸಂಘದ ಸಭೆ ನಡೆಯಲಿದ್ದು, ದರ ಏರಿಕೆ ಬಗ್ಗೆ ನಿರ್ಧರಿಸಲಾಗುತ್ತದೆ. – ಡಾ| ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಹೊಟೇಲ್ ಮಾಲಕರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.