Fraud Case: ವೈದ್ಯಕೀಯ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ
Team Udayavani, Jan 10, 2025, 11:41 PM IST
ಉಡುಪಿ: ವೈದ್ಯಕೀಯ ವಿದ್ಯಾಭ್ಯಾಸ ನಡೆಸಲು ಸೀಟ್ ದೊರಕಿಸಿಕೊಡುವುದಾಗಿ ನಂಬಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ವಂಚಿಸಿದ ಘಟನೆ ನಡೆದಿದೆ. ಬೆಂಗಳೂರು ಮೂಲದ ಸಂತೋಷ್ ಅವರು ವೈದ್ಯ (ಜನರಲ್ ಮೆಡಿಸಿನ್) ವಿದ್ಯಾಭ್ಯಾಸ ಮುಗಿಸಿಕೊಂಡು ಎಂಪಿಎಚ್ ವಿದ್ಯಾಭ್ಯಾಸವನ್ನು ಯುಕೆಯಲ್ಲಿ ಮಾಡಲು ಉದ್ದೇಶಿಸಿದ್ದರು. ಅದರಂತೆ ಅವರ ಪರಿಚಯದ ಡಾ| ಸುದರ್ಶನ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ದುಬಾೖನಲ್ಲಿರುವ ಆರೋಪಿ ಅಫ್ತಾಬ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದು, ಅದರಂತೆ ಸಂತೋಷ್ ಅವರು ದುಬಾೖಗೆ ತೆರಳಿ ಅಫ್ತಾಬ್ ಅವರನ್ನು ಭೇಟಿ ಮಾಡಿದ್ದರು.
ಅನಂತರ ಯುಕೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲ.ರೂ.ಗೆ ಇಬ್ಬರ ನಡುವೆ ಒಪ್ಪಂದವಾಯಿತು. ಅಫ್ತಾಬ್ ಸಂತೋಷ್ ಅವರಿಗೆ ಕರೆ ಮಾಡಿ ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲ.ರೂ. ನೀಡುವಂತೆ ಕೇಳಿದ್ದರು. ಅದರಂತೆ ಸಂತೋಷ್ ಅವರಲ್ಲಿ ಎನ್‌ಆರ್‌ಎ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮೆ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್. ಅವರನ್ನು ಭೇಟಿ ಆಗುವಂತೆ ತಿಳಿಸಿದ್ದನು. ಡಿ. 26ರಂದು ಸುಮನ್ ಅವರ ಬನ್ನಂಜೆಯ ಬ್ಯಾಂಕ್ ಆಪ್ ಬರೋಡ ಶಾಖೆಯ ಖಾತೆಗೆ ಬೆಂಗಳೂರಿನಲ್ಲಿರುವ ನಂದಿನಿ ಲೇಔಟ್ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಿಂದ ಆರ್‌ಟಿಜಿಎಸ್ ಮುಖಾಂತರ 8.5 ಲ.ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಸಂತೋಷ್ ಅವರ ಕರೆಯನ್ನು ಸ್ವೀಕರಿಸದೇ ಸಂತೋಷ್ ಅವರಿಗೆ ವಂಚನೆ ಎಸಗಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.