ಹೊಸ ತಾಲೂಕುಗಳಿಗೆ ಬೇಕು ಆರ್ಥಿಕ ಇಂಧನ
Team Udayavani, Mar 16, 2017, 11:13 AM IST
ಉಡುಪಿ: ಸುಮಾರು ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಸರಕಾರ ಘೋಷಿಸಿದ ಎರಡು ತಾಲೂಕುಗಳು ಇದೀಗ ಎರಡನೇ ಬಾರಿ, ಒಂದು ತಾಲೂಕು ಮೊದಲ ಬಾರಿ ಕಾಂಗ್ರೆಸ್ ಸರಕಾರದಿಂದ ಘೋಷಣೆಗೊಂಡಿದೆ. ಬ್ರಹ್ಮಾವರ ಮತ್ತು ಬೈಂದೂರು ತಾಲೂಕುಗಳು ಹಿಂದಿನ ಸರಕಾರದ ಕೊನೆಯ ಅವಧಿಯಲ್ಲಿ ಘೋಷಣೆಗೊಂಡು ವಿಶೇಷ ತಹಶೀಲ್ದಾರರ ಭಾಗ್ಯ ಪಡೆದಿದ್ದವು.
ಬೈಂದೂರು, ಬ್ರಹ್ಮಾವರ ತಾಲೂಕಿನ ಬೇಡಿಕೆಗೆ ಹಲವು ವರ್ಷಗಳ ಇತಿಹಾಸವಿದ್ದರೂ ಹಿಂದೆ ಘೋಷಣೆಗೊಂಡರೂ ಏನೂ ಆಗಿರಲಿಲ್ಲ. ಕಾಪು ತಾಲೂಕು ಬೇಡಿಕೆಗೆ ಕೇವಲ ಒಂದು ವರ್ಷವಾಗಿದೆಯಷ್ಟೆ. ಈಗ ಕಾಪುವಿಗೆ ತಾಲೂಕು ಭಾಗ್ಯ ದಕ್ಕಿದೆ. ತಾಲೂಕಿನ ರಚನೆಯಾದರೆ ಜನರಿಗೆ ದೂರದೂರಿಗೆ ಹೋಗಬೇಕೆಂದಿರುವುದಿಲ್ಲ. ಜನರ ಸಮಸ್ಯೆಗಳನ್ನು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಪರಿಹರಿಸಿದಂತಾಗುತ್ತದೆ. ಘೋಷಣೆಯಾದಷ್ಟು ಶೀಘ್ರ ವ್ಯವಸ್ಥೆ ಪುನಾರಚನೆಯಾಗುವುದಿಲ್ಲ ಎನ್ನುವುದು ಅನುಭವಸಿದ್ಧವಾಗಿದೆ.
ಬ್ರಹ್ಮಾವರ ತಾಲೂಕಿನ ಬೇಡಿಕೆ 14 ವರ್ಷಗಳಿಂದ ಇದೆ. ಬ್ರಹ್ಮಾವರ ಪ್ರಸ್ತುತ ಉಡುಪಿ ತಾಲೂಕಿನ ಭಾಗವಾಗಿ ಉಡುಪಿಯಿಂದ 13 ಕಿ.ಮೀ. ಉತ್ತರ ದಿಕ್ಕಿನಲ್ಲಿದೆ. ಇದು ಮುಂದೆ ಕೋಟ ಮತ್ತು ಬ್ರಹ್ಮಾವರ ಹೋಬಳಿಗಳ ಗ್ರಾಮಗಳನ್ನು ಸೇರಿಸಿಕೊಂಡು ತಾಲೂಕು ಆಗಬೇಕಾಗಿದೆ. ಈಗಲೇ ಬ್ರಹ್ಮಾವರದಲ್ಲಿ ಉಪನೋಂದಣಾಧಿಕಾರಿ ಕಚೇರಿ ಹೊಂದಿದಂತಹ ಅರ್ಹತೆ ಇದೆ. ಶೈಕ್ಷಣಿಕ ತಾಲೂಕು ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಆದರೆ ಬ್ರಹ್ಮಾವರ ಹೋಬಳಿಯಲ್ಲಿ ಕಲ್ಯಾಣಪುರ ಸಮೀಪದ ಮತ್ತು ಪೆರ್ಡೂರು ಸುತ್ತಮುತ್ತಲ ಗ್ರಾಮಗಳಿವೆ. ಕಲ್ಯಾಣಪುರದ ಗ್ರಾಮಗಳ ಗ್ರಾಮಸ್ಥರು ಹಿಂದೆಯೇ ಉಡುಪಿ ತಾಲೂಕಿನ ಜತೆ ಸೇರಬೇಕೆಂದು ಆಗ್ರಹಿಸಿದ್ದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾರಕೂರು ಸತೀಶ ಪೂಜಾರಿ ಅವರ ಪ್ರಕಾರ ತಾಲೂಕು ರಚನೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗುವುದಲ್ಲದೆ ಅಭಿವೃದ್ಧಿಗೆ ಪೂರಕವಾಗಲಿದೆ. ಸುಮಾರು 35 ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಬ್ರಹ್ಮಾವರ ತಾಲೂಕಿನ ಬಹುಗ್ರಾಮಗಳು ಬರುತ್ತವೆ. ತಮ್ಮದೇ ಕ್ಷೇತ್ರದಲ್ಲಿ ಹೊಸ ತಾಲೂಕು ರಚನೆಯಾಗಿರುವುದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬೈಂದೂರು ತಾಲೂಕಿನ ಬೇಡಿಕೆ 32 ವರ್ಷಗಳಷ್ಟು ಹಳೆಯದು. 1997ರಲ್ಲಿ ಉಡುಪಿ ಜಿಲ್ಲೆ ಘೋಷಣೆಯಾಗುವ ಸಂದರ್ಭ ಬೈಂದೂರು ಮತ್ತು ವಂಡ್ಸೆ ಹೋಬಳಿಯ ಒಟ್ಟು 56 ಗ್ರಾಮ ಗಳನ್ನು ಒಳಗೊಂಡ ಬೈಂದೂರು ತಾಲೂಕು ರಚಿಸಲು ಸಲಹೆ ನೀಡಿತ್ತು. ಬೈಂದೂರಿನಲ್ಲಿ ಬಹುತೇಕ ಎಲ್ಲ ಸರಕಾರಿ ಕಚೇರಿಗಳಿವೆ. “ಬೈಂದೂರು ತಾಲೂಕು ರಚನೆ ಮಾಡುವುದರಿಂದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದಾಗಿದೆ’ ಎನ್ನುತ್ತಾರೆ ತಾಲೂಕು ರಚನಾ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿಯವರು.
ಕಾಪು ತಾಲೂಕಿನ ಬೇಡಿಕೆಗೆ ಧ್ವನಿ ಕೇಳಿದ್ದು ಇತ್ತೀಚಿಗೆ. ಹಿಂದೆ ಶಾಸಕರಾಗಿ, ಸಚಿವರಾಗಿದ್ದ ವಸಂತ ಸಾಲ್ಯಾನ್ ಅವರು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಯಲ್ಲಿಯೇ ತಾಲೂಕು ಘೋಷಣೆಗೆ ಪ್ರಯತ್ನಿಸಿದ್ದರು. ಆದರೆ ಇದು ಕೈಗೂಡಲಿಲ್ಲ. ತಾಲೂಕು ಘೋಷಣೆ ಮಾಡಿರುವುದಕ್ಕೆ ಶಾಸಕ ವಿನಯಕುಮಾರ ಸೊರಕೆಮುಖ್ಯಮಂತ್ರಿಯವರನ್ನು ಅಭಿನಂದಿಸಿದ್ದಾರೆ.
ಹಲವೆಡೆ ಸಂಭ್ರಮ, ಕೆಲವೆಡೆ ವಿಷಾದ!
ಹೊಸ ತಾಲೂಕು ಘೋಷಣೆಯಾದ ಸ್ಥಳಗಳಲ್ಲಿ ಸಂಭ್ರಮಾಚರಣೆ ಕಂಡುಬಂದರೆ, ಹೊಸ ತಾಲೂಕು ಬೇಡಿಕೆ ಇರುವ ಶಂಕರನಾರಾಯಣ ಮತ್ತು ಹೆಬ್ರಿ ಕೇಂದ್ರಗಳಲ್ಲಿ ವಿಷಾದದ ಛಾಯೆ ಇತ್ತು. ಹೆಬ್ರಿಯಲ್ಲಿ ಕಾಂಗ್ರೆಸ್ ನಾಯಕರಾದ ನೀರೆ ಕೃಷ್ಣ ಶೆಟ್ಟಿ ಬ್ಲಾಕ್ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರೆ, ಸದಸ್ಯತ್ವ, ಹುದ್ದೆಗೆ ನವೀನ್ ಅಡ್ಯಂತಾಯ ರಾಜೀನಾಮೆ ನೀಡಿದ್ದಾರೆ.
ಸರಕಾರವು ಶಂಕರನಾರಾಯಣದಲ್ಲಿ ನಾಡ ಕಚೇರಿಯನ್ನು ತೆರೆದು ಹೋಬಳಿ ಕೇಂದ್ರ ಮಾಡುವುದಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ತಿಳಿಸಿರುತ್ತಾರೆ. ಹೋಬಳಿ ಕೇಂದ್ರ ಮಾಡಲು ಬಜೆಟ್‌ನಲ್ಲಿ ಘೋಷಿಸಬೇಕಾಗಿಲ್ಲ. ಯಾವುದೇ ಸಂದರ್ಭ ಘೋಷಣೆ ಮಾಡಬಹುದು. ಅಲ್ಲಿಯ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎನ್ನುತ್ತಾರೆ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆಯವರು.
one by three ಅವೈಜ್ಞಾನಿಕವೆ?
ಒಂದು ತಾಲೂಕು ಮೂರು ತಾಲೂಕಾಗಿ ವಿಭಜನೆಗೊಳ್ಳುವುದು ಉಡುಪಿ ತಾಲೂಕಿನ ವೈಶಿಷ್ಟéವಾಗಿದೆ. ಅತ್ತ ಕಾಪು, ಇತ್ತ ಬ್ರಹ್ಮಾವರ ತಾಲೂಕು ರಚನೆಗೊಂಡರೆ ಮಧ್ಯದ ಉಡುಪಿ ತಾಲೂಕು ಎಷ್ಟು ದೊಡ್ಡದಿರಬಹುದು? ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿರುವ ಪೆರ್ಡೂರು, ಹಿರಿಯಡಕ ಸುತ್ತಮುತ್ತಲ ಗ್ರಾಮಗಳು ಕಾಪು ತಾಲೂಕಿಗೆ ಸೇರಿದರೆ ಆ ಜನರ ಸ್ಥಿತಿ ಏನಾಗಬಹುದು? ಹೀಗೆ ಘೋಷಣೆ ಮಾಡುವ ಮುನ್ನ ಶಂಕರನಾರಾಯಣ ಮತ್ತು ಹೆಬ್ರಿ ಸುತ್ತಮುತ್ತಲ ಗ್ರಾಮದವರು ಎಷ್ಟು ದೂರ ತಾಲೂಕು ಕೇಂದ್ರಗಳಿಗೆ ಹೋಗುತ್ತಿದ್ದಾರೆ? ಹೋಗಬೇಕು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದೆಲ್ಲಾ ಇತ್ಯರ್ಥಗೊಳ್ಳುವವರೆಗೆ ನಿತ್ಯ ಬೆಳಗ್ಗೆ ಹೋರಾಟಗಾರರಿಗೆ ಕೈತುಂಬ ಕೆಲಸಗಳು ಸಿಗುತ್ತವೆ.
ಅದು ಆ್ಯತ್ಲೆಟಿಕ್ ಅಕಾಡೆಮಿ, ಇದು ಸ್ವಿಮ್ಮಿಂಗ್ ಅಕಾಡೆಮಿ
ಆ್ಯತ್ಲೆಟಿಕ್ ಅಕಾಡೆಮಿ ಹೋದ ಬಜೆಟ್‌ನಲ್ಲಿ ಘೋಷಣೆಯಾಗಿ ಈಗ ಪ್ರಸ್ತಾವನೆ ಹಂತದಲ್ಲಿದೆ. ಈಗ ಮುಖ್ಯಮಂತ್ರಿಗಳು ಸ್ವಿಮ್ಮಿಂಗ್ ಅಕಾಡೆಮಿ ಘೋಷಿಸಿದ್ದಾರೆ. ಈಗಿನ 25 ಮೀ. ಈಜುಕೊಳದ ಜತೆ 50 ಮೀ. ಉದ್ದದ ಈಜುಕೊಳ ಸ್ಥಾಪನೆಯಾಗಲಿದೆ. ಇದು ಈಜುಗಾರರ ತರಬೇತಿಗೆ ಹೆಚ್ಚಿನ ಅನುಕೂಲವಾಗಲಿದೆ.
ಯೋಜನೆಗಳು ಜನರಿಗೆ ದಕ್ಕಿದರೆ ಪುಣ್ಯ!
ಮಲ್ಪೆಯಲ್ಲಿ ಮೀನುಗಾರಿಕಾ ದೋಣಿಗಳು ಸುರಕ್ಷಿತವಾಗಿ ಇಳಿಯಲು ಅನುಕೂಲವಾಗುವಂತೆ 75 ಮೀ. ಜೆಟ್ಟಿ ವಿಸ್ತರಣೆಗೆ 5 ಕೋ.ರೂ. ತೆಗೆದಿರಿಸಲಾಗಿದೆ. ಮಂಜುಗಡ್ಡೆ ಸ್ಥಾವರ ಮತ್ತು ಶೈತ್ಯಾಗಾರಗಳಿಗೆ ವಿದ್ಯುತ್ ಯೂನಿಟ್ ಮೇಲಿನ ಸಬ್ಸಿಡಿಯನ್ನು 1.75 ರೂ., ಗರಿಷ್ಠ ವರ್ಷಕ್ಕೆ 3.5 ಲ.ರೂ. ಸಹಾಯಧನ ಪಡೆಯಲು ಅವಕಾಶ ಕೊಟ್ಟಿರುವುದು ಮಂಜುಗಡ್ಡೆ ಸ್ಥಾವರ, ಶೈತ್ಯಾಗಾರದವರಿಗೆ ಸಹಾಯವಾಗಲಿದೆ. ಮತ್ಸಾಶ್ರಯ ಯೋಜನೆಯಡಿ 3,000 ಫಲಾನುಭವಿಗಳಿಗೆ ಅವಕಾಶವಿದ್ದು ಉಡುಪಿ, ಕುಂದಾಪುರ ತಾಲೂಕಿನವರಿಗೆ ಸಾಕಷ್ಟು ಅನುಕೂಲವಾಗಲಿದೆ. ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟು, ಉಪ್ಪುನೀರಿನ ಅಣೆಕಟ್ಟು ನಿರ್ಮಾಣಕ್ಕೆ 100 ಕೋ.ರೂ. ತೆಗೆದಿರಿಸಿದ್ದಾರೆ. ಈ ವಿಷಯ ಮಂಡನೆಗಳೆಲ್ಲವೂ ಅಧಿಕಾರಿಗಳು, ಎಂಜಿನಿಯರುಗಳು, ಜನಪ್ರತಿನಿಧಿಗಳ ಮರ್ಜಿ ನಡುವೆ ಜನರಿಗೆ ದಕ್ಕಿದರೆ ಪುಣ್ಯ.
- ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.