ಗಂಗೊಳ್ಳಿ : ಯಕ್ಷ ಒಡ್ಡೋಲಗದಲ್ಲಿ ಬಣ್ಣ ಹಚ್ಚಲಿರುವ ಬಾಲಕಿಯರು
Team Udayavani, Dec 9, 2019, 5:15 AM IST
ಕುಂದಾಪುರ: ನೂರಕ್ಕೆ ನೂರು ಅಂಕಗಳನ್ನು ಪಡೆದು ವರ್ಷ ವರ್ಷ ಶಿಕ್ಷಣ ಸಂಸ್ಥೆಗಳಿಂದ ಹೊರಬೀಳುವ ಬುದ್ಧಿವಂತರ ಸಂಖ್ಯೆ ಅನೇಕವಿರಬಹುದು. ಆದರೆ ವಿದ್ಯಾರ್ಥಿಗಳು ಬುದ್ಧಿವಂತರಾದರೆ ಸಾಲದು, ಹೃದಯವಂತರೂ ಆಗಬೇಕೆಂಬ ಹಿನ್ನೆಲೆಯಲ್ಲಿಯೇ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜು ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸದಾ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ. ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸುತ್ತಿರುವ ಕಾಲೇಜಿನ ಸುವರ್ಣ ಹಾಗೂ ಪ್ರೌಢಶಾಲೆಯ ಅಮೃತ ಮಹೋತ್ಸವದ ಸಂಭ್ರಮದ ವಾರ್ಷಿಕೋತ್ಸವ ಪ್ರಯುಕ್ತ ಡಿ.13 ಶುಕ್ರವಾರ ಕಾಲೇಜಿನ ಉಪನ್ಯಾಸಕ, ಯಕ್ಷಗಾನ ಕಲಾವಿದ ಎಚ್. ಸುಜಯೀಂದ್ರ ಹಂದೆಯವರಿಂದ ನಿರ್ದೇಶಿತ ಬಾಲಕಿಯರ ಯಕ್ಷಗಾನ “ಸುರಪಾರಿಜಾತ’ ಪ್ರದರ್ಶನಗೊಳ್ಳಲಿದೆ.
ಅಧ್ಯಾಪಕ ಸದಾನಂದ ವೈದ್ಯ, ಉಪನ್ಯಾಸಕ ಎಚ್. ಭಾಸ್ಕರ ಶೆಟ್ಟಿ ಮೊದಲಾದವರ ಮುಂದಾಳ್ತನದಲ್ಲಿ ಕಾಲೇಜಿನ ಯಕ್ಷಗಾನ ಸಂಘವು ಉದಯಗೊಂಡಿದ್ದು ಸೇರಿ ಪ್ರದರ್ಶನ ನೀಡುತ್ತಿದ್ದರು. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಅರಿವಿನೊಂದಿಗೆ ಕಲಾ ಪ್ರೀತಿಯನ್ನು ಬೆಳೆಸಿಕೊಂಡರು.
ಹೆಜ್ಜೆ ಹಾಕಿದರು
ಮೊದಮೊದಲು ಅಳುಕುತ್ತಾ, ಮುಜುಗರದಿಂದ ದೂರವೇ ಉಳಿಯುತ್ತಿದ್ದ ಕಾಲೇಜಿನ ವಿದ್ಯಾರ್ಥಿ ನಿಯರು ಮತ್ತೆ ಯಕ್ಷಗಾನ ಕಲಾವಿದ ಹಂದೆಯವರ ಪ್ರೇರಣೆಯಿಂದ ಉತ್ಸುಕರಾಗಿ, ವೇಷಕಟ್ಟಿದ್ದು ಗಂಗೊಳ್ಳಿಯಲ್ಲಿ ಮೈಲಿಗಲ್ಲು. ವರ್ಷ ಉರುಳುತ್ತ ಸಾಗಿದಂತೆ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಾ, ಈ ಬಾರಿ ಅಚ್ಚರಿ ಎಂಬಂತೆ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಭಾಗವಹಿಸದೇ, ಕೇವಲ ವಿದ್ಯಾರ್ಥಿನಿಯರು ಮಾತ್ರ ಭಾಗವಹಿಸುತ್ತಿರುವುದು ವಿಶೇಷ. ಕಾಲೇಜು ಮತ್ತು ಪ್ರೌಢಶಾಲೆಯ ಹದಿನೇಳು ಮಂದಿ ಬಾಲಕಿಯರು ಒಂದು ತಿಂಗಳ ಅವಧಿಯಲ್ಲಿ ಹೆಜ್ಜೆಕಲಿತು, ಗೆಜ್ಜೆ ಕಟ್ಟಿ ಕೇದಗೆಮುಂದಲೆ, ಮುಂಡಾಸು, ಕಿರೀಟ, ಬಣ್ಣದಕೇಸರಿತಟ್ಟಿ ಧರಿಸಿ, ಪ್ರವೇಶಕುಣಿತ, ಯುದ್ಧಕುಣಿತ, ಪ್ರಯಾಣ ಕುಣಿತ, ಮಂಡಿ ಕುಣಿತ, ವನವರ್ಣನೆಯ ಶೃಂಗಾರ ಕುಣಿತದೊಂದಿಗೆ ಯಕ್ಷ ವೈಭವದ ಒಡ್ಡೋಲಗ ನೀಡಲು ಹೊರಟಿದ್ದಾರೆ. ಪ್ರತೀ ವರ್ಷ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡುತ್ತಿರುವುದು ಸಂತೋಷದ ಸಂಗತಿ. ಶಿಕ್ಷಣದೊಂದಿಗೆ ಕಲೆ ಸಂಸ್ಕೃತಿಯ ಪಾಠವನ್ನು ನಮ್ಮ ಸಂಸ್ಥೆ ಮೊದಲಿಂದಲೂ ನೀಡುತ್ತಾ ಬಂದಿದೆ ಎನ್ನುತ್ತಾರೆ ಗಂಗೊಳ್ಳಿಯ ಜಿ.ಎಸ್. ವಿ. ಎಸ್. ಅಸೋಸಿಯೇಶನ್‌ನ ಕಾರ್ಯದರ್ಶಿ ಗಣೇಶ ಕಾಮತ್.
ಹಿಮ್ಮೇಳ
ನಿರ್ದೇಶಕ ಸುಜಯೀಂದ್ರ ಹಂದೆ ಅವರ ಭಾಗವತಿಕೆಯಲ್ಲಿ ಕುಂಕುಮ್, ಕವಿತಾ, ನಿಶಾ, ಶ್ರೀಲತಾ, ಹರ್ಷಿತಾ, ಶ್ರೀರûಾ, ಸುಖೀತಾ ದೇವೇಂದ್ರನ ಅಮರಾವತಿಯಲ್ಲಿ ಮೆರೆದಾಡಿದರೆ, ಪ್ರಾಗೊjéàತಿ ಷಪುರದ ದೈತ್ಯರಾಗಿ ವೈಷ್ಣವಿ, ರಶ್ಮಿತಾ, ಶೈಲಾ, ದೀಕ್ಷಿತಾ, ಕೀರ್ತಿ, ಮೊನಿಷಾ, ಗೌತಮಿ ದೇವಲೋಕದ ಮೇಲೆ ದಾಳಿ ಮಾಡಲಿದ್ದಾರೆ. ಸುಮನಸರಿಗೆ ಅಭಯವಿತ್ತ ಕೃಷ್ಣ ಸತ್ಯಭಾಮೆಯರಾಗಿ ಶ್ರೀನಿಧಿ, ಭುವನಾ ಕಾರಂತ್, ಬಣ್ಣದ ವೇಷಧಾರಿ ಪ್ರಣವಿಯ ಮುರಾಸುರನನ್ನು, ನರಕಾಸುರನನ್ನು ಕೊಂದು ಮೋಕ್ಷ ಕರುಣಿಸಲಿದ್ದಾರೆ. ಸುರಪಾರಿಜಾತವನ್ನು ಆಶಿಸಿ ಅಪಹರಿಸಲೆತ್ನಿಸಿದ ಸತ್ಯಭಾಮೆಯನ್ನು ಆಕ್ಷೇಪಿಸಿ, ಪರಿಭವಕ್ಕೊಳ ಗಾದ ದೇವೇಂದ್ರನನ್ನು ಕೃಷ್ಣನು ಸಮಾಧಾನಿಸಿ, ಭೂಲೋಕದಲ್ಲಿ ಪಾರಿಜಾತವನ್ನು ಪರಿಚಯಿಸುವ ಕಥಾವಸ್ತು.
ಆಕರ್ಷಕ
ಆಡಳಿತ ಮಂಡಳಿಯ ವಿಶೇಷ ಆಸಕ್ತಿಯಿಂದಾಗಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ನಡೆಯುವ ಯಕ್ಷಗಾನವು ಉಳಿದ ಕಲೆಗಳಿಗಿಂತ ಹೆಚ್ಚು ಆಕರ್ಷಕ ಮತ್ತು ಮೌಲಿಕವಾದ ಪೌರಾಣಿಕ ಸಂದೇಶಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ಪೂರ್ಣವಾಗಿ ಬಾಲಕಿಯರೇ ಭಾಗವಹಿಸುತ್ತಿರುವುದು ಸಂತೋಷತಂದಿದೆ.
-ಕವಿತಾ ಎಂ. ಸಿ.,ಪ್ರಾಂಶುಪಾಲರು
ಖುಷಿಕೊಟ್ಟಿದೆ
ಈ ಸಂಸ್ಥೆಯ ವಿದ್ಯಾರ್ಥಿನಿಯಾಗಿ ಕಳೆದ ಎರಡು ವರ್ಷಗಳಿಂದ ವಾರ್ಷಿಕೋತ್ಸವದಲ್ಲಿ ಪಾತ್ರವಹಿಸಿದ ಹೆಮ್ಮೆ ನನ್ನದು. ಭಾರವಾದ ವೇಷಭೂಷಣ ಧರಿಸಿ ಕುಣಿಯುವುದು ತುಸು ಶ್ರಮವೆನಿಸಿದರೂ, ರಂಗದಲ್ಲಿ ಖುಷಿಕೊಟ್ಟಿದೆ.
-ಕುಂಕುಮ್,
ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ
ಯಕ್ಷಗಾನದ ರುಚಿ ಹುಟ್ಟಿಸುವುದು
ಕೇವಲ ಒಂದು ತಿಂಗಳ ಪಾಠದ ನಡುವಿನ ಕೆಲವೇ ಬಿಡುವಿನ ಘಂಟೆಗಳಲ್ಲಿ ಯಕ್ಷಗಾನವನ್ನು ಕಲಿಸಿಕೊಡುವುದು ಕಷ್ಟ. ವಿದ್ಯಾರ್ಥಿಗಳು ಆಯಾಯ ಪಾತ್ರಕ್ಕೆ ಬೇಕಾಗುವಷ್ಟು ಮಾತ್ರ ಕಲಿತು ಪಾತ್ರನಿರ್ವಹಿಸಬಲ್ಲರು. ಪೂರ್ಣ ಕಲಿಕೆಗಿಂತ ಮೊದಲು ಅವರಲ್ಲಿ ಯಕ್ಷಗಾನದ ರುಚಿಹುಟ್ಟಿಸುವುದು ನಮ್ಮ ಆಶಯ.
-ಸುಜಯೀಂದ್ರ ಹಂದೆ ಎಚ್.,
ಉಪನ್ಯಾಸಕ, ಯಕ್ಷಗುರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.