ಗಂಗೊಳ್ಳಿ ಮೀನು ಮಾರುಕಟ್ಟೆ ರಸ್ತೆ ದುರಸ್ತಿಗೆ ಆಗ್ರಹ
ಡಾಮರೆಲ್ಲ ಎದ್ದು ಹೋಗಿ ಹೊಂಡಮಯ
Team Udayavani, Mar 16, 2020, 5:10 AM IST
ಗಂಗೊಳ್ಳಿ: ಇಲ್ಲಿನ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಸಂಪರ್ಕಿಸುವ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಇದರಿಂದ ಮೀನು ಸಾಗಾಟದ ವಾಹನ, ಖರೀದಿಗೆ ಬರುವ ಗ್ರಾಹಕರಿಗೂ ಸಮಸ್ಯೆಯಾಗುತ್ತಿದೆ. ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎನ್ನುವ ಬೇಡಿಕೆ ಕೇಳಿ ಬಂದಿದೆ.
ಈ ಮೀನು ಮಾರುಕಟ್ಟೆಯು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಲ್ಲಿದ್ದು, ಮುಖ್ಯ ರಸ್ತೆಯಿಂದ ಒಳಗಿನ ರಸ್ತೆಯಲ್ಲಿದೆ. ಒಂದು ಕಡೆಯಿಂದ ಕಾಂಕ್ರೀಟಿಕರಣವಾಗಿದ್ದರೂ, ಈ ರಸ್ತೆಯ ಸುಮಾರು 250 ರಿಂದ 300 ಮೀ.ವರೆಗಿನ ರಸ್ತೆಯು ಕಳೆದ 4-5 ವರ್ಷಗಳಿಂದ ಡಾಮರೆಲ್ಲ ಕಿತ್ತು ಹೋಗಿ, ಹೊಂಡಮಯ ರಸ್ತೆಯಾಗಿದೆ.
ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ, 3 ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಈ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಗೊಂಡಿತ್ತು. ಈ ಮೀನು ಮಾರುಕಟ್ಟೆಯಲ್ಲಿ ಒಟ್ಟು 40 ಕ್ಕೂ ಹೆಚ್ಚು ಮಂದಿ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸದ್ಯ 25-30 ಮಂದಿ ಮಹಿಳೆಯರು ಪ್ರತಿ ದಿನ ಮೀನು ಮಾರಾಟ ಮಾಡುತ್ತಾರೆ.
ಈ ರಸ್ತೆಯಲ್ಲಿ ನಿತ್ಯ ನೂರಾರು ಮಂದಿ ಮೀನು ಖರೀದಿಗೆಂದು ಬರುತ್ತಾರೆ. ಬೇರೆ ಬೇರೆ ಕಡೆಗಳಿಂದ ಮೀನು ಸಾಗಾಟದ ವಾಹನಗಳು ಇಲ್ಲಿಗೆ ಬರುತ್ತದೆ. ಆದರೆ ಹದಗೆಟ್ಟ ಈ ರಸ್ತೆಯಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಇದಲ್ಲದೆ ಈ ರಸ್ತೆಯು ಕಿರಿದಾಗಿದ್ದು, ದೊಡ್ಡ ವಾಹನಗಳು ಕೂಡ ಈ ಮಾರ್ಗದಲ್ಲಿ ಸಂಚರಿಸುವುದರಿಂದ ಅಗಲೀಕರಣ ಮಾಡಬೇಕು. ಈ ಮಳೆಗಾಲಕ್ಕೂ ಮುಂಚೆಯಾದರೂ ಈ ರಸ್ತೆಗೆ ಕಾಂಕ್ರೀಟಿಕರಣ ಹಾಗೂ ಅಗಲೀಕರಣ ಕಾಮಗಾರಿ ಆಗಲಿ ಎನ್ನುವುದಾಗಿ ಮೀನು ವ್ಯಾಪಾರಸ್ಥರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಇದಲ್ಲದೆ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಇಲ್ಲಿಗೆ ಬರುವ ವಾಹನಗಳನ್ನು ನಿಲ್ಲಿಸಲು ಕೂಡ ಜಾಗದ ಸಮಸ್ಯೆಯಿದ್ದು, ವಾಹನ ಪಾರ್ಕಿಂಗ್ ಮಾಡಲು ಕೂಡ ಪ್ರತ್ಯೇಕ ಜಾಗದ ವ್ಯವಸ್ಥೆಯನ್ನು ಸಂಬಂಧಪಟ್ಟವರು ಕಲ್ಪಿಸಿಕೊಡಬೇಕಿದೆ.
ಶಾಸಕರಿಗೆ ಮನವಿ
ಈ ರಸ್ತೆಯ ಸುಮಾರು 250 ಮೀ. ಉದ್ದದವರೆಗೂ ಕಾಂಕ್ರೀಟಿಕರಣಕ್ಕೆ ಅಂದಾಜು 25 ಲಕ್ಷ ರೂ. ಅನುದಾನ ಬೇಕಾಗಿದೆ. ಪಂಚಾಯತ್‌ನಲ್ಲಿ ಅಷ್ಟೊಂದು ಅನುದಾನ ಇಲ್ಲದಿರುವುದರಿಂದ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರಿಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯ ಅನೇಕ ಈ ರಸ್ತೆಗಳಿಗೆ ಅನುದಾನ ನೀಡಿದ್ದು, ಈ ರಸ್ತೆಗೂ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅನುದಾನ ಕೊಡಬಹುದು.
-ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.