“ನೀತಿಸಂಹಿತೆಯಿಂದಾಗಿ ಅನುದಾನ ಬಿಡುಗಡೆ ಸಾಧ್ಯವಿಲ್ಲ ‘
ಮೀನುಗಾರರ ಮನವಿಗಿಲ್ಲ ಸ್ಪಂದನೆ, ಕುಸಿದು ಅರ್ಧ ವರ್ಷ ಕಳೆದರೂ ದುರಸ್ತಿಯಾಗಿಲ್ಲ ಜೆಟ್ಟಿ
Team Udayavani, May 4, 2019, 6:00 AM IST
ಬಂದರಿನ ಎರಡನೇ ಹರಾಜು ಪ್ರಾಂಗಣದ ಸ್ಲ್ಯಾಬ್ ಕುಸಿದಿರುವುದು.
ವಿಶೇಷ ವರದಿ-ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿದು ಅರ್ಧ ವರ್ಷವಾಗುತ್ತ ಬಂದರೂ ದುರಸ್ತಿಗೆ ಮಾತ್ರ ಇನ್ನೂ ಮುಂದಾಗಿಲ್ಲ. ಇದಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು ಎನ್ನುವುದಾಗಿ ಈಗ ಮೀನುಗಾರರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಅ. 13ರಂದು ಗಂಗೊಳ್ಳಿ ಬಂದರಿನ ಎರಡನೇ ಹರಾಜು ಪ್ರಾಂಗಣದ ಸ್ಲ್ಯಾಬ್ ಕುಸಿದಿತ್ತು. ಬಳಿಕ ಡಿ. 7ರಂದು ಮತ್ತೂಂದು ಕಡೆ ಸ್ಲ್ಯಾಬ್ ಕುಸಿದಿದೆ. ಆದರೆ ದುರಸ್ತಿಗೆ ಸಂಬಂಧಿಸಿದಂತೆ ಕಾರಣ ನೀಡುತ್ತಿದ್ದು, ಕೆಲಸ ಮುಂದೂಡುತ್ತಲೇ ಬಂದಿದ್ದಾರೆ.
ಸಚಿವರಿಗೆ ಮನವಿ
ರಾಜ್ಯ ಮೀನುಗಾರಿಕಾ ಸಚಿವ ವೆಂಕಟ ರಾವ್ ನಾಡಗೌಡರು ಕಳೆದ ನವೆಂಬರ್‌ನಲ್ಲಿ ಲೋಕಸಭಾ ಉಪ ಚುನಾವಣೆ ವೇಳೆ ಹಾಗೂ ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರದ ನಿಮಿತ್ತ ಗಂಗೊಳ್ಳಿಗೆ ಭೇಟಿ ನೀಡಿದ್ದಾಗ ಮೀನುಗಾರರ ನಿಯೋಗ ಈ ಕುರಿತಂತೆ ಎರಡೆರಡು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಆಗ ಚುನಾವಣೆ ಮುಗಿದ ಬಳಿಕ ದುರಸ್ತಿ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದರೂ ಈ ವರೆಗೆ ಯಾರೂ ಇತ್ತ ಗಮನ ಹರಿಸಿಲ್ಲ.
ಮೀನುಗಾರರಿಗೆ ಸಮಸ್ಯೆ
ಸ್ಲ್ಯಾಬ್ ಕುಸಿತದ ಸಮಸ್ಯೆಯಿಂದ ಬಂದರಿನಲ್ಲಿ ಮೀನುಗಾರಿಕೆ ಮುಗಿಸಿ ವಾಪಾಸು ಬರುವ ಬೋಟು, ದೋಣಿಗಳಿಂದ ಮೀನುಗಳನ್ನು ಇಳಿಸಲು ಜಾಗದ ಅಭಾವವಾಗುತ್ತಿದೆ. ನೂರಾರು ಮಂದಿ ನಾಡದೋಣಿ, ಬೋಟುಗಳ ಮೀನುಗಾರರು ಇರುವುದರಿಂದ ಸಮಸ್ಯೆಯಾಗುತ್ತಿದೆ. ಅದರೊಂದಿಗೆ ಇಲ್ಲಿ ಚಟುವಟಿಕೆ ನಡೆಸಿದರೆ ಮತ್ತಷ್ಟು ಕುಸಿಯುವ ಸಂಭವವೂ ಇದೆ. ಇಲ್ಲಿನ ಎರಡನೇ ಹರಾಜು ಪ್ರಾಂಗಣಕ್ಕೂ ಧಕ್ಕೆಯಾಗುವ ಭೀತಿ ಎದುರಾಗಿದೆ.
ಯಾವಾಗ ದುರಸ್ತಿ?
ಮೇ 23ರ ವರೆಗೆ ಮಾದರಿ ನೀತಿ ಸಂಹಿತೆ ಇರುವುದರಿಂದ ಅಲ್ಲಿಯವರೆಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಅಂದರೆ ಆ ಬಳಿಕ ಕೆಲ ದಿನಗಳಲ್ಲೇ ಮಳೆಗಾಲ ಆರಂಭವಾಗಲಿದೆ. ಆಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಕಳೆದ ಅಕ್ಟೋಬರ್‌ನಲ್ಲಿ ಕುಸಿದ ಜೆಟ್ಟಿಯ ದುರಸ್ತಿ ಈ ಮಳೆಗಾಲ ಮುಗಿಯುವುದರೊಳಗೆ ಆರಂಭವಾಗುವುದು ಅನುಮಾನ ಎನ್ನುವ ಸಂಶಯವಿದ್ದು, ದುರಸ್ತಿ ಮಾಡಲು ಇನ್ನು ಎಷ್ಟು ಸಮಯ ಬೇಕು ಎನ್ನುವ ಪ್ರಶ್ನೆ ಮೀನುಗಾರರದ್ದು.
ನೀತಿ ಸಂಹಿತೆ ಸಂಕಷ್ಟ
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದರೂ, ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ. ಗಂಗೊಳ್ಳಿಯ ಮೀನುಗಾರರು ಕೊಟ್ಟ ಮನವಿ ಬಗ್ಗೆ ಗಮನದಲ್ಲಿದೆ. ಆದರೆ ಈಗ ಸಭೆ ಕರೆದು ನಿರ್ಧಾರ ಕೈಗೊಳ್ಳಲು ಕೂಡ ಕಷ್ಟವಾಗುತ್ತಿದ್ದು, ಇದರಿಂದ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ನೀತಿ ಸಂಹಿತೆ ಅವಧಿ ಮುಗಿದ ತತ್‌ಕ್ಷಣ ಗಮನಹರಿಸಲಾಗುವುದು.
–ವೆಂಕಟರಾವ್ ನಾಡಗೌಡ,
ಮೀನುಗಾರಿಕಾ ಸಚಿವರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.