ಶಾಲೆಗೆ ಹೋದರೆ ಸಾಕು; ಸಾವಿರ ರೂ. ಕೊಡ್ತಾರೆ!
Team Udayavani, Jun 12, 2018, 3:18 PM IST
ಸಿದ್ದಾಪುರ: ಶಾಲೆಗೆ ಲಕ್ಷಗಟ್ಟಲೆ ಡೊನೇಷನ್ ಕೊಟ್ಟು ಮಕ್ಕಳನ್ನು ಸೇರಿಸುವುದಿದೆ. ಆದರೆ ಈ ಶಾಲೆಯಲ್ಲಿ ಮಕ್ಕಳನ್ನು ಸೇರಿಸಿದರೆ ಒಂದು ಸಾವಿರ ರೂ. ಕೊಡುತ್ತಾರೆ!
ಹಲವು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿದ್ದರೂ ಮಕ್ಕಳನ್ನು ಸೇರಿಸುವ ಪೋಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹಾಗಾಗಿ ಕೊಂಜಾಡಿ ಗ್ರಾಮದ ಕಲ್ಮರ್ಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂಥ ವಿನೂತನ ಪ್ರಯತ್ನದಲ್ಲಿ ತೊಡಗಿ ದಾಖಲಾತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ದಾಖಲಾತಿ ಹೆಚ್ಚಳ
ಶಾಲೆಯು 1959ರಲ್ಲಿ ಆರಂಭಗೊಂಡು ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದೆ. ಕ್ರಮೇಣ ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆ ಎದುರಾಗಿತ್ತು. ಈ ಭಾಗದ ಸಾಕಷ್ಟು ಮಕ್ಕಳು ಬೇರೆ ಶಾಲೆಗಳಿಗೆ ಹೋಗಿ 13 ಮಂದಿ ಮಾತ್ರ ಉಳಿದಿದ್ದರು. ಶಾಲೆ ಮುಚ್ಚುವ ಹಂತಕ್ಕೆ ಹೋದಾಗ ಊರವರು ಶಿಕ್ಷಕರಿಗಾಗಿ ಹೋರಾಟ ನಡೆಸಿದರು. ಪರಿಣಾಮವಾಗಿ 2016-17ರಲ್ಲಿ ಖಾಯಂ ಶಿಕ್ಷಕಿಯ ನೇಮಕ, ಅನಂತರ ಮುಖ್ಯ ಶಿಕ್ಷಕರ ನೇಮಕವಾಯಿತು. ಈ ವರ್ಷ ಶಿಕ್ಷಕರು ಹೆತ್ತವರೊಂದಿಗೆ ಮನೆಮನೆ ಭೇಟಿ ನೀಡಿ, ಶಾಲೆಯಲ್ಲಿನ ಸೌಲಭ್ಯಗಳ ಬಗ್ಗೆ ತಿಳಿಸಿದ್ದರ ಪರಿಣಾಮ ದಾಖಲಾತಿ ಏರಿಕೆಯಾಗಿದೆ.
28ಕ್ಕೇರಿದ ಸಂಖ್ಯೆ
ವಿದ್ಯಾರ್ಥಿಯ ದಾಖಲಾತಿ ಬಳಿಕ ವಾರ್ಷಿಕ 1 ಸಾವಿರ ರೂ.ಗಳನ್ನು ಶಾಲೆಯಿಂದ ಅವರ ಹೆಸರಿಗೆ ಬಾಂಡ್ ಆಗಿ ಇಡಲು ದಾನಿಗಳು ಸಹಕರಿಸುತ್ತಿದ್ದಾರೆ. 2017-18ರ ಸಾಲಿನಲ್ಲಿ ಸಾವಿರ ರೂ. ಬಾಂಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟ್ಟು 26 ಮಕ್ಕಳಿಗೆ ಬಾಂಡ್ ಇರಿಸಲಾಗಿತ್ತು. ಪ್ರಸ್ತುತ ಸಾಲಿನಲ್ಲಿ ಆರು ಮಕ್ಕಳಿಗೆ ಅದೇ ಸೌಲಭ್ಯ ಒದಗಿಸಲಾಗಿದೆ. ಈಗ ಒಟ್ಟು 28 ಮಕ್ಕಳ ಹೆಸರಲ್ಲಿ ಬಾಂಡ್ ಅನ್ನು ಬೆಳ್ವೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇಡಲಾಗಿದೆ. ಈ ಬಾಂಡ್‌ಗೆ ಯಾವುದೇ ಷರತ್ತು ಇಲ್ಲ. 4ನೇ ತರಗತಿಗೆ ಮಕ್ಕಳನ್ನು ಸೇರಿಸಿದರೂ 1 ಸಾವಿರ ರೂ. ವಾರ್ಷಿಕ ಬಾಂಡ್ ಲಭ್ಯವಾಗಲಿದೆ. ನಡುವೆ ಶಾಲೆ ತೊರೆದರೂ ಬಾಂಡ್ ಹಣ ಸಂದಾಯವಾಗಲಿದೆ.
ಸಕಲ ಸೌಲಭ್ಯ
ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ, ನೋಟ್ಸ್ ಪುಸ್ತಕ, ಬ್ಯಾಗ್, ಕ್ರೀಡಾ ಪರಿಕರಗಳು ಇತ್ಯಾದಿ ಸೌಲಭ್ಯವಲ್ಲದೇ, ಪಠ್ಯೇತರ ಚಟುವಟಕೆ ಮೂಲಕ ಬೆಳವಣಿಗೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ನಮ್ಮ ಶಾಲೆಯಲ್ಲಿ ಶಿಕ್ಷಕರು ಚೆನ್ನಾಗಿ ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ಬಗ್ಗೆ ಉತ್ತಮ ಕಾಳಜಿ ತೋರುತ್ತಿದ್ದಾರೆ. ಅದುವೇ ನಮಗೆ ಖುಷಿ.
– ನಿತಿನ್, ವಿದ್ಯಾರ್ಥಿ
ಸರಕಾರಿ ಶಾಲೆ ಉಳಿಸಿ ಕೊಳ್ಳಲು ಶಿಕ್ಷಣ ಇಲಾಖೆ ಹಾಗೂ ದಾನಿಗಳು ಸಹಕರಿಸಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಹೆತ್ತವರು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು.
-ಸುರೇಶ ಶೆಟ್ಟಿ , ಮುಖ್ಯ ಶಿಕ್ಷಕ
ಮಕ್ಕಳಿಗೆ ಸಿಗುವ ಸೌಲಭ್ಯಗಳ ಕುರಿತು ಹೆತ್ತವರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿರುವುದು ಪ್ರಶಂಸನೀಯ. ಹೆತ್ತವರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಶಾಲೆಯ ಏಳಿಗೆಗೆ ಸಹಕರಿಸಬೇಕು.
-ಜಯರಾಮ ಶೆಟ್ಟಿ ತೊನ್ನಾಸೆ, ನಿವೃತ್ತ ಪ್ರಾಂಶುಪಾಲರು
– ಸತೀಶ್ ಆಚಾರ್ ಉಳ್ಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.