ಗೋಪಾಲಪುರ, ಸುಬ್ರಹ್ಮಣ್ಯ ನಗರ: ಚರಂಡಿ ಕೆಲಸ ಇನ್ನೂ ಬಾಕಿ
Team Udayavani, May 28, 2018, 6:00 AM IST
ಉಡುಪಿ: ನಗರದಲ್ಲಿ ಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲದೇ ಇದ್ದರೆ ಸಮಸ್ಯೆ ಖಚಿತ. ಉಡುಪಿಯ ಗೋಪಾಲಪುರ, ಸುಬ್ರಹ್ಮಣ್ಯ ನಗರ ಭಾಗದಲ್ಲೂ ಮಳೆನೀರಿನ ಜತೆಗೆ ಒಳಚರಂಡಿ ನೀರು ಕೂಡ ಸೇರಿ ಹೋಗುವುದರಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ರಸ್ತೆ ಮೇಲೆಯೇ ನೀರು ಹರಿಯುವುದರಿಂದ ರಸ್ತೆಯ ಬಾಳಿಕೆಯೂ ಕಡಿಮೆಯಾಗುತ್ತಿದೆ.
ಗೋಪಾಲಪುರ ವಾರ್ಡ್ ವ್ಯಾಪ್ತಿಯಲ್ಲಿರುವ ಸಂತೆಕಟ್ಟೆ – ಕಲ್ಯಾಣಪುರ ಮುಖ್ಯ ರಸ್ತೆಯಲ್ಲಿ ನಗರಸಭೆಯ ವಾಣಿಜ್ಯ ಕಟ್ಟಡದ ಎದುರು ಮಾತ್ರವೇ ಮಳೆನೀರು ಹರಿಯುವ ಚರಂಡಿ ಕೆಲಸ ಆರಂಭಿಸಲಾಗಿದೆ. ಅದರಿಂದಾಚೆಗೆ ಚರಂಡಿಯೇ ಇಲ್ಲ. ಮಳೆಗಾಲದಲ್ಲಿ ಇದೊಂದು ಕೊಳದಂತಾಗುತ್ತದೆ. ಇಲ್ಲಿಯೇ ಮೀನುಮಾರುಕಟ್ಟೆ, ಹೂವಿನ ಮಾರುಕಟ್ಟೆಯೂ ಇದೆ. ಪ್ರತಿ ಮಳೆಗಾಲದಲ್ಲಿಯೂ ಇಲ್ಲಿ ಅವಾಂತರ ಸೃಷ್ಟಿಯಾಗುತ್ತದೆ.
ಗೋಪಾಲಪುರ ವಾರ್ಡ್‌ನ ಹಲವೆಡೆ ಅಲ್ಲಲ್ಲಿ ಚರಂಡಿ ಕೆಲಸಗಳು ನಡೆದಿವೆ. ಆದರೆ ಹೆಚ್ಚಿನ ಚರಂಡಿಗಳ ಹೂಳೆತ್ತುವ, ದಟ್ಟವಾಗಿ ಬೆಳೆದಿರುವ ಹುಲ್ಲು, ಕಳೆಗಿಡಗಳನ್ನು ತೆಗೆಯುವ ಕೆಲಸಗಳು ನಡೆಯಬೇಕಿದೆ. ಕೆಲವೆಡೆ ಕಾಂಕ್ರೀಟ್‌ನಿಂದ ಅಚ್ಚುಕಟ್ಟಾದ ಚರಂಡಿ ನಿರ್ಮಿಸಲಾಗಿದೆ.
ಲಿಂಕ್ ಕೊಟ್ಟಿಲ್ಲ
ನಡು ನಡುವೆ ಚರಂಡಿಗಳನ್ನು ಮಾಡಿ ಅದನ್ನು ಮುಖ್ಯ ತೋಡಿಗೆ ಸಂಪರ್ಕ ಮಾಡದಿದ್ದರೆ ಅದು ಪ್ರಯೋಜನವಾಗುವುದಿಲ್ಲ. ಸುಬ್ರಹ್ಮಣ್ಯ ನಗರ ವಾರ್ಡ್‌ನ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಇಂತಹುದೇ ಸ್ಥಿತಿ ಇದೆ. ಒಂದು ಭಾಗದಿಂದ ಚರಂಡಿ ಯನ್ನು ಭಾಗಶಃ ಸ್ವಚ್ಛಗೊಳಿಸಲಾಗಿದೆ. ಆದರೆ ಉಳಿದ ಭಾಗ ಹಾಗೆಯೇ ಬಿಟ್ಟು ಬಿಡಲಾಗಿದೆ. ಇದರಿಂದಾಗಿ ಮಳೆನೀರು ನೇರ ರಸ್ತೆಗೆ ಬರುವಂತಿದೆ. “ಲಿಂಕ್ ಮಾಡಿ ಕೊಡದಿದ್ದರೆ ಚರಂಡಿ ಕಾಮಗಾರಿ ವೇಸ್ಟ್’ ಎನ್ನುತ್ತಾರೆ ಸ್ಥಳೀಯ ನಿವಾಸಿ ಉಮೇಶ್ ಶೆಟ್ಟಿ ಅವರು.
ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೀನುಮಾರುಕಟ್ಟೆ ಪರಿಸರ ಡ್ರೈನೇಜ್ ಸಮಸ್ಯೆಯಿಂದ ನಲುಗುತ್ತಿದೆ. ಮಳೆಗಾಲಕ್ಕೆ ಮತ್ತಷ್ಟು ತೊಂದರೆ ಕಾದಿದೆ. ಇಲ್ಲಿನ ರಿಕ್ಷಾ ನಿಲ್ದಾಣದ ಪಕ್ಕದಿಂದ ಚರಂಡಿ ಮಾಡಿದರೆ ಅನುಕೂಲವಾಗಬಹುದು.
ಬನ್ನಂಜೆಯ ಸಾರಾ ಅಮೀನ್ ರಸ್ತೆಯಲ್ಲಿಯೂ ಚರಂಡಿಗಳು ಸಮತಟ್ಟಾಗಿವೆ. ಈಗ ಸುರಿಯುತ್ತಿರುವ ಸಾಧಾರಣ ಮಳೆಗೇ ಚರಂಡಿಯಿಂದ ನೀರು ಮೇಲೆ ಬರುತ್ತದೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ಇಲ್ಲಿ ಕೆಲವು ಮನೆಯವರು ಅವರ ಮನೆಯ ಎದುರಿನ ಜಾಗವನ್ನು ಅವರಾಗಿಯೇ ಸ್ವಚ್ಛಗೊಳಿಸಿ ಒಂದಿಷ್ಟು ಮಾದರಿಯಾಗುವಂಥ ಕೆಲಸ ಮಾಡಿದ್ದಾರೆ.
ಚರಂಡಿ ಸ್ವಚ್ಛ ಹೊಣೆ ಯಾರದ್ದು?
ಚರಂಡಿಯನ್ನು ಸ್ವಚ್ಛಗೊಳಿಸುವುದರ ಬಗ್ಗೆ ನಾಗರಿಕರೂ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ವಹಿಸಿದರೆ ಕಿಂಚಿತ್ತಾದರೂ ಸಮಸ್ಯೆ ಬಗೆಹರಿದೀತು. ನಗರಸಭೆಯವರೂ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳುವ ಬದಲು ಇರುವ ಚರಂಡಿಗಳನ್ನು ಸರಿಪಡಿಸಲು ಗಮನಹರಿಸುವುದು ಒಳಿತು. ಕಾಮಗಾರಿ ಕೂಡ ಸರಿಯಾಗಿರಬೇಕು. ನೀರು ಸರಾಗವಾಗಿ ಹರಿಯುವ ರೀತಿಯಲ್ಲಿಯೇ ಚರಂಡಿ ನಿರ್ಮಿಸಬೇಕು. ಚರಂಡಿಗೆ ಸಿಕ್ಕಿದ್ದನ್ನೆಲ್ಲಾ ಎಸೆಯುವವರಿಗೆ ಶಿಕ್ಷೆಯೂ ಆಗಬೇಕು.
– ಗೋಕುಲ್‌ದಾಸ್,ಬನ್ನಂಜೆ ನಿವಾಸಿ
ಚರಂಡಿ ಕೆಲಸಕ್ಕೂ ಆದ್ಯತೆ
ನಾನು ಚರಂಡಿ ಕೆಲಸಗಳಿಗೂ ಆದ್ಯತೆ ಕೊಡುತ್ತಾ ಬಂದಿದ್ದೇನೆ. ಕಳೆದ ವರ್ಷ ರಸ್ತೆಯಲ್ಲೇ ನೀರು ನಿಂತು ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದ್ದ ಎಲ್‌ವಿಟಿ ಹಿಂಭಾಗದ ರಸ್ತೆಯಲ್ಲಿ ಸುವ್ಯವಸ್ಥಿತ ಚರಂಡಿ ಕೆಲಸ ನಡೆಯುತ್ತಿದೆ. ವಾರಕ್ಕೆ 2 ಬಾರಿ ನಗರಸಭೆಯ 5-6 ಮಂದಿ ಬಂದು ನನ್ನ ವಾರ್ಡ್‌ನ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಉಳಿದ ಕೆಲಸಗಳು ಕೂಡ ನಡೆಯಲಿವೆ.
– ಚಂದ್ರಕಾಂತ್ ನಾಯಕ್
ಗೋಪಾಲಪುರ ವಾರ್ಡ್ ಸದಸ್ಯರು
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.