ಗ್ರಾ.ಪಂ. ನೌಕರರ ಮೇಲೆ ಡಿ.ಸಿ. ಅತಿ ನಿಯಂತ್ರಣ: ಆಕ್ಷೇಪ
Team Udayavani, Oct 25, 2017, 7:20 AM IST
ಉಡುಪಿ: “ಗ್ರಾಮಪಂಚಾಯತ್ ನೌಕರರ ಮೇಲಿನ ಕಾರ್ಯದೊತ್ತಡಗಳಿಂದ ಈಗಾಗಲೇ ಗ್ರಾಮಸ್ಥರಿಗೆ ಸಮರ್ಪಕವಾಗಿ ಸೇವೆ ದೊರೆಯುತ್ತಿಲ್ಲ. ಇದರ ನಡುವೆ ಇದೀಗ ಜಿಲ್ಲಾಧಿಕಾರಿಯವರು ಗ್ರಾ.ಪಂ. ನೌಕರರನ್ನು ಬೆಳೆ ಸಮೀಕ್ಷೆಯ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಇದರಿಂದ ಭಾರೀ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಯವರು ಗ್ರಾ.ಪಂ. ನೌಕರರ ಕಾರ್ಯನಿರ್ವಹಣೆ ಮೇಲೆ ಈ ರೀತಿಯ ಹಸ್ತಕ್ಷೇಪ ನಡೆಸುವುದು ಆಕ್ಷೇಪಾರ್ಹ’ ಎಂದು ಉಡುಪಿ ಜಿ.ಪಂ.ನ ಹಲವಾರು ಮಂದಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅ.24ರಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜರಗಿದ ಜಿ.ಪಂ. ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ಅವರು “ಈಗಾಗಲೇ ಗ್ರಾ.ಪಂ.ನಲ್ಲಿ ಕೆಲಸದ ಒತ್ತಡವಿದೆ. ಆದರೆ ಜಿಲ್ಲಾಧಿಕಾರಿಯವರು ಬೆಳೆ ಸಮೀಕ್ಷೆಗೆ ಗ್ರಾ.ಪಂ. ನೌಕರರನ್ನು ನಿಯೋಜಿಸಿದ್ದಾರೆ. ಸಮೀಕ್ಷೆ ನಡೆಸದಿದ್ದರೆ ಅಮಾನತು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಗ್ರಾ.ಪಂ. ಮೇಲೆ ಜಿಲ್ಲಾಧಿಕಾರಿಯವರು ಅತಿಯಾದ ನಿಯಂತ್ರಣ ಹೊಂದುವುದು ಸರಿಯಲ್ಲ’ ಎಂದರು. ಇದಕ್ಕೆ ಇತರ ಹಲವಾರು ಮಂದಿ ಸದಸ್ಯರು ದನಿಗೂಡಿಸಿದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, “ಜಿಲ್ಲಾಧಿಕಾರಿಯವರು ಮಿತಿಮೀರಿದ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು. ಬೆಳೆ ಸಮೀಕ್ಷೆಗೆ ಗ್ರಾ.ಪಂ. ನೌಕರರನ್ನು ಬಳಸಬಾರದು ಎಂದು ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ದಿನಕರ ಬಾಬು ತಿಳಿಸಿದರು.
ಮನೆ ನಿರ್ಮಾಣಕ್ಕೆ ಹಣ ಬರುತ್ತಿಲ್ಲ
ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅವರು ಮಾತನಾಡಿ, “ಸರಕಾರದ ವಸತಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು “ತಾಂತ್ರಿಕ ಕಾರಣದಿಂದ ಸಮಸ್ಯೆ ಉಂಟಾಗಿದೆ. ನಿರ್ದಿಷ್ಟ ಪ್ರಕರಣಗಳನ್ನು ಗುರುತಿಸಿ ಸರಿಪಡಿಸಲಾಗುತ್ತಿದೆ’ ಎಂದರು.
“ನಿಯಮವನ್ನು ಸರಳಗೊಳಿಸಬೇಕು. ಮನೆ ಅರ್ಧದಲ್ಲೇ ನಿಲ್ಲುವಂತೆ ಮಾಡಬಾರದು’ ಎಂದು ಸದಸ್ಯ ಜನರ್ದಾನ ತೋನ್ಸೆ ಅವರು ಹೇಳಿದರು. ವಸತಿ ಯೋಜನೆಗಳಿಗೆ ಸರಕಾರದ ಬಳಿ ಹಣವಿಲ್ಲ. ಅದಕ್ಕೆ ಅಧಿಕಾರಿಗಳು ಬೇರೆ ಬೇರೆ ಕಾರಣ ನೀಡುತ್ತಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿಯ ಕೆಲವು ಸದಸ್ಯರು ದೂರಿದರು. ಮೀನುಗಾರ ಫಲಾನುಭವಿಗಳಿಗೂ ಇದೇ ರೀತಿಯ ಸಮಸ್ಯೆ ಎದುರಾಗಿದೆ ಎಂದು ರಾಘವೇಂದ್ರ ಕಾಂಚನ್ ಹೇಳಿದರು.
ಬೊಮ್ಮರಬೆಟ್ಟಿನ ಪುತ್ತಿಗೆಯ ತ್ಯಾಜ್ಯ ಘಟಕಕ್ಕೆ ಸಾರ್ವಜನಿಕರ ವಿರೋಧವಿದೆ ಎಂದು ಚಂದ್ರಿಕಾ ಕೇಳ್ಕರ್ ಅವರು ಹೇಳಿದರು. ಉಪ್ಪುಂದ ಪೇಟೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸರಿಯಲ್ಲ ಎಂದು ಬಟವಾಡಿ ಸುರೇಶ್ ಅವರು ಹೇಳಿದರು.
ಸರಕಾರಿ ಜಾಗ ಅತಿಕ್ರಮಣ
ಬೈಲೂರಿನ ವಿವಿಧೆಡೆ ಸರಕಾರಿ ಜಾಗ ಅತಿಕ್ರಮಣ ನಡೆದಿದೆ ಎಂದು ಸುಮಿತ್ ಶೆಟ್ಟಿ ದೂರಿದರು. ಪಾದೂರು ತೈಲ ಸಂಗ್ರಹಣಾಗಾರದ ಕಾಮಗಾರಿ ನಡೆಯುವಾಗ ಬಂಡೆ ಸ್ಫೋಟದಿಂದ 120 ಮನೆಗಳಿಗೆ ಹಾನಿಯಾಗಿದ್ದು ಜನತೆ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಶಿಲ್ಪಾ ಸುವರ್ಣ ಅವರು ಸಭೆಯ ಗಮನ ಸೆಳೆದರು. ಸೂಕ್ತ ಪರಿಹಾರ ಕ್ರಮಕ್ಕೆ ಅವರು ಆಗ್ರಹಿಸಿದರು.
ಗ್ರಾ.ಪಂ. ಅಭಿಪ್ರಾಯಕ್ಕೆ ಒತ್ತಾಯ
ಹೆಬ್ರಿ ತಾಲೂಕು ರಚನೆಗೆ ವಿರೋಧವಿಲ್ಲ. ಆದರೆ ಗ್ರಾ.ಪಂಗಳ ಸೇರ್ಪಡೆ ಪ್ರಕ್ರಿಯೆಗಿಂತ ಮೊದಲು ಆಯಾ ಭಾಗದ ಗ್ರಾ.ಪಂ.ಗಳ ಅಭಿಪ್ರಾಯ ಪಡೆಯಬೇಕು ಎಂದು ಪ್ರತಾಪ್ ಹೆಗ್ಡೆ ಮಾರಾಳಿ ಮನವಿ ಮಾಡಿದರು.
ಮುಂಡ್ಕೂರಿನಲ್ಲಿ ನಿಯಮ ಮೀರಿ ಪರಿಶಿಷ್ಟ ಜಾತಿ/ ಪಂಗಡದ ಕಾಲನಿಯಲ್ಲಿ ಬಾರ್ ತೆರೆಯಲಾಗಿದೆ. ಇದಕ್ಕೆ ಸ್ಥಳೀಯರ ವಿರೋಧವಿದೆ. ಇಲಾಖೆಯ ಅಧಿಕಾರಿಗಳು ಕಾಲನಿಯಿಂದ 100 ಮೀ. ದೂರವಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ 100 ಮೀ. ದೂರ ಇಲ್ಲ ಎಂದು ಜನ ಹೇಳುತ್ತಿದ್ದಾರೆ. ಮತ್ತೂಮ್ಮೆ ಸಮೀಕ್ಷೆ ಮಾಡಬೇಕು ಎಂದು ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಅವರು ಒತ್ತಾಯಿಸಿದರು.
ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಸದಸ್ಯರಾದ ಸುಧಾಕರ ಶೆಟ್ಟಿ ಮೈರ್ಮಾಡಿ, ಗೌರಿ ದೇವಾಡಿಗ ಮೊದಲಾದವರು ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡರು.
ತ್ಯಾಜ್ಯಘಟಕಕ್ಕೆ ವಿರೋಧ
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಉಷ್ಣ ವಿದ್ಯುತ್ ಸ್ಥಾವರದಿಂದ ಸಮಸ್ಯೆಯಾಗಿದೆ. ಈಗ ಅಲ್ಲಿಯೇ ಪಕ್ಕದಲ್ಲಿ ಗೋಮಾಳ, ಕಾಡುಪ್ರದೇಶದಲ್ಲಿ ಪುರಸಭೆ, ಇತರ ಗ್ರಾ.ಪಂ.ಗಳ ತ್ಯಾಜ್ಯಗಳನ್ನು ತಂದು ಹಾಕಲು ತ್ಯಾಜ್ಯ ಘಟಕ ನಿರ್ಮಿಸುವ ಯೋಜನೆ ಕಾರ್ಯಗತಕ್ಕೆ ಪ್ರಯತ್ನ ನಡೆಯುತ್ತಿದೆ. ಇದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ತ್ಯಾಜ್ಯ ವಿಲೇವಾರಿಗೆ ಆಯಾಯ ಪುರಸಭೆ, ಗ್ರಾ.ಪಂ.ಗಳು ತಮ್ಮ ತಮ್ಮಲ್ಲೇ ವ್ಯವಸ್ಥೆ ಕಲ್ಪಿಸಿಕೊಳ್ಳಲಿ. ಇಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಎಲ್ಲೂರು ಗ್ರಾಮಸ್ಥರು ಮತ್ತು ಗ್ರಾ.ಪಂ.ನ ತೀವ್ರ ವಿರೋಧವಿದೆ. ಘಟಕ ಯೋಜನೆ ಕೈಬಿಡಬೇಕು ಎಂದು ಸದಸ್ಯೆ ಶಿಲ್ಪಾ ಜಿ. ಸುವರ್ಣ ಒತ್ತಾಯಿಸಿದರು.
ಸಿಆರ್‌ಝಡ್ ಹೊಸ ವ್ಯಾಪ್ತಿ ಕರಡು
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿವìಹಣೆಗೆ ಸಂಬಂಧಿಸಿ 2011ರ ಅಧಿಸೂಚನೆಯಂತೆ ಹೊಸತಾಗಿ ವಲಯ ನಿರ್ವಹಣಾ ಯೋಜನೆ (ನಕ್ಷೆ) ಯನ್ನು ಸಿದ್ಧಪಡಿಸಬೇಕಾಗಿದ್ದು ಅದಕ್ಕೆ ಕರಡನ್ನು ಸಿದ್ಧಪಡಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆಯೇ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಆಕ್ಷೇಪ, ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಪ್ರಮುಖ ಬದಲಾವಣೆಗಳು ಇಂತಿವೆ: ಹೆಜಮಾಡಿ-ನಡಾÕಲು ಗ್ರಾಮದ ಕಾಮಿನಿ ನದಿಯನ್ನು ಈಗ ಸಿಆರ್‌ಝೆಡ್ ವ್ಯಾಪ್ತಿಗೆ ತರಲಾಗಿದೆ. ಉದ್ಯಾವರ, ಪಡುಕರೆ, ಕುತ್ಪಾಡಿ, ಕಡೆಕಾರು, ಕೊಡವೂರು, ಬಡಾನಿಡಿಯೂರು, ತೆಂಕನಿಡಿಯೂರು, ಪಡುತೋನ್ಸೆ, ಮೂಡುತೋನ್ಸೆ, ಶಿವಳ್ಳಿ, ಹೆರ್ಗ ಪ್ರದೇಶಗಳನ್ನು ಸಿಆರ್‌ಜೆಡ್ 1 ಮತ್ತು 3 ವ್ಯಾಪ್ತಿಯಿಂದ ಸಿಆರ್‌ಝೆಡ್ 2 ವ್ಯಾಪ್ತಿಗೆ(ನಿಯಮ ಸಡಿಲ) ತರಲಾಗಿದೆ. ಸ್ವರ್ಣಾ ನದಿಯ ತಟದ ಕುಕ್ಕೆಹಳ್ಳಿ ಸ.ನಂ.100 ಮತ್ತು ಅಂಜಾರಿನ ಸ.ನಂ.136ಕ್ಕೆ ಮಾತ್ರವಿದ್ದ ಸಿಆರ್‌ಝೆಡ್ ವ್ಯಾಪ್ತಿಯನ್ನು ಕುಕ್ಕೆಹಳ್ಳಿ ಸ.ನಂ.7 ಮತ್ತು ಅಂಜಾರಿನ ಸ.ನಂ.4ಕ್ಕೂ ವಿಸ್ತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.