ಉಡುಪಿ: ಮನೆಗಳು ಜಲಾವೃತ, ಕಡಲ್ಕೊರೆತ
Team Udayavani, Jul 8, 2022, 6:20 AM IST
ಉಡುಪಿ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ವ್ಯಾಪಕ ಮಳೆಯಾಗಿದ್ದು ಬೈಂದೂರು ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ.
ಗುರುವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ತಾಸು 208 ಮಿ.ಮೀ. ಅತ್ಯಧಿಕ ಮಳೆ ದಾಖಲಾಗಿದೆ. ಸೌಪರ್ಣಿಕಾ, ವಾರಾಹಿ, ಚಕ್ರ, ಎಡಮಾವಿನಹೊಳೆ ಮೊದಲಾದ ನದಿಗಳು ಉಕ್ಕಿ ಹರಿದಿವೆ. ನದಿ ಪಾತ್ರಗಳಲ್ಲಿ ನೆರೆಸೃಷ್ಟಿಯಾಗಿ ತಗ್ಗು ಪ್ರದೇಶ ಹಾಗೂ ಕೃಷಿಭೂಮಿ ಜಲಾವೃತಗೊಂಡಿವೆ. ನಾವುಂದ ಪರಿಸರದಲ್ಲಿ ಪ್ರವಾಹದಿಂದ ನೂರಾರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
ಕಾರ್ಕಳದ ಎಣ್ಣೆಹೊಳೆ ತುಂಬಿ ಹರಿಯು ತ್ತಿದ್ದು ನದಿ ಅಂಚಿನ ಕೆಲವು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ರೆಂಜಾಳ, ಬಜಗೋಳಿ, ಮೀಯಾರು, ಅಜೆಕಾರು, ಹೆಬ್ರಿ ಭಾಗದಲ್ಲಿ ನಿರಂತರ ಮಳೆಯಾಗಿದೆ. ಸೀತಾ, ಸ್ವರ್ಣ ನದಿ, ಹಾಗೂ ಪುತ್ತಿಗೆ ಹೊಳೆ ಉಕ್ಕಿ ಹರಿಯುತ್ತಿವೆ.
ಉಡುಪಿ ತಾಲೂಕಿನಲ್ಲಿ 2, ಕುಂದಾಪುರ ದಲ್ಲಿ 6, ಕಾರ್ಕಳದಲ್ಲಿ 5 ಸೇರಿ 13 ಮನೆ ಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಉಡುಪಿ ನಗರ ವ್ಯಾಪ್ತಿಯ ಮಣಿಪಾಲ, ಪರ್ಕಳ, ಮಲ್ಪೆ ಮೊದಲಾದೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. ಹೆದ್ದಾರಿ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕು ಉಂಟಾಗಿದೆ. ಇಂದ್ರಾಣಿ ನದಿಯು ಉಕ್ಕಿ ಹರಿಯುತ್ತಿದೆ.
ಉಡುಪಿ 75.7, ಬ್ರಹ್ಮಾವರ 86.9, ಕಾಪು 67.9, ಕುಂದಾಪುರ 146.4, ಬೈಂದೂರು 208, ಕಾರ್ಕಳ 86.0, ಹೆಬ್ರಿ 151.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 126.9 ಮಿ.ಮೀ ಮಳೆ ದಾಖಲಾಗಿದೆ.
ವಿವಿಧೆಡೆ ಕಡಲ್ಕೊರೆತ:
ಜಿಲ್ಲೆಯ ಬೈಂದೂರು, ಕುಂದಾಪುರ, ಕಾಪು, ಉಡುಪಿ, ಪಡುಬಿದ್ರಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕಡಲ್ಕೊರೆತ ತೀವ್ರಗೊಂಡಿದೆ.
19.58 ಲಕ್ಷ ನಷ್ಟ:
ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಬಿಟ್ಟು ಬಿಟ್ಟು ವಿದ್ಯುತ್ ವ್ಯತ್ಯಯವಾಗಿತ್ತು. ಗುರುವಾರ ಮೆಸ್ಕ್ಗೆ 19.58 ಲಕ್ಷ ರೂ. ಒಟ್ಟು ನಷ್ಟ ಸಂಭವಿಸಿದೆ. 6 ಪರಿವರ್ತಕ(ಟಿಸಿ), 84 ವಿದ್ಯುತ್ ಕಂಬಗಳು ಹಾಗೂ 1.65 ಮೀಟರ್ ವಿದ್ಯುತ್ ತಂತಿಗೆ ಹಾನಿಯಾಗಿವೆ.
ಉಚಿತ ಸಹಾಯವಾಣಿ:
ಜಿಲ್ಲೆಯ ತುರ್ತು ಸೇವೆಗೆ ಉಚಿತ ಸಹಾಯವಾಣಿ: 1077 ಮತ್ತು 0820-2574802
ವಿವಿಧೆಡೆ ಕೃತಕ ನೆರೆ :
ಬೈಂದೂರು ತಾಲೂಕಿನ ವಿವಿಧೆಡೆ ನೆರೆ ಉಂಟಾಗಿದ್ದು, ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಕುಂದಾಪುರದಲ್ಲಿ 7 ಮನೆ, 2 ಜಾನುವಾರು ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದ್ದು, ಒಟ್ಟು 4.50 ಲಕ್ಷ ರೂ. ನಷ್ಟ ಸಂಭವಿಸಿದೆ. ಬೈಂದೂರಲ್ಲಿ 1 ಮನೆ ಸಂಪೂರ್ಣ ಹಾಗೂ 2 ಮನೆಗೆ ಭಾಗಶಃ ಹಾನಿಯಾಗಿದ್ದು, ಅಪಾರ ಪ್ರಮಾಣದ ಕೃಷಿ ಪ್ರದೇಶ ಜಲಾವೃತಗೊಂಡಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.