ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ
ವಾಹನ ಸವಾರಿ, ಸಂಚಾರಕ್ಕೆ ತೊಂದರೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
Team Udayavani, May 16, 2022, 11:35 PM IST
ಉಡುಪಿ/ ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಸೋಮವಾರ ಅಪರಾಹ್ನದ ಬಳಿಕ ಮಳೆ ದಿಢೀರನೆ ತೀವ್ರಗೊಂಡಿದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿ ತೊಂದರೆಯುಂಟಾಯಿತು. ರಾತ್ರಿಯ ವೇಳೆ ಮಳೆ ಇನ್ನಷ್ಟು ಬಿರುಸು ಪಡೆದುಕೊಂಡಿದೆ.
ಸೋಮವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇದ್ದು, ಕೆಲವೆಡೆ ಲಘು ಮಳೆಯಾಗಿತ್ತು. ಆದರೆ ಮಧ್ಯಾಹ್ನದ ಬಳಿಕ ಕರಾವಳಿಯ ಬಹುತೇಕ ಎಲ್ಲೆಡೆ ಒಮ್ಮೆಲೆ ಮೋಡ ದಟ್ಟೈಸಿ ಬಿರುಸಿನ ಮಳೆ ಆರಂಭವಾಯಿತು. ಸುಳ್ಯ, ಬೆಳ್ತಂಗಡಿ, ಕಾರ್ಕಳ, ಕುಂದಾಪುರ ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲಿನ ತಾಲೂಕುಗಳು ಮತ್ತು ಉಭಯ ಜಿಲ್ಲೆಗಳ ಇತರ ತಾಲೂಕುಗಳಲ್ಲಿ ಭಾರೀ ಮಳೆಯಾರಂಭವಾಯಿತು.
ಬಿರುಸಿನ ಮಳೆ ಮೂರ್ನಾಲ್ಕು ದಿನಗಳ ಕಾಲ ಮುಂದುವರಿಯುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆಯು ಮಂಗಳವಾರ ಮತ್ತು ಗುರುವಾರಕ್ಕೆ ಆರೆಂಜ್ ಅಲರ್ಟ್ ಮತ್ತು ಬುಧವಾರಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ವಿವಿಧ ರಕ್ಷಣ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಕರಾವಳಿಯ ಅಲ್ಲಲ್ಲಿ ರಸ್ತೆ ಮತ್ತಿತರ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದರಿಂದಾಗಿ ಅನೇಕ ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ತೊಂದರೆಯಾಯಿತು.
ಉಡುಪಿ: ಭಾರೀ ಮಳೆ
ಉಡುಪಿ: ನಗರದ ಸುತ್ತಮುತ್ತ ಸೋಮವಾರ ವ್ಯಾಪಕ ಮಳೆಯಾಗಿದ್ದು, ಸಂಜೆ 6ರ ಬಳಿಕ ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ ಸುತ್ತಮುತ್ತ ನಿರಂತರ ಮಳೆಯಾಗಿದೆ. ರವಿವಾರ ತಡರಾತ್ರಿ ಹಲವೆಡೇ ಬಿಟ್ಟುಬಿಟ್ಟು ಮಳೆ ಸುರಿದಿತ್ತು. ಸೋಮವಾರ ಇಡೀ ದಿನ ಮೋಡ, ಬಿಸಿಲು ಕವಿದ ವಾತಾವರಣ ನಡುವೆ ಹನಿಹನಿ ಮಳೆಯಾಗಿತ್ತು. ಸಂಜೆ ಬಳಿಕ ಕಾಪು, ಕಟಪಾಡಿ, ಕುಂದಾಪುರ, ಕೊಲ್ಲೂರು, ಕಾರ್ಕಳ ಮತ್ತಿತರ ಭಾಗಗಳಲ್ಲಿ ನಿರಂತರ ಮಳೆ ಆರಂಭವಾಗಿದೆ.
ಕಾಸರಗೋಡು: ಉತ್ತಮ ಮಳೆ
ಕಾಸರಗೋಡು: ಪೂರ್ವ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿದೆ.
ಕೆಲವೆಡೆ ಭಾರೀ ಮಳೆಯಾದರೆ, ಕೆಲವೆಡೆ ಸಾಮಾನ್ಯ ಮಳೆಯಾಗಿದೆ. ದೇಲಂಪಾಡಿ ಪಂಚಾಯತ್‌ನ 6ನೇ ವಾರ್ಡ್‌ನ ಏಳ್ಪರೆಗುರಿ ನಿವಾಸಿ ಗಿರಿಜಾ ಅವರ ಮನೆ ಹಾನಿಗೀಡಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಎಲ್ಲೋ ಅಲೆರ್ಟ್ ಘೋಷಿಸಲಾಗಿದೆ.
ಬೆಳ್ತಂಗಡಿ: ಅಂಗಡಿಗಳಿಗೆ ನುಗ್ಗಿದ ನೀರು
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಸೋಮವಾರ ಸಂಜೆಯ ಬಳಿಕ ಉತ್ತಮ ಮಳೆಯಾಗಿದೆ. ಅನೇಕ ಕಡೆಗಳಲ್ಲಿ ರಾಜ್ಯ, ರಾ. ಹೆದ್ದಾರಿಗಳ ಚರಂಡಿ ಹೂಳು ತುಂಬಿದ್ದ ರಿಂದ ರಸ್ತೆಯಲ್ಲೇ ನೀರು ನಿಂತು ತೊಂದರೆಯಾಗಿದೆ.
ಗುರುವಾಯನಕೆರೆ-ವೇಣೂರು ಮೂಡುಬಿದಿರೆ ರಸ್ತೆಯ ಹೊಸಂಗಡಿ ಪೇಟೆಯಲ್ಲಿ ರಸ್ತೆಯ ಚರಂಡಿಯಲ್ಲಿ ಹೂಳು ತೆರವಾಗದೇ ಇರುವುದರಿಂದ ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿದೆ. ಧರಣೇಂದ್ರ ಕುಮಾರ್ ಎಂಬುವರ
ಹಾರ್ಡ್‌ವೇರ್, ಪಕ್ಕದ ಚಂದ್ರಕಾಂತ್ ಅವರ ದಿನಸಿ ಅಂಗಡಿ ಸೊತ್ತುಗಳು ನೀರಿಗೆ ಕೊಚ್ಚೆಹೋಗಿವೆ. ಪಿಡಬ್ಲ್ಯುಡಿ ಎಂಜಿನಿಯರ್ ಬಳಿ ಈ ಹಿಂದೆಯೇ ಮಾಹಿತಿ ನೀಡಿದ್ದರೂ ಚರಂಡಿ ಹೂಳು ತೆರವಾಗದ ಪರಿಣಾಮ ಸಂಕಷ್ಟ ಎದುರಾಗಿದೆ. ಮಳೆಗಾಲಕ್ಕೆ ಮುನ್ನ ಹೂಳು ತೆರವಾಗದೇ ಇದ್ದಲ್ಲಿ ರಸ್ತೆ ಸಂಚಾರ ಮತ್ತಷ್ಟು ದುಸ್ತರವಾಗಲಿದೆ.
ಒಂದೇ ಮಳೆಗೆ ರಸ್ತೆಯಲ್ಲೇ ನೀರು!
ಸುರತ್ಕಲ್: ಸುರತ್ಕಲ್, ಪಣಂಬೂರು ಸುತ್ತಮುತ್ತ ಭಾರೀ ಮಳೆಗೆ ರಸ್ತೆಯಲ್ಲೇ ಮಳೆ ನೀರು ಹರಿಯಿತು. ಬೈಕಂಪಾಡಿ ಸಮೀಪದ ಅಂಗರಗುಂಡಿ ರೈಲ್ವೇ ಕೆಳಸೇತುವೆ, ಸುರತ್ಕಲ್ ಚರ್ಚ್ ರೋಡ್ ಸಹಿತ ವಿವಿಧೆಡೆ ರಸ್ತೆಗಳು ಜಲಾವೃತವಾದವು. ಸುರತ್ಕಲ್ ಸುತ್ತಮುತ್ತ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದರೂ ಮಳೆಯ ತೀವ್ರತೆ ಬೇಗನೇ ತಗ್ಗಿದ ಪರಿಣಾಮ ಹಾನಿ ಉಂಟಾಗಿಲ್ಲ.
ಬಿ.ಸಿ. ರೋಡು: ಕೃತಕ ನೆರೆ; ಸಂಚಾರ ವ್ಯತ್ಯಯ
ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಸೋಮವಾರ ಸುರಿದ ಧಾರಾಕಾರ ಮಳೆಯ ಪರಿ ಣಾಮ ಬಿ.ಸಿ. ರೋಡು ಸೇರಿದಂತೆ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಸಂಚಾರಕ್ಕೆ ತೊಂದರೆಯುಂಟಾಯಿತು. ಕಾಮಗಾರಿಯಿಂದಾಗಿ ಮೆಲ್ಕಾರ್, ಕಲ್ಲಡ್ಕ, ಮಾಣಿ ಯಲ್ಲಿ ಹೆದ್ದಾರಿಯುದ್ದಕ್ಕೂ ನೀರು ತುಂಬಿತ್ತು.
ಸೋಮವಾರ ಮಧ್ಯಾಹ್ನದ ಬಳಿಕ ಸಂಜೆಯ ವರೆಗೆ ನಿರಂತರವಾಗಿ ಧಾರಾಕಾರ ಮಳೆ ಸುರಿಯಿತು. ಸಂಜೆಯಾಗುತ್ತಲೇ ಸಂಪೂರ್ಣ ಕತ್ತಲು ಕವಿದಂತಿದ್ದು, ಸಿಡಿಲಿನ ಆರ್ಭಟವೂ ಇತ್ತು.
ಕೈಕಂಬ ಪೊಳಲಿ ದ್ವಾರದ ಬಳಿ ರಸ್ತೆಯಲ್ಲೇ ಮಳೆ ನೀರು ತುಂಬಿ ಕೃತಕ ನೆರೆ ಸ್ಥಿತಿ ಇತ್ತು. ಹೆದ್ದಾರಿ ಕಾಮಗಾರಿಗಾಗಿ ಅಗೆದಿರುವ ಪರಿಣಾಮ ಕಲ್ಲಡ್ಕದಲ್ಲಿ ಮನೆಯಂಗಳಕ್ಕೂ ನೀರು ನುಗ್ಗಿತ್ತು. ಮೊಗರ್ನಾಡಿ ನಲ್ಲಿ ಸೋಮವಾರ ರಾತ್ರಿ ಮರ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು.ಕಲ್ಲಡ್ಕ ಭಾಗದಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ತುಂಬಿದ ತುಂಬೆ ವೆಂಟೆಡ್ ಡ್ಯಾಂ
ತುಂಬೆ ವೆಂಟೆಡ್ ಡ್ಯಾಂ ಮೇ ಯಲ್ಲೇ ತುಂಬಿದ್ದು, ಕುಡಿಯುವ ನೀರಿನ ಕೊರತೆ ನೀಗಿದೆ.
ಪೂರ್ಲಿಪ್ಪಾಡಿ: ಟಿ.ಸಿ. ಕುಸಿತ
ಧಾರಾಕಾರ ಮಳೆಯ ಪರಿಣಾಮ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿಯ ಬಳಿಕ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.
ಹೆದ್ದಾರಿ ಕಾಮಗಾರಿಗಾಗಿ ಅಗೆದು ಹಾಕಲಾಗಿದ್ದು, ಜತೆಗೆ ನಿರಂತರವಾಗಿ ಮಳೆ ಬರುವುದರಿಂದ ಮಣ್ಣು ಒದ್ದೆಯಾಗಿ ಕುಸಿಯಲಾರಂಭಿಸಿದೆ. ಇದರಿಂದಾಗಿ ವಿದ್ಯುತ್ ಪರಿವರ್ತಕ ಧರೆಗುರುಳಿದೆ. ಬಳಿಕ ಮೆಸ್ಕಾಂ ಸಿಬಂದಿ ಸ್ಥಳಕ್ಕೆ ತೆರಳಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.