ಆಳ ಸಮುದ್ರದಲ್ಲಿ ಭಾರೀ ಗಾಳಿ: ಮತ್ತೆ ಮೀನುಗಾರಿಕೆಗೆ ಅಡ್ಡಿ
ಕಡಲಿಗಿಳಿಯಲು ಮೀನುಗಾರರು ಹಿಂದೇಟು ; ಗಂಟೆಗೆ 38 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೀಸುವ ಗಾಳಿ
Team Udayavani, Mar 16, 2020, 5:25 AM IST
ಗಂಗೊಳ್ಳಿ/ ಮರವಂತೆ: ಆಳ ಸಮುದ್ರದಲ್ಲಿ ಮತ್ತೆ ಮೀನುಗಾರಿಕೆಗೆ ಪೂರಕ ವಾತಾವರಣವಿಲ್ಲದ ಕಾರಣ ಕಳೆದ ಕೆಲ ದಿನಗಳಿಂದ ಮೀನುಗಾರಿಕೆ ಸ್ತಬ್ಧವಾಗಿದೆ. ಮೊದಲೇ ಮತ್ಸ್ಯಕ್ಷಾಮದಿಂದ ತತ್ತರಿಸಿ ಹೋಗಿರುವ ಮೀನು ಗಾರರು, ಈಗ ಸಮುದ್ರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಹೆಚ್ಚಿನ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಈ ವೇಳೆಗೆ ಸಮುದ್ರದಲ್ಲಿ ಗಾಳಿ ಪ್ರಮಾಣ ಗಂಟೆಗೆ 10 ರಿಂದ 15 ಕಿ.ಮೀ. ಹೆಚ್ಚೆಂದರೆ 20 ಕಿ.ಮೀ. ಬೀಸುತ್ತಿದ್ದರೆ, ಮೀನುಗಾರಿಕೆಗೆ ತೆರಳಬಹುದು. ಆದರೆ ಈಗ ಗಂಟೆಗೆ 38 ಕಿ.ಮೀ. ಗೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಈ ವೇಳೆ ಮೀನುಗಾರಿಕೆಗೆ ತೆರಳುವುದು ಅಪಾಯಕಾರಿಯಾಗಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದಾಗ ವಿಪರೀತ ಗಾಳಿ ಉಂಟಾದರೆ, ಬೋಟುಗಳ ದಿಕ್ಕು ತಪ್ಪಿ, ಎಲ್ಲಿಂದ ಎಲ್ಲಿಗೋ ಹೋಗುವ ಅಪಾಯವೂ ಇರುತ್ತದೆ. ಆ ಕಾರಣಕ್ಕೆ ಹೆಚ್ಚಿನ ಮೀನುಗಾರರು ಸುರಕ್ಷತೆ ದೃಷ್ಟಿಯಿಂದ ಮೀನುಗಾರಿಕೆಗೆ ತೆರಳುತ್ತಿಲ್ಲ.
3,500ಕ್ಕೂ ಅಧಿಕ ಬೋಟುಗಳು
ಗಂಗೊಳ್ಳಿಯಲ್ಲಿ ಕೆಲವು ಬೋಟ್‌ಗಳು ಮಾತ್ರ ಮೀನುಗಾರಿಕೆಗೆ ತೆರಳಿದ್ದು ಬಿಟ್ಟರೆ ಬಹುತೇಕ ಬೋಟ್‌ಗಳು ಹಾಗೂ ದೋಣಿಗಳು ದಡದಲ್ಲೇ ಲಂಗರು ಹಾಕಿವೆ. ಇಲ್ಲಿ ಪರ್ಸಿನ್, ಟ್ರಾಲ್ ಬೋಟ್, ಪಾತಿ, ಗಿಲ್‌ನೆಟ್, ನಾಡದೋಣಿಗಳೆಲ್ಲ ಸೇರಿದಂತೆ 3,500 ಕ್ಕೂ ಅಧಿಕ ಬೋಟುಗಳಿವೆ. ಆದರೆ ಇವುಗಳಲ್ಲಿ ಕೆಲವೇ ಕೆಲವು ಬೋಟುಗಳು ಮಾತ್ರ ಕಳೆದ ಕೆಲ ದಿನಗಳಿಂದ ಮೀನುಗಾರಿಕೆಗೆ ತೆರಳಿವೆ.
ಮೀನುಗಾರಿಕೆಗೆ ಹೋದರೂ, ಅಷ್ಟೇನು ಮೀನು ಸಿಗದೇ ಬರಿಗೈಯಲ್ಲಿಯೇ ವಾಪಸು ಬರುವಂತಾಗಿದೆ.
ದಡದಲ್ಲೇ ಲಂಗರು
ನಾಡದೋಣಿಗಳೇ ಹೆಚ್ಚಿರುವ ಮರವಂತೆ ಹೊರ ಬಂದರಿನಲ್ಲಿಯೂ ಹೆಚ್ಚು ಕಡಿಮೆ ಇದೇ ಸ್ಥಿತಿಯಿದೆ. ಇಲ್ಲಿಯಂತೂ ಬಹುತೇಕ ಮೀನುಗಾರರು ದೋಣಿಗಳನ್ನು ದಡದಿಂದ ಮೇಲಿಟ್ಟು, ಅದಕ್ಕೆ ಹೊದಿಕೆಗಳಿಂದ ಮುಚ್ಚಿಟ್ಟಿದ್ದಾರೆ. ವಾತಾವಾರಣ ಅನುವು ಮಾಡಿಕೊಟ್ಟರೆ ಮತ್ತೆ ಮೀನುಗಾರಿಕೆಗೆ ಇಳಿಯುವುದು, ಇಲ್ಲದಿದ್ದರೆ, ಮುಂದಿನ ಋತುವಿಗೆ ಇಳಿಯುವ ಯೋಜನೆ ಹೆಚ್ಚಿನವರದ್ದಾಗಿದೆ.
ಬೂತಾಯಿ ಸಿಗುತ್ತಿಲ್ಲ
ಈ ಸಮಯದಲ್ಲಿ ಮೀನುಗಾರಿಕೆಗೆ ತೆರಳಿದಾಗ ಸಾಕಷ್ಟು ಪ್ರಮಾಣದಲ್ಲಿ ಬೂತಾಯಿ ಸಿಗುತ್ತಿತ್ತು. ಅದು ಸಿಕ್ಕರೆ ಹೆಚ್ಚಿನ ಲಾಭವಿಲ್ಲದಿದ್ದರೂ, ನಷ್ಟವೇನು ಆಗುತ್ತಿರಲಿಲ್ಲ. ಮಾರುಕಟ್ಟೆಗೆ ಮಾತ್ರವಲ್ಲದೆ ಮೀನಿನ ಕಾರ್ಖಾನೆಗೂ ಹೋಗುವುದರಿಂದ ಉತ್ತಮ ಬೇಡಿಕೆಯಿರುತ್ತಿತ್ತು. ಆದರೆ ಈ ಋತುವಿನಲ್ಲಿ ಉತ್ತಮ ಪ್ರಮಾಣದಲ್ಲಿ ಬೂತಾಯಿ ಮೀನು ಸಿಕ್ಕಿಯೇ ಇಲ್ಲ ಎನ್ನುತ್ತಾರೆ ಮೀನುಗಾರರು.
ಎಲ್ಲ ಕಡೆಗಳಲ್ಲಿ ಸ್ಥಗಿತ
ಕೇವಲ ಗಂಗೊಳ್ಳಿ, ಮರವಂತೆ ಮಾತ್ರವಲ್ಲದೆ ಮಲ್ಪೆ, ಮಂಗಳೂರು, ಭಟ್ಕಳ, ಹೊನ್ನಾವರ, ಕಾರವಾರದಲ್ಲಿಯೂ ಭಾರೀ ಗಾಳಿಯಿಂದಾಗಿ ಕಳೆದ ಕೆಲ ದಿನಗಳಿಂದ ಬಹುತೇಕ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿಲ್ಲ. ಮೀನಿಗೆ ಭಾರೀ ಬೇಡಿಕೆಯಿದ್ದರೂ, ಬೇಕಾದಷ್ಟು ಪ್ರಮಾಣದಲ್ಲಿ ಮೀನಿಲ್ಲದೆ ಇರುವುದರಿಂದ ಮತ್ಸÂಪ್ರಿಯರು ದುಬಾರಿ ಬೆಲೆ ತೆತ್ತು ತಿನ್ನುವಂತಾಗಿದೆ.
ಗಾಳಿಗೆ ಹೋಗಲು ಆಗುತ್ತಿಲ್ಲ
ಭಾರೀ ಪ್ರಮಾಣದಲ್ಲಿ ಗಾಳಿ ಬೀಸುವುದರಿಂದ ಅಪಾಯವನ್ನು ಅರಿತು ನಾವು ಮೀನುಗಾರಿಕೆಗೆ ತೆರಳುತ್ತಿಲ್ಲ. ಮೀನು ಕೂಡ ಸಿಗುತ್ತಿಲ್ಲ. ಹಾಗಾಗಿ ಹೆಚ್ಚಿನ ಮೀನುಗಾರರು ಗಾಳಿ ಕಡಿಮೆಯಾಗುವವರೆಗೆ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ, ಬಲೆ ಕಟ್ಟುವ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರಿಕೆಗೆ ಈ ಋತು ಪ್ರಶಸ್ತವಾಗಿರಲೇ ಇಲ್ಲ.
– ಸಂಜೀವ ಖಾರ್ವಿ ಮರವಂತೆ, ಮೀನುಗಾರರು
ಮೀನು ಸಿಗುತ್ತಿಲ್ಲ
ಮೀನುಗಾರರಿಗೆ ಈಗ ಗಾಳಿ ಅಡ್ಡಿಯಾಗಿರುವುದರ ಜತೆಗೆ ಮೀನುಗಾರಿಕೆಗೆ ತೆರಳಿದರೂ, ಮೀನು ಸಿಗುತ್ತಿಲ್ಲ. ತೆರಳಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಡೀಸೆಲ್ ದರವೂ ದುಬಾರಿಯಾಗಿರುವುದರಿಂದ, ಅದಕ್ಕೆ ಹಾಕಿದ ಹಣ ಕೂಡ ಮೀನುಗಾರಿಕೆಗೆ ಹೋದಾಗ ಸಿಗುತ್ತಿಲ್ಲ.
– ರಮೇಶ್ ಕುಂದರ್, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸ್ವ-ಸಹಾಯ ಸಂಘ ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.