ಹೈವೇ ಪಟ್ರೋಲ್ ವಾಹನಕ್ಕೆ ಚಾಲನೆ
Team Udayavani, Jan 24, 2017, 3:45 AM IST
ಉಡುಪಿ: ಹೆದ್ದಾರಿ ಸುರಕ್ಷೆ ಯೋಜನೆಯಡಿ ಉಡುಪಿ ಜಿಲ್ಲಾ ಪೊಲೀಸ್ ಘಟಕಕ್ಕೆ ಮಂಜೂರಾಗಿದ್ದ 3 “ಹೈವೇ ಪಟ್ರೋಲ್’ ಎನ್ನುವ ಅತ್ಯಾಧುನಿಕ ವ್ಯವಸ್ಥೆ ಒಳಗೊಂಡಿರುವ ಹೆದ್ದಾರಿ ಗಸ್ತು ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಸೋಮವಾರ ಜಿಲ್ಲಾ ಪೊಲೀಸ್ ಆವರಣದಲ್ಲಿ ಚಾಲನೆ ನೀಡಿದರು.
“ಹೈವೇ ಪಟ್ರೋಲ್’ ಗಸ್ತು ವಾಹನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾತ್ರ ಕಾರ್ಯಾಚರಿಸಲಿದೆ. ಜಿಲ್ಲಾ ಗಡಿಭಾಗ ಹೆಜಮಾಡಿಯಿಂದ ಉದ್ಯಾವರಕ್ಕೆ, ಉದ್ಯಾವರ- ಕುಂಭಾಷಿ, ಕುಂಭಾಷಿಯಿಂದ ಇನ್ನೊಂದು ಗಡಿಭಾಗ ಶಿರೂರಿನ ವರೆಗೆ ಮೂರು ವಿಂಗಡನೆಯಲ್ಲಿ ಗಸ್ತು ವಾಹನ ಕಾರ್ಯಾಚರಿಸಲಿದೆ ಎಂದು ಎಸ್‌ಪಿ ಕೆ.ಟಿ. ಬಾಲಕೃಷ್ಣ ವಿವರಿಸಿದ್ದಾರೆ. ಹೆಚ್ಚುವರಿ ಎಸ್‌ಪಿ ಎನ್. ವಿಷ್ಣುವರ್ಧನ, ಡಿವೈಎಸ್‌ಪಿ ಎಸ್.ಜೆ. ಕುಮಾರಸ್ವಾಮಿ ಮತ್ತು ಪೊಲೀಸ್ ಅಧಿಕಾರಿ, ಸಿಬಂದಿ ಉಪಸ್ಥಿತರಿದ್ದರು.
24×7 ಕಾರ್ಯಾಚರಣೆಯಲ್ಲಿ…
ಮೂರು ಗಸ್ತು ವಾಹನಗಳು ಯಾವುದೇ ಸ್ಥಳದಲ್ಲಿದ್ದರೂ ಜಿಲ್ಲಾ ನಿಯಂತ್ರಣ ಕೊಠಡಿಯ ಹತೋಟಿಯಲ್ಲಿರುತ್ತದೆ. ಇವುಗಳ ಮೇಲುಸ್ತುವಾರಿಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನಿರ್ವಹಿಸಲಿದ್ದು, ಚಾಲಕ ಸೇರಿದಂತೆ ಆಯಾ ಸರಹದ್ದಿನ ಸಹಾಯಕ ಪೊಲೀಸ್ ಉಪನಿರೀಕ್ಷಕರು (ಎಎಸ್‌ಐ), ಸಿಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸಿಬಂದಿ ವಾಹನದ ಕಾರ್ಯನಿರ್ವಹಣೆಗೆ ತಕ್ಕಂತೆ ತರಬೇತಿ ಹೊಂದಿದವರಾಗಿರುತ್ತಾರೆ ಎಂದರು.
ಗಸ್ತು ವಾಹನದ ವಿಶೇಷತೆ
ಆಧುನಿಕವಾಗಿ ರೂಪುಗೊಂಡಿರುವ 3 ಇನ್ನೋವಾ ಗಸ್ತು ವಾಹನ ಬೆಂಗಳೂರಿನಿಂದ ಉಡುಪಿಗೆ ಬಂದಿದೆ. ವಾಹನದಲ್ಲಿ 180 ಡಿಗ್ರಿ ತಿರುಗುವ ಆಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕೆಮರಾ, 180 ಡಿಗ್ರಿಯಲ್ಲಿ ಸುತ್ತುವ ಗರಿಷ್ಠ ಸಾಮರ್ಥ್ಯದ ಟಾಪ್ ಸರ್ಚ್‌ಲೈಟ್, ಬಹುಶಬ್ದ ಒಳಗೊಂಡಿರುವ ಮೂರು ಬಣ್ಣದ ಟಾಪ್ ಬಾರ್ ಲೈಟ್, ವಾಹನದೊಳಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗಾಯಾಳುಗಳನ್ನು ಕರೆದೊಯ್ಯಲು ಫೋಲ್ಡಿಂಗ್ ಸ್ಟ್ರೆಚರ್, ಪವರ್ ಬ್ಯಾಕ್‌ಅಪ್ ಇನ್‌ವರ್ಟರ್, ಜಿಪಿಆರ್‌ಎಸ್ ಜಿಪಿಎಸ್ ಹಾಗೂ ವಯರ್‌ಲೆಸ್ ವ್ಯವಸ್ಥೆ ಹೊಂದಿದೆ ಎಂದರು.
ಕಾರ್ಯವೈಖರಿ ಹೇಗೆ?
ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಹೈವೇ ಪಟ್ರೋಲ್ ವಾಹನ ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಸ್ಪಂದಿಸಿ ಮುಕ್ತ ಸಂಚಾರಕ್ಕೆ ಅನುವುಗೊಳಿಸಲು ಕ್ರಮ ಕೈಗೊಳ್ಳುತ್ತದೆ. ಹೆದ್ದಾರಿಯಲ್ಲಿ ಸಂಭವಿಸಬಹುದಾದ ದರೋಡೆ, ಸುಲಿಗೆ, ಸರಗಳ್ಳತನ, ಅಕ್ರಮ ಸಾಗಾಣಿಕೆ ಮೊದಲಾದ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ವಾಹನದ ಮೇಲೆ ಬರೆದಿರುವ ನಂಬರ್ ಅಥವಾ ಕಂಟ್ರೋಲ್ ರೂಮ್‌ಗೆ (100) ಕರೆಮಾಡಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಎಸ್‌ಪಿ ವಿವರಿಸಿದರು.
ಹೆದ್ದಾರಿ ಬದಿ ಸಿಸಿ ಕೆಮರಾ
ಕರಾವಳಿಯ ಹೆಚ್ಚಿನ ಭದ್ರತೆಗಾಗಿ ಕರ್ನಾಟಕ ಕರಾವಳಿ ತೀರದ ಗೋವಾ ಗಡಿಭಾಗದಿಂದ ಕೇರಳ ಗಡಿಭಾಗದ ವರೆಗಿನ ಹೆದ್ದಾರಿ ಬದಿ ಅಲ್ಲಲ್ಲಿ ಸಿಸಿ ಕೆಮರಾ ಅಳವಡಿಸುವ ಕುರಿತು ಕೇಂದ್ರ ಕಚೇರಿಯಿಂದ ಯೋಜನೆಗಳಾಗುತ್ತಿದ್ದು, ಈ ಯೋಜನೆ ಅನುಷ್ಠಾನಗೊಂಡಲ್ಲಿ ಉಡುಪಿ ಜಿಲ್ಲೆಯ ಹೆದ್ದಾರಿ ಭಾಗದ 53 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಕೆಯಾಗಲಿದೆ. ಪೊಲೀಸ್ ಇಲಾಖೆ ವತಿಧಿಯಿಂದ ಅಳವಡಿಸಿರುವ ಕೆಮರಾಗಳು ಸುಸ್ಥಿತಿಯಲ್ಲಿವೆ ಎಂದು ಎಸ್‌ಪಿ ಬಾಲಕೃಷ್ಣ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.