ಮನೆಯಲ್ಲೇ ತಯಾರಾಯ್ತು ನೀರಿಂಗಿಸುವ ತಂತ್ರಜ್ಞಾನ
ಜಲ ಸಂಪನ್ಮೂಲ: ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ
Team Udayavani, Aug 8, 2019, 5:04 AM IST
ಕುಂದಾಪುರ: ಮಳೆ ನೀರು ಹರಿದು ಹಾಳಾಗುವ ಬದಲು ಒಂದೆಡೆ ಶೇಖರಣೆಯಾಗಿ ಇಂಗುವಂತೆ ಮಾಡುವುದು ಸೂಕ್ತವಿಧಾನ. ಇದಕ್ಕಾಗಿ ಬಾವಿ ಅಥವಾ ಕೊಳವೆಬಾವಿ, ಇಂಗುಗುಂಡಿ ಬಳಕೆ ಉತ್ತಮ. ಮನೆ ಸಮೀಪ ಬಾವಿ ಅಥವಾ ಕೊಳವೆ ಬಾವಿ ಇರುವ ಕಾರಣ ಇವೆರಡಕ್ಕೇ ಮರುಪೂರಣ ಮಾಡಬಹುದು. ಇದಕ್ಕಾಗಿ ಹೆಚ್ಚಿನ ಶ್ರಮ ಇಲ್ಲ. ಕೆಲವೇ ಗಂಟೆಗಳಲ್ಲಿ, ಎರಡು ಮೂರು ಸಾವಿರ ರೂ. ವೆಚ್ಚದಲ್ಲಿ ಮಳೆ ನೀರು ಸಂಗ್ರಹಿಸಿ, ಶುದ್ಧಗೊಳಿಸಿ ಬಾವಿಗೆ ಬಿಡಬಹುದು. ಅಂತಹ ವಿಧಾನವೊಂದರ ವಿವರ ಇಲ್ಲಿದೆ.
ಮನೆಮಾಡಿನ ಮಳೆ ನೀರು
ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ವಿಧಾನ ಮನೆ ಮಾಡಿನ ಮಳೆ ನೀರಿನ ಸಂಗ್ರಹ ವಿಧಾನ. ಇದನ್ನು ಮನೆ ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ಯಾವುದೇ ಪ್ರಮುಖ ತಂತ್ರಜ್ಞಾನದ ಅಗತ್ಯವಿಲ್ಲ. ಯಶಸ್ವಿಯಾದವರು ಇನ್ನೊಂದಷ್ಟು ಮನೆಗಳಲ್ಲಿ ಅಳವಡಿಸಲು ಪ್ರೇರೇಪಿಸಬಹುದು. ಮಾರ್ಗದರ್ಶನ ನೀಡಬಹುದು. ಇದರ ನಿರ್ವಹಣೆ ಕೂಡಾ ಸರಳವಾಗಿದೆ.
ಬೇಕಾಗುವ ಸಲಕರಣೆ
200 ಲೀ. ಸಾಮರ್ಥ್ಯದ ಫೈಬರ್ ಡ್ರಮ್, ಪಿವಿಸಿ ಪೈಪ್‌ಗ್ಳು, ಅಗತ್ಯವಿದ್ದರೆ ಹರಣಿ (ಅರ್ಧ ಚಂದ್ರಾಕೃತಿಯ ಪಿವಿಸಿ ಪೈಪ್), ದೊಡ್ಡ ಗಾತ್ರದ ಜಲ್ಲಿ ಕಲ್ಲು ಅಥವಾ ನದಿಯಲ್ಲಿನ ಹರಳು ಕಲ್ಲು, ಕಚ್ಛಾ ಮರಳು, ಗಾಳಿಸಿದ ಶುದ್ಧ ಮರಳು, ಇದ್ದಿಲು, ಬಲೆ.
ಮನೆ ನೀರು ಸಂಗ್ರಹ
ಹಾಗೆಯೇ ತಾರಸಿಗೆ ಇಳಿಬಿಟ್ಟ ಮಾಡು ಇದ್ದರೆ ಅಥವಾ ಹಂಚಿನ ಮಾಡು ಎಂದಾದರೆ ಮಾಡಿನ ನೀರು ಬೀಳುವಲ್ಲಿ ತಗಡಿನ ಅಥಬಾ ಪಿವಿಸಿಯ ಹರಣಿಯನ್ನು ಇಡಬೇಕು. ಆಗ ಒಂದೇ ಕಡೆ ನೀರು ಸುಲಭವಾಗಿ ಸಿಗುತ್ತದೆ. ಮಾಡಿನ ಮೂಲಕ ಧಾರೆಧಾರೆಯಾಗಿ ಹರಿಯುವ ನೀರೆಲ್ಲ ಹರಣಿ ಮೂಲಕ ಸಂಗ್ರಹಿಸಬಹುದು. ತಾರಸಿಯಿಂದ ಒಟ್ಟಾದ ನೀರು ಪೈಪ್ ಮೂಲಕ ಫೈಬರ್ ಡ್ರಮ್‌ಗೆ ಹೋಗುವಂತೆ ಮಾಡಬೇಕು. ಅಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಫಿಲ್ಟರ್‌ಗಳನ್ನು ಅಳವಡಿಸಲೂ ಬಹುದು. ಇಲ್ಲವಾದರೆ ಸುಲಭವಾಗಿ ನಾವೇ ಫಿಲ್ಟರ್‌ಗಳನ್ನು ತಯಾರಿಸಬಹುದು. ಅದು ಪ್ರಕೃತಿಯಲ್ಲಿ ನೀರಿನ ಸೋಸುವಿಕೆ ನಡೆದ ಮಾದರಿಯಲ್ಲಿಯೇ ಇರುತ್ತದೆ. ನದಿಯಲ್ಲಿ ಹರಿಯುವ ಕೊಳೆ, ಕೆಂಪು ಮಣ್ಣು ಮಿಶ್ರಿತ ನೀರು ಇದ್ದರೂ ಅದು ಶುದ್ಧವಾಗುವ ಬಗೆಯಂತೆ ಮಾಡಿನಿಂದ ಸಂಗ್ರಹವಾಗುವ ಹಾವಸೆ ಹಿಡಿದ ನೀರು ಅತ್ಯಂತ ಶುದ್ಧವಾಗಿಸುವ ವಿಧಾನ ಇದಾಗಿದೆ.
ಫಿಲ್ಟರ್‌ಗಳ ಅಳವಡಿಕೆ
ಸೋಸುವ ವಿವಿಧ ಫಿಲ್ಟರ್‌ಗಳನ್ನು ಅಳವಡಿಸುವ ಬಗೆ ಹೀಗಿದೆ. 200 ಲೀ. ಸಾಮರ್ಥ್ಯದ ಡ್ರಮ್‌ನ ಮೇಲ್ಭಾಗಕ್ಕೆ ನೀರು ಬಂದು ಬೀಳುತ್ತದೆಯಷ್ಟೆ. ಆ ಡ್ರಮ್ಮಿನಲ್ಲಿ ಆರಂಭದಲ್ಲಿ ದೊಡ್ಡ ಗಾತ್ರದ ಬೋಲ್ಡ್ರಸ್ ಜಲ್ಲಿ ಕಲ್ಲು ಅಥವಾ ನದಿಯಲ್ಲಿ ದೊರೆಯುವ ಸಾಧಾರಣ ಗಾತ್ರದ ಕಲ್ಲುಗಳನ್ನು ಹಾಕಬೇಕು. ನಂತರ ಅದರ ಮೇಲೆ 6 ಮಿ.ಮೀ. ಗಾತ್ರದ ಜಲ್ಲಿಯನ್ನು ಹಾಕಬೇಕು. ಅದರ ಮೇಲೆ ಕಚ್ಛಾ ಮರಳು ಹಾಕಬೇಕು. ಬಳಿಕ ತುಂಡರಿಸಿದ ಬಲೆ (ಮೆಶ್) ಹಾಕಬೇಕು. ಅದರ ಮೇಲೆ ಇದ್ದಿಲು ಸುರಿಯಬೇಕು. ನಂತರ ಪುನಃ ಬಲೆ ಹಾಕಬೇಕು. ಅದರ ಮೇಲೆ ಕಸರಹಿತವಾದ ಗಾಳಿಸಿದ ಶುದ್ಧ ಮರಳನ್ನು ಹಾಕಿದರೆ ಫಿಲ್ಟರ್ ಸಿದ್ಧಗೊಳ್ಳುತ್ತದೆ. ಬೇಕಿದ್ದರೆ ಇದರ ಮೇಲೊಂದು ಕಬ್ಬಿಣ ಅಥವಾ ಪ್ಲಾಸ್ಟಿಕ್ ಬಲೆ ಹಾಕಿದರೆ ಆಗಾಗ ಕಸ ಶುಚಿಗೊಳಿಸಲು ಸುಲಭ. ಇದಕ್ಕೆ ತಾರಸಿಯಿಂದ ಎಂತಹ ನೀರು ಬಿದ್ದರೂ ಶುದ್ಧವಾಗುತ್ತದೆ. ಡ್ರಮ್ಮಿನ ಬುಡಕ್ಕೆ ಅಳವಡಿಸಿದ ಪೈಪ್ ಮೂಲಕ ಬಾವಿಗೆ ಹರಿಸಿದರಾಯಿತು.
ಕೊಳವೆಬಾವಿಗೆ
ಇದೇ ತಂತ್ರಜ್ಞಾನವನ್ನು ಕೊಳವೆಬಾವಿಗೂ ಮಾಡಿದರಾಯಿತು. ಕೊಳವೆಬಾವಿಯ ಸುತ್ತ ಗುಂಡಿ ತೆಗೆದು ಅದರ ಗೋಡೆಯಲ್ಲಿ ರಂಧ್ರಗಳನ್ನು ಕೊರೆದು ಗುಂಡಿಯನ್ನು ಇದೇ ಮಾದರಿಯಲ್ಲಿ ತುಂಬಿಸಿ. ಕೊಳವೆಬಾವಿಗೆ ನೀರು ಮರುಪೂರಣವಾಗುತ್ತದೆ.
ವೆಚ್ಚವಿಲ್ಲದ ಕೆಲಸ
ಕಡಿಮೆ ಖರ್ಚಿನಲ್ಲಿ ಮನೆ ಮನೆಯಲ್ಲಿ ನೀರಿಂಗಿಸುವ ತಂತ್ರಜ್ಞಾನ ಮಾಡಬಹುದು. ಇದಕ್ಕೆ ಹೆಚ್ಚು ವೆಚ್ಚವೂ ಇಲ್ಲ, ಪರಿಣತರ ಅಗತ್ಯವೂ ಇಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸದಸ್ಯರಿಗೆ ಪ್ರೋತ್ಸಾಹಧನ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಉದಯವಾಣಿ ಮಾಡುತ್ತಿರುವ ಅಭಿಯಾನ ಶ್ಲಾಘನೀಯ. ಪ್ರತಿ ಮನೆಯಲ್ಲೂ ಮಳೆಕೊಯ್ಲು ಮಾಡುವಂತಾಗಬೇಕು.
-ಚೇತನ್ ಕುಮಾರ್,
ತಾಲೂಕು ಕೃಷಿ ಅಧಿಕಾರಿ, ಧ.ಗ್ರಾ. ಯೋಜನೆ
ನೀವೂ ಅಳವಡಿಸಿ,ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿ ಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವ ರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.