ವಸತಿ ರಹಿತರ ಆಶ್ರಯ ತಾಣ; ಸೂರು ಅರಸಿ ಬಂದ ಸಾವಿರ ಮಂದಿಗೆ ಸಹಕಾರ
Team Udayavani, Dec 9, 2019, 5:15 AM IST
ಉಡುಪಿ: ಜಿಲ್ಲೆಯ ಏಕೈಕ ವಸತಿ ರಹಿತ ಆಶ್ರಯ ತಾಣವಾಗಿರುವ ಬೀಡಿನಗುಡ್ಡೆಯಲ್ಲಿ ಕಳೆದ 1.5 ವರ್ಷಗಳಲ್ಲಿ ಸೂರು ಅರಸಿ ಬಂದ ಸಾವಿರಕ್ಕೂ ಅಧಿಕ ಮಂದಿ ಆಶ್ರಯಪಡೆದಿದ್ದಾರೆ.
ನಗರಸಭೆ ವತಿಯಿಂದ 2018 ಮಾರ್ಚ್‌ನಲ್ಲಿ ಬೀಡಿನ ಗುಡ್ಡೆಯಲ್ಲಿ ಪ್ರಾರಂಭವಾದ ನಗರ ವಸತಿ ರಹಿತರಿಗೆ ಆಶ್ರಯ ತಾಣದಿಂದ 1.5 ವರ್ಷದಲ್ಲಿ 1,300ಕ್ಕೂ ಅಧಿಕ ಮಂದಿಗೆ ಅನುಕೂಲವಾಗಿದೆ.
ನಗರಸಭೆ ವತಿಯಿಂದ ದೀನದಯಾಳ್ ಅಂತ್ಯೋ ದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅನುದಾನದಲ್ಲಿ 37.32 ಲಕ್ಷ ರೂ. ವೆಚ್ಚದಲ್ಲಿ 2 ಸಾವಿರ ಚದರಡಿಯ ಈ ಕಟ್ಟಡವನ್ನು 2017ರ ಜೂನ್‌ನಲ್ಲಿ ಉದ್ಘಾಟಿಸಲಾಗಿತ್ತು.
2018ರಿಂದ ಬಸ್‌ನಿಲ್ದಾಣ ಸಹಿತ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸೂರಿಲ್ಲದೆ ರಾತ್ರಿ ಹೊತ್ತು ಮಲಗುವವರನ್ನು ಇಲ್ಲಿಗೆ ತಂದು ಬಿಡಲಾಗುತ್ತದೆ. ಏಕಕಾಲದಲ್ಲಿ 34 ಪುರುಷರು ಹಾಗೂ 14 ಮಹಿಳೆಯರ ವಾಸ್ತವ್ಯಕ್ಕೆ ಇಲ್ಲಿ ಅವಕಾಶವಿದೆ.
ದಾಖಲೆ ಅಗತ್ಯ
ವಸತಿ ತಾಣದಲ್ಲಿ ಯಾವುದೇ ಪರಿಚಾರಕರಿಲ್ಲ. ಆದರೆ ಮೂವರು ಸಿಬಂದಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅತ್ಯಂತ ಕಡಿಮೆ ಆದಾಯ ಹೊಂದಿರುವ ಕೂಲಿ ಕಾರ್ಮಿಕರು ಇಲ್ಲಿ ವಾಸ್ತವ್ಯವಿದ್ದು, ಹೊರಗೆ ಕೆಲಸಕ್ಕೆ ಹೋಗಲು ಅವಕಾಶವಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಣೆಗಳಿದ್ದು, ಪುರುಷರಿಗೆ 6 ಶೌಚಗೃಹ, ಮಹಿಳೆಯರಿಗೆ 4 ಶೌಚಗೃಹದ ವ್ಯವಸ್ಥೆ ಇದೆ. ಇಲ್ಲಿಗೆ ವಾಸಮಾಡಲು ಇಚ್ಛಿಸುವವರು ಆಧಾರ್ ಸಹಿತ ಯಾವುದೇ ಸರಕಾರಿ ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆದರೆ 18 ವರ್ಷ ಮೇಲ್ಪಟ್ಟವರು ಮಾತ್ರ ಉಳಿದುಕೊಳ್ಳಬಹುದು.
ಎಪ್ರಿಲ್, ಮೇ ತಿಂಗಳಲ್ಲಿ ಅಧಿಕ
2018 ಮಾರ್ಚ್‌ನಲ್ಲಿ ಪ್ರಾರಂಭವಾದ ಈ ವಸತಿ ತಾಣದಲ್ಲಿ ಇದುವರೆಗೆ 1,300ಕ್ಕೂ ಅಧಿಕ ಮಂದಿಗೆ ಆಶ್ರಯ ಪಡೆದಿದ್ದಾರೆ. ದಿನಕ್ಕೆ ಸರಾಸರಿ 5 ಮಂದಿ ಉಳಿದುಕೊಳ್ಳಲು ಬರುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಶ್ರಯ ತಾಣ ಭರ್ತಿಯಾಗಿರುತ್ತದೆ. ಇಲ್ಲಿ ಉಳಿದುಕೊಳ್ಳುವವರಿಗೆ ಕಬ್ಬಿಣದ ಕಾಟ್, ಹೊದಿಕೆ ನೀಡಲಾಗುತ್ತದೆ. ಫಾéನ್, ಸೋಲಾರ್ ವಾಟರ್ ಹೀಟರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಆಶ್ರಯತಾಣಗಳಿಗೆ
ಸೇರ್ಪಡೆ
ಹಲವಾರು ಜಿಲ್ಲೆಗಳಿಂದ ಆಗಮಿಸುವ ಕೂಲಿ ಕಾರ್ಮಿಕರು ಮೊದಲು ಇಲ್ಲಿ ವಾಸ್ತವ್ಯ ಹೂಡಿ ಅನಂತರ ಬೇರೆ ಕೊಠಡಿಗಳನ್ನು ಪಡೆಯುತ್ತಾರೆ. ನಗರದ ಬಸ್ ನಿಲ್ದಾಣ, ಪಾರ್ಕ್‌ಗಳಲ್ಲಿ ಮಲಗಿರುವವರನ್ನು ಆಶ್ರಯತಾಣಗಳಿಗೆ ಸೇರಿಸಲಾಗುತ್ತದೆ.
-ನಾರಾಯಣ ಎಸ್.ಎಸ್., ಸಮುದಾಯ ಸಂಘಟನಾ ಅಧಿಕಾರಿ, ನಗರಸಭೆ
ಜಿಲ್ಲೆಗೆ ಒಂದೇ
ವಸತಿ ರಹಿತ ಆಶ್ರಯ ತಾಣ
ಉಡುಪಿ ಜಿಲ್ಲಾದ್ಯಂತ ಸದ್ಯಕ್ಕೆ ಒಂದೇ ವಸತಿ ರಹಿತ ಆಶ್ರಯತಾಣವಿದೆ. ಉಡುಪಿ ನಗರದ ಆಸುಪಾಸು ಇದ್ದರೆ ಉತ್ತಮ ಎಂಬ ಪ್ರತಿಕ್ರಿಯೆಯೂ ಹಲವರಿಂದ ವ್ಯಕ್ತವಾಗುತ್ತದೆ. ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಬೇಡಿಕೆ ಬಂದಲ್ಲಿ ವಸತಿ ರಹಿತ ಆಶ್ರಯತಾಣ ಸ್ಥಾಪಿಸುವ ಉದ್ದೇಶವನ್ನೂ ಜಿಲ್ಲಾಡಳಿತ ಹೊಂದಿದೆ ಎಂದು ತಿಳಿಸುತ್ತಾರೆ ಅಧಿಕಾರಿಗಳು.
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.