“ಹನಿ, ತುಂತುರು ನೀರಾವರಿಗಳನ್ನು ಸದುಪಯೋಗಿಸಿ’
ಮಣ್ಣು, ನೀರಿನ ಸಂರಕ್ಷಣೆ ತಾಂತ್ರಿಕತೆ: ವಿಚಾರಸಂಕಿರಣ
Team Udayavani, Jul 16, 2019, 5:36 AM IST
ಉಡುಪಿ: ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಹಲವಾರು ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕರಾವಳಿ ಪ್ರದೇಶದಲ್ಲಿ ವಾರ್ಷಿಕವಾಗಿ 4300ರಿಂದ 4800 ಮೀ. ಮೀ. ಮಳೆ ಸುರಿಯುತ್ತಿದೆ. ಆದರೂ ಕೂಡ ಇತ್ತೀಚಿನ ಕೆಲ ದಿನಗಳಲ್ಲಿ ಹಲವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತಹ ಸ್ಥಿತಿಯಿದೆ. ರೈತರು ಹನಿನೀರಾವರಿ, ತುಂತುರು ನೀರಾವರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಡಾ| ಭುವನೇಶ್ವರಿ ಹೇಳಿದರು.
ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳದ ಪ್ರಯುಕ್ತ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ಸೋಮವಾರ ನಡೆದ ಮಣ್ಣು ಮತ್ತು ನೀರಿನ ಸಂರಕ್ಷಣೆ ತಾಂತ್ರಿಕತೆಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನೀರು ಶೇಖರಿಸುವ ಜಾಣ್ಮೆಯಿರಲಿ
ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಮಹಾದೇವ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಒಂದು ವರ್ಷದಲ್ಲಿ ಕೇವಲ 65 ದಿನ ಮಳೆ ಸುರಿಯುತ್ತದೆ. ಕರಾವಳಿ ಭಾಗದಲ್ಲಿ ವಾರ್ಷಿಕವಾಗಿ 4 ಸಾವಿರ ಮಿ.ಮೀ., ಪಶ್ಚಿಮ ಘಟ್ಟ ಸಾಲಿನಲ್ಲಿ 5 ಸಾವಿರ ಮಿ.ಮೀ.ನಷ್ಟು ಮಳೆ ಸುರಿಯುತ್ತದೆ. ಆ ಸಮಯದಲ್ಲಿ ಶೇಖರಣೆಯಾಗುವ ನೀರನ್ನು ಉಪಯೋಗಿಸುವ ಪರಿಯನ್ನು ರೈತರು ಕರಗತ ಮಾಡಿಕೊಳ್ಳಬೇಕು ಎಂದರು.
ಜಿ.ಪಂ. ಸಿಇಒ ಸಿಂಧೂ ಬಿ.ರೂಪೇಶ್, ಕುಂದಾಪುರದ ಹಿರಿಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ, ಪ್ರಗತಿಪರ ಕೃಷಿಕರಾದ ಸತೀಶ್ ಶೆಟ್ಟಿ ಯಡ್ತಾಡಿ, ರಾಮಕೃಷ್ಣ ಭಟ್ ಕೆಂಜಾರು, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
5 ಟನ್ ಹಲಸಿನ ಹಣ್ಣು ಖತಂ!
3 ದಿನಗಳ ಕಾಲ ನಡೆದ ಹಲಸು ಮೇಳದಲ್ಲಿ ಹೋಳಿಗೆ, ಹಲಸಿನ ಬೀಜದ ಚಟ್ಟಂಬಡೆ, ಕಬಾಬ್, ಪೋಡಿ, ಮಂಚೂರಿ, ಗಟ್ಟಿ, ಬನ್ಸ್, ಶೀರಾ, ಐಸ್‌ಕ್ರಿಂ ಹೋಳಿಗೆ ಸಹಿತ ಸುಮಾರು 40ರಿಂದ 50 ರಷ್ಟು ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಯಿತು. ಸುಮಾರು 5 ಟನ್ (900ಕ್ಕೂ ಅಧಿಕ) ಹಲಸಿನ ಹಣ್ಣುಗಳು ಮಾರಾಟವಾದವು. 23 ಸ್ಟಾಲ್‌ಗಳಿದ್ದು, ಪ್ರತೀ ಸ್ಟಾಲ್‌ನಲ್ಲೂ 50 ರಿಂದ 60 ಸಾವಿರ ರೂ.ನಂತೆ ಒಟ್ಟು 12 ರಿಂದ 15 ಲ.ರೂ. ವ್ಯವಹಾರವಾಯಿತು. 10ರಿಂದ 12 ಸಾವಿರದಷ್ಟು ಜನರು ಭೇಟಿ ನೀಡಿ ತಮಗಿಷ್ಟದ ವಸ್ತುಗಳನ್ನು ಖರೀದಿಸಿ ಖುಷಿಪಟ್ಟಿದ್ದಾರೆ. ಸಸ್ಯಸಂತೆಯಲ್ಲೂ 5 ಸಾವಿರಕ್ಕೂ ಅಧಿಕ ತರಕಾರಿ ಮತ್ತು ವಾಣಿಜ್ಯ ಬೆಳೆ ಗಿಡಗಳು ಮಾರಾಟವಾದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.