ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ
ಜ್ಯಾಕ್ ಲಿಫ್ಟಿಂಗ್ ಮೂಲಕ ಮನೆ ಎತ್ತರಿಸುವ ವಿನೂತನ ತಂತ್ರಜ್ಞಾನ
Team Udayavani, Jan 23, 2022, 5:17 PM IST
ಕಾಪು: ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳು ಮಳೆಗಾಲದಲ್ಲಿ ಜಲಾವೃತಗೊಳ್ಳುವುದು ಮಾಮೂಲಾಗಿದೆ. ಕೃತಕ ನೆರೆಯ ಭೀತಿಯಿಂದಾಗಿ ಅತ್ತ ತಮ್ಮ ಪೂರ್ವಜರು ಕಟ್ಟಿಸಿದ ಮನೆಯನ್ನು ಕೆಡವಲಾಗದೇ, ಇತ್ತ ಇರುವ ಮನೆಯಲ್ಲಿ ಕುಳಿತುಕೊಳ್ಳಲೂ ಆಗದೇ ಚಡಪಡಿಕೆ ಇದ್ದೇ ಇರುತ್ತದೆ.
ಇಂತಹ ಚಡಪಡಿಕೆಯಿಂದ ಪಾರಾಗಲು ಕಾಪು ಕಲ್ಯ ಮಜಲಗುತ್ತು ಮನೆಯಲ್ಲಿ ಉಪಾಯವೊಂದನ್ನು ಹುಡುಕಲಾಗಿದ್ದು, ಕರಾವಳಿಯಲ್ಲೇ ಮೊತ್ತ ಮೊದಲು ಇದ್ದ ಮನೆಯನ್ನೇ ಮೂರು ಫೀಟ್‌ನಷ್ಟು ಎತ್ತರಕ್ಕೇರಿಸುವ ಅಪರೂಪದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಎಲ್ಲರೂ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.
ಜ್ಯಾಕ್ ಲಿಫ್ಟ್ ಮೂಲಕ ಮನೆಯನ್ನು ಎತ್ತರಿಸುವ ಪ್ರಯತ್ನ : ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕಾಪು ಕಲ್ಯ ಮಜಲಗುತ್ತು ದಿ| ರವೀಂದ್ರ ಶೆಟ್ಟಿ ಅವರು 22 ವರ್ಷಗಳ ಹಿಂದೆ ತನಗೆ ಮತ್ತು ತನ್ನ ಹೆಂಡತಿ, ಮಕ್ಕಳಿಗಾಗಿ ಕಟ್ಟಿಸಿದ್ದ 1,300 ಚದರ ಅಡಿ ವಿಸ್ತೀರ್ಣದ ಟ್ಯಾರೇಸ್ ಮನೆಯನ್ನು ತಂತ್ರಜ್ಞಾನ ಬಳಸಿ ಬುಡದಿಂದಲೇ ತುಂಡರಿಸಿ, ಕೇವಲ ಜ್ಯಾಕ್ ಮತ್ತು ಇಟ್ಟಿಗೆಗಳನ್ನು ಬಳಸಿಕೊಂಡು ಎತ್ತರಕ್ಕೇರಿಸುವ ಪ್ರಯತ್ನ ನಡೆಯುತ್ತಿದ್ದು ಇದರಲ್ಲಿ ಭಾಗಶಃ ಯಶಸ್ಸನ್ನೂ ಸಾಧಿಸಲಾಗಿದೆ.
ಹಿರಿಯರ ಮನೆ ಉಳಿಸಿಕೊಳ್ಳಲು ಕಡಿಮೆ ಖರ್ಚು, ಸುಲಭ ಉಪಾಯ : ನಮ್ಮ ತಂದೆ ರವೀಂದ್ರ ಶೆಟ್ಟಿ ಅವರು 22 ವರ್ಷಗಳ ಹಿಂದೆ ಶ್ರಮ ವಹಿಸಿ, ಸ್ವಂತ ಪರಿಶ್ರಮದಿಂದ 11 ಸಾಲು ಕಲ್ಲುಗಳ ಭದ್ರ ತಳಪಾಯ ಹಾಕಿಸಿ, ಭೂ ಮಟ್ಟದಿಂದ ಬಹಳಷ್ಟು ಎತ್ತರದಲ್ಲೇ ಮನೆ ನಿರ್ಮಿಸಲಾಗಿದ್ದರೂ ಕಾಲ ಕ್ರಮೇಣ ಸುತ್ತಲಿನ ಭೂ ಪ್ರದೇಶಗಳನ್ನು ಮಣ್ಣು ತುಂಬಿ ಎತ್ತರಿಸಿದ ಪರಿಣಾಮ ಮಜಲಗುತ್ತು ಮನೆ ಮಳೆಗಾಲದಲ್ಲಿ ಮಳೆ ನೀರಿನಲ್ಲಿ ಮುಳುಗುವಂತಾಗಿತ್ತು. ತಂದೆ ಕಷ್ಟಪಟ್ಟು ನಿರ್ಮಿಸಿದ ಮನೆಯನ್ನು ಕೆಡವಿ ಹೊಸದಾಗಿ ರಚನೆ ಮಾಡಿದರೆ ಆಗ ತಂದೆ ಕಟ್ಟಿಸಿದ ಮನೆಯ ನೆನಪು ಮಾಸಿ ಹೋಗುತ್ತದೆ, 25-30 ಲಕ್ಷ ರೂ. ಬೆಲೆ ಬಾಳುವ ಮನೆಯನ್ನು ಒಡೆದು ತೆಗೆಯುವುದೇ ದೊಡ್ಡ ಖರ್ಚಿನ ದಾರಿಯಾಗಿತ್ತು. ಇದನ್ನು ಮನಗಂಡು ತಾಯಿ ಅಂಬಾ ಆರ್. ಶೆಟ್ಟಿ, ಸಹೋದರಿ ಅನಿತಾ ಶೆಟ್ಟಿ, ಸಹೋದರರಾದ ಡಾ| ಅನೀಶ್ ಶೆಟ್ಟಿ, ಅನಿಲ್ ಶೆಟ್ಟಿ ಅವರೊಂದಿಗೆ ಚರ್ಚಿಸಿ ಈ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ಎತ್ತರಕ್ಕೇರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇದರಲ್ಲಿ ಸಂಪೂರ್ಣ ಯಶಸ್ಸನ್ನೂ ಸಾಧಿಸುವ ವಿಶ್ವಾಸವಿದೆ ಎನ್ನುತ್ತಾರೆ ವಹಿಸಿಕೊಂಡಿರುವ ಅಜಿಲ್ ಶೆಟ್ಟಿ ಮಜಲಗುತ್ತು.
ಏನಿದು ಜ್ಯಾಕ್ ಲಿಫ್ಟಿಂಗ್ : ಜ್ಯಾಕ್ ಲಿಫ್ಟಿಂಗ್ ತಂತ್ರಜ್ಞನವು ಅತ್ಯಂತ ನಾಜೂಕಿನಿಂದ ನಡೆಸುವ ಕಾರ್ಯವಾಗಿದೆ. ಜ್ಯಾಕ್ ಲಿಫ್ಟಿಂಗ್ ತಂಜ್ಞನದಲ್ಲಿ ಪರಿಣತಿ ಹೊಂದಿರುವ ಹರಿಯಾಣ ಮೂಲದ ತಂತ್ರಜ್ಞರನ್ನು ಸಂಪರ್ಕಿಸಿ, ಅವರ ಮೂಲಕವಾಗಿ ಮನೆಯನ್ನು ಎತ್ತರಕ್ಕೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜ. 1ರಂದು ಹರ್ಯಾಣ ಮೂಲದ ೫ ಮಂದಿ ಕಾರ್ಮಿಕರು ಮಜಲಗುತ್ತು ಮನೆಯನ್ನು ೩ ಅಡಿಗಳಷ್ಟು ಎತ್ತರಕ್ಕೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅದಕ್ಕಾಗಿ ಸುಮಾರು 30 ಟನ್ ಸಾಮರ್ಥ್ಯದ 222 ಜ್ಯಾಕ್‌ಗಳನ್ನು ಬಳಸಿಕೊಳ್ಳಲಾಗಿದೆ. ನುರಿತ ತಂತ್ರಜ್ಞರ ಮಾರ್ಗದರ್ಶನದಲ್ಲಿ 5 ಜನ ಕೆಲಸಗಾರರು ತಳಪಾಯ ಮತ್ತು ಮನೆಯ ನೆಲ ಹಾಸನ್ನು ಹೊರತು ಪಡಿಸಿ ಸಂಪೂರ್ಣ ಗೋಡೆಯನ್ನು ಜ್ಯಾಕ್ ಲಿಫ್ಟಿಂಗ್ ಮೂಲಕವಾಗಿ ಜ್ಯಾಕ್ ಮೇಲೆಯೇ ನಿಲ್ಲಿಸಿ ಬಿಟ್ಟಿದ್ದಾರೆ.
ಮನೆಗೆ ಯಾವುದೇ ಹಾನಿಯಿಲ್ಲ : ಜ್ಯಾಕ್ ಲಿಫ್ಟಿಂಗ್ ತಂಜ್ಞನ ಒಮ್ಮೆಗೆ ನೋಡುಗರನ್ನು ಆತಂಕದೊಂದಿಗೆ ನಿಬ್ಬೆರಗಾಗಿಸುತ್ತದೆಯಾದರೂ ಇದರಿಂದ ಇಡೀ ಮನೆಗೆ ಯಾವುದೇ ರೀತಿಯ ಹಾನಿಯುಂಟಾಗಿಲ್ಲ ಎನ್ನುವುದು ಅಷ್ಟೇ ಸತ್ಯವಾಗಿದೆ. ನೆಲದ ಹಾಸು ಹೊರತು ಪಡಿಸಿ ಮನೆಯ ಎಲ್ಲಾ ಗೋಡೆಗಳು, ವಿದ್ಯುತ್ ಸಂಪರ್ಕ, ವೈರಿಂಗ್, ಸೀಲಿಂಗ್, ಅಡುಗೆ ಕೋಣೆಯ ವ್ಯವಸ್ಥೆಗಳು, ಕಿಟಕಿಗಳು, ದಾರಂದ ಮತ್ತು ಬಾಗಿಲುಗಳು ಮನೆಯ ಟ್ಯಾರೇಸ್, ಮೆಟ್ಟಿಲಗಳು ಎಲ್ಲವೂ ಯಥಾಸ್ಧಿತಿಯಲ್ಲಿ ಹಾಗೆಯೇ ಜ್ಯಾಕ್ ಮೇಲೆ ನಿಂತು ಬಿಟ್ಟಿವೆ. 22 ದಿನಗಳಿಂದ ಯಾವುದೇ ಆತಂಕವಿಲ್ಲದೇ ಮನೆಯ ಪಂಚಾಂಗವನ್ನು ಎತ್ತರಕ್ಕೇರಿಸುವ ಪ್ರಕ್ರಿಯೆ ನಡೆದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಹತ್ತು ದಿನಗಳಲ್ಲಿ ಮನೆ ಹಿಂದೆ ಇದ್ದ ರೀತಿಯಲ್ಲೇ ಈಗಿನ 11 ಸಾಲು ಕಲ್ಲುಗಳ ಪಂಚಾಂಗದ ಮೇಲೆ ಮೂರು ಅಡಿ ಎತ್ತರದ ಪಂಚಾಂಗದ ಮೇಲೆ ಸೇಫ್ ಆಗಿ ನಿಂತು ಬಿಡಲಿದೆ.
5 ಮಂದಿ ಕಾರ್ಮಿಕರು, 3 ಲಕ್ಷ ರೂ. ಖರ್ಚು : ಕರಾವಳಿಯಲ್ಲಿ ಈಗ ಹೊಸ ಮನೆ ನಿರ್ಮಾಣಕ್ಕೆ ಕಡಿಮೆಯಿಂದರೂ ಚ.ಅ.ಗೆ ಕನಿಷ್ಟ 1,700 ರೂ. ಖರ್ಚಾಗುತ್ತದೆ. ಅದರ ಲೆಕ್ಕದಂತೆ ಹಿಡಿದರೂ ೧,೩೦೦ ಚ. ಅ. ವಿಸ್ತಿರ್ಣದ ಮನೆ ನಿರ್ಮಾಣಕ್ಕೆ ಕನಿಷ್ಟ 22 ಲಕ್ಷ ರೂಪಾಯಿ ಬೇಕಾಗುತ್ತದೆ. ಅದೇ ಮನೆಯನ್ನು ಕೆಡವಿ, ಹೊಸದಾಗಿ ನಿರ್ಮಿಸುವುದಾದರೆ ಅದರಲ್ಲಿ ಪಂಚಾಂಗಕ್ಕೆ ಹಾಕಿದ ಕಲ್ಲುಗಳನ್ನು ಬಿಟ್ಟರೆ ಉಳಿದದ್ದೇನೂ ಸಿಗುವುದಿಲ್ಲ. ಆದರೆ ಜ್ಯಾಕ್ ಲಿಫ್ಟಿಂಗ್ ಮೂಲಕ ಮನೆ ಎತ್ತರಿಸುವ ಪ್ರಯತ್ನಕ್ಕೆ ಕೇವಲ 3.25 ಲಕ್ಷ ರೂಪಾಯಿ ಖರ್ಚು ತಗಲಲಿದೆ. ಅಂದರೆ ಚ. ಅ. ಗೆ 250 ರೂ. ಗಳಂತೆ ನಿಗದಿಯಾಗಿದ್ದು, ಕೇವಲ 5 ಮಂದಿ ಕಾರ್ಮಿಕರು ಒಂದು ತಿಂಗಳಲ್ಲಿ ಕೆಲಸ ಮುಗಿಸಿಕೊಡುವ ಕರಾರು ಮಾಡುತ್ತಾರೆ. ಇಡೀ ಮನೆಯನ್ನು ಉಳಿಸಿಕೊಂಡು, 3.25 ಲಕ್ಷ ರೂ. ವೆಚ್ಚದಲ್ಲಿ 3 ಅಡಿ ಎತ್ತರಕ್ಕೇರಿಸಿಕೊಂಡು, ನಮಗೆ ಬೇಕಾದ ರೀತಿಯಲ್ಲಿ ಮನೆಯನ್ನು ನವೀಕರಿಸಿಕೊಳ್ಳಲು ಅವಕಾಶವಿದೆ.
ಕರಾವಳಿಗೂ ಬೆಂಗಳೂರು ಮಾದರಿ ಯೋಜನೆಯನ್ನು ಪರಿಚಯಿಸಿದ ಹೆಮ್ಮೆ : ಜ್ಯಾಕ್ ಲಿಫ್ಟಿಂಗ್ ತಂಜ್ಞನದ ಮೂಲಕ ಮನೆಯನ್ನು ಎತ್ತರಕ್ಕೇರಿಸಿಕೊಳ್ಳುವ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಕಾಂಡಿದ್ದು, ನಮ್ಮಲ್ಲೂ ಈ ಮಾದರಿಯನ್ನು ಪರಿಚಯಿಸಬೇಕೆಂಬ ಹಂಬಲವಿತ್ತು. ಅದರಂತೆ ತಾಯಿ, ಸಹೋದರಿ ಮತ್ತು ಸಹೋದರರಲ್ಲಿ ಈ ಬಗ್ಗೆ ಚರ್ಚಿಸಿ, ನಮ್ಮ ಇದ್ದ ಮನೆಯನ್ನು ಉಳಿಸಿಕೊಂಡು, ನವೀಕರಿಸಲು ಬಳಸಿಕೊಳ್ಳಬಹುದಾದ ಉಪಾಯವನ್ನು ತಿಳಿಸಿದ್ದೆನು. ಅದಕ್ಕೆ ಅವರಿಂದಲೂ ಉತ್ತಮ ಸ್ಪಂಧನೆ ದೊರಕಿದ ಪರಿಣಾಮ ಜ್ಯಾಕ್ ಲಿಫ್ಟಿಂಗ್‌ನ್ನು ಪರಿಚಯಿಸಲು ಅವಕಾಶ ಸಿಕ್ಕಿದೆ. ಕರಾವಳಿಯಲ್ಲಿ ಈ ತಂಜ್ಞನದಿಂದ ಸಮಸ್ಯೆಯಾದೀತೆ ಎಂಬ ಆತಂಕವೂ ಇತ್ತು. ಆದರೆ ಜ್ಯಾಕ್ ಲಿಫ್ಟಿಂಗ್‌ನ ಪ್ರಯತ್ನಕ್ಕೆ ಬಹುತೇಕ ಯಶಸ್ಸು ದೊರಕಿದ್ದು ಎತ್ತರಕ್ಕೇರಿಸುವ ಕಾಮಗಾರಿ ಮುಗಿದ ಕೂಡಲೇ ಮನೆಯನ್ನು ಇಂದಿನ ಅಗತ್ಯ ಮತ್ತು ಅನಿವಾರ್ಯತೆಗೆ ತಕ್ಕಂತೆ ರಿನೋವೇಶನ್ ನಡೆಸಲಾಗುವುದು. –ಅಜಿತ್ ಶೆಟ್ಟಿ ಮಜಲಗುತ್ತು ಕಲ್ಯ ಉದ್ಯಮಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.