ದೇವೇಗೌಡರು ಪ್ರಧಾನಿಯಾಗಿದ್ದರೆ ಕಾಶ್ಮೀರ ವಿವಾದವೂ ಇತ್ಯರ್ಥ
ಮಾಜಿ ಪ್ರಧಾನಿ ಜತೆ ತುರ್ತುಪರಿಸ್ಥಿತಿ ಸ್ಮರಿಸಿಕೊಂಡ ಪೇಜಾವರ ಶ್ರೀ
Team Udayavani, May 15, 2019, 6:16 AM IST
ಉಡುಪಿ: ದೇವೇಗೌಡ ಅವರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಕೂಡ ಬಗೆಹರಿಯುತ್ತಿತ್ತು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ದೇವೇಗೌಡ ದಂಪತಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅನಂತರ ಉಡುಪಿ ಗೋವಿಂದ ಕಲ್ಯಾಣಮಂಟಪದಲ್ಲಿ ತನ್ನ ಜನ್ಮನಕ್ಷತ್ರ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು.
ದೇವೇಗೌಡ ಅವರು ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಅವರು ರಾಜ್ಯದ ಪ್ರಾಮಾಣಿಕ ರಾಜಕಾರಣಿ. ಅವರು ಪ್ರಧಾನಿಯಾಗಿದ್ದಾಗ ಹೊಸದಿಲ್ಲಿಯಲ್ಲಿ ಮಠಕ್ಕೆಂದು ಒಂದು ಎಕರೆ ಜಾಗವನ್ನು ಕಡಿಮೆ ಬೆಲೆಗೆ ನೀಡಿದ್ದರು. ಅದರಲ್ಲಿ ಮಠ ಆಗಿದೆ. ಸಂಶೋಧನ ಕೇಂದ್ರ ಜುಲೈಯಲ್ಲಿ ಆರಂಭಗೊಳ್ಳಲಿದೆ ಎಂದು ಶ್ರೀಗಳು ಹೇಳಿದರು.
ಮಂತ್ರಾಕ್ಷತೆ ಪಡೆದು ಜೈಲಿಗೆ
ತುರ್ತುಪರಿಸ್ಥಿತಿ ವೇಳೆ ಹೊಳೆನರಸೀಪುರದಲ್ಲಿ ದೇವೇಗೌಡರು ಜೈಲಿಗೆ ಹೋಗುವ ಮೊದಲು ನನ್ನಿಂದ ಮಂತ್ರಾಕ್ಷತೆ ಪಡೆದು ಕೊಂಡಿದ್ದರು. ನಾನು ಕೂಡ ತುರ್ತುಪರಿಸ್ಥಿತಿ ವಿರುದ್ಧ ಇಂದಿರಾ ಗಾಂಧಿಯವರಿಗೆ ಉಗ್ರವಾಗಿ ಪತ್ರ ಬರೆದಿದ್ದೆ. ನನ್ನನ್ನು ಕೂಡ ಬಂಧಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ತುರ್ತುಪರಿಸ್ಥಿತಿ ವಿರುದ್ಧ ಗುಪ್ತವಾಗಿಯೂ ಪ್ರವಚನ ನೀಡುತ್ತಿದ್ದೆ ಎಂದು ಪೇಜಾವರ ಶ್ರೀಗಳು ಸ್ಮರಿಸಿಕೊಂಡರು. ಶ್ರೀಗಳ ಜನ್ಮ ನಕ್ಷತ್ರ ಸಮಾರಂಭದ ಪ್ರಯುಕ್ತ ಪೂಜೆಯಲ್ಲಿ ಪಾಲ್ಗೊಂಡ ದೇವೇಗೌಡ ದಂಪತಿ ಅನುಗ್ರಹ ಮಂತ್ರಾಕ್ಷತೆ ಪಡೆದರು. ಶ್ರೀಗಳು ಶಾಲು, ಹಾರ ಹಾಕಿ ಆಶೀರ್ವದಿಸಿದರು. ಅನಂತರ ದೇವೇಗೌಡ ದಂಪತಿ ಅನ್ನಪ್ರಸಾದ ಸ್ವೀಕರಿಸಿದರು. ವಿಧಾನಪರಿಷತ್ ಸದಸ್ಯ ಭೋಜೇಗೌಡ, ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ವೈದ್ಯ ಡಾ| ತನ್ಮಯ ಗೋಸ್ವಾಮಿ, ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.
ರಾಜಕೀಯ ಮಾತನಾಡಿಲ್ಲ
ದೇವೇಗೌಡ ಅವರು ತೆರಳಿದ ಅನಂತರ ಪೇಜಾವರ ಶ್ರೀಗಳನ್ನು ಪತ್ರಕರ್ತರು ಮಾತನಾಡಿಸಿದಾಗ, ರಾಜಕೀಯದ ಬಗ್ಗೆ ಮಾತನಾಡಿಲ್ಲ. ಕಲಿಯುಗದಲ್ಲಿ ಕೃಷ್ಣ ವಿಶೇಷ. ಮಧ್ವಾಚಾರ್ಯರ ಬಗ್ಗೆ ಬನ್ನಂಜೆ ಗೋವಿಂದಾಚಾರ್ಯರು ಬರೆದ ಪುಸ್ತಕ ಓದುತ್ತಿದ್ದೇನೆ ಎಂದು ದೇವೇಗೌಡ ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು. ದೇವೇಗೌಡರು ಹಿಂತಿರುಗುವ ವೇಳೆ ಸುದ್ದಿಗಾರರು ಮಾತನಾಡಿಸಲು ಯತ್ನಿಸಿದರು. ಅವರು ಪೇಜಾವರ ಶ್ರೀಗಳಿಗೆ ಗೌರವ ಅರ್ಪಿಸಿ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದಷ್ಟೆ ಪ್ರತಿಕ್ರಿಯಿಸಿದರು.
ಶ್ರೀಕೃಷ್ಣ ಮಠಕ್ಕೆ ಭೇಟಿ
ದೇವೇಗೌಡ ದಂಪತಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಮಾಡಿ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರರಿಂದ ಮಂತ್ರಾಕ್ಷತೆ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀಗಳ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ, ಮಠದ ಪಿಆರ್‌ಒ ಶ್ರೀಶ ಕಡೆಕಾರ್, ವಾಸುದೇವ ರಾವ್ ಉಪಸ್ಥಿತರಿದ್ದರು.
ಕೃಷ್ಣಪ್ರಸಾದ; ಪೇಜಾವರ ಶ್ರೀಗಳ ಪ್ರಸಾದ
ದೇವೇಗೌಡ ಅವರು ಪೇಜಾವರ ಶ್ರೀಗಳ ಜತೆಗೆ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಕಲ್ಯಾಣ ಮಂಟಪದಲ್ಲಿಯೇ ಪೂರಿ, ಬೆಳ್ತಿಗೆ ಅನ್ನ, ಮೊಸರು, ಒಂದೆರಡು ಬಗೆಯ ಸಿಹಿ ತಿನಿಸುಗಳನ್ನೊಳಗೊಂಡ ಅನ್ನಪ್ರಸಾದ ಸ್ವೀಕರಿಸಿದರು. ಇದಕ್ಕಿಂತ ಸುಮಾರು ಒಂದು ತಾಸು ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಅಲ್ಲಿಯೂ ಶ್ರೀಕೃಷ್ಣನ ಪ್ರಸಾದ ರೂಪವಾಗಿ ಅನ್ನ, ಸಾರು, ಮಜ್ಜಿಗೆ, ಪಾಯಸ, ಸ್ವಲ್ಪ ಸಿಹಿತಿನಿಸು ಸೇವಿಸಿದರು. ಪೇಜಾವರ ಶ್ರೀಗಳ ಮೇಲಿನ ಗೌರವದಿಂದ ದೇವೇಗೌಡರು ಮಧ್ಯಾಹ್ನ ಎರಡನೇ ಬಾರಿ ಪ್ರಸಾದರೂಪದ ಭೋಜನ ಸ್ವೀಕರಿಸಿದರು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.