“ನೀಟ್ ಬಾಗಿಲು ತೆರೆದರೆ ವೈದ್ಯಕೀಯ ಜಗತ್ತಿಗೆ ತೆರಳುವೆವು’
Team Udayavani, Jun 2, 2024, 12:36 AM IST
ಈ ಬಾರಿ ಸದ್ದಿಲ್ಲದೇ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಒಂದೆಡೆ ಚುನಾವಣೆ ಫಲಿತಾಂಶದ ಭರಾಟೆ, ಮತ್ತೊಂದೆಡೆ ಕ್ರಿಕೆಟ್ ನ ಅಬ್ಬರದ ಮಧ್ಯೆ ಸಿಇಟಿ ಫಲಿತಾಂಶ ಬಂದದ್ದೇ ತಿಳಿಯಲಿಲ್ಲ. ಕರಾವಳಿಯ ಕಾಲೇಜುಗಳ ಸಾಧನೆ ಈ ಬಾರಿಯೂ ಜೋರಾಗಿದೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕರಾವಳಿಯ ವಿದ್ಯಾರ್ಥಿಗಳು ಅತ್ಯುತ್ತಮ ರ್‍ಯಾಂಕ್ ಪಡೆದು ಮುಂದಿನ ಶಿಕ್ಷಣಕ್ಕೆ ಸಜ್ಜಾಗುತ್ತಿದ್ದಾರೆ. ಆವರ ಬದುಕಿನ ಮುಂದಿನ ಅಲೋಚನೆಯನ್ನು ಉದಯವಾಣಿಯಂದಿಗೆ ಹಂಚಿಕೊಂಡಿದ್ದಾರೆ.
ನೀಟ್ ಫಲಿತಾಂಶದ ಬಳಿಕ
ಮುಂದಿನ ತೀರ್ಮಾನ: ನಿಹಾರ್
ಚಿಕ್ಕಂದಿನಿಂದಲೂ ಪಠ್ಯವನ್ನು ವಿಶೇಷ ಆಸಕ್ತಿಯಿಂದ ಓದುತ್ತಿದ್ದೆ. ತರಗತಿಯಲ್ಲಿ ಮಾಡಿದ ಪಾಠವನ್ನು ನಿಯಮಿತವಾಗಿ ಓದಿ, ನೆನಪಿಟ್ಟುಕೊಳ್ಳುತ್ತಿದ್ದೆ. ಜತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ಮಾಡಿ ಬರೆಯುತ್ತಿದ್ದೆ. ರ್‍ಯಾಂಕ್ ಬಂದಿರುವುದು ಖುಷಿ ತಂದಿದೆ. ಪಠ್ಯದ ಹೊರತಾದ ಪ್ರಶ್ನೆಗಳು ಬಂದಾಗ ಸ್ವಲ್ಪ ಆತಂಕವಾಗಿತ್ತು. ಮುಂದಕ್ಕೆ ನೀಟ್ ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಶಿಕ್ಷಕರು-ಹೆತ್ತವರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ.
– ನಿಹಾರ್ ಎಸ್.ಆರ್.
ತಂದೆ ಸುದರ್ಶನ್ ಬಿ. ಪ್ರವೀಣ್ -ಮಣಿಪಾಲದಲ್ಲಿ ಖಾಸಗಿ ಸಂಸ್ಥೆ ಉದ್ಯೋಗಿ; ತಾಯಿ ರೂಪಾ-ಗೃಹಿಣಿ
ಪಿಯು ಆರಂಭದಿಂದಲೇ
ಅಧ್ಯಯನ: ಆಕಾಶ್
ಪಿಯುಸಿ ಮೊದಲ ವರ್ಷದಿಂದಲೇ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೆ. ಇದು ಸಾಧನೆಗೆ ಸಾಕಷ್ಟು ಸಹಕಾರಿಯಾಯಿತು. ಕಾಲೇಜಿನಲ್ಲಿ ಮೊಬೈಲ್ ಬಳಕೆ ಮಾಡಲು ಅವಕಾಶವಿಲ್ಲದ ಕಾರಣ ಓದಿನ ಕಡೆಗೆ ಮಾತ್ರ ಗಮನ ಹರಿಸುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹವನ್ನೂ ಮರೆಯುವಂತಿಲ್ಲ. ಯಾವುದೇ ಹೊತ್ತಿನಲ್ಲಿ ಪಠ್ಯದ ಕುರಿತ ಅನುಮಾನಗಳನ್ನೂ ಕೇಳಿದರೂ ಬಗೆ ಹರಿಸುತ್ತಿದ್ದರು. ನೀಟ್‌ನಲ್ಲಿ 695ನೇ ರ್‍ಯಾಂಕ್ ನಿರೀಕ್ಷೆಯಲ್ಲಿದ್ದೇನೆ.
– ಆಕಾಶ್ ಶ್ರೀಶೈಲ ಕಂಕನವಾಡಿ
ತಂದೆ ಶ್ರೀಶೈಲ-ಆಹಾರ ಇಲಾಖೆ ಜಂಟಿ ನಿರ್ದೇಶಕರು, ತಾಯಿ ಮಂಜುಳಾ-ಶಿಕ್ಷಕಿ
ಮೆಡಿಕಲ್ ಓದುವೆ: ಸಂಜನಾ
ರ್‍ಯಾಂಕ್ ಬಂದಿರುವುದು ತುಂಬಾ ಖುಷಿ ತಂದಿದೆ. ಸಾಧನೆಗೆ ನೆರವಾದ ಶಿಕ್ಷಕರು- ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾಲೇಜಿನಲ್ಲಿ ಓದಲು ಕೊಟ್ಟಿರುವ ವೇಳಾಪಟ್ಟಿಯಂತೆ ಪ್ರತಿನಿತ್ಯ ಓದುತ್ತಿದ್ದೆ. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಪಾಠದ ಜತೆಗೆ ಓದಲೂ ಸಮಯ ಕೊಡುತ್ತಿದ್ದರು. ರಾತ್ರಿ ಹಾಸ್ಟೆಲ್‌ನಲ್ಲಿ 9ರಿಂದ 11 ಗಂಟೆ ವರೆಗೆ ಓದಲು ಸಮಯ ಮೀಸಲಿಟ್ಟಿದ್ದರು. ಇದನ್ನು ಸರಿಯಾಗಿ ಬಳಸಿಕೊಂಡು ಓದಿದ್ದೇನೆ. ಮುಂದಕ್ಕೆ ನೀಟ್ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಮೆಡಿಕಲ್ ಓದಲು ಬಯಸಿದ್ದೇನೆ.
– ಸಂಜನಾ ಸಂತೋಷ್ ಕಟ್ಟಿ
ತಂದೆ ಸಂತೋಷ್ ಕಟ್ಟಿ-ಸಾಫ್ಟ್‌ವೇರ್ ಎಂಜಿನಿಯರ್,
ತಾಯಿ ಸ್ನೇಹಾ – ಗೃಹಿಣಿ
ವೈದ್ಯಕೀಯ ಆಸಕ್ತಿ, ಅವಕಾಶ ಸಿಗುವ ವಿಶ್ವಾಸವಿದೆ: ಸ್ವಸ್ತಿಕ್
ನಿರೀಕ್ಷೆಯಂತೆ ಸಿಇಟಿಯಲ್ಲಿ ರ್‍ಯಾಂಕ್ ಬಂದಿದ್ದು, ತುಂಬಾ ಖುಷಿಯಾಗುತ್ತಿದೆ. ಶಿಕ್ಷಕರು ನೀಡಿರುವ ನಿರ್ದೇಶನದಂತೆ ಕಲಿಕೆಯಲ್ಲಿ ತೊಡಗಿಸಿಕೊಂಡ ಕಾರಣ ಇದು ಸಾಧ್ಯವಾಗಿದೆ. ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು ಮತ್ತು ಹೆತ್ತವರ ಪ್ರೋತ್ಸಾಹವಿತ್ತು. ಮುಂದಕ್ಕೆ ನೀಟ್ ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಅದರಲ್ಲಿಯೂ ಉತ್ತಮ ರ್‍ಯಾಂಕ್ ನಿರೀಕ್ಷೆಯಲ್ಲಿದ್ದೇನೆ. ಮುಂದಿನ ಶಿಕ್ಷಣವನ್ನು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕೈಗೊಳ್ಳಬೇಕು ಅಂದುಕೊಂಡಿದ್ದೇನೆ.
– ಸ್ವಸ್ತಿಕ್ ಅಖೀಲ್ ಶರ್ಮಾ
ತಂದೆ ಅಖೀತ್ ಕುಮಾರ್ ಶರ್ಮ- ಲೆಕ್ಕಪರಿಶೋಧಕರು, ತಾಯಿ ಗೀತಾ ಶರ್ಮ – ಗೃಹಿಣಿ
ಮೊಬೈಲ್ ದೂರವಿಟ್ಟದ್ದರಿಂದ
ಸಾಧನೆ: ಸುಹಾಸ್ ಎಂ.
ನಿತ್ಯದ ಕಲಿಕೆಯ ಜತೆಗೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನಲ್ಲಿ ಮೊಬೈಲ್ ಫೋನ್ ಬಳಕೆಗೆ ಅವಕಾಶ ಇಲ್ಲದಿರುವುದರಿಂದಲೇ ಈ ಸಾಧನೆ ಸಾಧ್ಯವಾಗಿದೆ. ತರಗತಿ ಅವಧಿ ಮಾತ್ರವಲ್ಲದೆ, ಹಾಸ್ಟೆಲ್‌ನಲ್ಲಿಯೂ ರಾತ್ರಿ ವೇಳೆ ಕೆಲವು ಗಂಟೆಗಳನ್ನು ಓದಲು ಮೀಸಲಿಡುತ್ತಿದ್ದೆ. ಆಯಾ ದಿನದ ಪಾಠವನ್ನು ಆಯಾದಿನವೇ ಓದಿ ಅದರಲ್ಲಿ ಅನುಮಾನಗಳಿದ್ದಲ್ಲಿ ಶಿಕ್ಷಕರಲ್ಲಿ ಬಗೆಹರಿಸಿಕೊಳ್ಳುತ್ತಿದೆ. ರ್‍ಯಾಂಕ್ ಬಂದಿರುವುದು ತುಂಬಾ ಖುಷಿಯಾಗಿದೆ. ನೀಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಮೆಡಿಕಲ್ ಓದಲು ಉದ್ದೇಶಿಸಿದ್ದೇನೆ.
ಸುಹಾಸ್ ಎಂ. – ತಂದೆ: ಮೋಹನ್ ಕುಮಾರ್-ಸಂಸ್ಥೆಯೊಂದರ ಮ್ಯಾನೇಜರ್, ತಾಯಿ: ಶಶಿಕಲಾ ಬಿ.ಎಂ.ಉಪನ್ಯಾಸಕಿ
ಸಾಧನೆಗೆ ತರಗತಿ ಪಾಠವೇ
ಸಾಕಾಯಿತು: ಪ್ರಣವ್ ಟಾಟಾ
ರ್‍ಯಾಂಕ್ ಬಂದಿರುವುದು ಖುಷಿ ತಂದಿದೆ. ತರಗತಿಯಲ್ಲಿ ಶಿಕ್ಷಕರು ಕಲಿಸುವಾಗಲೇ ಅರ್ಥವಾಗುವ ರೀತಿ ಕಲಿಸುತ್ತಿದ್ದರು. ಇದರಿಂದಾಗಿ ಒಂದು ಸಲ ಓದಿದರೆ ಸಾಕಾಗುತ್ತಿತ್ತು. ಕಲಿಕಾ ವಾತಾವರಣವೂ ಕಾಲೇಜಿನಲ್ಲಿ ಉತ್ತಮವಾಗಿತ್ತು. ಹಾಸ್ಟೆಲ್‌ನಲ್ಲಿಯೂ ಕಲಿಕೆಗೆ ಸಮಯ ಮೀಸಲಿತ್ತು. ಶಿಕ್ಷಕರೂ ಮಾರ್ಗದರ್ಶನ ನೀಡಿದ್ದಾರೆ. ಸಿಇಟಿ ಜತೆಗೆ ನೀಟ್ ಪರೀಕ್ಷೆಯನ್ನೂ ಚೆನ್ನಾಗಿ ಮಾಡಿದ್ದೇನೆ. ಅದರಲ್ಲೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಮುಂದಿಕ್ಕೆ ಮೆಡಿಕಲ್ ಕಲಿಯಬೇಕು ಎಂದಿದ್ದೇನೆ.
– ಪ್ರಣವ್ ಟಾಟಾ ಆರ್.
ತಂದೆ ರಾಕೇಶ್ ಬಾಬು-ಉದ್ಯಮ,
ತಾಯಿ ಶಾಲಿನಿ ಎಸ್.- ಗೃಹಿಣಿ.
ಯೋಗ, ಧ್ಯಾನವೂ ನನ್ನ ಸಾಧನೆಗೆ ಪೂರಕವಾದವು : ನಿಖೀಲ್ ಗೌಡ
ಮೂಡುಬಿದಿರೆ: ಎಕ್ಸಲೆಂಟ್ ಪ.ಪೂ. ಕಾಲೇಜಿನ ನಿಖೀಲ್ ಬಿ. ಗೌಡ ಬಿಎಸ್‌ಸಿ ನರ್ಸಿಂಗ್, ಪಶುವೈದ್ಯಕೀಯ ವಿಭಾಗದಲ್ಲಿ 8ನೇ, ಬಿ. ಫಾರ್ಮ, ಡಿ. ಫಾರ್ಮದಲ್ಲಿ ತಲಾ 10ನೇ ರ್‍ಯಾಂಕ್ ಗಳಿಸಿದ್ದಾರೆ.
“ಖುಷಿಯಾಗಿದೆ. ನೀಟ್ ಫಲಿತಾಂಶಕ್ಕಾಗಿ ಕಾಯುತ್ತಿರುವೆ. ಮೆಡಿಕಲ್ ಶಿಕ್ಷಣ ನನ್ನ ಆಯ್ಕೆ. ಎಕ್ಸಲೆಂಟ್‌ನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಬೆಳಗ್ಗೆ 5ಕ್ಕೆ ನಮ್ಮ ದಿನಚರಿ ಆರಂಭ. 6.30ರ ವರೆಗೆ ಯೋಗ, ಧ್ಯಾನ. ಇವೆಲ್ಲ ಮನಸ್ಸನ್ನು ಪ್ರಶಾಂತಗೊಳಿಸಿ ಓದಿಗೆ ಅಣಿಯಾಗಲು ಉತ್ತಮ ನೆಲೆ. ಅವರು ತನ್ನ ಅಕ್ಕನೂ ಎಂಬಿಬಿಎಸ್ ಓದುತ್ತಿರುವುದಾಗಿ ತಿಳಿಸಿದ್ದಾರೆ. ಮೂಲತಃ ಬೇಲೂರಿನವರಾದ ನಿಖೀಲ್ ಆರನೇ ತರಗತಿಯಿಂದ ಅಳಿಕೆ ವಿದ್ಯಾಸಂಸ್ಥೆಯಲ್ಲಿ ಓದಿ ಹತ್ತನೇ ತರಗತಿಯಲ್ಲಿ ಶೇ. 97.9 ಅಂಕ, ಎಕ್ಸಲೆಂಟ್ ವಿದ್ಯಾರ್ಥಿಯಾಗಿದ್ದರು. ಅವರ ಸಾಧನೆಗೆ ಎಕ್ಸಲೆಂಟ್ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಸಂತಸ ವ್ಯಕ್ತಪಡಿಸಿದ್ದಾರೆ.
– ತಂದೆ ಭಗವಾನ್ ಬಿ.ಎಂ. ವ್ಯಾಪಾರಿ. ತಾಯಿ ಶೋಭಾ.
ಶಿಕ್ಷಕರ ಪ್ರೋತ್ಸಾಹದಿಂದ
ಸಾಧನೆ: ಮಿಹಿರ್ ಗಿರೀಶ್
ರ್‍ಯಾಂಕ್ ಬಂದಿರುವುದು ಖುಷಿ ತಂದಿದೆ. ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಅವರನಿರ್ದೇ ಶನಗಳನ್ನು ಪಾಲಿಸಿ ಅದರಂತೆ ಕಲಿಯುತ್ತಿದ್ದೆ. ಅನುಮಾನಗಳಿದ್ದಲ್ಲಿ ಬಗೆಹರಿಸಿಕೊಳ್ಳುತ್ತಿದ್ದೆ. ನೀಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ವೈದ್ಯನಾಗಬೇಕಿದೆ.
– ಮಿಹಿರ್ ಗಿರೀಶ್ ಕಾಮತ್
ತಂದೆ- ಗಿರೀಶ್ ಕಾಮತ್,
ತಾಯಿ- ಅನಿತಾ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿಗಳು.
ಸಿಇಟಿ: ಮಂಗಳೂರಿನ ಎಕ್ಸ್‌ಪರ್ಟ್
ಪಿಯು ಕಾಲೇಜಿಗೆ 2 ಪ್ರಥಮ ರ್‍ಯಾಂಕ್
ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ ಏಳು ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2 ಪ್ರಥಮ ರ್‍ಯಾಂಕ್ ಸೇರಿದಂತೆ ಮೊದಲ 10 ರ್‍ಯಾಂಕ್‌ಗಳಲ್ಲಿ 19 ರ್‍ಯಾಂಕ್‌ಗಳನ್ನು ಪಡೆದುಕೊಂಡು ಅಪೂರ್ವ ಸಾಧನೆ ಮಾಡಿದ್ದಾರೆ.
ನಿಹಾರ್ ಎಸ್.ಆರ್. ಸಿಇಟಿ ಬಿಎನ್‌ವೈಎಸ್ ಮತ್ತು ಬಿಎಸ್ಸಿ ಕೃಷಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದರೆ, ಪಶು ವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 3ನೇ ರ್‍ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 5ನೇ ರ್‍ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 12ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಸಂಜನಾ ಎಸ್. ಕಟ್ಟಿ ಬಿಎನ್‌ವೈಎಸ್‌ಯಲ್ಲಿ 2ನೇ ರ್‍ಯಾಂಕ್, ಬಿಎಸ್ಸಿ ಕೃಷಿಯಲ್ಲಿ 4ನೇ ರ್‍ಯಾಂಕ್, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 6ನೇ ರ್‍ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 8ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಮಿಹಿರ್ ಗಿರೀಶ್ ಕಾಮತ್ ಅವರು ಬಿಎಸ್ಸಿ ಕೃಷಿಯಲ್ಲಿ 2ನೇ ರ್‍ಯಾಂಕ್, ಸ್ವಸ್ಥಿಕ್ ಎ. ಶರ್ಮಾ ಬಿಎನ್‌ವೈಎಸ್‌ನಲ್ಲಿ
6ನೇ ರ್‍ಯಾಂಕ್, ಆಕರ್ಷ್ ಎಸ್. ಕಂಕನವಾಡಿ ಅವರು ಬಿಎಸ್ಸಿ ಕೃಷಿಯಲ್ಲಿ 8ನೇ ರ್‍ಯಾಂಕ್, ಸುಹಾಸ್ ಎಂ ಅವರು
ಪಶು ವೈದ್ಯಕೀಯ, ನರ್ಸಿಂಗ್ ನಲ್ಲಿ 9ನೇ ರ್‍ಯಾಂಕ್, ಬಿಎನ್‌ವೈಎಸ್‌ನಲ್ಲಿ 10ನೇ ರ್‍ಯಾಂಕ್ ಹಾಗೂ ಪ್ರಣವ್ ಟಾಟಾ ಆರ್ ಅವರು ಬಿಎಸ್ಸಿ ಕೃಷಿಯಲ್ಲಿ 9ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಏಳು ವಿಭಾಗಗಳಲ್ಲಿ ಎರಡು ಪ್ರಥಮ ಸೇರಿದಂತೆ ಒಟ್ಟು ಏಳು ರ್‍ಯಾಂಕ್‌ಗಳನ್ನು ನಿಹಾರ್ ಎಸ್.ಆರ್. ಪಡೆದುಕೊಂಡು ಹೊಸ ಇತಿಹಾಸ ರಚಿಸಿದ್ದಾರೆ. ಕಳೆದ 20 ವರ್ಷಗಳಲ್ಲಿ ಬೋರ್ಡ್ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 23 ಬಾರಿ ಪ್ರಥಮ ರ್‍ಯಾಂಕ್ ಪಡೆದಿರುವ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಈ ವರ್ಷವೂ ಅಪೂರ್ವ ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಾಂಘಿಕ
ಪ್ರಯತ್ನದಿಂದಾಗಿ ಇದು ಸಾಧ್ಯವಾ ಗಿದೆ. “ಶ್ರಮ ಏವ ಜಯತೆ’ ಎಂಬ ಸಂಸ್ಥೆಯ ಧ್ಯೇಯವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದ ನಾರ್ಹರು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.