ಕಾರ್ಕಳ: ತಾಲೂಕಿನಾದ್ಯಂತ ಹೆಚ್ಚಿದ ಗೋಕಳ್ಳರ ಹಾವಳಿ
Team Udayavani, Nov 21, 2018, 2:05 AM IST
ಕಾರ್ಕಳ: ಕಳೆದ ಕೆಲವು ತಿಂಗಳುಗಳಿಂದ ಕಾರ್ಕಳ ತಾಲೂಕಿನ ಹಲವೆಡೆ ಗೋಕಳ್ಳರ ಹಾವಳಿ ಮಿತಿಮೀರಿದೆ. ಕಾರ್ಕಳ-ಹೆಬ್ರಿಯ ಭಾಗದಲ್ಲಿ ಗೋಕಳ್ಳತನ ನಿರಂತರವಾಗಿ ನಡೆಯುತ್ತಿದರೂ, ಗೋಕಳ್ಳರ ಮೂಗಿಗೆ ದಾರ ಹಾಕುವವರು ಯಾರು? ಎನ್ನುವ ಪ್ರಶ್ನೆ ಈ ಭಾಗದ ಜನತೆಯ ಮುಂದಿದೆ. ಇತ್ತೀಚೆಗೆ ಮುದ್ರಾಡಿಯ ದೋಗು ಪೂಜಾರಿ ಅವರ ಮನೆಯ 6 ದನಗಳು ಹಟ್ಟಿಯಿಂದ ಕಳವಾದವು. ಅದೇ ಭಾಗದ ಹರಿದಾಸ್ ಹೆಗ್ಡೆ ಅವರ ಮೇಯಲು ಬಿಟ್ಟ ದನಗಳು ಕಳವಾಗಿವೆ. ಇಂತಹ ಸಾಕಷ್ಟು ಪ್ರಕರಣಗಳು ಹೈನುಗಾರರ ನಿದ್ದೆಗೆಡಿಸಿವೆ. ಕಾರ್ಕಳ ತಾಲೂಕಿನ ಹೊಸ್ಮಾರು, ಈದು, ಮಾಳ, ಬಜಗೋಳಿ, ಅಜೆಕಾರು, ಕೆರ್ವಾಶೆ ಹಾಗೂ ಹೆಬ್ರಿ ಭಾಗದ ಮುನಿಯಾಲ್, ಮುದ್ರಾಡಿ, ಚಾರ ಮೊದಲಾದ ಭಾಗಗಳಿಂದ ನಿರಂತರ ಗೋಕಳ್ಳತನ ನಡೆಯತ್ತಿದೆ.
ಹಟ್ಟಿಯಿಂದಲೇ ಕಳವು
ಹಲವೆಡೆ ಮನೆಯಿಂದ ಮೇಯಲು ಹೊರಗೆ ಬಿಟ್ಟ ಹಸುಗಳು ವಾಪಸು ಮನೆಗೆ ಬಾರದೇ ಕಳ್ಳರ ಪಾಲಾಗುತ್ತಿವೆ. ಅಷ್ಟೇ ಅಲ್ಲದೆ ರಾತ್ರಿ ಹಟ್ಟಿಯಿಂದ ಕಳವುಗೈದ ಅದೆಷ್ಟೋ ಘಟನೆಗಳು ನಡೆದಿವೆ. ಆಗುಂಬೆ ಗಡಿಯಿಂದ ಘಟ್ಟದ ಕಡೆಗೆ ಹಾಗೂ ಕಾಸರಗೋಡು ಕಡೆಗೂ ಈ ಕಳವುಗೈದ ಹಸುಗಳ ಸಾಗಾಟ ಮಾಡುತ್ತಾರೆ ಎನ್ನಲಾಗುತ್ತಿದೆ.
ಚೆಕ್‌ಪೋಸ್ಟ್ ತೆರೆಯಲು ಒತ್ತಾಯ
ಸದ್ಯ ಇರುವ ಚೆಕ್ ಪೋಸ್ಟ್‌ನಲ್ಲಿ ಸರಿಯಾಗಿ ಸಿಬಂದಿ ಇರುವುದಿಲ್ಲ. ಒಂದೆರಡು ದಿನ ಚೆಕ್‌ಪೋಸ್ಟ್‌ನಲ್ಲಿದ್ದರೆ, ಮೂರನೇ ದಿನ ಅಲ್ಲಿ ಯಾರೂ ಇರುವುದಿಲ್ಲ. ಹೀಗಾಗಿ ಮುನಿಯಾಲ್, ಶಿವಪುರ, ಹೆಬ್ರಿಯಲ್ಲಿ ಸರಿಯಾಗಿ ಚೆಕ್‌ಪೋಸ್ಟ್ ತೆರೆಯಲು ಕಳೆದ ಹಲವು ಸಮಯಗಳಿಂದ ಒತ್ತಾಯ ಕೇಳಿಬರುತ್ತಿದೆ.
ದಲ್ಲಾಳಿಗಳ ಪೆರೇಡ್ ಮಾಡಿಸಿ
ದನಗಳ್ಳರು ಹೆಚ್ಚಾಗಿ ಸ್ಥಳೀಯ ಮಧ್ಯವರ್ತಿಗಳ ಸಂಪರ್ಕದಿಂದ ಆಗಮಿಸುತ್ತಾರೆ ಎನ್ನುವ ಮಾತುಗಳಿದೆ. ಇದಕ್ಕಾಗಿ ಅವರು ಯಾರೆಂದು ತಿಳಿದುಕೊಂಡು ಸೂಕ್ತ ರೀತಿಯಲ್ಲಿ ಎಚ್ಚರಿಕೆ ನೀಡಬೇಕು, ಆಯಾ ಪೊಲೀಸ್ ಠಾಣೆಗಳಲ್ಲಿ ಈ ರೀತಿ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯವಿದೆ. ಜತೆಗೆ ಬಂಧಿತ ಕಳ್ಳರನ್ನು ಕಾನೂನಿಡಿ ಶಿಕ್ಷೆಗೆ ಒಳಪಡಿಸಬೇಕು ಎನ್ನುವ ಒತ್ತಾಯವಿದೆ. ಕೆಲವು ಪ್ರಕರಣಗಳಲ್ಲಿ ಕಳ್ಳರನ್ನು ಹಿಡಿದರೂ ಸುಲಭವಾಗಿ ಬಿಡುಗಡೆಯಾಗುವುದರಿಂದ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ.
ಗೋ ಪೂಜೆಗೆ ಗೋವುಗಳೇ ಇಲ್ಲ
ಮನೆಯಲ್ಲಿ ಗೋಪೂಜೆ ನಡೆಸಬೇಕೆಂದು ಎಂದುಕೊಂಡು, ಆ ದಿನ ಹಸುವಿಗೆ ಮಣಿ ಕಟ್ಟಬೇಕೆಂದು ಮಣಿ ತಂದಿಟ್ಟಿದ್ದೆ. ಆದರೆ ಗೋವುಗಳೇ ಕಳವಾದವು. ಬಹಳ ಬೇಸರದ ಸಂಗತಿ. ಹಿಂದಿನಿಂದಲೂ ನಾವು ಹೊರಗಡೆ ಬಿಡುತ್ತಿದ್ದೆವು. ಈ ಭಾಗದಲ್ಲಿ ಗೋಕಳ್ಳತನದ ಜಾಲವೇ ಇದೆ.
– ಹರಿದಾಸ್ ಹೆಗ್ಡೆ, ಹೈನುಗಾರರು
ಹೋರಾಟದ ಚಿಂತನೆ
ಇತ್ತೀಚೆಗೆ ಮುದ್ರಾಡಿಯ ಮನೆಯಲ್ಲಿ ಹಟ್ಟಿಯಿಂದ ಕಳ್ಳತನ ಹಾಗೂ ಆ ಭಾಗದಲ್ಲಿ ನಿರಂತರ ಗೋಕಳ್ಳತನ ವಿರೋಧಿಸಿ ಹಿಂದೂ ಸಂಘಟನೆಗಳು ಬೃಹತ್ ಹೋರಾಟದ ಚಿಂತನೆ ನಡೆಸಿವೆ. ನ. 25ರಂದು ಬೃಹತ್ ಮುದ್ರಾಡಿ ಚಲೋ ನಡೆಸಲು ತೀರ್ಮಾನಿಸಲಾಗಿದೆ.
ವಿಶೇಷ ಚೆಕ್ ಪೋಸ್ಟ್
ನೈಟ್‌ರೌಂಡ್ಸ್ ಹಾಕಲಾಗುತ್ತಿದ್ದು, ಹೆಚ್ಚುವರಿ ಸಿಬಂದಿಯನ್ನೂ ನೇಮಿಸಲಾಗಿದೆೆ. ಅಜೆಕಾರು, ಕಾಡುಹೊಳೆ, ವರಂಗ, ಮಿಯ್ನಾರು, ಬಜಗೋಳಿ ಮೊದಲಾದೆಡೆ ದನ ಕಳ್ಳತನ ತಡೆಗಟ್ಟುವ ದೃಷ್ಟಿಯಿಂದ ವಿಶೇಷ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ.
– ವಿ.ಎಸ್. ಹಾಲಮೂರ್ತಿ ರಾವ್, ಕಾರ್ಕಳ ವೃತ್ತ ನಿರೀಕ್ಷಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.