ಬೈಂದೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ಸಾಗಾಟ
Team Udayavani, Mar 16, 2019, 12:30 AM IST
ವಿಶೇಷ ವರದಿ- ಬೈಂದೂರು: ಬೈಂದೂರು ಭಾಗದಲ್ಲಿ ಅನಧಿಕೃತ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರತಿದಿನ ಮಂಗಳೂರು ಮುಂತಾದ ಕಡೆಗಳಿಂದ ಮರಳು ತರಿಸಿಕೊಳ್ಳುವ ತಂಡ ವ್ಯವಹಾರ ನಡೆಸುತ್ತಿದೆ. ಆದರೆ ಇಲಾಖೆ ಮಾತ್ರ ಕಣ್ಣಿದ್ದೂ ಕುರುಡಾಗಿದೆ.
ಲಕ್ಷಾಂತರ ರೂ. ವ್ಯವಹಾರ
ಪ್ರತಿದಿನ ಮಂಗಳೂರಿನಿಂದ ಮರಳು ತುಂಬಿಸಿ ಕೊಂಡು ಹತ್ತು ಲಾರಿಗಳು ಗಂಗೊಳ್ಳಿಯ ವರೆಗೆ ಬರುತ್ತವೆ. ಅಲ್ಲಿಂದ ಸ್ಥಳೀಯ ದಲ್ಲಾಳಿಗಳು ಬೈಂದೂರು, ಶಿರೂರು, ಭಟ್ಕಳ ಹಾಗೂ ಇತರ ಕಡೆಗಳಿಗೆ ಕಳುಹಿಸುತ್ತಾರೆ. ಬೃಹತ್ ಸರಕು ಲಾರಿಗಳಾಗಿರುವುದರಿಂದ ಯಾರಿಗೂ ಮರಳಿನ ಲಾರಿ ಎಂದು ಸಂಶಯ ಬರುವುದಿಲ್ಲ. ಬಳಿಕ ಅವುಗಳನ್ನು ಸ್ಥಳೀಯ ಕೆಲವು ವ್ಯಕ್ತಿಗಳು 5 ಸಣ್ಣ ಟಿಪ್ಪರ್‌ಗಳಿಗೆ ಪ್ರತ್ಯೇಕಿಸುತ್ತಾರೆ. ಪ್ರತಿ ಟಿಪ್ಪರ್‌ಗೆ 25ರಿಂದ 30 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಶಿರೂರು -ಬೈಂದೂರಿನಲ್ಲಿ ಇದಕ್ಕಾಗಿಯೇ ದೊಡ್ಡ ತಂಡ ಕ್ರಿಯಾಶೀಲವಾಗಿದೆ. ಈ ತಂಡ ಲಕ್ಷಾಂತರ ರೂ. ಸಂಪಾದನೆ ಮಾಡುತ್ತದೆ.
ಜಿಲ್ಲಾಡಳಿತ ಮತ್ತು ಆರಕ್ಷಕ ಇಲಾಖೆ ಮರಳು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತದೆ. ಶಿರೂರು ಗಡಿ ಭಾಗದಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ ನಿರ್ಮಿಸಿ ಸಿ.ಸಿ. ಕ್ಯಾಮರಾಗಳನ್ನು ಅಳಡಿಸಲಾಗಿದೆ. ಆದರೆ ಇದು ಹೆಸರಿಗೆ ಮಾತ್ರ. ದೊಡ್ಡ ಲಾರಿಗಳಲ್ಲಿ ಮರಳು ತುಂಬಿ ಹೋದರೂ ತಿಳಿಯದಾಗಿದೆ. ಮಂಗಳೂರಿನಿಂದ ಶಿರೂರಿನವರೆಗೆ ಈ ವ್ಯವಹಾರ ನಡೆಯುತ್ತಿದ್ದರೂ ಇಲಾಖೆಗೆ ಮಾಹಿತಿ ಇಲ್ಲದಂತೆ ಸುಮ್ಮನಾಗಿದೆ.
ಅಕ್ರಮಕ್ಕೆ ಬೆಂಗಾವಲು!
ಬೆಳಗಿನ ಜಾವ ಬರುವ ದೊಡ್ಡ ಮರಳಿನ ಲಾರಿಗಳನ್ನು ಬೆಂಗಾವಲಿನಲ್ಲಿ ಮಂಗಳೂನಿರಿಂದ ಕುಂದಾಪುರದವರೆಗೆ ಕಳುಹಿಸಲಾಗುತ್ತದೆ. ಈ ಮಧ್ಯೆ ಟೋಲ್‌ಗೇಟ್, ಚೆಕ್‌ಪೋಸ್ಟ್‌ಗಳನ್ನು ದಾಟಿ ಬರಬೇಕಾಗುತ್ತದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುವುದಿಲ್ಲ. ಈ ಸಾಗಾಟಕ್ಕೆ ಕೆಲವು ಅಧಿಕಾರಿಗಳೇ ಮುಂದಾಳುಗಳು. ಬೈಂದೂರು ಮುಂತಾದೆಡೆ ಇವರ ನೇತೃತ್ವದಲ್ಲೇ ಮರಳು ಸರಬರಾಜು ಆಗುತ್ತದೆ. ಈ ಲಾರಿಗಳನ್ನು ಎಲ್ಲೂ ತಪಾಸಣೆ ನಡೆಸುವುದಿಲ್ಲ. ಇವರು ನಿಗದಿತ ವ್ಯಕ್ತಿಗಳಿಗೇ ಮರಳು ಪೂರೈಸುತ್ತಾರೆ.
ನಿರ್ದಾಕ್ಷಿಣ್ಯ ಕ್ರಮ
ಅನಧಿಕೃತವಾಗಿ ಯಾವುದೇ ವಾಹನಗಳಲ್ಲಿ ಮರಳು ಸಾಗಿಸುವಂತಿಲ್ಲ. ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಕೆಲವು ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ. ಮರಳು ಸಾಗಾಟ ಬಗ್ಗೆ ಮಾಹಿತಿ ಇದ್ದರೆ ಕಂಟ್ರೋಲ್ ರೂಮ್‌ಗೆ ತಿಳಿಸಬೇಕು. ಆಯಾ ಠಾಣೆಗಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
– ದಿನೇಶ್ ಕುಮಾರ್,
ಡಿವೈಎಸ್‌ಪಿ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.