ಜೂನ್ ವೇಳೆ ಉಡುಪಿ ಸೋಡಿಯಂ, ಮೆಟಲ್‌ಹೈಲೈಡ್ ದಾರಿ ದೀಪ ಮುಕ್ತ ನಗರ
Team Udayavani, Mar 10, 2017, 6:49 AM IST
ಉಡುಪಿ: ವಿದ್ಯುತ್ ಉತ್ಪಾದನೆ ಮತ್ತು ಅದರ ಬೇಡಿಕೆ ಬಿಸಿಯಲ್ಲಿ ತತ್ತರಿಸಿ ಹೋಗುತ್ತಿರುವ ವ್ಯವಸ್ಥೆಗೆ ಉಡುಪಿ ನಗರ ಸಭೆ ಹೊರೆ ತಗ್ಗಿಸಲು ನಿರ್ಧರಿಸಿದೆ. ಜೂನ್ ವೇಳೆಗೆ ಉಡುಪಿ ನಗರವನ್ನು ಸೋಡಿಯಂ, ಮೆಟಲ್‌ಹೈಲೈಡ್ ದೀಪಮುಕ್ತ ನಗರವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದೆ. ಇದು ರಾಜ್ಯದಲ್ಲಿ ಪ್ರಥಮ ಪ್ರಯತ್ನವಾಗಲಿದೆ. ಉಡುಪಿ ನಗರದಲ್ಲಿ ಪ್ರಸ್ತುತ 15,607 ದೀಪಗಳು ನಗರವನ್ನು ಬೆಳಗುತ್ತಿವೆ. ಈ ಪೈಕಿ 12457 ಪ್ಲೋರೋಸೆಂಟ್ ಟ್ಯೂಬ್‌ಲೈಟ್‌ಗಳು, 286 ಸಿಎಫ್ಎಲ್, 1215 ಎಲ್‌ಇಡಿ ದೀಪಗಳಾದರೆ 286 ಮೆಟಲ್ ಹೈಲೈಡ್ ಮತ್ತು 1363 ಸೋಡಿಯಂ ವೇಪರ್ ದೀಪಗಳಾಗಿವೆ.
48 ಸಾವಿರ ಯುನಿಟ್ ಉಳಿತಾಯ
250 ವ್ಯಾಟ್ಸ್‌ನ 1 ಸೋಡಿಯಂ ವೇಪರ್ ದೀಪ 4 ಗಂಟೆ ಉರಿದರೆ 1 ಯುನಿಟ್ ವಿದ್ಯುತ್ ಖರ್ಚಾಗುತ್ತದೆ. ಅದೇ ಪ್ರಕಾರ 1363 ಸೋಡಿಯಂ ದೀಪಗಳು ಪ್ರತಿ ದಿನ 3 ಯುನಿಟ್ ವಿದ್ಯುತ್ ಬಳಸಿದರೆ ತಿಂಗಳಿಗೆ 4089 ಯುನಿಟ್ ಹಾಗೂ ವಾರ್ಷಿಕವಾಗಿ ಸುಮಾರು 48 ಸಾವಿರ ಯುನಿಟ್ ವಿದ್ಯುತ್ ವ್ಯಯವಾಗುತ್ತದೆ. ವಾರ್ಷಿಕ 6 ಕೋ. ರೂ. ದಾರಿದೀಪಕ್ಕಾಗಿ ವ್ಯಯವಾಗುತ್ತಿದೆ. ಸಂಪೂರ್ಣ ಸೋಡಿಯಂ ದೀಪಗಳ ನಿರ್ಮೂಲನೆಯಾದರೆ ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಉಳಿಯುತ್ತದೆ ಎಂದು ನಗರಸಭೆಯ ಎಂಜಿನಿಯರ್ ಶಶಿಧರ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಕ್ರಿಯಾ ಯೋಜನೆ
ಉಡುಪಿ ನಗರದಲ್ಲಿ ಅಧಿಕ ವಿದ್ಯುತ್ ಎಳೆಯುವ ಸೋಡಿಯಂ ವೇಪರ್ ದೀಪಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕ್ರಿಯಾ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯಡಿ ಬರುವ ಜೂನ್ 2016ರೊಳಗೆ ಹಂತ ಹಂತವಾಗಿ ಸೋಡಿಯ ದೀಪಗಳನ್ನು ಎಲ್‌ಇಡಿಗೆ ಬದಲಾಯಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಒಂದು ಕನೆಕ್ಷನ್ ಪಾಯಿಂಟ್‌ನ ವ್ಯಾಪ್ತಿಗೆ ಎಲ್ಲ ದಾರಿದೀಪಗಳು ಎಲ್‌ಇಡಿ ಸಂಪರ್ಕ ಹೊಂದಿದರೆ ಅದಕ್ಕಾಗಿ ಪ್ರತಿ ಯುನಿಟ್ ವಿದ್ಯುತ್‌ಗೆ 1 ರೂಪಾಯಿ ವಿನಾಯಿತಿ ನೀಡುವ ಯೋಜನೆಯನ್ನು ಈಗಾಗಲೆ ಪರಿಚಯಿಸಲಾಗಿದೆ ಎಂದು ಉಡುಪಿ ಮೆಸ್ಕಾಂನ ಅಧಿಕಾರಿ ಗಣರಾಜ ಭಟ್ ಮಾಹಿತಿ ನೀಡಿದ್ದಾರೆ.
ದಾರಿ ದೀಪ ನಿರ್ವಹಣೆ ಬದಲು
ಉಡುಪಿ ನಗರದ ದಾರಿ ದೀಪಗಳನ್ನು ನಿರ್ವಹಿಸುತ್ತಿದ್ದ ಬೆಂಗಳೂರು ಮೂಲದ ಕಂಪೆನಿ ಒಪ್ಪಂದ ಮಾ. 31ರಂದು ಕೊನೆಗೊಳ್ಳಲಿದೆ. ಎ. 1ರಿಂದ ಶಿವಮೊಗ್ಗ ಮೂಲದ ಗುತ್ತಿಗೆದಾರ ರೋರ್ವರು 42 ಲಕ್ಷ ರೂ. ಹರಾಜಿನಲ್ಲಿ ಅದನ್ನು ಪಡೆದುಕೊಂಡಿದ್ದಾರೆ. 29 ಲಕ್ಷ ರೂ. ಎಲ್‌ಇಡಿ ಮತ್ತು ಸಿಎಫ್ಎಲ್ ದಾರಿದೀಪಗಳ ನಿರ್ವಹಣೆ ಹರಾಜು ಪ್ರಕ್ರಿಯೆಯನ್ನು ಮರಳಿ ಕರೆಯಲಾಗಿದೆ. ಅದು ಅತಿ ಶೀಘ್ರವಾಗಿ ಮುಗಿಯುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಮಲ್ಪೆ ಬೀಚ್‌ನಲ್ಲಿ ಮೂರು ಎಲ್‌ಇಡಿ
ಹೈಮಾಸ್ಟ್ ದೀಪಗಳನ್ನೂ ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ಮುಂದುವರಿದಿವೆ. ಇದರ ಪ್ರಥಮ ಪ್ರಯತ್ನವಾಗಿ ಮಲ್ಪೆ ಬೀಚ್‌ನಲ್ಲಿ ಇತ್ತೀಚೆಗೆ ಅಳವಡಿಸಲಾದ ಮೂರು ಹೈಮಾಸ್ಟ್ ದೀಪಗಳೂ ಎಲ್‌ಇಡಿ ದೀಪಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಉಡುಪಿ ನಗರದಲ್ಲಿ 13,216 ವಿದ್ಯುತ್ ಕಂಬಗಳಿವೆ 70 ವ್ಯಾಟ್ಸೆನ 279 ಸೋಡಿಯಂ ದೀಪಗಳು, 150 ವ್ಯಾಟ್ಸ್‌ನ 402 ಸೋಡಿಯಂ ದೀಪಗಳು ಹಾಗೂ 250 ವ್ಯಾಟ್‌ನ 352 ಸೋಡಿಯಂ ದೀಪಗಳಿವೆ.
ಎಲ್‌ಇಡಿ
ಉಡುಪಿ ನಗರದಲ್ಲಿ ಪ್ರಸ್ತುತ 24 ವ್ಯಾಟ್ಸ್‌ನ 302 ಹಾಗೂ 72 ವ್ಯಾಟ್ಸ್‌ನ 703 ದೀಪಗಳಿವೆ.
ಉಡುಪಿ ನಗರ ಸಂಪೂರ್ಣವಾಗಿ ಎಲ್‌ಇಡಿ ದೀಪಗಳಿಂದ ಬೆಳಗಿದಾಗ ಅತಿ ಸುಂದರವಾಗಿ ಕಾಣುತ್ತದೆ. ನರಗಸಭೆಯ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ.
– ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷರು, ಉಡುಪಿ ನಗರಸಭೆ.
ಉಡುಪಿ ನಗರ ಸೋಡಿಯಂ ದೀಪ ಮುಕ್ತ ನಗರವಾದಾಗ, ವಿದ್ಯುತ್ ಹೊರೆಯ ಜೊತೆಗೆ ಉಷ್ಣಾಂಶದಲ್ಲಿ ಒಂದಷ್ಟು ಬದಲಾವಣೆ ಕಂಡು ಬರುತ್ತದೆ.
– ಮಂಜುನಾಥಯ್ಯ ಆಯುಕ್ತರು, ಉಡುಪಿ ನಗರಸಭೆ.
– ಆಸ್ಟ್ರೋ ಮೋಹನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.