ಕಾರ್ಮಿಕರ ಕಲ್ಯಾಣಕ್ಕೆ ಇನ್ನೂ ಬಂದಿಲ್ಲ ಪ್ರೋತ್ಸಾಹಧನ!
ದ.ಕ. ಜಿಲ್ಲೆಯ 134 ಜನರಿಗೆ 2 ವರ್ಷಗಳಿಂದ ಬಾಕಿ ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಸ್ಥಗಿತ
Team Udayavani, Dec 6, 2021, 6:10 AM IST
ಕುಂದಾಪುರ: ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರ ವಿವಾಹಕ್ಕೆ ದೊರೆಯುವ ಪ್ರೋತ್ಸಾಹಧನ ಮದುವೆಯಾಗಿ ಮಗುವಾದರೂ ಬಂದಿಲ್ಲ ಎಂದು ಕಾರ್ಮಿಕರು ಕೊರಗುತ್ತಿದ್ದಾರೆ.
2019ರಲ್ಲಿ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ 134 ಜನರಿಗೆ ಮತ್ತು ಈ ಮಾರ್ಚ್ ಬಳಿಕ ಉಡುಪಿ ಜಿಲ್ಲೆಯವರಿಗೆ ಹಣ ಬಂದಿಲ್ಲ.
ನೋಂದಾಯಿತ ಕಟ್ಟಡ ಕಾರ್ಮಿಕ ಅಥವಾ ಕಾರ್ಮಿಕನ ಅವಲಂಬಿತ ಮಕ್ಕಳ ವಿವಾಹಕ್ಕಾಗಿ 50 ಸಾವಿರ ರೂ. ನೀಡಲಾಗುತ್ತದೆ. ಇದೇ ಜುಲೈಯಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.
ಅರ್ಜಿ ಕ್ರಮ ಬದಲು
ಮೊದಲು ಲಿಖಿತ ಅರ್ಜಿ ಸಲ್ಲಿಸಬೇಕಿತ್ತು. 2019ರ ಬಳಿಕ ಸೇವಾಸಿಂಧು ಪೋರ್ಟಲ್‌ನಲ್ಲಿ ಡಿಜಿಟಲ್ ಅರ್ಜಿ. ಆಧಾರ್-ಮೊಬೈಲ್ ನಂಬರ್ ಜೋಡಿಸಿರಬೇಕು. ಮಂಡಳಿಯ ನೋಂದಣಿ ಊರ್ಜಿತ ಸ್ಥಿತಿಯಲ್ಲಿರಬೇಕು. ಕಾರ್ಡ್ ಮಾಡಿಸಿ ಒಂದು ವರ್ಷವಾಗಿರಬೇಕು. ವಿವಾಹವಾಗಿ 6 ತಿಂಗಳ ಒಳಗೆ ಅರ್ಜಿ ಹಾಕಬೇಕು. ಅದಾದ 2 ತಿಂಗಳ ಒಳಗೆ ಕಾರ್ಮಿಕ ನಿರೀಕ್ಷಕರು ದೃಢೀಕರಿಸಬೇಕು. ಬಳಿಕ ಮಂಡಳಿಯಿಂದ ನೇರ ನಗದು (ಪ್ರತಿಫಲ) ವರ್ಗಾವಣೆ (ಡಿಬಿಟಿ) ನಿಯಮದಡಿ ಫಲಾನುಭವಿಯ ಖಾತೆಗೆ ಹಣ ಜಮೆಯಾಗುತ್ತದೆ.
ನಿಯಮ ಬದಲು
ಒಬ್ಬರಿಗೇ ದೊರೆಯುತ್ತಿದ್ದ ಮೊತ್ತವನ್ನು 2021ರ ಮಾರ್ಚ್‌ನಿಂದ ಪತಿ-ಪತ್ನಿಗೆ ವಿಂಗಡಿಸಿ ನೀಡಲಾಗುತ್ತಿದೆ. 25 ಸಾವಿರ ರೂ.ಗಳ ಬಾಂಡ್ ಹಾಗೂ 25 ಸಾವಿರ ರೂ.ಗಳ ನಗದು. ಬಾಂಡ್ 3 ವರ್ಷಗಳ ಅನಂತರ ಬಡ್ಡಿ ಸಹಿತ ದೊರೆಯುತ್ತದೆ. ಡಿಬಿಟಿ ಆ್ಯಪ್ ಮೂಲಕ ಯಾರೇ ಫಲಾನುಭವಿ ಹಣ ಜಮೆಯಾದ ವಿವರ ಮೊಬೈಲ್‌ನಲ್ಲೇ ತಿಳಿಯುವಷ್ಟು ಪಾರದರ್ಶಕ ವ್ಯವಸ್ಥೆಯಿದೆ.
ಇದನ್ನೂ ಓದಿ:ದೇಶೀಯ ಡ್ರೋನ್ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್ ಶಾ ಘೋಷಣೆ
ತಿರಸ್ಕೃತ
ಡಿಜಿಟಲ್ ಅರ್ಜಿ ಬಳಿಕ ಅನೇಕರಿಗೆ ಸಹಾಯಧನ ಪಡೆಯುವಲ್ಲಿ ತೊಂದರೆಯಾಗಿದೆ. ಆಧಾರ್‌ಗೆ ಅನೇಕರು ಮೊಬೈಲ್ ನಂಬರ್ ಜೋಡಿಸಿರಲಿಲ್ಲ. ತರಾತುರಿಯಲ್ಲಿ ಜೋಡಿಸಲು ಹೋದಾಗ ಆಧಾರ್ ವ್ಯವಸ್ಥೆ ಸರಿ ಇರಲಿಲ್ಲ. ಮೈಲುದ್ದ ಸರದಿ ಸಾಲು, ಸರ್ವರ್ ಸಮಸ್ಯೆ ಎಂದು ವಿಳಂಬವಾಗಿತ್ತು. ಅನಂತರ 3 ತಿಂಗಳ ಕಾಲ ವೆಬ್‌ಸೈಟನ್ನೇ ಸ್ಥಗಿತಗೊಳಿಸಲಾಗಿತ್ತು. ಎಲ್ಲ ಸರಿಯಾಯಿತು ಎನ್ನುವಾಗ 2020ರಲ್ಲಿ ಲಾಕ್‌ಡೌನ್ ಆರಂಭವಾಯಿತು. ಮೇ ತಿಂಗಳಲ್ಲಿ ನಿಯಮಗಳು ಸಡಿಲವಾದ ಬಳಿಕ ಅರ್ಜಿ ಸಲ್ಲಿಸಲಾಯಿತು. ವಿವಾಹದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕೆಂದಿದ್ದ ಕಾರಣ ಅದೇನೂ ಸಮಸ್ಯೆ ಆಗಲಿಲ್ಲ. ಆದರೆ ವಿವಾಹದ ಸಂದರ್ಭದಲ್ಲಿ ಅನೇಕರ ನೋಂದಣಿಯ ಅವಧಿ ಮರುನವೀಕರಣ ಆಗಿರಲಿಲ್ಲ ಎಂಬ ಕಾರಣದಿಂದ ಸಹಾಯಧನ ಅರ್ಜಿ ತಿರಸ್ಕೃತವಾಗಿದೆ. ಇದನ್ನು ಕೊರೊನಾ ವಿಶೇಷ ಪ್ರಕರಣ ಎಂದು ಪರಿಭಾವಿಸಿ ಅನುದಾನ ನೀಡಬೇಕೆಂಬ ಮನವಿಯೂ ಇದೆ.
ಸೇವಾಸಿಂಧು ಮೂಲಕ ಬಂದ ಎಲ್ಲ ಅರ್ಜಿಗಳನ್ನು ದೃಢೀಕರಿಸಿ ಕಲ್ಯಾಣ ಮಂಡಳಿಗೆ ಕಳುಹಿಸಲಾಗಿದೆ. ಫೆಬ್ರವರಿ ವರೆಗೆ ಜಮೆಯಾಗಿದೆ.
– ಕುಮಾರ್ ಬಿ.ಆರ್., ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ
ಎಲ್ಲ ದಾಖಲೆಗಳು ಸರಿಯಿದ್ದರೂ ಹಣ ಬಂದಿಲ್ಲ ಎಂಬ ದೂರುಗಳನ್ನು ಮಂಡಳಿಯ ಗಮನಕ್ಕೆ ತರಲಾಗಿದೆ. 2019ರ 134 ಪ್ರಕರಣ ಹೊರತುಪಡಿಸಿದರೆ ಇತರ ಪ್ರಕರಣಗಳಲ್ಲಿ ಪಾವತಿಗೆ ಬಾಕಿ ಇಲ್ಲ.
– ಕಾವೇರಿ, ದ.ಕ. ಜಿಲ್ಲಾ ಕಾರ್ಮಿಕ ಅಧಿಕಾರಿ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.