ಉಡುಪಿ: 2021ರಲ್ಲಿ 89 ಘಟನೆ; ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಳ
Team Udayavani, Nov 22, 2021, 1:12 PM IST
ಉಡುಪಿ: ಲಾಕ್‌ಡೌನ್ ಬಳಿಕ ಜಿಲ್ಲಾ ದ್ಯಂತ ಕಳವು ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದೆ. 2021ರ ನ.17ರವರೆಗೆ 89 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಈ ಪೈಕಿ 40 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2,26,76,563 ರೂ. ಕಳವು ನಡೆದಿದ್ದು, 21,21,198 ರೂ.ಗಳನ್ನು ಪತ್ತೆಹಚ್ಚಲಾಗಿದೆ.
ಲಾಕ್‌ಡೌನ್ ಬಳಿಕ ಉದ್ಯೋಗ ಕಳೆದುಕೊಂಡ ಅನ್ಯ ಜಿಲ್ಲೆ, ರಾಜ್ಯದವರಿಂದಲೇ ಈ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹಗಲು ಹೊತ್ತಿನಲ್ಲಿ ಕಾರ್ಯತಂತ್ರ ರೂಪಿಸುವ ತಂಡ ರಾತ್ರಿ ವೇಳೆ ಕಾರ್ಯಾಚರಣೆಗೆ ಇಳಿಯುತ್ತಾರೆ. ಪೊಲೀಸರ ಚಲನವಲನಗಳನ್ನು ಮೊದಲೇ ತಿಳಿದುಕೊಂಡು ಕೃತ್ಯ ಎಸಗುತ್ತಿದ್ದಾರೆ. ಈ ವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅನ್ಯಜಿಲ್ಲೆ, ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
2021:
2021ರಲ್ಲಿ ಹಗಲು ಹೊತ್ತಿನಲ್ಲಿ ಮನೆಬಾಗಿಲು ಒಡೆದು 8 ಕಳ್ಳತನಗಳನ್ನು ಮಾಡಲಾಗಿದೆ. ಆ ಪೈಕಿ 1 ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. 33,26,260 ರೂ.ಕಳವು ನಡೆದಿದ್ದು, 7 ಸಾವಿರ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ ವೇಳೆ 37 ಪ್ರಕರಣಗಳು ದಾಖಲಾಗಿದ್ದು, 12 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 1,07,53,577 ರೂ.ಕಳವು ನಡೆದಿದ್ದು, 1,81,098 ರೂ.ವಶಕ್ಕೆ ಪಡೆಯಲಾಗಿದೆ. 2 ಮನೆಕಳವು ನಡೆದಿದ್ದು, 1 ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. 2,14,000 ರೂ.ಕಳವು ನಡೆದಿದ್ದು, 1,000 ರೂ.ವಶಕ್ಕೆ ಪಡೆಯಲಾಗಿದೆ. 42 ಇತರ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, 26 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 83,82,726 ರೂ.ಕಳವು ನಡೆದಿದ್ದು, 19,23,100 ರೂ.ವಶಕ್ಕೆ ಪಡೆಯಲಾಗಿದೆ.
2020:
2020ರಲ್ಲಿ ಹಗಲು ಹೊತ್ತಿನಲ್ಲಿ ಮನೆಬಾಗಿಲು ಒಡೆದು ಕಳ್ಳತನ ಮಾಡಿರುವ ಬಗ್ಗೆ 3 ಪ್ರಕರಣಗಳು ದಾಖಲಾಗಿದ್ದು, 1 ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. 3,00,700 ರೂ. ಕಳ್ಳತನ ನಡೆದಿದ್ದು, 85 ಸಾವಿರ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿವೇಳೆ 28 ಪ್ರಕರಣಗಳು ದಾಖಲಾಗಿದ್ದು, 15 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 84,11,121 ರೂ.ಕಳವು ನಡೆದಿದ್ದು, 14,26,000 ವಶಕ್ಕೆ ಪಡೆದುಕೊಳ್ಳಲಾಗಿದೆ. 7 ಮನೆಕಳ್ಳತನ ಪ್ರಕರಣ ದಾಖಲಾಗಿದ್ದು, 7,36,700 ರೂ. ಕಳ್ಳತನ ನಡೆದಿದ್ದು, ಇವೆಲ್ಲವನ್ನೂ ಪತ್ತೆಹಚ್ಚಲಾಗಿದೆ. 35 ಇತರ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, 22 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 13,74,0255 ರೂ.ಕಳವು ನಡೆದಿದ್ದು, 44,53,055 ರೂ.ಪತ್ತೆ ಹಚ್ಚಲಾಗಿದೆ.
2019:
2019ರಲ್ಲಿ ಹಗಲು ಹೊತ್ತಿನಲ್ಲಿ ಮನೆಬಾಗಿಲು ಒಡೆದು ಕಳ್ಳತನ ಮಾಡಿರುವ ಬಗ್ಗೆ 12 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 5 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 41,46,900 ರೂ. ಕಳವಾಗಿತ್ತು. ಇದರಲ್ಲಿ 23,35,500 ರೂ.ಪತ್ತೆ ಹಚ್ಚಲಾಗಿದೆ. ರಾತ್ರಿ ವೇಳೆ 44 ಪ್ರಕರಣಗಳು ದಾಖಲಾಗಿದ್ದು, 19 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 98,71,697 ರೂ.ಕಳ್ಳತನ ನಡೆದಿದ್ದು, 23,98,596 ರೂ.ವಶಕ್ಕೆ ಪಡೆಯಲಾಗಿದೆ. 10 ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು, 6 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 19,45,155 ರೂ.ಕಳವು ನಡೆದಿದ್ದು, 12,57,155 ರೂ.ವಶಕ್ಕೆ ಪಡೆಯಲಾಗಿದೆ. 56 ಇತರ ಕಳವು ಪ್ರಕರಣಗಳು ದಾಖಲಾಗಿದ್ದು, 28 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 59,93,563 ರೂ.ಕಳವು ನಡೆದಿದ್ದು, 34,97,116 ರೂ.ವಶಕ್ಕೆ ತೆಗೆದುಕೊಳ್ಳಲಾಗಿದೆ.
ನವೆಂಬರ್‌ನಲ್ಲಿ ಅಧಿಕ ಕಳವು :
ನವೆಂಬರ್‌ನಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಹಲವು ಪ್ರಕರಣ ನಡೆದಿದೆ. ಮಣಿಪಾಲ…-ಇನ್ ಹೊಟೇಲ್‌ನಲ್ಲಿ ಗ್ರಾಹಕರೊಬ್ಬರಿಗೆ ಸೇರಿದ 1,07,000 ರೂ.ಮೌಲ್ಯದ ಡೈಮಂಡ್ ಇರುವ ಚಿನ್ನದ ಉಂಗುರ ಹಾಗೂ ಗುಂಡಿಬೈಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು 3,70,400 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಲ್ಯಾಪ್‌ಟಾಪ್ ಕಳವು,ವಾಹನ ಕಳ್ಳತನ ಪ್ರಕರಣಗಳೂ ಜಿಲ್ಲಾ ದ್ಯಂತ ವರದಿಯಾಗಿದೆ.
ಜಿಲ್ಲಾದ್ಯಂತ ಕಳ್ಳತನ ಪ್ರಕರಣವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಗಸ್ತು ವಾಹನಗಳೂ ಸಕ್ರಿಯವಾಗಿವೆ. ಈಗಾಗಲೇ ಹಲವಾರು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. –ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.