ಜಿಲ್ಲೆಯಲ್ಲಿ ನರೇಗಾ ಕಾಮಗಾರಿಗೆ ಹೆಚ್ಚಿದ ಬೇಡಿಕೆ
11,887 ಕುಟುಂಬಗಳಿಗೆ ಉದ್ಯೋಗ , ಬಿಲ್ಲಾಡಿ, ಕಾಡೂರು, ಕೋಟ, ಹಕ್ಲಾಡಿ, ಆವರ್ಸೆ ಪಂ. ಮುಂಚೂಣಿಯಲ್ಲಿ
Team Udayavani, Oct 5, 2020, 12:24 PM IST
ಸಾಂದರ್ಭಿಕ ಚಿತ್ರ
ಕುಂದಾಪುರ, ಅ. 4: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಹೊಸ ಯೋಜನೆ ಅನುಷ್ಠಾನ ಮಾಡುವ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಹೆಚ್ಚು ಜನಪ್ರಿಯವಾಗುವಂತೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ರೀತಿ ಇಲ್ಲಿಯೂ ಈಗ ಜನಸ್ಪಂದನ ಹೆಚ್ಚತೊಡಗಿದೆ. ಅದಕ್ಕಾಗಿ ಈಗ ಬಾವಿ ಇತ್ಯಾದಿಗಳ ಜತೆ ಬಚ್ಚಲುಗುಂಡಿ, ಶೌಚಾಲಯ ನಿರ್ಮಾಣ, ಪೌಷ್ಟಿಕ ತೋಟ ನಿರ್ಮಾಣ, ಅಣಬೆ ಬೇಸಾಯ ಶೆಡ್ ನಿರ್ಮಾಣ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಪ್ರತಿ ಮನೆಗೂ ಅನುಕೂಲವಾಗುವ ಕೆಲಸಗಳನ್ನು ಮಾಡಲು ಸರಕಾರವೇ ಹಣ ನೀಡಲಿದೆ.
ಬಚ್ಚಲು ಗುಂಡಿ : ಪ್ರತಿ ಮನೆಯೂ ಶೌಚಾಲಯ ಹೊಂದುವುದು ಮಾತ್ರವಲ್ಲದೆ ಬಚ್ಚಲುಗುಂಡಿ (ಸೋಕ್ ಪಿಟ್) ಕೂಡ ಹೊಂದಬೇಕೆಂಬ ಉದ್ದೇಶದಿಂದ ಗ್ರಾ.ಪಂ.ಗಳ ಮೂಲಕ ಬಚ್ಚಲುಗುಂಡಿ ನಿರ್ಮಾಣದ ಯೋಜನೆ ಯನ್ನು ಉಡುಪಿ ಜಿಲ್ಲೆಯಲ್ಲಿಯೂ ನರೇಗಾ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಬಚ್ಚಲಿನ ನೀರು, ಪಾತ್ರೆ ತೊಳೆದ ನೀರು ಸಹಿತ ಮನೆಯಿಂದ ಹೊರಬರುವ ಕೊಳಚೆ ನೀರನ್ನು ನೈಸರ್ಗಿಕ ರೀತಿ ಯಲ್ಲಿ ಶುದ್ಧೀಕರಿಸುವುದು/ ಜಲ ಮರು ಪೂರಣಕ್ಕೆ ಬಳಕೆ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ.
ವಿನ್ಯಾಸ : ಪ್ರತಿ ಗುಂಡಿಯೂ 6-7 ಅಡಿ ಆಳ, 5-6 ಅಡಿ ಉದ್ದ ಮತ್ತು ಅಗಲವಿರುತ್ತದೆ. ಗುಂಡಿಯ ತಳಭಾಗದಲ್ಲಿ ಕಲ್ಲುಗಳನ್ನು ಹಾಕಿ ಅದರ ಮೇಲೆ ತೂತುಗಳಿರುವ ಸಿಮೆಂಟ್ ರಿಂಗ್‌ಗಳನ್ನು ಇಡ ಲಾಗುತ್ತದೆ. ಗುಂಡಿಯ ಅಂಚು ಮತ್ತು ರಿಂಗ್‌ಗಳ ನಡುವೆ ಇರುವ ಅಂತರದಲ್ಲಿ ಸ್ಥಳೀಯವಾಗಿ ಸಿಗುವ ಸಣ್ಣ ಕಲ್ಲು ಅಥವಾ ಮರಳಿನ ಕಣಗಳನ್ನು ಹಾಕಿ ಅದರ ಮೂಲಕ ಗುಂಡಿಗೆ ಬಚ್ಚಲು ನೀರು ಹರಿಯಲು ವ್ಯವಸ್ಥೆ ಮಾಡ ಲಾಗುತ್ತದೆ. ಇದರಿಂದಾಗಿ ಗುಂಡಿ ಸೇರುವ ಮೊದಲು ಕೊಳಚೆ ನೀರು (ಗ್ರೇ ವಾಟರ್) ಶುದ್ಧೀಕರಣ ಸಾಧ್ಯವಾಗುತ್ತದೆ.
ಅಣಬೆ ಶೆಡ್‌ಗೆ 95 ಸಾವಿರ ರೂ. : 2.4 ಸೆಂಟ್ಸ್‌ನಲ್ಲಿ ಪೌಷ್ಟಿಕ ತೋಟ ಮಾಡುವುದಾದರೆ 2,400 ರೂ. ಕಾಮಗಾರಿ ವೆಚ್ಚ, ಸ್ತ್ರೀ ಸಮುದಾಯ ಗುಂಪುಗಳು, ಸಮುದಾಯ ಒಟ್ಟಾಗಿ ಅಣಬೆ ಬೇಸಾಯ ಮಾಡುವುದಾದರೆ 100ರಿಂದ 125 ಕೆಜಿ ಅಣಬೆ ಉತ್ಪಾದಿಸುವ ಶೆಡ್ ನಿರ್ಮಾಣಕ್ಕೆ 95 ಸಾವಿರ ರೂ. ದೊರೆಯಲಿದೆ. ಜಾಬ್‌ಕಾರ್ಡ್ ಮಾಡಿಸಿದರೆ 275 ರೂ. ಪ್ರಕಾರ ಸ್ವಂತ ಮನೆಯ ಕೆಲಸವಾದರೂ ಕೂಲಿ ದೊರೆಯಲಿದೆ. ಸಮುದಾಯದ ಕೆಲಸವಾದರೂ ಶ್ರಮದಾನದ ಮಾದರಿಯಲ್ಲಿ ಮಾಡುವಾಗ ಇಂತಹ ಯೋಜನೆಯ ಸದುಪಯೋಗ ಮಾಡಿದರೆ ಇನ್ನಷ್ಟು ಅನುಕೂಲವಾಗಲಿದೆ.
ಬೇಡಿಕೆ : ವೈಯಕ್ತಿಕ ಕಾಮಗಾರಿಗಳಾದ ಬಾವಿ, ಹಟ್ಟಿ, ಕೋಳಿ/ಆಡು/ಹಂದಿ ಸಾಕಾಣಿಕೆ ಶೆಡ್, ಅಡಿಕೆ/ತೆಂಗು/ಗೇರು ಮೊದಲಾದ ತೋಟಗಾರಿಕಾ ಪ್ರದೇಶ ವಿಸ್ತರಣೆ ಕಾಮಗಾರಿಗೆ ಬೇಡಿಕೆಯಿದೆ. ಜತೆಗೆ ಜನಸಾಮಾನ್ಯರಿಗೂ, ಅತಿಸಣ್ಣ ಜಾಗ ಹೊಂದಿದವರಿಗೂ ಈ ಯೋಜನೆಯ ಅನುದಾನ ಬಳಸಬಹುದಾಗಿದೆ.
ನರೇಗಾ ಮೂಲಕ ಖರ್ಚು : ವೈಯಕ್ತಿಕ ಬಚ್ಚಲು ಗುಂಡಿ ನಿರ್ಮಾಣಕ್ಕೆ 14ರಿಂದ 17 ಸಾವಿರ ರೂ. ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲಿ ಕೂಲಿ, ಸಾಮಗ್ರಿ ಎರಡನ್ನೂ ಕೂಡ ನರೇಗಾ ಮೂಲಕವೇ ಪಡೆದುಕೊಳ್ಳಲು ಅವಕಾಶವಿದೆ. ಜಾಬ್‌ಕಾರ್ಡ್ ಹೊಂದಿರುವವರು ನರೇಗಾದಡಿ ಕೆಲಸ ಮಾಡಿಸಿಕೊಳ್ಳಬಹುದು. ವೈಯಕ್ತಿಕ ಮಾತ್ರವಲ್ಲದೆ 4-5 ಮನೆಗಳಿಗೆ ಒಂದು ಸಾಮೂಹಿಕ ಬಚ್ಚಲು ಗುಂಡಿ, ಶಾಲೆ, ಹಾಸ್ಟೆಲ್ ಮೊದಲಾದೆಡೆ ಸಾಮೂಹಿಕ ಬಚ್ಚಲು ಗುಂಡಿ ನಿರ್ಮಿಸಬಹುದು.
11,887 ಕುಟುಂಬಗಳಿಗೆ ಉದ್ಯೋಗ : ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿಗೆ 5.12 ಲಕ್ಷ ಮಾನವ ದಿನಗಳ ಕೆಲಸದ ಗುರಿ ನಿಗದಿ ಮಾಡಲಾಗಿದ್ದು 3.56 ಲಕ್ಷ ದಿನಗಳ ಕೆಲಸ ಈಗಾಗಲೇ ನಡೆದಿದೆ. ಬಿಲ್ಲಾಡಿ ಪಂ. 12,113, ಕಾಡೂರು ಪಂ. 8,941, ಕೋಟ ಪಂ. 8,063, ಹಕ್ಲಾಡಿ ಪಂ. 7,312, ಆವರ್ಸೆ ಪಂ. 6,706 ಮಾನವ ದಿನಗಳ ಉದ್ಯೋಗ ನೀಡಿದ ಸಾಧನೆ ಮಾಡಿ ಮುಂಚೂಣಿಯಲ್ಲಿವೆ. ಜಿಲ್ಲೆಯಲ್ಲಿ ಈವರೆಗೆ 11,887 ಕುಟುಂಬಗಳಿಗೆ ನರೇಗಾದಡಿ ಉದ್ಯೋಗ ನೀಡಿ, 2,266 ಹೊಸ ಕಾಮಗಾರಿಗಳನ್ನು ಮಾಡಲಾಗಿದೆ.
ಕುಂದಾಪುರ ತಾ.ಪಂ. ವ್ಯಾಪ್ತಿಯಲ್ಲಿ 45 ಗ್ರಾ.ಪಂ.ಗಳಲ್ಲಿ 1,18,580 ಮಾನವ ದಿನಗಳ ಕೆಲಸವಾಗಬೇಕಿದ್ದು ಸೆ.30ಕ್ಕೆ 65,767 ಕೆಲಸಗಳಾಗಬೇಕಿತ್ತು. 62,604 ದಿನಗಳ ಕೆಲಸವಾಗಿದ್ದು 95 ಶೇ. ಸಾಧನೆಯಾಗಿದೆ. ಬೈಂದೂರು ತಾ.ಪಂ.ನ 15 ಗ್ರಾ.ಪಂ.ಗಳಲ್ಲಿ 38,100 ದಿನಗಳ ಕೆಲಸದಲ್ಲಿ 21,130 ಕೆಲಸವಾಗಬೇಕಿದ್ದು 21,968 ಕೆಲಸವಾಗಿ ಗುರಿಮೀರಿದ ಸಾಧನೆಯಾಗಿದೆ.
ಹೆಚ್ಚು ಜನ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರಾವಳಿ ಜಿಲ್ಲೆಗಳಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ವೈಯಕ್ತಿಕ, ಸಾಮುದಾಯಿಕ ಕಾಮಗಾರಿಗಳನ್ನು ಹೆಚ್ಚು ಜನ ಮಾಡಿಸುವ ಮೂಲಕ ಅನುದಾನದ ಬಳಕೆಯಾಗಬೇಕು.-ಪ್ರೀತಿ ಗೆಹ್ಲೋಟ್,
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿ.ಪಂ.
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.