Independence Day; ವೈವಿಧ್ಯದ ದೇಶಕ್ಕೆ ಏಕ ಸಂಸ್ಕೃತಿ ಸೂಕ್ತವಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Team Udayavani, Aug 16, 2024, 12:18 AM IST
ಉಡುಪಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಅದನ್ನು ಬದಲಾ ಯಿಸುವುದರೊಂದಿಗೆ ರಾಜ್ಯದ್ದೇ ಪ್ರತ್ಯೇಕ ಶಿಕ್ಷಣ ನೀತಿ ತರಲು ಸಮಿತಿ ರಚಿಸಲಾಗಿದೆ. ಸಮಿತಿಯ ಮಧ್ಯಾಂತರ ವರದಿ ಪ್ರಕಾರ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಹುಧರ್ಮ, ಬಹುಸಂಸ್ಕೃತಿ, ಬಹುಭಾಷೆ ಇರುವ ದೇಶಕ್ಕೆ ಏಕ ಸಂಸ್ಕೃತಿ ಯಾವತ್ತೂ ಹೊಂದುವುದಿಲ್ಲ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ವಾಸ್ತವಾಂಶಗಳನ್ನು ಒಳಗೊಂಡ ಶಿಕ್ಷಣ ನೀತಿಯ ಅಗತ್ಯ ಇದೆ. ಅದೇ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಲು ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಜರಗಿದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಸಂದೇಶ ನೀಡಿದ ಅವರು, ಪರಸ್ಪರ ನಂಬಿಕೆ, ಸಹಕಾರ ಮತ್ತು ಸಹಬಾಳ್ವೆಯ ಬಲದ ಮೇಲೆ ಭಾರತಕ್ಕೆ ಭರವಸೆಯ ಭವಿಷ್ಯವನ್ನು ನಿರ್ಮಿಸಬಹುದು. ಒಗ್ಗಟ್ಟಿನ ಬಲಿಷ್ಠ, ಸಮೃದ್ಧ ಮತ್ತು ಕಾಳಜಿಯುಳ್ಳ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡೋಣ. ಯುವಕರಿಗೆ ವಿಜ್ಞಾನ, ತಂತ್ರಜ್ಞಾನ ಹಾಗೂ ಇತರ ಹೊಸ ವಿಭಾಗಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಕಾರ್ಯ ಆಗಬೇಕು ಎಂದರು.
ಮನೆ ಮನೆಯಲ್ಲಿ ತಪಾಸಣೆ
ಮನೆಯ ಬಾಗಿಲಲ್ಲೇ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಔಷಧಗಳನ್ನು ಒದಗಿಸುವ “ಗೃಹ ಆರೋಗ್ಯ ಯೋಜನೆ’ಯನ್ನು ಮುಂದಿನ ತಿಂಗಳಿನಿಂದ ಜಾರಿ ಮಾಡಲಾಗುತ್ತಿದೆ. ಈ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ 3 ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುವುದು ಎಂದರು.
ಕಾನೂನು ಸುವ್ಯವಸ್ಥೆಗೆ ಕ್ರಮ
ಜಿಲ್ಲೆಯ ಕಾನೂನು ಹಾಗೂ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದ್ದು, ಅಪರಾಧಿ ಪ್ರಕರಣ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರವಾಸೋದ್ಯಮ ಹಾಗೂ ಹೂಡಿಕೆದಾರ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶುದ್ಧ ಕುಡಿಯುವ ನೀರು
ಜಿಲ್ಲೆಯ ಎಲ್ಲ ಗ್ರಾ.ಪಂ.ಗಳ 3,402 ಗ್ರಾಮಗಳ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆಯಡಿ 734.02 ಕೋಟಿ ರೂ.ಗಳಲ್ಲಿ 525 ಕಾಮಗಾರಿ ಕೈಗೊಂಡು ಪ್ರಸ್ತುತ 437 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ, ಎಸ್‌ಪಿ ಡಾ| ಕೆ.ಅರುಣ್, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಕರಾವಳಿ ಕಾವಲು ಪಡೆಯ ಪೊಲೀಸ್ ಎಸ್‌ಪಿ ಮಿಥುನ್ ಎಚ್.ಎನ್. ಉಪಸ್ಥಿತರಿದ್ದರು.
ಗ್ಯಾರಂಟಿಯಿಂದ 1.2 ಕೋಟಿ ಜನರ ಬಡತನ ದೂರ
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 1.39 ಕೋಟಿ ಮಹಿಳಾ ಪ್ರಯಾಣಿಕರು ಜಿಲ್ಲೆಯಲ್ಲಿ ಪ್ರಯೋಜನ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 7,75,830, ಗೃಹಜ್ಯೋತಿಯಡಿ 3.20 ಲಕ್ಷ ಮಂದಿ, ಗೃಹ ಲಕ್ಷ್ಮೀಯಡಿ 2.20 ಲಕ್ಷಕ್ಕೂ ಅಧಿಕ ಮಹಿಳೆಯರು ಗ್ಯಾರಂಟಿ ಲಾಭ ಪಡೆದಿದ್ದಾರೆ. ಜಿಲ್ಲೆಯ 2,028 ಯುವ ಪದವೀಧರರು ಯುವನಿಧಿ ಲಾಭ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದ 1.2 ಕೋಟಿ ಜನ ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.