ಯೋಗದಿಂದ ಭಾರತೀಯ ಪರಂಪರೆ ವಿಶ್ವವ್ಯಾಪಿ: ಕೋಟ ಶ್ರೀನಿವಾಸ ಪೂಜಾರಿ
Team Udayavani, Jun 21, 2024, 11:54 PM IST
ಉಡುಪಿ: ಯೋಗದಿಂದ ಭಾರತೀಯ ಪರಂಪರೆ ವಿಶ್ವವ್ಯಾಪ್ತಿ ಯಾಗಿದೆ. ಭಾರತವು ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ನಮ್ಮೆಲರಿಗೂ ಹೆಮ್ಮೆಯ ವಿಚಾರ. ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಆರಂಭಗೊಂಡ ಯೋಗವು ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿ. ಪಂ. ಆಯುಷ್ ಇಲಾಖೆ ಸಹಿತ ವಿವಿಧ ಇಲಾಖೆಗಳ ಆಶ್ರಯದಲ್ಲಿ ಜರಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಜೀವನ ಶೈಲಿಯಲ್ಲಿ ಯೋಗವು ಬಹುಮುಖ್ಯ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ವೃದ್ಧಿಗಾಗಿ ಯೋಗವನ್ನು ರೂಢಿಸಿಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಯೋಗವು ಆರೋಗ್ಯವಂತ ಜೀವನವನ್ನು ರೂಪಿಸುತ್ತದೆ. ಯುವ ಜನತೆ ಸಹಿತ ಎಲ್ಲರೂ ಯೋಗಾಭ್ಯಾಸವನ್ನು ಮಾಡಬೇಕು ಎಂದರು.
ಭಾರತೀಯ ಸಂಸ್ಕೃತಿಯ ಬಹು ಮುಖ್ಯವಾದ ಅಂಗವಾದ ಯೋಗವು ಮಾನವನ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಯೋಗವು ವಿಶ್ವಾದ್ಯಂತ ಜನಮನ್ನಣೆ ಪಡೆದಿದ್ದು, ಇಂದಿನ ಯುವಜನಾಂಗಕ್ಕೆ ಯೋಗದ ಬಗ್ಗೆ ಅರಿವು ಉಂಟುಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ 45 ನಿಮಿಷ ಕಾಲ ಯೋಗದ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಜಿ. ಪಂ. ಸಿಇಒ ಪ್ರತೀಕ್ ಬಾಯಲ…, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಯೋಗಾಸನದ ವಿವಿಧ ಆಸನಗಳನ್ನು ಅಭ್ಯಾಸ ಮಾಡಲಾಯಿತು.ಯೋಗ ತರಬೇತುದಾರರಾದ ಚೆನ್ನಮ್ಮ ಉಡುಪ, ಶೋಭಾ ಶೆಟ್ಟಿ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಸತೀಶ್ ಆಚಾರ್ಯ ಪ್ರಸ್ತಾವಿಸಿ, ಸ್ವಾಗತಿಸಿದರು. ವೈದ್ಯಾಧಿಕಾರಿ ಡಾ| ನಾಗರಾಜ್ ಕೌಲಗಿ ವಂದಿಸಿ, ಡಾ| ವೀಣಾ ಕಾರಂತ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.