ಇಂದ್ರಾಳಿ ಕಾಂಕ್ರೀಟ್ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?
Team Udayavani, Dec 5, 2022, 6:20 AM IST
ಉಡುಪಿ : ಅವ್ಯವಸ್ಥೆ ಆಗರವಾಗಿದ್ದ ಇಂದ್ರಾಳಿ ರಸ್ತೆ (ರಾ.ಹೆ. 169ಎ)ಗೆ ಕೊನೆಗೂ ಶಾಶ್ವತವಾಗಿ ಮುಕ್ತಿ ಸಿಕ್ಕಿದೆ. ಆರಂಭದಲ್ಲಿ ರಸ್ತೆ ಹೊಂಡ, ಗುಂಡಿಗಳಿಂದ ಬೇಸತ್ತಿದ್ದ ಜನರು ರೋಸಿ ಹೋಗಿದ್ದರು. ಅನಂತರ ರಸ್ತೆ ಕಾಂಕ್ರೀಟ್ ಕಾಮಗಾರಿಯು ಟ್ರಾಫಿಕ್ ಜಾಮ್‌ನ ಒತ್ತಡದಲ್ಲಿಯೇ ಜರಗಿತ್ತು. ಇದೀಗ ಹಲವು ದಿನಗಳ ಕಾಮಗಾರಿ ನಡೆದು ಇಂದಿನಿಂದ ವ್ಯವಸ್ಥಿತ ಕಾಂಕ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.
ಎರಡು ಬದಿಯಲ್ಲಿ 56 ಮೀಟರ್ ಸೇತುವೆ ಸಹಿತ ಒಟ್ಟು 200 ಮೀ. ಕಾಂಕ್ರೀಟ್ ಪೂರ್ಣಗೊಂಡಿದೆ. ಕೆಲವು ದಿನಗಳ ಹಿಂದೆಯೇ ರಸ್ತೆ ನಿರ್ಮಾಣ ಕಾರ್ಯ ಮುಗಿದಿದ್ದು, 15 ದಿನಗಳವರೆಗೆ ಕ್ಯೂರಿಂಗ್ ಕಾರ್ಯ ನಡೆದಿದೆ. ಸೋಮವಾರ ರಸ್ತೆ ಮೇಲಿರುವ ಹುಲ್ಲನ್ನು ತೆಗೆದು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಹೊಸ ರೈಲ್ವೇ ಸೇತುವೆ ನಿರ್ಮಾಣವಾಗುವ ತನಕ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಬರುವವರು ಎಂಜಿಎಂ ಬಳಿಯಲ್ಲಿ ತಿರುವು ಪಡೆದು ಇಂದ್ರಾಳಿ, ಮಣಿಪಾಲ ಕಡೆಗೆ ಏಕಮುಖ ರಸ್ತೆಯಲ್ಲಿ ಸಾಗಬೇಕು. ಇನ್ನೊಂದು ಬದಿಯಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೇ ಸೇತುವೆ ನಿರ್ಮಾಣಕ್ಕೆ ಶೀಘ್ರ ಕಾಯಕಲ್ಪ ಸಿಗುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಇಂದ್ರಾಳಿ ರಸ್ತೆ ಅವ್ಯವಸ್ಥೆಗೆ ಶಾಶ್ವತವಾಗಿ ಪರಿಹಾರ ಸಿಗುವಂತೆ ಉದಯವಾಣಿ ಸರಣಿ ವರದಿ ಮೂಲಕ ಗಮನ ಸೆಳೆದಿತ್ತು.
ಆಗಾಗ ಮಳೆ, ಸಿಎಂ ಭೇಟಿ, ಸಂಚಾರ ದಟ್ಟಣೆ ಒತ್ತಡದ ನಡುವೆ ಕಾಮಗಾರಿ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗದೆ ಕೊಂಚ ವಿಳಂಬ ವಾಗಿತ್ತು. ಪೆರಂಪಳ್ಳಿ ಮೂಲಕ ಪರ್ಯಾಯ ಮಾರ್ಗದಲ್ಲಿ ಸಾಗುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ, ಸವಾರರು ಅದನ್ನು ಪಾಲಿಸದೆ. ಇಂದ್ರಾಳಿ ಮೂಲಕವೇ ಸಂಚರಿಸುತ್ತಿದ್ದರು. ಆಗಾಗ ಸೇತುವೆ ಬಳಿ ವಾಹನಗಳು ಬ್ಲಾಕ್ ಆಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಇಷ್ಟೆಲ್ಲ ಒತ್ತಡಗಳ ನಡುವೆ ಕಾರ್ಮಿಕ ವರ್ಗ, ಎಂಜಿನಿಯರ್ಸ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ಹಗಲು, ರಾತ್ರಿ ಶ್ರಮಿಸಿದ್ದು, ಸುಗಮ ಸಂಚಾರ ವ್ಯವಸ್ಥೆಗಾಗಿ 24 ಗಂಟೆ ಪಾಳಿಯಲ್ಲಿ ಪೊಲೀಸ್ ಸಿಬಂದಿ ಕರ್ತವ್ಯ ನಿರ್ವಹಿಸಿದ್ದರು.
ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?
ಇಂದ್ರಾಳಿ ರಸ್ತೆಯಂತೆ ಪರ್ಕಳದ ರಸ್ತೆ ಸಮಸ್ಯೆ ಶೀಘ್ರ ಮುಗಿಯಲಿ ಎಂದು ಜನರು ಆಶಿಸುವಂತಾಗಿದೆ. ಪರ್ಕಳದಲ್ಲಿ ರಾ.ಹೆ. (169ಎ) 4 ಮೀ. ಉದ್ದದ ನೇರ ರಸ್ತೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಕೆಳ ಪರ್ಕಳ ತಿರುವು ರಸ್ತೆ ಇರುವುದನ್ನು ನೇರ ರಸ್ತೆಯಾಗಿ ರೂಪಿಸಲಾಗುತ್ತಿದೆ ಇದಕ್ಕೆ ಸುಮಾರು 6 ಸಾವಿರ ಲೋಡ್ ಮಣ್ಣಿನ ಅಗತ್ಯವಿದ್ದು, ಈಗಾಗಲೇ 5 ಸಾವಿರ ಲೋಡ್ ಮಣ್ಣನ್ನು ರಸ್ತೆಗೆ ತುಂಬಿಸ ಲಾಗಿದೆ. ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿ ಕೋರ್ಟ್ ನಿಂದ ನ. 30ರಂದು ತಡೆಯಾಜ್ಞೆ ಬಂದಿದೆ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಜಾಗಕ್ಕೆ ಸಂಬಂಧಿಸಿದ ಖಾಸಗಿ ವ್ಯಕ್ತಿಗಳು ವಾಹನಗಳ ಓಡಾಟದಿಂದ ಮನೆಗಳಿಗೆ ಧೂಳಿನ ಸಮಸ್ಯೆಯಾಗುತ್ತಿದೆ ಎಂದು ಬೇಲಿ ಹಾಕಿದ್ದಾರೆ. ತಡೆಯಾಜ್ಞೆ ಹೊರತಾಗಿರುವಲ್ಲಿ ಕಾಮಗಾರಿ ಎಂದಿನಂತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕೆಳಪರ್ಕಳ ಹಳೆಯ ಡಾಮರು ರಸ್ತೆ ಇದೀಗ ಪರ್ಯಾಯ ಮಾರ್ಗವಾಗಿದ್ದು, ಧೂಳು, ಗುಂಡಿಗಳಿಂದ ಕೂಡಿರುವ ಈ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಜಲ್ಲಿಕಲ್ಲುಗಳು ಮೇಲಕ್ಕೆದ್ದಿದ್ದು, ರಸ್ತೆ ಗುಂಡಿಗಳು ಆಪಾಯ ಆಹ್ವಾನಿಸುತ್ತಿದೆ. ವಾಹನ ಸವಾರರು ನಿತ್ಯ ಸಂಕಷ್ಟದಿಂದ ಸಂಚರಿಸುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.