ಇನ್ನೂ ಶುದ್ಧವಾಗಿರುವ ಭಾಗದ ಇಂದ್ರಾಣಿಯನ್ನು ಅಶುದ್ಧಗೊಳಿಸದಿರೋಣ
Team Udayavani, Mar 5, 2020, 6:16 AM IST
ನಗರದ ಜಲಮೂಲ ಉಳಿಸಿಕೊಳ್ಳಲು ಹರಸಾಹಸ ಪಡಲೇಬೇಕಾದ ಸ್ಥಿತಿ ಇಂದಿನದು.ನೂರಾರು ಎಕರೆ ಪ್ರದೇಶಕ್ಕೆ ಕೃಷಿ ಸಾಧ್ಯತೆಯನ್ನು ಇನ್ನೂ ತೆರೆದಿಟ್ಟಿರುವ ಇಂದ್ರಾಣಿ-ಗುಳ್ಮೆ ತೀರ್ಥ-ಮಂಚಿ ತೀರ್ಥಗಳನ್ನು ಉಳಿಸಿಕೊಳ್ಳಲೇಬೇಕು. ಅದು ಕಲುಷಿತವಾಗುವ ಹಂತದಲ್ಲೇ ತಡೆಯಬೇಕು. ಅದಕ್ಕೆ ಆಡಳಿತದೊಂದಿಗೆ ಜನರ ಸಹಕಾರವೂ ಬೇಕು. ಎಲ್ಲವನ್ನೂ ದೂರದ ನದಿಯಿಂದ ತರುವ ಲೆಕ್ಕಾಚಾರ ಬಿಟ್ಟು, ಸ್ಥಳೀಯ ಜಲಮೂಲಗಳ ಪುನರುಜ್ಜೀವನ ಅವಶ್ಯವಾಗಿ ಆಗಬೇಕು. ಹಾಗಾಗಿ ಇಂದ್ರಾಣಿ ನದಿ ಕಲುಷಿತವಾಗಿಲ್ಲದ ಭಾಗದಲ್ಲಿ ಈಗಲೇ ಮುನ್ನೆಚ್ಚರಿಕೆ ವಹಿಸಬೇಕು.
ಪಣಿಯಾಡಿ: ಗುಳ್ಮೆ ತೀರ್ಥದ ಮೂಲಕ ಹರಿಯುವ ಇಂದ್ರಾಣಿ ಉಳಿಸಿಕೊಂಡರೆ ನೂರಾರು ಕಿ.ಮೀ.ಗಳಿಂದ ನದಿ ನೀರನ್ನು ನಗರಕ್ಕೆ ತರುವ ಒತ್ತಡವನ್ನು ಕಡಿಮೆ ಮಾಡ ಬಹುದು. ಅಷ್ಟೇ ಅಲ್ಲ, ಕನಿಷ್ಠ ಈ ಇಂದ್ರಾಣಿ-ಗುಳ್ಮೆ ತೀರ್ಥ ಹರಿದು ಹೋಗುವ ಸುತ್ತಲಿನ ನೂರಾರು ಎಕರೆ ಪ್ರದೇಶದ ಕೃಷಿಯನ್ನು ಉಳಿಸಬಹುದು. ಅದು ಸ್ಥಳೀಯ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ವಾಸ್ತವವಾಗಿ ಸಾವಿರಾರು ಮನೆಯವರಿಗೆ ನಳ್ಳಿ ನೀರು ಪೂರೈಸುವ ಒತ್ತಡದಿಂದ ನಗರಸಭೆಯೂ ಮುಕ್ತಿ ಹೊಂದಬಹುದು.
ಯಾಕೆಂದರೆ, ಮಂಚಿಕೆರೆ ತೀರ್ಥವೂ ಸೇರಿದಂತೆ ಇಂದ್ರಾಣಿ-ಗುಳ್ಮೆ ತೀರ್ಥಗಳಿಗೆ ವರ್ಷಪೂರ್ತಿ ಹರಿಯುವ ಶಕ್ತಿ ಇದೆ. ಉದಯವಾಣಿ ಸುದಿನ ಅಧ್ಯಯನ ತಂಡ ಭೇಟಿ ಕೊಟ್ಟಲೆಲ್ಲ ಮಾತಿಗೆ ಸಿಕ್ಕ ನಾಗರಿಕರು, ಕೃಷಿಕರು ಹೇಳಿದ್ದು ಒಂದನ್ನೇ.
“ನಗರದಲ್ಲಿ ಅದು ವಿವಿಧ ಕಾರಣಕ್ಕೆ ಕಲುಷಿತಗೊಂಡಿರಬಹುದು. ನಮ್ಮಲ್ಲಿ ಹಾಗೇನೂ ಇಲ್ಲ. ಇಲ್ಲಿ ಮುಂದೆಯೂ ಕಲುಷಿತವಾಗದಂತೆ ನೋಡಿಕೊಂಡರೆ ನಾವು ಬದುಕಬಹುದು. ಇಲ್ಲವಾದರೆ ನಾವೂ ನಗರ ಸಭೆಯ ನಳ್ಳಿ ಸಂಪರ್ಕಕ್ಕೆ ಸಾಲುಗಟ್ಟಬೇಕು’ ಎಂಬುದು.
ಇಂದ್ರಾಣಿ ರೈಲ್ವೇ ಸ್ಟೇಷನ್‌ನಿಂದ ಮುಂದಕ್ಕೆ, ಹಾಗೆಯೇ ಪಣಿಯಾಡಿ ಮೂಲಕ ಶಾರದಾ ನಗರದ ಕೆಲವು ಭಾಗ ಗಳಲ್ಲಿ ಹರಿದು ಬೈಲಕೆರೆ ವ್ಯಾಪ್ತಿಗೆ ಹೋಗು ತ್ತದೆ. ಪಣಿಯಾಡಿಯಲ್ಲೂ ಬಾವಿಯ ನೀರು ಕಲುಷಿತವಾಗಿಲ್ಲ; ನದಿಯ ನೀರು ಸಾಕಷ್ಟು ಚೆನ್ನಾಗಿಯೇ ಇದೆ.
“ನೀರು ಕಲುಷಿತಗೊಂಡು ಕೆಲವು ಬಾವಿಗಳು ಹಾಳಾಗಿರುವುದು ಶಾರದಾ ನಗರದ ಮತ್ತೂಂದು ಬದಿಯಲ್ಲಿ. ಇಲ್ಲೆಲ್ಲ ಆ ಸಮಸ್ಯೆಯಿಲ್ಲ’ ಎಂದವರು ಸ್ಥಳೀಯರಾದ ಗುರುಪ್ರಸಾದ್.
“ಗುಳ್ಮೆ ತೀರ್ಥ ವರ್ಷಪೂರ್ತಿ ಹರಿ ಯುವಂಥದ್ದು. ಅದನ್ನು ಉಳಿಸಿಕೊಳ್ಳ ಬೇಕು. ಆಗ ಇಂದ್ರಾಣಿಯನ್ನೂ ಉಳಿಸಿ ಕೊಳ್ಳಲು ಸಾಧ್ಯ. ಹಿಂದೆ ನಾವೇ (ಊರಿನ ಜನರು-ಯುವಜನರು ಸ್ಥಳೀಯ ಭಜನಾ ಮಂದಿರದ ಸದಸ್ಯರು) ಗುಳ್ಮೆ ತೀರ್ಥ ಭಾಗವನ್ನು ಸ್ವತ್ಛಗೊಳಿಸಿ ಇರಿಸುತ್ತಿದ್ದೆವು. ಆದರೆ ಕೆಲವು ತಿಂಗಳ ಹಿಂದೆ ಸರಕಾರಿ ಇಲಾಖೆಯವರ್ಯಾರೋ ಅದರ ನಿರ್ವಹಣೆ ಕೈಗೆತ್ತಿಕೊಂಡಿದ್ದಾರೆ. ಆ ಬಳಿಕ ನಾವು ಅಲ್ಲಿಗೆ ಹೋಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಪಾಂಡು.
ಬೈಲಕೆರೆ ಕಟ್ಟೆ ಆಚಾರ್ಯ ರಸ್ತೆಯ ಹಿಂಬದಿಯಲ್ಲೇ ಹರಿದು ಹೋಗುವ ನದಿಗೆ, ನಗರದ ಮತ್ತೂಂದು ಬದಿ ಯಿಂದ ಕೈತೋಡಿನಿಂದ ಕಲುಷಿತ ನೀರು (ಪಚ್ಚೆಗಟ್ಟಿರುವ ನೀರು) ಸೇರತೊಡಗುತ್ತದೆ. ಅದಕ್ಕಿಂತ ಮೊದಲು ಕೆಲವೆಡೆ (ಬೀಡಿನಗುಡ್ಡೆ ಬ್ರಿಡ್ಜ್ಗಿಂತ ಸ್ವಲ್ಪ ಹಿಂದೆಯಿಂದ ಆರಂಭ) ನೀರು ಕಪ್ಪು ಬಣ್ಣಕ್ಕೆ ತಿರುಗತೊಡಗುತ್ತದೆ. ಆ ಬಳಿಕ ಈ ಕೈತೋಡಿನ ನೀರೂ ಹಾಳಾಗ ತೊಡಗುತ್ತದೆ. ಬಳಿಕ ಇಂದ್ರಾಣಿ ನದಿಯ ರೂಪವೇ ಬದಲಾಗುತ್ತದೆ. ನಿಟ್ಟೂರಿನ ಬಳಿಕ ಕೇಳುವಂತೆಯೇ ಇಲ್ಲ.
“ನಗರದ ಕೆಲವು ಕಡೆಯಿಂದ ತ್ಯಾಜ್ಯ ನೀರು ಕೈತೋಡಿನ ಮೂಲಕ ಬರುವುದು ನಿಜ. ಈಗಾಗಲೇ ದೂರು ನೀಡಲಾಗಿದೆ’ ಎನ್ನುತ್ತಾರೆ ಗೋವಿಂದ ಪುಷ್ಕರಣಿ ಬಳಿಯ ಮುರಳಿಯವರು. ಕಡಿಯಾಳಿ- ಕುಂಜಿಬೆಟ್ಟು ಪ್ರದೇಶಕ್ಕೂ ಸಮಸ್ಯೆ ಬಾರ ದಿರಬೇಕೆಂದರೆ ಈ ಭಾಗದಲ್ಲಿ ಕಲುಷಿತ ವಾಗದಂತೆ ತಡೆಯುವುದು ಸ್ಥಳೀಯ ನಾಗರಿಕರ ಜವಾಬ್ದಾರಿಯೂ ಆಗಿದೆ.
“ಇಲ್ಲಿ ನೀರು ಕಲುಷಿತಗೊಳ್ಳುವುದಿಲ್ಲ. ನಾವು ಪ್ರತಿ ಬಾರಿ ಕಟ್ಟ ಹಾಕಿ ನೀರು ನಿಲ್ಲಿಸುತ್ತೇವೆ. ಕಲುಷಿತಗೊಳ್ಳುವುದು ಅನಂತರದ ಭಾಗದಿಂದ. ಇತ್ತೀಚೆಗೆ ಕಲುಷಿತಗೊಂಡ ನೀರನ್ನು ಸ್ವಲ್ಪ ದೂರದಲ್ಲಿ (ಬೀಡಿನಗುಡ್ಡೆಗೆ ಹೋಗುವ ಬ್ರಿಡ್ಜ್ ಬಳಿ) ಕಟ್ಟ ಹಾಕಿದರೆ ಕೆಲವೊಮ್ಮೆ ಇಲ್ಲಿಯ ನೀರೂ ಸ್ವಲ್ಪ ಬಣ್ಣ ಹಾಳಾಗುವುದುಂಟು. ಉಳಿದಂತೆ ಆ ಸಮಸ್ಯೆ ಇಲ್ಲ. ನಾವು ಈಗಲೂ ಕೃಷಿ ಮಾಡುತ್ತಿದ್ದೇವೆ. ನನ್ನ ತೆಂಗಿನ ಗಿಡಗಳಿಗೆ ಇದರದ್ದೇ ನೀರು. ಎಪ್ರಿಲ್-ಮೇ ವರೆಗೂ ಪರವಾಗಿಲ್ಲ. ಮೇ ಕೊನೆಯ ದಿನಗಳಲ್ಲಿ ಸ್ವಲ್ಪ ನೀರಿನ ಮಟ್ಟ ಕಡಿಮೆಯಾಗುತ್ತದೆ. ಇಲ್ಲೆಲ್ಲ ಬಾವಿ ನೀರೇ ಬಳಕೆ.
-ಶ್ರೀನಿವಾಸ ಆಚಾರ್ಯ, ಯುವ ಕೃಷಿಕ
ಒಳಚರಂಡಿ ವ್ಯವಸ್ಥೆ ತ್ವರಿತಗತಿಯಲ್ಲಿ ಜಾರಿಗೆ ಪ್ರಯತ್ನ; ರಘುಪತಿ ಭಟ್, ಶಾಸಕರು
ನೀವು ಹಿಂದೆಯೂ ಶಾಸಕರಾಗಿದ್ದೀರಿ, ಈಗಲೂ ಶಾಸಕರಾಗಿದ್ದೀರಿ. ನಿಮ್ಮ ಅವಧಿಯಲ್ಲಿ ಸಮಸ್ಯೆಗೆ ಕೊಟ್ಟ ಗಮನವೆಷ್ಟು?
ಶಾಸಕನ ನೆಲೆಯಲ್ಲಿ ನಗರಸಭೆಯ ವ್ಯಾಪ್ತಿಯ ಯುಜಿಡಿ ಸಮಸ್ಯೆಗೆ ಈ ಬಾರಿ ಸಾಕಷ್ಟು ಗಮನ ಹರಿಸಿದ್ದೇನೆ. ಯುಜಿಡಿ ಸಮಸ್ಯೆ ಬಗ್ಗೆ ನಗರಾಭಿವೃದ್ಧಿ ಸಚಿವರ ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದ್ದು, ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇನೆ.
ವೆಟ್‌ವೆಲ್‌ಗಳು, ಎಸ್‌ಟಿಪಿ ಮುಂತಾದ ಮೂಲ ಅಗತ್ಯಗಳ ಕಳಪೆ ನಿರ್ವಹಣೆ ಸಮಸ್ಯೆಯ ತೀವ್ರತೆ ಯನ್ನು ಹೆಚ್ಚಿಸಿದೆ. ಇವುಗಳನ್ನು ಸರಿಯಾಗಿಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸುವಲ್ಲಿ ನೀವು ಎಡವಿದ್ದೀರಿ ಎನಿಸು ತ್ತಿಲ್ಲವೇ? ಇಲ್ಲವಾದರೆ ನಿಮ್ಮ ಅಭಿಪ್ರಾಯವೇನು?
ಯುಜಿಡಿ ವ್ಯವಸ್ಥೆ ಪೂರ್ಣ ವಾಗಿ ವಿಫಲವಾಗಿದೆ. ಮ್ಯಾನ್ ಹೋಲ್ ಇಟ್ಟಿಗೆಯಿಂದ ಕೂಡಿದೆ. ಈ ಬಗ್ಗೆ ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣ ಪ್ರಾಧಿಕಾರಕ್ಕೆ ಪತ್ರ ಬರೆೆ ಯಲಾಗಿದೆ. ಇಲ್ಲಿವರೆಗೆ ಉತ್ತರ ದೊರಕಿಲ್ಲ.
ಉಡುಪಿಯ ಭವಿಷ್ಯದ ದೃಷ್ಟಿಯಿಂದ ಇದೊಂದು ಜ್ವಲಂತ ಸಮಸ್ಯೆ ಎಂದೇಕೆ ಎಣಿಸಲಿಲ್ಲ?
ಬೆಳೆಯುತ್ತಿರುವ ನಗರದ ಭವಿಷ್ಯದ ದೃಷ್ಟಿ ಯಿಂದ ಯುಜಿಡಿ ದೊಡ್ಡ ಸಮಸ್ಯೆಯಾಗಿದೆ. ಯುಜಿಡಿ ಇರುವ ಪ್ರತಿ ನಗರದಲ್ಲಿ ಈ ಸಮಸ್ಯೆ ಇರುತ್ತದೆ. ಇದನ್ನು ನಿರ್ವಹಿಸಲೇಬೇಕಿದೆ.
ಡಾ| ವಿ.ಎಸ್. ಆಚಾರ್ಯರು ಒಳಚರಂಡಿ ಯೋಜನೆ ತಂದದ್ದು ಹೊರತುಪಡಿಸಿ, ನಿಮ್ಮ ಶ್ರಮವೇನು?
ಹಳೆಯ ಯುಜಿಡಿ ನವೀಕರಣ ಹಾಗೂ ಮಣಿಪಾಲ ಮತ್ತು ಸಂತೆ ಕಟ್ಟೆ ಒಳಚರಂಡಿ ವ್ಯವಸ್ಥೆ ವಿಸ್ತ ರಿಸುವ ಕುರಿತು ಬೆಂಗಳೂರಿ ನಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಅದನ್ನು ಜಾರಿ ಗೊಳಿಸಲು ಪ್ರಯತ್ನಿಸುತ್ತೇನೆ.
ಹೊಸ ಒಳಚರಂಡಿ ಯೋಜನೆ ಮಂಜೂರಾಗಿ ರುವುದು ಹಿಂದಿನ ಶಾಸಕರ ಅವಧಿಯ ಕೊನೆ ಹಂತದಲ್ಲಿ. ಮೂರು ತಿಂಗಳ ಹಿಂದೆ ಸಭೆ ನಡೆಸಿರುವುದಾಗಿ ಒಂದು ಸಾರ್ವಜನಿಕ ಸಭೆಯಲ್ಲಿ ನೀವೇ ಹೇಳಿದ್ದೀರಿ. ಹಾಗಾದರೆ ಎರಡು ವರ್ಷಗಳಲ್ಲಿ ತ್ವರಿತಗತಿಯ ಜಾರಿಗೆ ಯಾಕೆ ಪ್ರಯತ್ನಿಸಲಿಲ್ಲ?
ರಾಜ್ಯದಲ್ಲಿ ಬಿಜೆಪಿ ಸರಕಾರವಿಲ್ಲದ ಸಂದರ್ಭದಲ್ಲಿ ಯೋಜನೆಯ ಪ್ರಗತಿಗೆ ಹಿನ್ನಡೆಯಾಗಿದೆ. ನಗರದ ಹಳೆಯ ಯುಜಿಡಿ ವ್ಯವಸ್ಥೆ ದುರಸ್ತಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆಗೆ ಮಾತುಕತೆ ನಡೆಸಲಾಗಿದೆ. ಅವರು ಅಗತ್ಯವಿರುವ ಅನುದಾನವನ್ನು ಮೊದಲ ಬಜೆಟ್‌ನಲ್ಲಿ ಕಾಯ್ದಿರಿಸುವ ಕುರಿತು ಭರವಸೆ ನೀಡಿದ್ದಾರೆ. ಅದು ಸಿಗುವ ನಂಬಿಕೆ ಇದೆ.
ನೀವೇ ಇಂದ್ರಾಣಿ ನದಿ ಸಮಸ್ಯೆ ಬಹು ದೊಡ್ಡದಾದುದು ಎಂದು ಒಪ್ಪಿಕೊಂಡಿದ್ದೀರಿ. ಅಂದ ಮೇಲೆ ನಿಮ್ಮ ಅವಧಿಯಲ್ಲಿ ಎಷ್ಟು ಬಾರಿ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದೀರಿ? ಅದರ ಪರಿಣಾಮವೇನು?
ಯುಜಿಡಿ ನೀರು ಇಂದ್ರಾಣಿ ನದಿಗೆ ಬಿಡುತ್ತಿರುವುದು ದೊಡ್ಡ ದುರಂತ. ಇಂದ್ರಾಣಿ, ಯುಜಿಡಿ ಬಗ್ಗೆ ಹಲವು ಬಾರಿ ವಿಧಾನಸಭೆ ಯಲ್ಲಿ ಪ್ರಸ್ತಾವಿಸಿದ್ದೇನೆ. ಅಂದು ನಮ್ಮ ಸರಕಾರವಿರಲಿಲ್ಲ. ಇದೀಗ ನಮ್ಮ ಸರಕಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ಇದೀಗ ಮತ್ತೆ ಈ ಬಗ್ಗೆ ಪ್ರಸ್ತಾವಿಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುವೆ.
ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಪ್ರದೇಶದ ಸಮಸ್ಯೆಯ ಸ್ವರೂಪವನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಾಗ, ನೀವು ಅವರನ್ನು ಬೆಂಬಲಿಸಿರಲಿಲ್ಲವೇ? ಬೆಂಬಲಿಸಿದ್ದರೆ ನಿಮ್ಮ ಮಾತನ್ನೂ ಅಧಿಕಾರಿಗಳು ಉಪೇಕ್ಷಿಸಿದರೇ?
ನಗರಸಭೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಜನಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಯಾಗದೆ ಇರ ಬಹುದು. ಅದರೆ ಅವರು ಜನರಿಂದ ಆಯ್ಕೆಯಾದವರು. ಅವರು ಜನರ ಸಮಸ್ಯೆ ಹಿಡಿದುಕೊಂಡು ಬಂದಾಗ ಆದ್ಯತೆ ನೀಡಿ ಸರಿಪಡಿಸುವಂತೆ ಆಗ್ರಹಿಸಿದ್ದೇನೆ.
ಒಂದುವೇಳೆ ಉಪೇಕ್ಷಿಸಿದ್ದಲ್ಲಿ, ಅಂಥ ದುರ್ವರ್ತನೆಯನ್ನು ನಿಯಂತ್ರಿಸಲು ಜನಪ್ರತಿನಿಧಿ ಯಾಗಿ ನೀವು ಕೈಗೊಂಡ ಕ್ರಮಗಳೇನು?
ನಗರಸಭೆ ಅಧಿಕಾರಿಗಳು ದುರ್ವರ್ತನೆ ತೋರದಂತೆ ಎಚ್ಚರ ವಹಿಸಲಾಗುತ್ತಿದೆ.
ನಿಮ್ಮ ದೃಷ್ಟಿಯಲ್ಲಿ ನಿರ್ವಹಿಸಲಾಗದಂಥ ಸಮಸ್ಯೆಯಾಗಿ ಏಕೆ ಇದು ಬೆಳೆದಿದೆ ಎನ್ನುತ್ತೀರಿ?
ಅಸಮರ್ಪಕ ಒಳಚರಂಡಿ ಕಾಮಗಾರಿ ಸಮಸ್ಯೆ ಬೆಳೆಯಲು ಮುಖ್ಯ ಕಾರಣ. ಕಾಂಕ್ರೀಟ್‌ನಿಂದ ಮ್ಯಾನ್‌ಹೋಲ್ ನಿರ್ಮಾಣ ಮಾಡಬೇಕಿತ್ತು. ನೀರು ಅಧಿಕವಾಗಿ ಹರಿಯುವ ಜಾಗದಲ್ಲಿ ಡ್ರೈನೇಜ್ ಪೈಪ್ ಲೈನ್ ಹೋಗಿರುವುದು ಸಮಸ್ಯೆ ಹೆಚ್ಚಳ ಕಾರಣವಾಗಿದೆ. ಇದನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ.
ನಿಮ್ಮ ಈ ಅವಧಿಯಲ್ಲಿ ಇಂದ್ರಾಣಿ ನದಿ ಶುದ್ಧೀಕರಣ ಹಾಗೂ ಉಡುಪಿ ನಗರಕ್ಕೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಜಾರಿಗೊಳಿಸಲು ರೂಪಿಸಿರುವ ಯೋಜನೆ ಯೇನು? ನಾಗರಿಕರಿಗೆ ಕೊಡುವ ವಿಶ್ವಾಸಾರ್ಹ ಭರವಸೆಗಳೇನು?
ಎಲ್ಲ ವೆಟ್‌ವೆಲ್, ಎಸ್‌ಟಿಪಿ ಉನ್ನತೀಕರಣ, ಮಣಿಪಾಲ- ಸಂತೆಕಟ್ಟೆಗೆ ಒಳಚರಂಡಿ ವಿಸ್ತರಿಸುವ ಕುರಿತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರ. ಕಾರ್ಯದರ್ಶಿ ಹಾಗೂ ಕರ್ನಾಟಕ ನೀರು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು, ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಎರಡು ಯೋಜನೆ ಡಿಪಿಆರ್ ಹಂತದಲ್ಲಿ ಇದೆ. ಅದನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.